ರಾಜ್ಯದ ನ್ಯಾಯಾಲಯಗಳಲ್ಲಿ ಇನ್ನೊಂದು ವಾರದಲ್ಲಿ ಭೌತಿಕ ಕಲಾಪಕ್ಕೆ ಅವಕಾಶ ಮಾಡಿಕೊಡಿ: ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ.ಅನಿಲ್ ಕುಮಾರ್
ಬೆಂಗಳೂರು, ಸೆ 7; ಲಾಕ್ ಡೌನ್ ಹಿನ್ನೆಯಲ್ಲಿ ಸ್ಥಗಿತಗೊಂಡಿದ್ದ ರಾಜ್ಯದ ಎಲ್ಲಾ ನ್ಯಾಯಾಲಯಗಳ ಭೌತಿಕ ಕಾರ್ಯಕಲಾಪಗಳನ್ನು ಇನ್ನೊಂದು ವಾರದೊಳಗಾಗಿ ಆರಂಭಿಸುವಂತೆ ರಾಜ್ಯದ ವಕೀಲರ ಪರಿಷತ್ತು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರಿದೆ.
ಈ ಸಂಬಂಧ ¨sÁ£ÀĪÁgÀ ವಕೀಲರ ಪರಿಷತ್ತು ಸಭೆ ಸೇರಿ ನಿರ್ಣಯ ಅಂಗೀಕರಿಸಿದ್ದು, ಇನ್ನೊಂದು ವಾರದಲ್ಲಿ ನ್ಯಾಯಾಲಯಗಳ ಭೌತಿಕ ಕಾರ್ಯಕಲಾಪಗಳನ್ನು ನಡೆಸುವಂತೆ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರು ಜೆ.ಎಂ.ಅನಿಲ್ ಕುಮಾರ್, ದೇಶಾದ್ಯಂತ ಅನ್ ಲಾಕ್ 4 ಜಾರಿಗೆ ತಂದಿದ್ದು, ಬಹುತೇಕ ಎಲ್ಲಾ ಚಟುವಟಿಕೆಗಳು ಆರಂಭವಾಗಿವೆ. ಸರ್ಕಾರಿ ಕಚೇರಿಗಳು ಸಹ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ನ್ಯಾಯಾಲಯ ಕಲಾಪ ಇನ್ನೂ ಆರಂಭವಾಗಿಲ್ಲ. ಹೀಗಾಗಿ ವಕೀಲರ ಪರಿಷತ್ತು ಇನ್ನೊಂದು ವಾರದಲ್ಲಿ ಭೌತಿಕ ಕಾರ್ಯಕಲಾಪಕ್ಕೆ ಅವಕಾಶ ನೀಡಬೇಕೆಂದು ನಿರ್ಣಯ ಅಂಗೀಕರಿಸಿದ್ದು, ಇದನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಲಾಗುವುದು ಎಂದರು.
ಯಾವುದೇ ಕಾರಣಕ್ಕೂ ನ್ಯಾಯದಾನ ವಿಳಂಬವಾಗಬಾರದು ಎಂಬುದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೂಲ ಆಶಯವಾಗಿದೆ. ಆದರೆ ಲಾಕ್ ಡೌನ್ ನಿಂದ ನ್ಯಾಯಾಂಗ ವಲಯದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಪ್ರಕರಣಗಳ ಹಿಂಬಾಕಿ ಹೆಚ್ಚಾಗುತ್ತದೆ. ವಿಚಾರಣಾ ಹಂತದಲ್ಲಿರುವ ಪ್ರಕರಣಗಳು ಬಹುತೇಕ ಸ್ಥಬ್ಧವಾಗಿದೆ. ತಕ್ಷಣವೇ ಭೌತಿಕ ವಿಚಾರಣೆಗೆ ಅವಕಾಶ ನೀಡಿದರೆ ನ್ಯಾಯಾಂಗದ ಮೇಲಿರುವ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
ಕೊರೋನಾ ಸೋಂಕಿನ ಸಂದರ್ಭದಲ್ಲಿ ನ್ಯಾಯಾಂಗ ಸಿಬ್ಬಂದಿ, ವಕೀಲ ಸಮೂಹದ ಜೀವ ರಕ್ಷಣೆ ಉದ್ದೇಶದಿಂದ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಲಯದ ಕಲಾಪಗಳನ್ನು ನಡೆಸುವಲ್ಲಿ ತೆಗೆದುಕೊಂಡ ಕ್ರಮಗಳನ್ನು ವಕೀಲರ ಪರಿಷತ್ತು ಶ್ಲಾಘಿಸುತ್ತದೆ. ಕೋರ್ಟ್ ಕಲಾಪಗಳನ್ನು ವರ್ಚುಯಲ್ ಮೂಲಕ ನಡೆಸುತ್ತಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಸಹ ಒಂದಾಗಿದೆ. ಆದರೆ ಇದೀಗ ಲಾಕ್ಡೌನ್ ಪೂರ್ವದಲ್ಲಿ ಇರುವಂತೆ ಕೋರ್ಟ್ ಕಲಾಪಗಳನ್ನು ನಡೆಸುವಂತೆ ವಕೀಲ ಸಮೂಹ ಕೋರಿದ್ದು, ನಮ್ಮ ಮನವಿಯನ್ನು ಮುಖ್ಯ ನ್ಯಾಯಮೂರ್ತಿಯವರು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ವಕೀಲರು ಫೈಲಿಂಗ್ ಮಾಡಲು, ಭೌತಿಕವಾಗಿ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸಲು ಅನುಮತಿ ನೀಡಬೇಕು. ನ್ಯಾಯಾಲಯಗಳ ಆವರಣಗಳಲ್ಲಿ ಪಾರ್ಕಿಂಗ್ ಮಾಡಲು, ಝರಾಕ್ಸ್ ಅಂಗಡಿಗಳನ್ನು ತೆರೆಯಲು, ಟೈಪಿಸ್ಟ್ ಗಳಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ವಕೀಲರಿಗೆ ನ್ಯಾಯಾಲಯದ ಆವರಣಕ್ಕೆ ಅವಕಾಶ ನೀಡುವುದಲ್ಲದೇ ಕ್ಯಾಂಟಿನ್ ವ್ಯವಸ್ಥೆ ಕಲ್ಪಿಸಬೇಕು. ವಕೀಲರ ಸಂಘಗಳ ಕಚೇರಿಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಜೆ.ಎಂ.ಅನಿಲ್ ಕುಮಾರ್ ಹೇಳಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕ್ಷ್ಯ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ನ್ಯಾಯಾಲಯಗಳಲ್ಲಿ ಸಾಕ್ಷ್ಯ ನುಡಿಯಲು ಅನುಮತಿ ಕಲ್ಪಿಸಬೇಕು. ಸಾಕ್ಷಿದಾರರಿಗೆ ತಮ್ಮ ದಾವೆಯಲಿ ಸಾಕ್ಷಿಯನ್ನು ನೀಡಲು ಅನುವು ಮಾಡಿಕೊಟ್ಟರೆ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.