*ಉಳ್ಳಾಲ ನಗರಸಭೆಗೆ ನೂತನ ಸಾರಥಿ, ಅಭಿನಂದನಾರ್ಹ ಹೆಜ್ಜೆ*.: ಫಾರೂಕ್ ಉಳ್ಳಾಲ್.
**************************
*ನನ್ನ ಆತ್ಮೀಯರಿಬ್ಬರು ಉಳ್ಳಾಲ ನಗರ ಸಭೆಯ ಅಧ್ಯಕ್ಷ- ಉಪಾಧ್ಯಕ್ಷ ರಾಗಿ ಆಯ್ಕೆಯಾಗಿರುವುದು ನನಗೆ ಅತೀವ ಖುಷಿ ತಂದಿದೆ*.

ಶ್ರೀ ಮತಿ ಚಿತ್ರಕಲಾ ಚಂದ್ರಕಾಂತ್ , ಐದು ವರ್ಷಗಳ ಕಾಲ ನಮ್ಮೊಂದಿಗೆ ಉಳ್ಳಾಲ ನಗರ ಸಭೆಯಲ್ಲಿ ಜೊತೆಯಾಗಿ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿದ್ದವರು.

ನಗರ ಸಭೆಯ ಅಧ್ಯಕ್ಷನಾಗಲು ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆದಾಗ ಸಹೋದರಿ ಚಿತ್ರಕಲಾ, ನನ್ನನ್ನು ಬೆಂಬಲಿಸಿದ್ದರು. ಅಗತ್ಯ ಬೆಂಬಲ ನನಗೆ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಚಿತ್ರಕಲಾ ರವರು ಮಾತು ಕೊಟ್ಟಂತೆಯೇ ನನ್ನನ್ನು ಬೆಂಬಲಿಸಿದನ್ನು ನಾನೆಂದೂ ಮರೆಯಲಾರೆ.

ಆಕೆ ತನ್ನ ಸೌಮ್ಯತೆ ಮತ್ತು ಸಜ್ಜನಿಕೆಯ ಗುಣದಿಂದ ನಗರ ಸಭೆಯಲ್ಲಿ ಎಲ್ಲದ ಮೆಚ್ಚುಗೆಯನ್ನು ಗಳಿಸಿದ್ದರು. ನಗರ ಸಭೆಯ ಉಪಾಧ್ಯಕ್ಷೆಯಾಗಿದ್ದಾಗಲೂ ಎಳ್ಳಷ್ಟೂ ಅಹಂಕಾರ, ಜಂಭ ಇಲ್ಲದೆ ಸರಳವಾಗಿ ಎಲ್ಲರೊಂದಿಗೂ ನಗು ಮುಖದಿಂದಲೇ ಎದಿರುಗೊಳ್ಳುತ್ತಿದ್ದರು.

ಚಿತ್ರಾಕಲಾ ರ ಪತಿ ಚಂದ್ರ ಕಾಂತ್ ನನಗೆ ಬಹಳ ವರ್ಷಗಳಿಂದ ಪರಿಚಿತರು. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಎಷ್ಟೋ ವರ್ಷಗಳ ಹಿಂದೆಯೇ ಚಂದ್ರಕಾಂತ್ ನನ್ನ ಆತ್ಮೀಯ ಗೆಳೆಯರಾಗಿದ್ದವರು. ಅವರ ಸಹೋದರ ಪ್ರತಿಭಾವಂತ ಛಾಯಾಗ್ರಾಹಕ ಹಾಗೂ ಮುದ್ದು ಕೃಷ್ಣ ಸ್ಪರ್ಧಾ ಕೂಟದ ಸ್ಥಾಪಕ ಅಧ್ಯಕ್ಷ ಅಶೋಕ್ ರಂತೂ ನನಗೆ ಇನ್ನೂ ನಿಕಟ ಸ್ನೇಹಿತ.

ಅಕ್ಕರೆಕರೆಯ ನಿವಾಸಿಯಾಗಿರುವ ಚಂದ್ರಕಾಂತ್ ಮತ್ತು ಅವರ ಕುಟುಂಬ ಹಾಗೂ ಸ್ಥಳೀಯವಾಗಿ ಹಿಂದೂ,ಮುಸ್ಲಿಂ, ಕ್ರೈಸ್ತ ರೊಂದಿಗೆ ಸಾಕಷ್ಟು ಸ್ನೇಹ ಸಂಪರ್ಕ ಹೊಂದಿರುವುದನ್ನು ಬಾಲ್ಯಕಾಲದಿಂದಲೇ ನೋಡುತ್ತಾ ಬಂದಿದ್ದೇನೆ.

ಚಂದ್ರಕಾಂತ್, ಸ್ನೇಹ ಜೀವಿ, ಪರೋಪಕಾರಿ, ಜನಪರ ನಿಲುವಿನಿಂದ ಸಾಮಾಜಿಕವಾಗಿ ಸ್ಪಂದಿಸುತ್ತಾ ಬಂದವರು.

ಮಲಯಾಳಿ ಬಿಲ್ಲವ ಸಮಾಜಕ್ಕೆ ಸೇರಿದ ಚಂದ್ರಕಾಂತ್ ರವರು ಧಾರ್ಮಿಕವಾಗಿ ಅಪಾರ ದೈವ ಭಕ್ತಿ ಉಳ್ಳವರು. ಸಮಾಜದ ಬಡ ಬಗ್ಗರ ಬಗ್ಗೆ ಅತೀವ ಕಾಳಜಿ ವಹಿಸುವ ಚಂದ್ರಕಾಂತ್ ರಿಗೆ ತಕ್ಕ ಪತ್ನಿ ಚಿತ್ರಕಲಾ.
ಊರಿನ ಅಭಿವೃದ್ಧಿಗೆ, ಬಡ ಜನಸಾಮಾನ್ಯರ ಬದುಕಿಗೆ ಸ್ಪಂದಿಸುವ ಈ ದಂಪತಿಗಳು ಉಳ್ಳಾಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ ಎಂಬುವುದು ನನ್ನ ಖಚಿತ ಅಭಿಪ್ರಾಯ.

ಉಳ್ಳಾಲ ನಗರ ಸಭೆಯ ಅಧ್ಯಕ್ಷೆಯಾಗಿ, ಸುಶಿಕ್ಷಿತೆ ಮತ್ತು ಸದ್ಗುಣಿಯೂ ಆಗಿರುವ ಚಿತ್ರಕಲಾ ರಿಂದ ಉಳ್ಳಾಲದ ಸರ್ವ ಜನರ ನಿರೀಕ್ಷೆಯನ್ನು ನಿಜವಾಗಿಸಲು ಸಾಧ್ಯವಾಗಲಿ.

*ನಮ್ಮಕುಟುಂಬದ ಗೆಳೆಯನಿಗೆ *ಯೋಗ್ಯತೆಯೊಂದಿಗೆ ಯೋಗವೂ ಕೈಗೂಡಿತು*!
ಅಯ್ಯೂಬ್ ಮಂಚಿಲ, ನನ್ನ ಸಹೋದರನ ನೆಚ್ಚಿನ ಗೆಳೆಯ. ನಮ್ಮ ಕುಟುಂಬಕ್ಕೇ ಅವರು ಆತ್ಮೀಯರು.
ನಮ್ಮ ನೋವು-ನಲಿವುಗಳಲ್ಲಿ ನಮ್ಮೊಂದಿಗೆ ಸಮಭಾಗಿಯಾಗುತ್ತಿದ್ದವರು.

ಅಯ್ಯೂಬ್, ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡದ್ದು ತೀರಾ ಇತ್ತೀಚೆಗೆ ಆಗಿರ ಬಹುದು. ಆದರೆ 90ದಶಕದಲ್ಲೇ ಅಯ್ಯೂಬ್ ರವರು, ಸಾಮಾಜಿಕ-ಧಾರ್ಮಿಕ – ರಾಜಕೀಯ ಚಟುವಟಿಕೆಗಳಲ್ಲಿ ಮುಂಛೂಣಿಯಲ್ಲಿದ್ದವರು.

ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ನಿರರ್ಗಳವಾಗಿ ಮತ್ತು ಅಷ್ಟೇ
ಮನೋಜ್ಞವಾಗಿ ಅಯ್ಯೂಬ್ ಭಾಷಣ ಮಾಡ ಬಲ್ಲರು.
ಕಂದಾಯ ಇಲಾಖೆಗೆ ಸಂಬಂಧಿಸಿ ಅಗಾಧ ಅನುಭವ, ಚಾಕಚಕ್ಯತೆಯನ್ನು ಹೊಂದಿರುವ ಅಯ್ಯೂಬ್ ನಾಯಕತ್ವದ ಗುಣವುಳ್ಳವರು. ಯಾವುದೇ ಇಲಾಖೆಯ ಕಛೇರಿಯಲ್ಲಿ ಪ್ರಭಾವ ಬೀರುವಷ್ಟು ಮಾತಿನಲ್ಲಿ ಸ್ವಾಧೀನತೆಯನ್ನೂ ಅಯ್ಯೂಬ್ ಸಾಧಿಸ ಬಲ್ಲರು.
ಹೆಚ್ಚಾಗಿ ವಿನಂತಿಯ ಭಾಷೆಯಲ್ಲೇ ವ್ಯವಹರಿಸುವ ಅಯ್ಯೂಬ್, ಹೋರಾಟ ಅನಿವಾರ್ಯ ಎಂದಾದರೆ ಅದಕ್ಕೂ ಹಿಂದೆ- ಮುಂದೆ ನೋಡುವವರಲ್ಲ.
ಹಿಂದೆ ಆರ್ಥಿಕವಾಗಿ ತೀರಾ ಸಂಕಷ್ಟ ಸ್ಥಿತಿ ತಲುಪಿದ್ದ ಅಯ್ಯೂಬ್, ತನ್ನ ಅವಿರತ ಪರಿಶ್ರಮದಿಂದ ವೃತ್ತಿ ಕ್ಷೇತ್ರದಲ್ಲಿ ಇಂದು ಸುಸ್ಥಿತಿ ತಲುಪಿದ್ದಾರೆ.

ಅಯ್ಯೂಬ್ ರ ಪತ್ನಿ ಸಜ್ಜನಿಕೆಯ ಸ್ವಭಾವದವರು. ಸಂಯಮಶೀಲೆಯಾಗಿರುವ ಅವರು, ಕುಟುಂಬವನ್ನು ಮುನ್ನಡೆಸುವ ಕೌಶಲ್ಯ, ಪತಿ ಮತ್ತು ಮಕ್ಕಳ ಮೇಲಿನ ಅವರ ಪ್ರೀತಿ ವಾತ್ಸಲ್ಯ ಅನುಪಮವಾದದ್ದು.
ಮನೆಗೆ ಬಂದವರಲ್ಲಿ ತೋರುವ ಆತಿಥ್ಯವೂ ಅನನ್ಯವಾದದ್ದು.

ಉಳ್ಳಾಲವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ತುಡಿತ, ಚಿತ್ರಕಲಾ ಮತ್ತು ಅಯ್ಯೂಬ್ ರಲ್ಲಿದೆ.
ಯೋಗ್ಯತೆ ಇದ್ದರೆ ಸಾಲದು, ಯೋಗ ಬೇಕು ಎನ್ನುವ ಮಾತು ಉಳ್ಳಾಲದಲ್ಲಿ ಆಗಾಗ ಕೇಳಿ ಬರುತ್ತಿರುತ್ತವೆ.ಆದ್ದರಿಂದ ನಾಯಕತ್ವದ ಗುಣ ಇರುವ ಗೆಳೆಯ ಅಯ್ಯೂಬ್ ಮೊದಲ ವಿಜೇತದಲ್ಲೇ ಆಡಳಿತದ ಗದ್ದುಗೆ ಏರಲಾರರು ಎಂಬ ಅಪನಂಬಿಕೆಯೂ ಅಯ್ಯೂಬ್ ಆಯ್ಕೆಯಲ್ಲಿ ಕೊನೆಗೊಂಡಂತಾಗಿದೆ. ಅಯ್ಯೂಬ್ ಅರ್ಹತೆಯೊಂದಿಗೆ ಅದೃಷ್ಠವನ್ನೂ ಗಳಿಸಿದಂತಾಗಿದೆ.
ಶಾಸಕ ಮತ್ತು ಉಳ್ಳಾಲ ಸಭೆಯ ಸಾರಥಿಗಳ ಆಯ್ಕೆ ಯಲ್ಲಿ ನಿರ್ಣಾಯಕರಾದ ಯು.ಟಿ.ಖಾದರ್ ರಲ್ಲಿ ಚಿತ್ರ ಕಲಾ ಮತ್ತು ಅಯ್ಯೂಬ್ ರವರಿಗೆ ಅವಕಾಶ ಕೊಡುವಂತೆ ಕೇಳಿ ಕೊಂಡಿದ್ದೆ. ನನಗಾಗಿ ವಿನಂತಿಸಿದಾಗಲೆಲ್ಲಾ ಯುಕ್ತ ವಾಗಿ ಸ್ಪಂದಿಸದ ಯು.ಟಿ.ಖಾದರ್ ನಾನು ಇವರಿಗಾಗಿ ವಿನಂತಿಸಿದ್ದನ್ನು ಪುರಷ್ಕರಿಸಿರುವುದು ನನ್ನಲ್ಲಿ ಅಮಿತಾನಂದ ತಂದಿದೆ.

ಅದರ ಸಾಕ್ಷಾತ್ಕಾರ ಇವರಿಬ್ಬರ ಇಚ್ಛಾಶಕ್ತಿಯನ್ನು ಅವಲಂಬಿಸಿವೆ.

ಹಿರಿಯರ ಮಾರ್ಗದರ್ಶನವನ್ನು ಆಸ್ಥೆಯಿಂದ ಕೇಳುವ ಮನೋಭಾವ ಹೊಂದಿರುವ ಅಯ್ಯೂಬ್ ಮತ್ತು ಭಾವೈಕ್ಯತೆ- ಸಾಮಾರಸ್ಯಗಳ ಪ್ರತೀಕದಂತಿರುವ ಚಿತ್ರಕಲಾ ಚಂದ್ರಕಾಂತ್ ರಿಂದ ನಮ್ಮನಾಡಿನ ಶ್ರೇಯೋಭಿವೃದ್ಧಿ ನೆರವೇರಿ ಸಿಗುವಂತಾಗಲಿ.
ಅಧ್ಯಕ್ಷ-ಉಪಾಧ್ಯಕ್ಷರಿಗೆ ಶುಭವಾಗಲಿ, ನಮ್ಮ ನಾಡಿನ ಮೊದಲ ಪ್ರಜೆಗಳಿಗೆ ಉತ್ತರೋತ್ತರ ಗೆಲುವಾಗಲಿ.
— ಫಾರೂಕ್ ಉಳ್ಳಾಲ್.