ವೈದ್ಯಕೀಯ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ನಾಶಪಡಿಸುವ ನೀಟ್ ಪರೀಕ್ಷೆ ರದ್ದುಪಡಿಸಿ: ಎಸ್.ಡಿ.ಪಿ.ಐ*

ನವದೆಹಲಿ, ಸೆಪ್ಟೆಂಬರ್ 16, 2020: ನೀಟ್ ಪರೀಕ್ಷೆಯು, ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ಪಡೆಯುವ ಆಕಾಂಕ್ಷೆಗಳನ್ನು ನಾಶಪಡಿಸುವ ಒಂದು ಪ್ರತಿಗಾಮಿ ಹೆಜ್ಜೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ದೆಹ್ಲಾನ್ ಬಾಖವಿ ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣವನ್ನು ಪಡೆಯಲು ನೀಟ್ ಪರೀಕ್ಷೆಯನ್ನು ಪರಿಚಯಿಸಿದಾಗಿನಿಂದ, ವೈದ್ಯಕೀಯ ವೃತ್ತಿಪರರಾಗಬೇಕೆಂಬ ದೇಶದ ಹಳ್ಳಿಗಳ ಬಡ ಮತ್ತು ದೀನ ದಲಿತ ವಿದ್ಯಾರ್ಥಿಗಳ ಕನಸುಗಳು ನುಚ್ಚುನೂರಾಗಿವೆ, ಮಾತ್ರವಲ್ಲ, ಅವರಿಗೆ ತಲುಪಲಾಗದ ಗುರಿಯಂತಾಗಿದೆ. ಶ್ರೀಮಂತ ಆರ್ಥಿಕ ಹಿನ್ನೆಲೆಯುಳ್ಳ ಮೇಲ್ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ವೈದ್ಯಕೀಯ ಶಿಕ್ಷಣವನ್ನು ಒದಗಿಸಲು ಮತ್ತು ಅದನ್ನು ಸಾಂಸ್ಥೀಕರಣಗೊಳಿಸಲು ನೀಟ್ (ಎನ್ ಇಇಟಿ) ಒಂದು ತಂತ್ರವಾಗಿದೆ. ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಹೆಸರಿನಲ್ಲಿ ಸರ್ಕಾರ, ಬಡವರಿಗೆ ವೈದ್ಯಕೀಯ ಶಿಕ್ಷಣವನ್ನು ನಿರಾಕರಿಸುತ್ತಿದೆ. ಶ್ರೀಮಂತ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ನೀಟ್‌ಗಾಗಿ ದುಬಾರಿ ವೆಚ್ಚದ ತರಬೇತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆ ಕಾರ್ಪೊರೇಟ್‌ಗಳ ಪರವಾಗಿದೆ ಮತ್ತು ಬಡ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಯಾವುದೇ ಕಲ್ಯಾಣ ಕ್ರಮಗಳನ್ನು ಜಾರಿಗೊಳಿಸುತ್ತಿಲ್ಲ.
ಕೇಂದ್ರದ ಬಿಜೆಪಿ ಸರ್ಕಾರದ ನೀಟ್ ಮತ್ತು ಜೆಇಇ ಪ್ರವೇಶ ಪರೀಕ್ಷೆಗಳ ಹೊಸ ನಿಯಮಗಳು ಮತ್ತು ನಿಬಂಧನೆಗಳು ಹಳ್ಳಿಗಳು ಮತ್ತು ಬುಡಕಟ್ಟು ಪ್ರದೇಶಗಳ ಬಡ ಮತ್ತು ದೀನ ದಲಿತರನ್ನು ವೈದ್ಯಕೀಯ ಶಿಕ್ಷಣ ಪಡೆಯದಂತೆ ದೂರವಿಡವ ಉದ್ದೇಶ ಹೊಂದಿವೆ. ಶಿಕ್ಷಣದಲ್ಲಿ ಇಂತಹ ಹೊಸ ಕ್ರಮಗಳನ್ನು ಪರಿಚಯಿಸುವ ಮೂಲಕ, ಬಿಜೆಪಿ ಸರ್ಕಾರ ಶಿಕ್ಷಣ ಮತ್ತು ಮೀಸಲಾತಿಯಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ದೀನ ದಲಿತರ ಅವಕಾಶಗಳನ್ನು ಕಸಿದುಕೊಳ್ಳುತ್ತಿದೆ. ಪ್ರವೇಶ ಪರೀಕ್ಷೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಅವರನ್ನು ಮತ್ತೆ ಗುಲಾಮರನ್ನಾಗಿ ಮಾಡಲಾಗುತ್ತಿದೆ. ಕೇವಲ ಪ್ರವೇಶ ಪರೀಕ್ಷೆಗಳಿಂದ ಮಾತ್ರ ವಿದ್ಯಾರ್ಥಿಗಳ ಅರ್ಹತೆ ಮತ್ತು ದಕ್ಷತೆಯನ್ನು ಅಳೆಯಲು ಸಾಧ್ಯವಿಲ್ಲ. ಈ ವರ್ಷ, ಹಲವು ರಾಜ್ಯಗಳ ತೀವ್ರ ಪ್ರತಿರೋಧದ ನಡುವೆಯೂ ನೀಟ್ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ನೀಟ್ ಪರೀಕ್ಷೆ ಎದುರಿಸಬೇಕೆಂಬ ಭಯದಿಂದ ತಮಿಳುನಾಡಿನ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರು ಎಂಬುದು ಆಘಾತಕಾರಿ. ತಮಿಳುನಾಡು ಅತ್ಯುತ್ತಮ ಶೈಕ್ಷಣಿಕ ಮೂಲಸೌಕರ್ಯಗಳನ್ನು ಹೊಂದಿದ್ದರೂ ಮತ್ತು ಭಾರತದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದರೂ, ನೀಟ್ ಭಯದಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ನಿರಂತರವಾಗಿ ಸಾಕ್ಷಿಯಾಗುತ್ತಿದೆ ಎಂಬುದನ್ನು ಇಲ್ಲಿ ಗಂಭೀರವಾಗಿ ಗಮನಿಸಬೇಕಾಗಿದೆ. ಬಡತನ, ಮಾನಸಿಕ ಒತ್ತಡ, ಭಯ, ನೀಟ್‌ನ ವಿಭಿನ್ನ ಮಾದರಿಯ ಪರೀಕ್ಷೆಯನ್ನು ಎದುರಿಸುವಲ್ಲಿನ ತೊಂದರೆ, ಸಮಾನ ಕಲಿಕೆಯ ಅವಕಾಶದ ಕೊರತೆ ಮತ್ತು ಆರ್ಥಿಕ ಅವಕಾಶಗಳ ಕೊರತೆ  ಮುಂತಾದವು ತಮಿಳುನಾಡು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳಾಗಿವೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ತಮಿಳುನಾಡಿಗೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತಮಿಳುನಾಡಿನ ಮೇಲೆ ನೀಟ್ ಹೇರಲಾಯಿತು. ತಮಿಳುನಾಡಿನಲ್ಲಿ ನೀಟ್ ಜಾರಿಗೆ ಬಂದಾಗಿನಿಂದ ಈವರೆಗೆ 13 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೆಂದೂ ಕಂಡರಿಯದ  ಈ ಸಾವುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿ ಹೊರಬೇಕು. ತಮಿಳುನಾಡಿನಲ್ಲಿ, ನೀಟ್ ಪರಿಚಯಿಸುವ ಮೊದಲು, ವಿದ್ಯಾರ್ಥಿಗಳು ತಮ್ಮ ಶಾಲಾ ಅಂತಿಮ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣಕ್ಕೆ ಆಯ್ಕೆಯಾಗುತ್ತಿದ್ದರು, ಇದರಿಂದ ವೈದ್ಯಕೀಯ ವಿಜ್ಞಾನ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿತ್ತು. ಈ ವ್ಯವಸ್ಥೆಯಿಂದ, ಶ್ರೀಮಂತರು ಮತ್ತು ಬಡವರು ಎಂಬ ವ್ಯತ್ಯಾಸವಿಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶಗಳು ದೊರೆತವು ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ಸಾಧ್ಯವಾಗಿತ್ತು. ಈ ಕಾರಣದಿಂದಾಗಿ, ವೈದ್ಯಕೀಯ ವಿಜ್ಞಾನ ಸೇರಿದಂತೆ ಉನ್ನತ ಶಿಕ್ಷಣದ ವಿಷಯದಲ್ಲಿ ತಮಿಳುನಾಡು ಅತ್ಯುತ್ತಮ ರಾಜ್ಯವೆಂದು ಪರಿಗಣಿಸಲ್ಪಟ್ಟಿತ್ತು. ನೀಟ್ ಪರೀಕ್ಷೆಯನ್ನು ಪರಿಚಯಿಸಿದಾಗಿನಿಂದ, ಗ್ರಾಮೀಣ ಭಾಗದ ಶಾಲೆಗಳ ಬಡ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಪಡೆಯುವುದು ಬಹಳ ಕಷ್ಟಕರವಾಗಿದೆ. ರಾಜ್ಯ ಶಿಕ್ಷಣ ಮಂಡಳಿ ಶಾಲೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು, ಸಿಬಿಎಸ್‌ಇ ಪಠ್ಯಕ್ರಮದ ಆಧಾರದ ಮೇಲೆ ನಡೆಸಲಾಗುವ ನೀಟ್‌ಗೆ ಹಾಜರಾಗಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರು ಮಾನಸಿಕ ಸಂಕಟಕ್ಕೆ ಒಳಗಾಗುತ್ತಿದ್ದಾರೆ.

ಭಾರತದ ಪ್ರತಿಯೊಂದು ರಾಜ್ಯವು ವಿಭಿನ್ನ ಸಂಸ್ಕೃತಿ, ಭಾಷೆ, ಜೀವನಶೈಲಿ, ಪರಂಪರೆಯನ್ನು ಹೊಂದಿದೆ ಮತ್ತು ಪ್ರತಿ ರಾಜ್ಯದ ಕಲಿಕಾ ವಾತಾವರಣವು ಕೂಡ ಭಿನ್ನವಾಗಿವೆ. ರಾಜ್ಯಗಳ ಸಂದರ್ಭ ಮತ್ತು ವಾತಾವರಣಗಳಿಗೆ ಅನುಗುಣವಾಗಿ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಪ್ರತಿಯೊಂದು ರಾಜ್ಯವು ತಮ್ಮ ಸಾಂಸ್ಕೃತಿಕ ಮತ್ತು ಭಾಷಾ ಸ್ಥಾನಮಾನಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಮತ್ತು ಪಠ್ಯಕ್ರಮವನ್ನು ಸ್ಥಾಪಿಸಿದೆ ಮತ್ತು ವಿದ್ಯಾರ್ಥಿಗಳು ಇದಕ್ಕೆ ಒಗ್ಗಿಕೊಂಡಿರುತ್ತಾರೆ. ಭಾರತದಲ್ಲಿ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳು ತಮ್ಮ ಶೈಕ್ಷಣಿಕ ಮೂಲಸೌಕರ್ಯವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿವೆ. ಅದೇ ಸಮಯದಲ್ಲಿ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳು ಶೈಕ್ಷಣಿಕ ಮೂಲಸೌಕರ್ಯದಲ್ಲಿ ಇನ್ನೂ ಹಿಂದುಳಿದಿವೆ. ಅಂತಹ ಶೈಕ್ಷಣಿಕವಾಗಿ ಹಿಂದುಳಿದ ರಾಜ್ಯಗಳನ್ನು ಅಭಿವೃದ್ಧಿಪಡಿಸುವ ಬದಲು, ಕೇಂದ್ರ ಸರ್ಕಾರ, ದಕ್ಷಿಣ ರಾಜ್ಯಗಳ ಶೈಕ್ಷಣಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ಅಂತಹ ಕಠಿಣ ಪ್ರವೇಶ ಪರೀಕ್ಷೆಗಳನ್ನು ಹೇರುವ ಮೂಲಕ ಅವರ ಶೈಕ್ಷಣಿಕ ಹಕ್ಕುಗಳನ್ನು ಪಡೆದುಕೊಳ್ಳುವುದು ನ್ಯಾಯಯುತ ಮತ್ತು ಸ್ವೀಕಾರಾರ್ಹ ಕ್ರಮವಲ್ಲ. ಕೇಂದ್ರ ಸರ್ಕಾರದ “ಒಂದು ರಾಷ್ಟ್ರ, ಒಂದು ಶಿಕ್ಷಣ ವ್ಯವಸ್ಥೆ, ಒಂದು ಪ್ರವೇಶ ಪರೀಕ್ಷೆ” ಎಂಬ ಧ್ಯೇಯ, ಭಾರತೀಯ ಒಕ್ಕೂಟ ವ್ಯವಸ್ಥೆಗೆ ಹಾನಿಕಾರಕವಾಗಿದೆ, ಏಕೆಂದರೆ ಅಂತಹ ವಿಷಯವು ರಾಜ್ಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆ.
ಶಿಕ್ಷಣದ ಅಭಿವೃದ್ಧಿ ಶೈಕ್ಷಣಿಕ ಮೂಲಸೌಕರ್ಯಗಳನ್ನು ನಿರ್ಮಿಸುವುದರಿಂದ ಮಾತ್ರ ಸಾಧ್ಯವೇ ಹೊರತು ಪ್ರವೇಶ ಪರೀಕ್ಷೆಗಳನ್ನು ಹೇರುವ ಮೂಲಕ ಅಲ್ಲ. ಕೇಂದ್ರ ಸರ್ಕಾರವು ತರಾತುರಿಯಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿಲ್ಲ. ಆದ್ದರಿಂದ, ವೈದ್ಯಕೀಯ ಶಿಕ್ಷಣದ ನೀಟ್ ಸೇರಿದಂತೆ ಉನ್ನತ ಶಿಕ್ಷಣದ ಎಲ್ಲಾ ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸಬೇಕು. ಮಾತ್ರವಲ್ಲ, ಕೇಂದ್ರ ಸರ್ಕಾರ ರಾಜ್ಯಗಳ ಶೈಕ್ಷಣಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ, ದೇಶದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಅಭಿವೃದ್ಧಿಯಾಗದ ರಾಜ್ಯಗಳಿಗೆ ಅವರ ಶೈಕ್ಷಣಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾಮುಖ್ಯತೆ ನೀಡಬೇಕು. ಕೇಂದ್ರ ಸರ್ಕಾರ, ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಸಂಖ್ಯೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸಲು ಮುಂದೆ ಬರಬೇಕು, ಇದರಿಂದಾಗಿ ಅರ್ಹ ಪ್ರತಿಯೊಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ರಾಜ್ಯಗಳು ಎಂಬ ಭೇದವಿಲ್ಲದೆ ಎಲ್ಲಾ ಭಾರತೀಯರು ಶಿಕ್ಷಣದ ಕಾರ್ಪೊರೇಟರೀಕರಣ ಅಥವಾ ಸಾಂಸ್ಥೀಕರಣದ ವಿರುದ್ಧ ಧ್ವನಿ ಎತ್ತಬೇಕು ಎಂದು ದಹ್ಲಾನ್ ಬಾಖವಿ ಒತ್ತಾಯಿಸಿದ್ದಾರೆ.