ಕೋವಿಡ್-19 ಪರಿಸ್ಥಿತಿ ಸುಧಾರಣೆಗೊಂಡ ಬಳಿಕ ಸಿಎಎ ವಿರೋಧಿ ಹೋರಾಟ ಕೂಡ ಮುಂದುವರಿಯಲಿದೆ; ಎಸ್.ಡಿ.ಪಿ.ಐ

ನವದೆಹಲಿ, ನವೆಂಬರ್ 8, 2020: ಸಿ.ಎ.ಎ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಕೋವಿಡ್ 19 ಪರಿಸ್ಥಿತಿ ಸುಧಾರಿಸಿದ ನಂತರ ಅದನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವರ ಇತ್ತೀಚಿನ ಹೇಳಿಕೆಯು, ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಮೂಲಕ ಗುರಿಯಾಗಿಸಿಕೊಂಡಿರುವ ಮುಸ್ಲಿಂ ಸಮುದಾಯಕ್ಕೆ ಸ್ಪಷ್ಟ ಸವಾಲಾಗಿದೆ.

ದೇಶ ವಿಭಜನೆಯ ನಂತರ ಭಾರತವನ್ನು ತಮ್ಮ ತಾಯ್ನಾಡು ಎಂದು ಆಯ್ಕೆ ಮಾಡಿಕೊಂಡು, ಪಾಕಿಸ್ತಾನಕ್ಕೆ ವಲಸೆ ಹೋಗಲು ನಿರಾಕರಿಸಿ ಭಾರತದಲ್ಲಿ ವಾಸಿಸಲು ನಿರ್ಧರಿಸಿದ ಮುಸ್ಲಿಮರ ಉತ್ತರಾಧಿಕಾರಿಗಳಾಗಿದ್ದಾರೆ ಭಾರತದ ಮುಸ್ಲಿಮರು. ಈಗ ಭಾರತದಲ್ಲಿ ವಾಸಿಸುತ್ತಿರುವ ಸಮುದಾಯದ ಬಹುತೇಕ ಜನರು ಸ್ವತಂತ್ರ ಭಾರತದಲ್ಲಿ ಜನಿಸಿದವರು ಮತ್ತು ಜನ್ಮತಃ ಭಾರತದ ನಾಗರಿಕರಾಗಿದ್ದಾರೆ. ಅವರನ್ನು ಬೆದರಿಸುವ ಮತ್ತು ದೂರವಿಡುವ ಯಾವುದೇ ನಡೆ ಅನೈತಿಕ ಮತ್ತು ಅಸಂವಿಧಾನಿಕವಾಗುತ್ತದೆ. ಸಿಎಎ ಜಾರಿಗೊಳಿಸುವ ಮೂಲಕ ಧರ್ಮಾಂಧ ಕೇಂದ್ರ ಸರ್ಕಾರವು ತನ್ನ ಸಿದ್ಧಾಂತವಾದಿ ಗೋಲ್ವಾಲ್ಕರ್ ಅವರ ಹಿಂದುತ್ವ ರಾಷ್ಟ್ರದ ಕನಸನ್ನು ನನಸಾಗಿಸುವ ಪ್ರಕ್ರಿಯೆಯಲ್ಲಿದೆ.
ಎಲ್ಲಾ ಭಾರತೀಯ ನಾಗರಿಕರ ಪೌರತ್ವದ ಹಕ್ಕನ್ನು ಕಾಪಾಡುವ ವಿಷಯದಲ್ಲಿ ನಡೆಯುವ ಪ್ರತಿಭಟನೆಗಳು ಮತ್ತು ಚಳವಳಿಗಳಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮುಂಚೂಣಿಯಲ್ಲಿರುತ್ತದೆ.
ಕೊರೋನಾ ಪರಿಸ್ಥಿತಿ ಸುಧಾರಿಸಿದ ಬಳಿಕ ಕೇಂದ್ರ ಸರ್ಕಾರ ಈ ಕಠಿಣ ತಿದ್ದುಪಡಿಯನ್ನು ಜಾರಿಗೆ ತರುವ ದುಸ್ಸಾಹಸಕ್ಕೆ ಮುಂದಾದರೆ, ಎಸ್‌ಡಿಪಿಐ ಕೂಡ ಅದರ ವಿರುದ್ಧದ ಪ್ರತಿಭಟನೆಯನ್ನು ಮುಂದುವರಿಸಲಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಜಿ ಸ್ಪಷ್ಟಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಿಎಎ ಕಾಯ್ದೆ ಜಾರಿಗೊಳಿಸುವ ಕ್ರಮವನ್ನು ಸರ್ಕಾರ ಕೈಬಿಡುವುದು ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ.