*ಕಲ್ಲೆಗ ಮಸೀದಿಯಲ್ಲಿ “ಜಮಾಅತ್ ಡೆವಲಪ್ಪ್ ಮೆಂಟ್ ಸೆಂಟರ್” ಎಂಬ ಮಾದರಿ ಪದ್ದತಿಯ ಉದ್ಘಾಟನೆ*

ದಶಕಗಳಿಂದ ಮುಸ್ಲಿಂ ಸಮುದಾಯದಲ್ಲಿನ ಬೇಡಿಕೆಯಾಗಿದ್ದ ಜಮಾಅತ್ ಕೇಂದ್ರೀಕರಿಸಿ ಜನಕಲ್ಯಾಣ ಯೋಜನೆಗೆ ಮಾದರಿ ಪದ್ದತಿ ಜಮಾಅತ್ ಡೆವಲಪ್ಪ್ ಮೆಂಟ್ ಸೆಂಟರ್ ನ ಉದ್ಘಾಟನೆ ನಿನ್ನೆ ಕಲ್ಲೆಗ ಮಸೀದಿಯಲ್ಲಿ ನಡೆಯಿತು. ಜಿಲ್ಲಾ ವಕ್ಪ್ ನ ಅಧ್ಯಕ್ಷರಾದ ಕಣಚೂರು ಮೋನು ಹಾಜಿ ಸೆಂಟರನ್ನು ಉದ್ಘಾಟಿಸಿದರು. ಜನಾಬ್ ಜಿ.ಎ ಬಾವಾರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಸಂಘ ಸಂಸ್ಥೆಯ ನಾಯಕರ, ಉಲೆಮಾಗಳು, ಬುದ್ದಿಜೀವಿಗಳು, ಚಿಂತಕರು ಮತ್ತು ಪತ್ರಕರ್ತರ ಸಲಹೆ – ಸೂಚನೆ ಮತ್ತು ಮಾರ್ಗದರ್ಶನದಲ್ಲಿ ರೂಪುಗೊಂಡ ಈ ಜಮಾಅತ್ ಡೆವಲಪ್ಪ್ ಮೆಂಟ್ ಸೆಂಟರ್ ಪದ್ದತಿಯ ಪ್ರೊಜೆಕ್ಟ್ ರಿಪೋರ್ಟನ್ನು ನೂರುಲ್ ಹುದಾ ಇಸ್ಲಾಮಿಕ್ ಅಖಾಡಮಿಯ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿಯವರು ಬಿಡುಗಡೆಗೊಳಿಸಿದರು.

ಮೇ -3 ನೇ ತಾರೀಕಿನಂದು ಲಾಕ್ ಡೌನ್ ಸಂದರ್ಭದವನ್ನು ಸದುಪಯೋಗ ಪಡಿಸಿ, ಪ್ರೊಡಕ್ಟಿವ್ ಮುಸ್ಲಿಂ ಎಂಬ ವಾಟ್ಸಾಪ್ ಗ್ರೂಪಿನಲ್ಲಿ ಸಂಘಟಿತರಾದ ಜಿಲ್ಲೆಯ ಪ್ರಮುಖರು, ಜಮಾತ್ ಅಭಿವೃದ್ದಿ ಯೋಜನೆಗೆ ಎಲ್ಲರ ಆಲೋಚನೆಗಳನ್ನು ಶೇಖರಿಸಿದರು. ಸುಮಾರು 670 ಪುಟಗಳ ಅಭಿಪ್ರಾಯ ಸಂಗ್ರಹಿಸಿ, ಅದರಲ್ಲಿ ಅತ್ಯುತ್ತಮ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರಲು ಕಲ್ಲೆಗ ಜಮಾಅತನ್ನು ಪೈಲೆಟ್ ಪ್ರೊಜೆಕ್ಟ್ ಗೆ ಆಯ್ಕೆ ಮಾಡಲಾಯಿತು. ಕಲ್ಲೆಗ ಜಮಾಅತಿನ ಅಧ್ಯಕ್ಷರಾದ ಶಕೂರ್ ಹಾಜಿ ನೇತೃತ್ವದ ಕಮೀಟಿಯವರು, ಯಂಗ್ ಮೆಂನ್ಸ್ ಕಮಿಟಿಯವರ ಜೊತೆ ಸೇರಿ ನಾಲ್ಕು ತಿಂಗಳ ಅವಿರತ ಶ್ರಮದಿಂದ ಜಮಾಅತ್ ನ ಡೆವಲಪ್ಪ್ ಮೆಂಟ್ ಸೆಂಟರ್ ಪದ್ದತಿಯ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತಂದಿತು. ಪ್ರೊಡಕ್ಟಿವ್ ಮುಸ್ಲಿಂ ಆಲೋಚನಾ ಬಳಗದ ಮಾರ್ಗದರ್ಶನದಲ್ಲಿ ಬಹಳ ವ್ಯವಸ್ಥಿತವಾಗಿ ಮಾದರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಕಲ್ಲೆಗ ಜಮಾತಿನ ಪ್ರಯತ್ನಕ್ಕೆ ವಕ್ಪ್ ನ ಅಧ್ಯಕ್ಷರಾದ ಕಣಚೂರು ಮೋನು ಹಾಜಿಯವರು ಶ್ಲಾಘಿಸಿದರು.

ಜಮಾಅತಿನ ಸಂಸಾರಗಳ ಅಂಕಿ ಅಂಶ ಪಡೆದು ಅದರಲ್ಲಿ ಅವರ ಸ್ಥಿತಿಗತಿಗಳನ್ನು ತಿಳಿಯಲಾಯಿತು. ಅನಂತರ ಜಮಾಅತಿನಲ್ಲಿ ಇರುವ ಎನ್.ಆರ್. ಐಗಳನ್ನು, ವೃತ್ತಿಪರರನ್ನು, ವಿಧ್ಯಾರ್ಥಿಗಳನ್ನು, ಯುವಕರನ್ನು, ಯುವತಿಯರನ್ನು, ಬಡವರನ್ನು, ವೃದ್ದರನ್ನು, ಅಸಕ್ತರನ್ನು, ಸಂಪನ್ನರನ್ನು ಗುರುತಿಸಲಾಯಿತು. ಉಧ್ಯೋಗ ಮಾಹಿತಿ, ಆರ್ಥಿಕ ಸ್ಥಿತಿಗತಿ, ಸಾಲ ಮತ್ತು ಸಮಸ್ಯೆಗಳ ಪಟ್ಟಿ ಮಾಡಲಾಯಿತು. ಅನಂತರ, ಮೊದಲಿಗೆ ವಿಧ್ಯಾರ್ಥಿಗಳನ್ನು ಜಮಾಅತಿಗೆ ಕರೆಯಿಸಿ ಅವರ ಗುರಿಯನ್ನು ನಿಶ್ಚಯಿಸಲಾಯಿತು. ವೃತ್ತಿಪರರನ್ನು ಸೇರಿಸಿ ಅವರ ಸಹಭಾಗಿತ್ವ ಪರಿಚಯಿಸಲಾಯಿತು. ಅನಂತರ ಡೆವಲಪ್ ಮೆಂಟ್ ಸೆಂಟರ್ ಪದ್ದತಿಯಲ್ಲಿ ಅವರ ಭಾಗವಹಿಸುವಿಕೆಯನ್ನು ವಿವರಿಸಲಾಯಿತು. ಪ್ರೊಡಕ್ಟಿವ್ ಮುಸ್ಲಿಂ ಆಲೋಚನಾ ಬಳಗದ ನಿಬಂಧನೆಯಂತೆ, ಜಮಾಅತ್ ಡೆವಲಪ್ಪ್ ಮೆಂಟ್ ಸೆಂಟರ್ ತಂಡದಲ್ಲಿ ವಿಧ್ಯಾರ್ಥಿಗಳನ್ನು, ವೃತ್ತಿಪರರನ್ನು, ಯುವಕರನ್ನೂ, ಮಹಿಳೆಯರ ವಿಭಾಗವನ್ನೂ ಸೇರಿಸಿ, ಪದ್ದತಿಯ ಮೂಲಕ ನಡೆಸುವ 20 ಅಂಶಗಳ ಕಾರ್ಯಕ್ರಮದಲ್ಲಿ 5 ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಯಿತು.

ಡೆವಲಪ್ಪ್ ಮೆಂಟ್ ಸೆಂಟರ್ ಪದ್ದತಿಯ ನೀತಿಯಲ್ಲಿ ಇರುವ ಜಮಾಅತ್ ಜನಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಜಿ.ಎ ಬಾವಾ, ಕಳೆದ ನಾಲ್ಕು ತಿಂಗಳು ನಾವು ಸಮಾಲೋಚಿಸಿ ಈ ಪದ್ದತಿಯನ್ನು ಮಾಡಿದ್ದೇವೆ. ಇದು ಸಮುದಾಯದ ಎಲ್ಲರ ಆಲೋಚನೆಗಳನ್ನು ಒಂದೆಡೆ ಸೇರಿಸಿ ಅತ್ಯುತ್ತಮ ಆಲೋಚನೆಯನ್ನು ಆಯ್ಕೆ ಮಾಡಿ ರೂಪಿಸಿದ ಯೋಜನೆಯಾಗಿದೆ. ಬಹಳ ಸುಲಭ ಮತ್ತು ಸುಸೂತ್ರವಾಗಿ ಇದರ ಮೂಲಕ ನಮಗೆ ಕಾರ್ಯಾಚರಿಸ ಬಹುದು ಎಂದರು. ಕಲ್ಲೆಗ ಜಮಾಅತಿನ ಅಧ್ಯಕ್ಷರಾದ ಶಕೂರ್ ಹಾಜಿಯವರು ಡೆವಲಪ್ಪ್ ಮೆಂಟ್ ಸೆಂಟರ್ ನ ಪದ್ದತಿಯಲ್ಲಿದ್ದ ವಿಧ್ಯಾರ್ಥಿಗಳ ರಿಜಿಸ್ಟ್ರೇಶನ್ ಈಗಾಗಲೇ ಮಾಡಿದ್ದು, ಅವರ ಮಾರ್ಗದರ್ಶನಕ್ಕೆ ವೃತ್ತಿಪರ ತಂಡವನ್ನು ರಚಿಸಲಾಗಿದೆ ಎಂದರು. ವಿಧ್ಯಾರ್ಥಿಗಳು ಯಾವುದೇ ಕಾರಣಕ್ಕು ಶಿಕ್ಷಣ ಡ್ರಾಪೌಟ್ ಆಗದಂತೆ ಎಚ್ಚರಿಕೆ ವಹಿಸುವ ಜೊತೆಗೆ ಅವರನ್ನು ಮೊನಿಟರ್ ಮಾಡುತ್ತಾ, ಮಾರ್ಗದರ್ಶನ -ಸಹಾಯ ನೀಡುವುದಾಗಿ ಹೇಳಿದರು. ಹತ್ತು ಪ್ರಮುಖ ಕೋರ್ಸ್ ಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದು, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಅವರನ್ನು ನೈತಿಕ ಮತ್ತು ಮೌಲ್ಯಾದಾರಿತ ಬದುಕಿಗೆ ದುಡಿಸುವುದು ಈ ಪದ್ದತಿಯ ಪ್ರಮುಖ ಅಂಶಗಳಾಗಿದೆ ಎಂದರು.

ಅಡ್ವಕೇಟ್ ಹನೀಫ್ ಹುದವಿ ಮಾತನಾಡಿ, ಡೆವಲಪ್ಪ್ ಮೆಂಟ್ ಸೆಂಟರ್ ಪದ್ದತಿಯಲ್ಲಿ ಕೇವಲ ಪ್ರೊಗ್ರಂ ಮಾತ್ರವಲ್ಲ ಪ್ರೊಗ್ರೆಸ್ಸಿವ್ ರಿಪೂರ್ಟ್ ಇರುವುದು ತಿಳಿದು ಸಂತೋಷ ವಾಯಿತು. ಒಂದು ವರ್ಷದಲ್ಲಿ ರಿಸಲ್ಟ್ ಏನು ಎಂದು ನೋಡುವ ಸೋಶಿಯಲ್ ಆಡಿಟಿಂಗ್ ಇಲ್ಲದೇ ಇದ್ದರೆ ಅಭಿವೃದ್ದಿ ಮರೀಚಿಕೆ ಎಂದರು. ನಮ್ಮಲ್ಲಿ ಆಸಕ್ತಿ ಮತ್ತು ಇಚ್ಚಾಶಕ್ತಿ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹೊಸತೊಂದು ಅನುಭವ ಅರಗಿಸಲು ಕಷ್ಟವಾಗುತ್ತದೆ. ಆದರೂ ನಾವು ರಾಷ್ಟ್ರದ ಪ್ರಗತಿಯಲ್ಲಿ ಸ್ಪರ್ಧಾತ್ಮಕ ಕೊಡುಗೆ ನೀಡಲು ನಮ್ಮ ಯೋಚನೆ ಮತ್ತು ಕಾರ್ಯತಂತ್ರಗಳು ಎಲ್ಲರಿಗೂ ಆದರ್ಶವಾಗಬೇಕು ಎಂದರು. ಇಂದು ನಾವು ದೇಶದಲ್ಲಿ ಒಬಿಸಿ ಅಂದರೆ ಬ್ಯಾಕ್ ವರ್ಡ್ ಕ್ಲಾಸ್ ನಲ್ಲಿ ಇದ್ದೇವೆ.ಆದರೆ , ಕುರ್ ಆನ್ ನಮ್ಮನ್ನು ಖೈರ್ ಉಮ್ಮತ್ತ್, ಮುಂದುವರಿದವರು ಎಂದು ಪ್ರೊತ್ಸಾಹಿಸಿದೆ. ಹಾಗಾಗಿ ನಾವು ಬದಲಾಗಬೇಕು ಎಂದರು.

ಹಿದಾಯ ಪೌಂಡೇಶನ್ ಉಪಾಧ್ಯಕ್ಷರಾದ ಆಸಿಫ್ ಡೀಲ್ಸ್ ಮಾತನಾಡಿ ಡೆವಲಪ್ಪ್ ಮೆಂಟ್ ಸೆಂಟರ್ ಪದ್ದತಿಯ ಪ್ಲಾನಿಂಗ್ ಬಹಳ ಸರಳವಾಗಿದೆ. ಇದು ಎಲ್ಲಾ ಮಸೀದಿಯಲ್ಲೂ ಕಾರ್ಯಾಚರಿಸಬೇಕು. ಅದಕ್ಕಾಗಿ ದುಡಿಯಲು ಯುವಕರ ಒಂದು ತಂಡವನ್ನು ರಚಿಸುವುದಾಗಿ ಹೇಳಿದರು. ಎಂಪ್ರೆಂಡ್ಸ್ ನ ಅಧ್ಯಕ್ಷರಾದ ಹನೀಫ್ ಹಾಜಿ ಗೋಲ್ತಮಜಲು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಹಲವು ಪ್ರಮುಖ ಮಸೀದಿಗಳು ಆಕ್ಟಿವ್ ಆಗಿ ತಮ್ಮ ಜಮಾತಿನ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದೆ, ಈ ಪದ್ದತಿಯು ಅವರಿಗೊಂದು ಮಾರ್ಗದರ್ಶಿ ಆಗಬಹುದು ಎಂದರು. ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಮಾತನಾಡಿ, ಡೆವಲಪ್ಪ್ ಮೆಂಟ್ ಸೆಂಟರ್ ನಲ್ಲಿ ವಿಧ್ಯಾರ್ಥಿಗಳಿಗೆ ಗುರಿಯನ್ನು ನಿಶ್ಚಯಿಸಿ ಸಾಧನೆಗಳನ್ನು ಮಾಡಲು ಕೊಟ್ಟಿರುವ ಅವಕಾಶ ಶ್ಲಾಘನಾರ್ಹ. ಇಲ್ಲಿನ ಯುವಕನೊಬ್ಬ ದೊಡ್ಡ ಸಾಧಕ ಆದರೆ, ನಮ್ಮ ಈ ಯೋಜನೆ ಸಾರ್ಥಕ ಎಂದರು.

ಕಾರ್ಯಕ್ರಮದಲ್ಲಿ ಕಲ್ಲೆಗ ಜಮಾತಿನ ಅಧ್ಯಕ್ಷರಾದ ಶಕೂರ್ ಹಾಜಿ, ಎನ್.ಆರ್.ಐ ಪ್ರವಾಸಿಗಳು ಕಲ್ಲೆಗ ಇದರ ಅಧ್ಯಕ್ಷರಾದ ಅಬ್ದುಲ್ ಲತೀಫ್, ಅಲ್ ಅಮೀನ್ ಯಂಗ್ ಮೆಂನ್ಸ್ ನ ಅಧ್ಯಕ್ಷರಾದ ಅಬ್ದುಲ್ ರಶೀದ್ ಇವರನ್ನು ಮಾದರಿ ಜಮಾತ್ ಯೋಜನೆಗೆ ನೀಡಿದ ಸಹಕಾರಕ್ಕಾಗಿ ಆಸಿಫ್ ಡೀಲ್ಸ್ ಅವರು ಟೀಂ ಬಿಹ್ಯೂಮನ್ ಮೂಲಕ ಸನ್ಮಾನಿಸಿದರು. ಅದೇ ರೀತಿ, ಸಮಾಜ ಸೇವಕರಾದ ಇಮ್ತಿಯಾಝ್ ಪಾರ್ಲೆ, ಉದಯ ಹನೀಫ್, ತನ್ನ ಇಬ್ಬರು ಪುತ್ರಿಯರನ್ನು ವೈಧ್ಯರನ್ನಾಗಿ ಮಾಡಿದ ಅಬ್ದುಲ್ ಸಮದ್ ರವರನ್ನೂ ಹಿದಾಯಾ ಪೌಂಡೇಶನ್ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಸಿದ್ದೀಕ್ ಅಡ್ವಕೇಟ್ ಅವರು ನಿರ್ವಹಿಸಿದರು, ಖ್ಯಾತ ಉಧ್ಯಮಿ ಅಶ್ರಫ್ ಮುಖ್ವೆ ಅತಿಥಿಯಾಗಿ ಭಾಗವಹಿಸಿದ್ದರೆ, ಖ್ಯಾತ ವಾಗ್ಮಿ ಅಬುಬಕ್ಕರ್ ಸಿದ್ದೀಕ್ ಜಲಾಲಿ ಉಸ್ತಾದರು ದುವಾ ನೆರವೇರಿಸಿದರು.ಖಾಝಿ ತ್ವಾಖಾ ಅಹ್ಮದ್ ಮುಸ್ಲಿಮಾರ್ ರವರ ಶುಭ ಸಂದೇಶವನ್ನು ಸುನ್ನೀಟುಡೇ ಇದರ ಸಂಪಾದಕ ಹನೀಫ್ ಪುತ್ತೂರು ಧ್ವನಿ ಬಿತ್ತರಿಸಿದರು. ಕಾರ್ಯಕ್ರಮಕ್ಕೆ ಅಶ್ರಫ್ ಕಲ್ಲೆಗ ವಂದನಾರ್ಪಣೆ ಗೈದರು.