ಮುಸ್ಲಿಂ ಚಿಂತಕರ ಚಾವಡಿ
908, 3ನೇಮೇನ್, ನ್ಯೂಕಾಂತರಾಜೇ ಅರಸ್ ರಸ್ತೆ, ಸರಸ್ವತಿಪುರಂ, ಮೈಸೂರು
ದಿನಾಂಕ.07.12.2020
ಇವರಿಗೆ,
ಸನ್ಮಾನ್ಯ ಶ್ರೀ.ಬಿ.ಎಸ್.ಯಡಿಯೂರಪ್ಪನವರು
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರಕಾರ, ವಿಧಾನಸೌಧ
ಬೆಂಗಳೂರು
ಮಾನ್ಯ ಜಿಲ್ಲಾಧಿಕಾರಿಗಳು ಇವರ ಮೂಲಕ
ಮಾನ್ಯರೆ,
ವಿಷಯ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ
ಅನುದಾನವನ್ನು ಕಡಿತಗೊಳಿಸಿರುವದನ್ನು ವಿರೋಧಿಸಿ
ಪ್ರತಿಭಟನಾ ಮನವಿ.
ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಹಿಂದುಳಿದಿರುವ
ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ
ಸರಕಾರವು ಈ ಸಮುದಾಯಗಳ ಅಭಿವೃದ್ಧಿಗಾಗಿ
ಜಾರಿಯಲ್ಲಿಟ್ಟಿರುವ ನೀತಿಗಳನ್ನು ಮುಸ್ಲಿಂ ಚಿಂತಕರ ಚಾವಡಿಯು
ಸ್ವಾಗತಿಸುತ್ತದೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯ
ದೃಷ್ಟಿಯಲ್ಲಿ ಇಂತಹ ವಿಶೇಷ ಆಧ್ಯತಾ ಯೋಜನೆಗಳು
ಅವಶ್ಯಕವೆಂದು ನಾವು ಭಾವಿಸುತ್ತೇವೆ ಹಾಗೂ ಅಲ್ಪಸಂಖ್ಯಾತ
ಸಮುದಾಯಗಳ ಆಭಿವೃದ್ಧಿ ಸಮಾನವಾಗಿ ಸಾಧ್ಯವಾಗುವವರೆಗೂ
ಈ ಯಾವ ಯೋಜನೆಗಳೂ ಯಾವುದೇ ಕಾರಣಕ್ಕೂ
ಸ್ಥಗಿತಗೊಳ್ಳಬಾರದು ಎಂದು ಆಗ್ರಹಿಸುತ್ತೇವೆ. ಕರ್ನಾಟಕ
ರಾಜ್ಯದಲ್ಲಿ ತಮ್ಮ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ
ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನ ಮೂಲಕ
ರಾಜ್ಯದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್,
ಬುದ್ಧ, ಪಾರ್ಸಿ ಮತ್ತು ಜೈನ ಸಮುದಾಯಗಳ ಜನಪರ ಕಲ್ಯಾಣ
ಯೋಜನೆಗಳಿಗೆ ನಿಗದಿಗೊಳಿಸಲಾದ ಅನುದಾನ
ಕಡಿತಗೊಳಿಸಿರುವದನ್ನು ಈ ಮೂಲಕ ತೀವ್ರವಾಗಿ ಖಂಡಿಸುತ್ತೇವೆ.
ತಮ್ಮ ನೇತೃತ್ವದ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ
ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ರದ್ದು
ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ
ನೇತೃತ್ವದ ಸರಕಾರ ಬಜೆಟ್‍ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆಯ ಅನುದಾನವನ್ನು 1897.00ಕೋ.ರೂ.ಗಳಿಂದ
1571.00ಕೋ.ರೂ.ಗೆ ಕಡಿಮೆಗೊಳಿಸಿದೆ. 2020-21ನೇ ಸಾಲಿನಲ್ಲಿ ತಮ್ಮ
ನೇತೃತ್ವದ ಸರಕಾರ ಮಂಡಿಸಿದ ಬಜೆಟ್‍ನಲ್ಲಿ
1177.00ಕೋ.ರೂ.ಗಳಷ್ಟಿದ್ದ ಅನುದಾನವನ್ನು ಮತ್ತೆ
ಕಡಿತಗೊಳಿಸಿ 1055.00ಕೋ.ರೂ.ಗಳಿಗೆ ನಿಗದಿಗೊಳಿಸಿದೆ. ಇತ್ತೀಚಿಗೆ
ಮತ್ತೆ 1055.00 ಕೋ.ರೂ.ಗಳಷ್ಟಿದ್ದ ಅನುದಾನದಲ್ಲಿ
50.00ಕೋ.ರೂ. ಅನುದಾನ ಕಡಿತಗೊಳಿಸಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಳೆದ 5 ವರ್ಷಗಳಿಂದ
ಜಾರಿಯಲ್ಲಿಟ್ಟಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳನ್ನು ಈಗ
ಅನುದಾನ ಕಡಿತಗೊಳಿಸಿರುವುದರಿಂದ ಜಾರಿಗೊಳಿಸದೆ ನಿಲ್ಲಿಸಿದೆ. ಹಿಂದಿನ
ಸರಕಾರಗಳು ಜಾರಿಯಲ್ಲಿಟ್ಟಿದ್ದ ಕಾಲೋನಿ ಅಭಿವೃದ್ದಿ ಯೋಜನೆ,
ಶಾದಿಭಾಗ್ಯ ಯೋಜನೆಗಳನ್ನು ರದ್ದುಗೊಳಿಸಿದೆ. ಇವೆಲ್ಲಕ್ಕಿಂತ
ಪ್ರಮುಖ ಯೋಜನೆಗಳಾದ, ವಿದೇಶದಲ್ಲಿ ಉನ್ನತ ವ್ಯಾಸಂಗದ
ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್
ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ,
ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ
ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ
ಯೋಜನೆಗಳ 2019-20ನೇ ಸಾಲಿನ ಅನುದಾನ ಸರಕಾರ
ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ಇರುವದು ವಿದ್ಯಾರ್ಥಿಗಳಿಗೆ
ಸಾಕಷ್ಟು ಆರ್ಥಿಕ ತೊಂದರೆಯಾಗುತ್ತಿದೆ.
ರಾಜ್ಯದಲ್ಲಿ 2016-17ರಿಂದ ಜಾರಿಯಲ್ಲಿರುವ ಅಲ್ಪಸಂಖ್ಯಾತ
ಸಮುದಾಯದ ವಿದ್ಯಾರ್ಥಿಗಳು ಸಂಶೋಧನೆ (ಪಿ.ಎಚ್.ಡಿ./ಎಂ.ಫೀಲ್)
ಕೈಗೊಳ್ಳಲು ಪ್ರತಿ ತಿಂಗಳು ನೀಡಲಾಗುತ್ತಿದ್ದ
ಪ್ರೋತ್ಸಾಹಧನ 25000.ರೂಗಳನ್ನು 8333.ರೂಗಳಿಗೆ
ಕಡಿತಗೊಳಿಸಿ ಯಾರೂ ಸಂಶೋಧನೆಯನ್ನು
ಪೂರ್ಣಗೊಳಿಸದಂತಹ ವಾತಾವರಣ ನಿರ್ಮಿಸಿದೆ. 2020-21ನೇ ಸಾಲಿನಲ್ಲಿ
ರಾಜ್ಯಾದ್ಯಂತ ಸುಮಾರು 300 ವಿದ್ಯಾರ್ಥಿಗಳು ಸಂಶೋಧನೆಗಾಗಿ
ಪ್ರೋತ್ಸಾಹ ಧನ ಪಡೆಯುತ್ತಿದ್ದರೂ, ಪ್ರತಿ ವಿದ್ಯಾರ್ಥಿಗೆ ವಾರ್ಷಿಕ
3.ಲಕ್ಷರೂ. ಆದರೂ ಒಟ್ಟು 300ವಿದ್ಯಾರ್ಥಿಗಳಿಗೆ ಈ ಮೊತ್ತ
9.0ಕೋ.ರೂ. ಆಗುತ್ತದೆ, ಆದರೆ ಸರಕಾರ ಇಷ್ಟು ಮೊತ್ತಕ್ಕಾಗಿ
300 ವಿದ್ಯಾರ್ಥಿಗಳ ಸಂಶೋಧನೆಗೆ ಅಡ್ಡಿಯುಂಟುಮಾಡಿರುವುದು
ಆತಂಕದ ವಿಷಯವಾಗಿದೆ.
ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್
ವಿದ್ಯಾರ್ಥಿ ವೇತನಕ್ಕಾಗಿ ವಾರ್ಷಿಕವಾಗಿ ಕರ್ನಾಟಕ ರಾಜ್ಯದಿಂದ ಸುಮಾರು
12ಲಕ್ಷ 50ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಕೇಂದ್ರ
ಮತ್ತು ರಾಜ್ಯ ಸರಕಾರ ಸೇರಿ ಒಟ್ಟು 270.00 ಕೋ.ರೂ. ಅನುದಾನ
ನಿಗದಿಗೊಳಿಸಲಾಗಿತ್ತು, ಆದರೆ 2019-20ನೇ ಸಾಲಿನಲ್ಲಿ ರಾಜ್ಯ ಸರಕಾರ
ಅನುದಾನ ಬಿಡುಗಡೆಗೊಳಿಸದೇ ಇರುವದರಿಂದ ಶೇ50ರಷ್ಟು
ವಿದ್ಯಾರ್ಥಿಗಳು ಕಳೆದ ವರ್ಷದ ವಿದ್ಯಾರ್ಥಿ ವೇತನ ಪಡೆಯಲು
ಸಾದ್ಯವಾಗಿಲ್ಲ. ಈಗಲೂ ಈ ವಿದ್ಯಾರ್ಥಿ ವೇತನಕ್ಕಾಗಿ ಜಾತಕ ಪಕ್ಷಿಯಂತೆ
ಕಾಯುವ ಪರಿಸ್ಥಿತಿ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳದ್ದಾಗಿದೆ.
ಶುಲ್ಕವಿನಾಯತಿ ಯೋಜನೆಯು 1980ರಿಂದ ರಾಜ್ಯದಲ್ಲಿ ಎಲ್ಲ
ಹಿಂದುಳಿದ ವಿದ್ಯಾರ್ಥಿಗಳಿಗೆ ಜಾರಿಯಲ್ಲಿದ್ದು, ಹಿಂದುಳಿದ ವರ್ಗಗಳ
ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು
ಪ್ರತ್ಯೇಕಗೊಂಡ ನಂತರ 2014ರಿಂದ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ
ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ನೀಡುತ್ತ ಬಂದಿದೆ. ಆದರೆ, 2019-
20ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಅಲ್ಪಸಂಖ್ಯಾತ ಸಮುದಾಯದ
ವಿದ್ಯಾರ್ಥಿಗಳಿಗೆ ಈಗಲೂ ಅನುದಾನ ಬಿಡುಗಡೆಗೊಳಿಸದೇ
ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ
ಡೋಲಾಯನಮಾನವಾಗಿದೆ.
ಅದೇ ರೀತಿ ರಾಜ್ಯದಲ್ಲಿ ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ
2014-15ನೇ ಸಾಲಿನಿಂದ ಮನೆಯಿಂದ ಹೊರಗಡೆಯಿದ್ದು ವಿದ್ಯಾಭ್ಯಾಸ
ಮಾಡುತ್ತಿರುವ ವಿದ್ಯಾರ್ಥಿಗಳಿಗೆಂದೇ ಜಾರಿಗೊಳಿಸಿದ ವಿದ್ಯಾಸಿರಿ
ಯೋಜನೆಯ 2019-20ನೇ ಸಾಲಿನ ಅನುದಾನ ಅಲ್ಪಸಂಖ್ಯಾತ ಕಲ್ಯಾಣ
ಇಲಾಖೆಗೆ ಬಿಡುಗಡೆಗೊಳಿಸದೇ ಇರುವುದರಿಂದ ಈ
ಯೋಜನೆಯಡಿಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು
ಆತಂಕದಲ್ಲಿದ್ದಾರೆ.
ಇನ್ನೂ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಮೂಲಕ
ಅನುಷ್ಠಾನ ಮಾಡಲಾಗುತ್ತಿರುವ ‘ಅರಿವು’ ಶೈಕ್ಷಣಿಕ ಸಾಲದ
ಯೋಜನೆ ಸಹ ಈ ವರ್ಷ ದಾರಿ ತಪ್ಪಿದೆ, ಈ ಯೋಜನೆಯ ಮೂಲಕ
ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತಗೊಳ್ಳುವಂತೆ
ಮಾಡಿದೆ. ಅರಿವು ಯೋಜನೆಯ ಮೂಲಕ ಸರಕಾರ ಅಲ್ಪಸಂಖ್ಯಾತ
ವಿದ್ಯಾರ್ಥಿಗಳಿಗೆ ನಿಗಮದಿಂದ ಶೈಕ್ಷಣಿಕ ಸಾಲ ನೀಡಲಾಗುತ್ತಿತ್ತು, ಈ
ವರ್ಷ ಸದರಿ ಸಾಲವನ್ನು ವಿದ್ಯಾರ್ಥಿಗಳು ಕೋರ್ಸುಗಳಿಗೆ ಪಾವತಿಸುವ
ಮೊತ್ತದ ಅರ್ದ ಮೊತ್ತ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ದಿ
ನಿಗಮ ಸಾಲದ ರೂಪದಲ್ಲಿ ನೀಡುತ್ತಿದೆ. ಒಂದು ಕಡೆ
ಪ್ರೋತ್ಸಾಹಧನ ಕಡಿತಗೊಳಿಸಿ, ಮತ್ತೊಂದು ಕಡೆ ಮೆಟ್ರಿಕ್
ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನದ
ಅನುದಾನ ಕಡಿತಗೊಳಿಸಿದ್ದಲ್ಲದೇ ಶುಲ್ಕವಿನಾಯತಿ, ವಿದ್ಯಾಸಿರಿ
ಅನುದಾನವೂ ಸರಕಾರ ನೀಡುತ್ತಿಲ್ಲ, ಇದನ್ನು ಹೊರತುಪಡಿಸಿ
ಇದ್ದಂತಹ ಅರಿವು ಶೈಕ್ಷಣಿಕ ಸಾಲದ ಯೋಜನೆಯನ್ನು
ಮೊಟುಕುಗೊಳಿಸಲು ಹೊರಟಿರುವದು ಸರಕಾರ ಅಲ್ಪಸಂಖ್ಯಾತ
ಸಮುದಾಯವನ್ನು ಸಂಪೂರ್ಣ ಮೂಲೆಗುಂಪು ಮಾಡುವ ಶಪಥ
ಮಾಡಿದೆ ಎನ್ನುವಂತಿದೆ.
ಅನುದಾನ ಕಡಿತಗೊಳಿಸಲು ಕೋವಿಡ್-19 ಕಾರಣವಿದ್ದರೂ
ಯಾವುದೇ ಸರಕಾರ ಜನಪರ ಕಲ್ಯಾಣ ಇಲಾಖೆಗಳ
ಯೋಜನೆಗಳನ್ನು ಕಡಿತಗೊಳಿಸುವದು ಸಾಮಾಜಿಕ ಬದ್ದತೆಯ
ದೃಷ್ಟಿಯಿಂದ ಒಳ್ಳೆಯ ಆಡಳಿತದ ಮಾದರಿಯಾಗಲಾರದು.
ಸರಕಾರದಲ್ಲಿ ಯಾವುದೇ ಇಲಾಖೆಗೂ ಇರದ ಅನುದಾನ ಕಡಿತ
ಕೇವಲ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮಾತ್ರ ಏಕೆ ಎನ್ನುವ
ಪ್ರಶ್ನೆ ನಮ್ಮನ್ನು ಕಾಡುತ್ತಿದೆ.
ಕಾರಣ, ಕರ್ನಾಟಕ ರಾಜ್ಯ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ
ಇಲಾಖೆಗೆ ಸಂಬಂದಿಸಿದ ಯಾವುದೇ ಹೊಸ ಯೋಜನೆ ಜಾರಿಗೊಳಿಸದೇ
ಇದ್ದರೂ ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು
ಮುಂದುವರೆಸಬೇಕು, ಸದರಿ ಯೋಜನೆಗಳನ್ನು
ಮುಂದುವರೆಸಲು ಬೇಕಾಗುವ ಅನುದಾನವನ್ನು ಸಂಪೂರ್ಣವಾಗಿ
ಬಿಡುಗಡೆಗೊಳಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.












