ಕಾಡುಗೊಂಡನಹಳ್ಳಿ ಮುಸ್ಲಿಂ ದುರಂತ
————————
ಫಾತಿಮಾ
ಎಂಟು ವರ್ಷ
ತಂದೆಗೆ ಮಾಂಸ ಕಡಿಯುವ ಕೆಲಸ

ಸುಫಿಯಾ
ಏಳು ವರ್ಷ

ಈಕೆಗೆ ಏಳು ಸಹೋದರಿಯರು, ಇಬ್ಬರು ಸಹೋದರರು. ಈ ಮನೆಯಲ್ಲಿ ಇಬ್ಬರು ಮಾತ್ರ ಶಾಲೆಗೆ ಹೋಗುತ್ತಿದ್ದಾರೆ. ತಂದೆಗೆ ಮಾಂಸ ಕಡಿಯುವ ಕೆಲಸ.

ಅಮ್ರಿನ್‌ ತಾಜ್‌
ಆರು ವರ್ಷ

ನಾಲ್ವರು ಸಹೋದರಿಯರಿದ್ದಾರೆ. ಈಕೆ ಬಿಟ್ಟರೆ ಉಳಿದವರ್ಯಾರೂ ಓದುತ್ತಿಲ್ಲ. ತಂದೆಗೆ ಕೆಲಸ ಇಲ್ಲ. ಸಹೋದರಿಯರು 10ರಿಂದ 12 ವರ್ಷದವರು. ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆರಿಫ್‌
ಒಂಬತ್ತು ವರ್ಷ

ತಂದೆ ತರಕಾರಿ ವ್ಯಾಪಾರಿ

ತೌಸೀಫ್‌
ಐದು ವರ್ಷ

ತಾಯಿ ಗಾಡಿಯಲ್ಲಿ ಹಣ್ಣು ಮಾರುತ್ತಾರೆ. ತಂದೆ ಮನೆಗೆ ಬರುವುದಿಲ್ಲ.

ಅಮ್ಜದ್‌
ಎಂಟು ವರ್ಷ

ಐವರು ಸಹೋದರರು, ಇಬ್ಬರು ಸಹೋದರಿಯರು. ಅಮ್ಜದ್‌ ಬಿಟ್ಟು ಬೇರೆ ಯಾರೂ ಶಾಲೆ ಮೆಟ್ಟಿಲು ಹತ್ತಿಲ್ಲ. ತಂದೆ ಆಟೋ ಚಾಲಕ.

ಸಯ್ಯದ್‌ ಖ್ವಾಜಾ
ಒಂಬತ್ತು ವರ್ಷ
ತಂದೆಗೆ ಬೇಕರಿಯಲ್ಲಿ ಕೆಲಸ

ಮುನ್ನಾ
ಎಂಟು ವರ್ಷ
ಸೈಕಲ್‌ ಷಾಪ್‌ನಲ್ಲಿ ಕೆಲಸ. ಈತನೇ ಮನೆ ಯಜಮಾನ. ತಾಯಿ, ತಂಗಿ ಪೋಷಣೆ ಈತನ ಜವಾಬ್ದಾರಿ

ಜಾವೇದ್‌
ಹನ್ನೊಂದು ವರ್ಷ
ವರ್ಕ್‌ಶಾಪ್‌ನಲ್ಲಿ ಸಹಾಯಕ. ಕ್ಷಯ ರೋಗಿ ತಾಯಿ ಈತನ ಏಕ ಮಾತ್ರ ಆಸ್ತಿ.

ಆಸೀಫ್‌ ಬೇಗಂ
ಹತ್ತು ವರ್ಷ
ಕಿಡ್ನಿ ಪೇಷಂಟ್‌, ತಂದೆ ಕುಡುಕ, ತಾಯಿ ಪರಾರಿ. ರಸ್ತೆ ಬದಿಯೇ ಈಕೆಯ ವಾಸಸ್ಥಾನ. ಅಕ್ಕಪಕ್ಕದವರೇ ಪೋಷಕರು

ಅನ್ವರ್‌ ಪಾಷಾ
ಐವತ್ತೈದು ವರ್ಷ
ಟೈಲರ್‌
ಹತ್ತು ಮಕ್ಕಳು
ಮಕ್ಕಳಿಗೆ ಬಟ್ಟೆ ಇಲ್ಲ, ಊಟ ಇಲ್ಲ, ಶಾಲೆ ಇಲ್ಲ.

ಬೆಂಗಳೂರಿನ ಟ್ಯಾನರಿ ರಸ್ತೆ(ಚರ್ಮ ಹದ ಮಾಡುವ ಕಾರ್ಖಾನೆಗಳಿರುವುದರಿಂದ ಈ ಹೆಸರು ಬಂದಿದೆ)ಯ ಪ್ರವೇಶದಲ್ಲೇ ಸಿಗುವ ಸೇತುವೆಯಿಂದ ನೀವು ನಡೆಯುತ್ತಾ ಹೋದರೆ ಸಾಕು. ಈ ಮುದ್ದು ಮಕ್ಕಳು ಸಿಕ್ಕುತ್ತಾರೆ. ಇಂಥ ಮಕ್ಕಳಲ್ಲಿ ಆಯ್ದವರನ್ನು ಮಾತ್ರ ಕೇಳಬೇಕೆಂದೇನಿಲ್ಲ. ಎಲ್ಲರದೂ ಒಂದೇ ಕತೆ. ಅದರ ಹೆಸರು ದಾರಿದ್ರ್ಯ!

ಇಲ್ಲಿಂದ ನಾಗವಾರದವರೆಗೆ ಸುಮಾರು ಮೂರು ಲಕ್ಷ ಜನಸಂಖ್ಯೆ ಇದೆ. ಇವರಲ್ಲಿ ಬಹುತೇಕ ಮುಸ್ಲಿಮರೇ ಇದ್ದಾರೆ. ಟ್ಯಾನರಿ ರಸ್ತೆಯಿಂದ ನಾಗರವಾರದವರೆಗೆ ಸಿಗುವ ಸ್ಥಳಗಳೆಂದರೆ ಕಾಡುಗೊಂಡನಹಳ್ಳಿ, ದೇವರ ಜೀವನಹಳ್ಳಿ, ಪೆರಿಯಾರ್‌ ನಗರ, ಹೆಗಡೆ ನಗರ, ರಾಜೀವ್‌ ಕಾಲನಿ, ಮುಸ್ಲಿಂ ಕಾಲನಿ, ಪಿಲಣ್ಣ ಗಾರ್ಡನ್‌, ರಶಾದ್‌ ನಗರ, ಅಶೋಕ ನಗರ, ಕುಶಾಲ ನಗರ, ಹಿದಾಯತ್‌ ನಗರ, ಗಾಂಧಿನಗರ, ಭಾರತ್‌ ಮಾತಾ ಲೇಔಟ್‌, ವಿನೋಬಾನಗರ, ವೆಂಕಟೇಶಪುರಂ…..

ಇಲ್ಲೆಲ್ಲ ಮುಸ್ಲಿಮರು ಬಿಟ್ಟರೆ ತಮಿಳು ದಲಿತರು ಹೆಚ್ಚಾಗಿ ಕಾಣಸಿಗುತ್ತಾರೆ. ಮೂರನೇ ಸ್ಥಾನ ಕನ್ನಡದ ದಲಿತರದು. ಭಾರತದ ಮುಸ್ಲಿಮರ ಅನಕ್ಷರತೆ, ಅನಾರೋಗ್ಯ, ಆರ್ಥಿಕ ದುಸ್ಥಿತಿಯನ್ನು ಕಂಡುಕೊಳ್ಳಬೇಕೆಂದರೆ ಈ ಏರಿಯಾವನ್ನು ಮಾದರಿಯಾಗಿ ಇಟ್ಟುಕೊಳ್ಳಬಹುದು. ಈವರೆಗೆ ಇಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯದ ನಡುವೆ ಘರ್ಷಣೆ ನಡೆದೇ ಇಲ್ಲ. ಇಲ್ಲಿನ ಎಲ್ಲ ರೋಗಗ್ರಸ್ತ ಚಟುವಟಿಕೆಗಳಿಗೆ ಪೊಲೀಸರೇ ಆಶ್ರಯದಾತರಾಗಿದ್ದರೂ ಮುಸ್ಲಿಮರು ಮತ್ತು ಪೊಲೀಸರ ನಡುವೆಯೂ ಸಂಘರ್ಷ ಆಗಲಿಲ್ಲ.

ಇಂಥ ಜಾಗದಲ್ಲಿ ಅದ್ಯಾರೋ ಹುಂಬ ಮುಸ್ಲಿಮನೊಬ್ಬ ಹಸಿರು ಧ್ವಜ ಹಾರಿಸಿ ಗಲಾಟೆಗೆ ಕಾರಣನಾದ. ಈ ಪ್ರಕರಣವನ್ನು ತಣ್ಣಗಾಗಿಸುವ ಸಾಮರ್ಥ್ಯ ಇದ್ದ ಪೊಲೀಸರು ನಿರ್ಲಕ್ಷ್ಯ, ಬೇಜವಾಬ್ದಾರಿತನ ಮೆರೆದು ಕೋಮುದ್ವೇಷದ ಕಿಡಿ ಜ್ವಾಲೆಯಾಗುವುದಕ್ಕೆ ಕಾರಣರಾದರು. ಕೊನೆಗೂ ಮುಸ್ಲಿಮರೆಲ್ಲ ಸೇರಿ ಧ್ವಜ ಇಳಿಸಲು ನಿರ್ಧರಿಸಿ ಆ ಕೆಲಸದಲ್ಲಿ ನಿರತರಾದಾಗ ಕೆಲವು ಚೆಡ್ಡಿಗಳು, Shame, Shame ದೇಶ ಬಿಟ್ಟು ಹೊರಡಿ ಎಂದು ಅರಚ ತೊಡಗಿದರು. ಮತ್ತೆ ಗಲಭೆ, ಗದ್ದಲ, ಸೆಕ್ಷನ್‌ 144 ಜಾರಿಯಲ್ಲಿದ್ದರೂ ಕರ್ಫ್ಯೂ ವಾತಾವರಣ.

ಧ್ವಜ ಏನಾಯಿತು ಎಂಬ ಪ್ರಶ್ನೆಗೆ ವದಂತಿಗಳೇ ಉತ್ತರವಾಗತೊಡಗಿದವು. ಧ್ವಜಕ್ಕೆ ಬೆಂಕಿ ಹಾಕಿದರು, ಚೂರು ಚೂರು ಮಾಡಿದರು ಇಂಥದ್ದೇ. ಮತ್ತೆ ಬೆಂಕಿ, ಆಕ್ರೋಶ, ದಾಳಿ, ಹಾನಿ, ಪೊಲೀಸ್‌ ಮೆರವಣಿಗೆ.

ಈ ಒಂದು ಪ್ರಕರಣ ಬಿಟ್ಟರೆ ಇಲ್ಲಿ ಕೋಮು, ಜಾತಿ, ಭಾಷಾ ಸಮಸ್ಯೆಗಳು ಯಾವತ್ತೂ ಕಾಡಿಲ್ಲ.

ಇದೇ ಟ್ಯಾನರಿ ರಸ್ತೆಯಲ್ಲಿ ‘ತಂಜೀಮುಲ್‌ ಮೊಹ್ಸಿನಾಥ್‌’ ಸಂಸ್ಥೆಯ ‘ಅಲ್‌ಕುದ್ಸ್‌’ ಎಂಬ ಶಾಲೆ ಇದೆ. ಇಲ್ಲಿಗೆ ನಾನು ಹೋದಾಗ ಕಂಡು ಬಂದ ಚಿತ್ರಗಳು, ಕೇಳಿದ ಕಥಾನಕಗಳು ಕಂಬನಿ ಮಿಡಿಯುವಂತಿದ್ದವು.

ತಂದೆ, ತಾಯಿ ಜಗಳದಲ್ಲಿ ಬೀದಿ ಪಾಲಾದವರು, ಎರಡನೇ ಮದುವೆಯಾಗಿ ಮೊದಲ ಹೆಂಡತಿಯನ್ನು ಬಿಟ್ಟವರ ಮಕ್ಕಳು, ಕುಡಿಯುವುದನ್ನೇ ವೃತ್ತಿಯಾಗಿಸಿಕೊಂಡವರ ಮಕ್ಕಳು…ಒಬ್ಬೊಬ್ಬರನ್ನೇ ಮಾತನಾಡಿಸುತ್ತಿದ್ದಾಗ ಅಲ್ಲೇ ಕಸ ಗುಡಿಸುತ್ತಿದ್ದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು ಓಡಿ ಬಂದು ‘ಮೇರಾ ನಾಂಭೀ ಲಿಖೋ’ ಎಂದು ಅಂಗಲಾಚಿದಳು. ಯಾರ ಆಶ್ರಯವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಈ ಮಹಿಳೆ ನನ್ನನ್ನು ಕೇಂದ್ರ ಸರ್ಕಾರದ ಅಧಿಕಾರಿಯೆಂದು ಭಾವಿಸಿದ್ದಾಳೆಂದು ಅಲ್ಲಿದ್ದವರು ತಿಳಿಸಿದರು.

ಅಚ್ಚರಿಯ ಸಂಗತಿ ಏನು ಗೊತ್ತೇ? ಇಲ್ಲಿರುವ ಯಾವುದೇ ಪುಟಾಣಿಗೂ ಕನ್ನಡ ಬರುವುದಿಲ್ಲ. ಐವರು ಮುಸ್ಲಿಂ ವ್ಯಾಪಾರಿಗಳು ತಮ್ಮ ಲಾಭದ ಶೇ.25ರಷ್ಟು ಹಣವನ್ನು ಈ ಸಂಸ್ಥೆಗೆ ವಿನಿಯೋಗಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಜಾಪುರದಿಂದ ಬಂದಿರುವ ಮುಖ್ಯೋಪಾಧ್ಯಾಯ ಸಯ್ಯದ್‌ ಅಹ್ಮದ್‌ ಭಾ‍ಷಾ ಕನ್ನಡ ಕಲಿಸುವ ಉತ್ಸಾಹದಲ್ಲಿದ್ದಾರೆ.
ಈ ಟ್ರಸ್ಟ್‌ನ ಅಧ್ಯಕ್ಷೆ ಜರೀನಾ ಬೇಗಂ ಹೇಳುವಂತೆ ‘ಚಿಕ್ಕ ವಯಸ್ಸಿನ ಮಕ್ಕಳಿಗೆ ಮನೆ ಸ್ಥಿತಿ ಗೊತ್ತಾಗುವುದಿಲ್ಲ. ಅವರಿಗೂ ಹದಿನಾಲ್ಕು, ಹದಿನೈದು ವರ್ಷವಾಗುತ್ತಿದ್ದಂತೆ ತಂದೆ ಕುಡುಕನಾಗಿರುವುದು, ಇನ್ನೊಬ್ಬಳನ್ನು ಕಟ್ಟಿಕೊಂಡಿರುವುದು, ಮೊದಲ ಹೆಂಡತಿ ಜತೆ ಜಗಳವಾಡುವುದು ಗೊತ್ತಾಗುತ್ತಿದ್ದಂತೆ ಶಾಲೆಗೆ ಕೊನೇ ನಮಸ್ಕಾರ ಹಾಕಿ ಬಿಡುತ್ತಾರೆ. ತಂದೆ, ತಾಯಿಯ ಆಶ್ರಯ ಇಲ್ಲದೆ ಅಂಗಡಿ, ಬೇಕರಿ, ಸೈಕಲ್‌ ಷಾಪ್‌, ವರ್ಕ್‌ ಶಾಪ್‌ಗಳಿಗೆ ಸೇರಿಕೊಂಡು ತಮ್ಮ ಕಾಲ ಮೇಲೆ ನಿಲ್ಲುವ ಪ್ರಯತ್ನ ಮಾಡುತ್ತಾರೆ,’

ಈ ಎಳೆಯರಿಗೆ ಶಿಕ್ಷಣ ಮುಂದುವರಿಸುವಂತೆ ಹೇಳುವ ಹಿತೈಷಿಗಳೂ ಇರುವುದಿಲ್ಲ. ಸ್ವಂತ ಸಂಪಾದನೆ ಶುರುವಾಗುತ್ತಿದ್ದಂತೆ ಬೀಡಿ, ಕಳ್ಳ ಬಟ್ಟಿ ದಾಸರಾಗುತ್ತಾರೆ. ಮೊದಲಿನ ಕೆಲಸ ಬೇಸರವಾಗಿ ಸುಲಭವಾಗಿ ಹಣ ಪಡೆಯುವ ಯೋಚನೆ ಮಾಡುತ್ತಾರೆ,’

ಇವರೆಲ್ಲ ಮೊದಲು ಆಟೋ ಚಾಲಕರಾಗುತ್ತಾರೆ. ಆ ಹೊತ್ತಿಗೆ ‘ಬೂಜೀ ಕಾ ಅಡ್ಡಾ’ ಇವರನ್ನು ಕೈ ಬೀಸಿ ಕರೆಯುತ್ತದೆ. ಬೂವಾ (ಅಕ್ಕ) ಜೀ (ಗೌರವ ಸೂಚಕ) ಅಡ್ಡಾ (ಅಂಗಡಿ) ಎಂಬುದು ಬಳಕೆಯಲ್ಲಿ ಬೂಜಿಕಾ ಅಡ್ಡಾ ಆಗಿದೆ. ಇಲ್ಲಿ ಕೂಡ ಚರ್ಮದ ವ್ಯಾಪಾರ ಅರ್ಥಾತ್‌ ಹೆಣ್ಣುಗಳ ವ್ಯಾಪಾರ ನಡೆಯುತ್ತದೆ.

ಅಂದ ಹಾಗೆ ಬೂಜಿಯ ಸಾಮ್ರಾಜ್ಯ ಪ್ರವೇಶಿಸುವ ಈ ಹುಡುಗರು ಅಫೀಮು, ಗಾಂಜಾ, ಬ್ರೌನ್‌ ಶುಗರ್‌ ಸರಬರಾಜನ್ನೂ ಮಾಡುತ್ತಾರೆ. ಅಂಗಳದಲ್ಲಿ ಆಟ ಆಡಿಕೊಂಡಿರಬಹುದಾದ ಪುಟಾಣಿಗಳು ಕೂಡಾ ಈ ‘ದಾದಾ’ಗಳಿಗೆ ಹೆದರಿಕೊಂಡು ಮಾದಕ ವಸ್ತುಗಳ ಮಾರಾಟದಲ್ಲಿ ಅವರಿಗೇ ಗೊತ್ತಿಲ್ಲದಂತೆ ಪಾಲುದಾರರಾಗಿ ಬಿಡುತ್ತಾರೆ.

ಇಂಥ ಇಲ್ಲಿ ‘ಮೈ’ದಾನ ಮಾಡುವ ವ್ಯವಹಾರ ಇದೆಯೇ ಹೊರತು ಮಕ್ಕಳಿಗೆ ಆಟದ ಮೈದಾನವಿಲ್ಲ. ಕೆ.ಜಿ.ಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀವು ಎಲ್ಲೇ ಹೋಗಿ ನೋಡಿ. ಒಂದೇ ಒಂದು ಮೈದಾನವೂ ಕಾಣಸಿಗುವುದಿಲ್ಲ. ಆಟ ಆಡುವ ಮಕ್ಕಳು ಸಿಕ್ಕುವುದಿಲ್ಲ. ಈ ಏರಿಯಾದಲ್ಲಿ ಬಿಡಿಎ ಅದೆಷ್ಟೋ ಜಾಗವನ್ನು
ಸ್ವಾಧೀನಪಡಿಸಿಕೊಂಡಿದ್ದರೂ ಮೈದಾನಕ್ಕಾಗಿ ಒಂದಿಷ್ಟೂ ಜಾಗವನ್ನೂ ನೀಡಿಲ್ಲ. ಯಾಕೆ ಗೊತ್ತೇ?

ಇಲ್ಲಿನ ಅಂಬೆಕಾಲಿಕ್ಕುತ್ತಿದ್ದ ಪುಟಾಣಿಗಳು ಎದ್ದು ನಿಂತು ಓಡಾಡತೊಡಗಿದಂತೆ ಸೈಕಲ್‌ ಷಾಪ್‌ಗೆ ಕೆಲಸಕ್ಕೆ ಸೇರುತ್ತವೆ. ಇಲ್ಲವೇ ದರ್ಜಿ ಅಂಗಡಿಯಲ್ಲಿ ಕಾಜಾ ಹೊಲಿಯಲು ಸೇರಿಕೊಳ್ಳುತ್ತಾರೆ.
ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಸತತವಾಗಿ ದುಡಿಯುವ ಪುಟಾಣಿಗಳಿಗೆ ಆಟವಾಡುವ ಪುರುಸೊತ್ತಾದರೂ ಎಲ್ಲಿ ? ದುಡಿದು ದಣಿವಾಗಿ ಮನೆಗೆ ಬಂದು ಅಪ್ಪ, ಅಮ್ಮನಿಗೆ ನೆರವಾಗುವ ಈ ಪುಟಾಣಿಗಳ ಆಟಿಕೆಗಳು ಯಾವುವು ಗೊತ್ತೇ? ಅವರ ಕೈಯಲ್ಲಿ ಸೈಕಲ್‌ ಪಂಪ್‌, ಸ್ಪಾನರ್‌, ಬಿಂದಿಗೆ….

ಹೀಗೆ ಬೆಳೆದು ದೊಡ್ಡ ಹುಡುಗರಾದ ನಂತರ ಅವರ ಹಾದಿ ತಪ್ಪುವುದಕ್ಕೆ ಇನ್ನಷ್ಟು ಅನುಕೂಲಕರ ವಾತಾವರಣವೇ ಇಲ್ಲಿದೆ. ಈ ಏರಿಯಾಕ್ಕೆ ತಕ್ಕ ಹಾಗೆ ನಿರಕ್ಷರ ಕುಕ್ಷಿಗಳೇ ಇಲ್ಲಿಂದ ಮಹಾನಗರಪಾಲಿಕೆಗೆ ಆಯ್ಕೆಯಾಗುತ್ತಾರೆ. ಈ ಹುಡುಗರಲ್ಲಿ ಕೆಲವರು ಗೆದ್ದವರ ಪರ ಇದ್ದರೆ, ಕೆಲವರು ಸೋತವರ ಪರ ನಿಲ್ಲುತ್ತಾರೆ. ಈ ಕಾರ್ಪೋರೇಟರ್‌ಗಳ ಚೇಲಾಗಳಲ್ಲಿ ಕೆಲವರು ಶಾಂತಿ ಸಮಿತಿ ಸದಸ್ಯರಾಗಿ ನೇಮಕಗೊಳ್ಳುತ್ತಾರೆ. ಶಾಂತಿ ಸಮಿತಿ ಸದಸ್ಯರೆಂದರೆ ಈ ಅನಕ್ಷರಸ್ಥರ ಬೀಡಿನಲ್ಲಿ ರಾಜ್ಯಸಭಾ ಸದಸ್ಯನಿಗೆ ಸಿಗುವಷ್ಟೇ ಗೌರವ ಸಿಗುತ್ತದೆ. ಇಲ್ಲಿನ ಯಾವುದೇ ಕಾರ್ಯಕ್ರಮವಿರಲಿ, ಶಾಂತಿ ಸಮಿತಿ ಸದಸ್ಯ ವೇದಿಕೆಯಲ್ಲಿ ರಾರಾಜಿಸುತ್ತಾನೆ.

ಕಾರ್ಪೋರೇಟರ್‌ಗಳು ಈ ನಿರುದ್ಯೋಗಿ ಹುಂಬ ಯುವಕರನ್ನು ಎಲ್ಲ ದಾದಾಗಿರಿ ಚಟುವಟಿಕೆಗಳಿಗೂ ಬಳಸಿಕೊಳ್ಳುತ್ತಾರೆ. ಮಹಾನಗರ ಪಾಲಿಕೆಯಲ್ಲಿರುವ ನೌಕರರ ನೆರವನ್ನೂ ಪಡೆದು ಈ ಏರಿಯಾದಲ್ಲಿರುವ ರೆವಿನ್ಯೂ ಜಾಗವನ್ನು ಕಬಳಿಸಲು ಕಾರ್ಪೋರೇಟರ್‌ಗಳು ಇದೇ ಯುವಕರ ನೆರವನ್ನೂ ಪಡೆಯುತ್ತಾರೆ. ಇಂಥ ನಿರಕ್ಷಕರಕುಕ್ಷಿ ಕಾರ್ಪೋರೇಟರ್‌ಗಳ ಫೋಟೋಗಳನ್ನು ಪತ್ರಿಕೆಗಳಲ್ಲಿ ಮುದ್ರಿಸಿ ದುಡ್ಡು ಕೀಳುವ ಕೆಲವು ಉರ್ದು ಪತ್ರಕರ್ತರು ಕಾರ್ಪೋರೇಟರ್‌ಗಳಿಗೆ ಪಾಠ ಹೇಳುವ ಕೆಲಸದಲ್ಲಿ ಮಾತ್ರ ಹಿಂದೆ ಬಿದ್ದಿದ್ದಾರೆ.

ಮುಸ್ಲಿಮರ ಬಡತನ, ಅನಕ್ಷರತೆ ಮತ್ತು ಕೆಲವು ಉರ್ದು ಪತ್ರಕರ್ತರ ಬುದ್ದಿವಂತಿಕೆಯನ್ನು ಕೆಲವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರಿದ ಮುಸ್ಲಿಮರು ದುರ್ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥವರ ವೈರತ್ವ, ಪೈಪೋಟಿ ಇಲ್ಲಿನ ಕೊಲೆ, ಗಲಭೆ, ಸುಲಿಗೆ ಗದ್ದಲಗಳಿಗೆ ಕಾರಣವಾಗಿದೆ. ಈ ಪ್ರಕರಣಗಳಿಂದಾಗಿ ಇಡೀ ಪ್ರದೇಶದ ಶಾಂತಿ ಕದಡಿದೆ.

ಈ ಏರಿಯಾದುದ್ದಕ್ಕೂ ಲೆಕ್ಕ ಹಾಕುತ್ತಾ ಹೋದರೆ 57 ಮಸೀದಿಗಳು ಸಿಕ್ಕುತ್ತವೆ.ಎರಡು ಡಜನ್‌ ಉರ್ದು ಶಾಲೆಗಳಿವೆ. ವ್ಯವಸ್ಥಿತವಾದ ಒಂದೇ ಒಂದು ಸರ್ಕಾರಿ ಶಾಲೆ ಇಲ್ಲಿ ಕಣ್ಣಿಗೆ ಕಾಣಸಿಗುವುದಿಲ್ಲ.

ಟ್ಯಾನರಿ ರಸ್ತೆಯಲ್ಲೇ ಸಾಗಿ ಅಂಬೇಡ್ಕರ್‌ ಸರ್ಕಲ್‌( ಇಲ್ಲಿ ಅಂಬೇಡ್ಕರ್‌ ಪ್ರತಿಮೆ ಇದೆ)ನಲ್ಲಿ ಎಡಕ್ಕೆ ತಿರುಗಿದರೆ ಸಿಗುವುದೇ ಮುಸ್ಲಿಂ ಕಾಲನಿ. ಈ ಬೀದಿಯನ್ನು ಪ್ರವೇಶಿಸುತ್ತಿದ್ದಂತೆ ಗಬ್ಬುನಾತ ಹೊಡೆಯತೊಡಗುತ್ತದೆ. ಇಲ್ಲಿನ ರಸ್ತೆಗಳೋ ಎತ್ತಿನ ಗಾಡಿಗಳು ಹೋಗಲೂ ನಾಲಾಯಾಕ್‌ ಆದವು. ಗುಂಪು ಗುಂಪಾದ ಪುಟ್ಟ ಮನೆಗಳು, ಮನೆ ತುಂಬ ರಾಶಿ ರಾಶಿ ಜನ. ಇಲ್ಲಿ ಇನ್ನೇನು ತಾನೆ ಆಗಲು ಸಾಧ್ಯ?

ಈ ಮಲಿನಗೊಂಡ ಪ್ರದೇಶದಲ್ಲಿ ಪರಿಶುದ್ಧ ಕುಡಿಯುವ ನೀರು ಕೂಡ ಸಿಕ್ಕುತ್ತಿಲ್ಲ. ಇತರ ಏರಿಯಾಗಳಲ್ಲಿ ವರ್ಷದಲ್ಲಿ ಒಂದೋ ಎರಡೋ ಸಲ ಕಾಣಿಸಿಕೊಳ್ಳುವ ಟೈಫಾಯಿಡ್‌ ಕಾಯಿಲೆ ಇಲ್ಲಿ ವರ್ಷಪೂರ್ತಿ ಇರುತ್ತದೆ. ಕ್ಷಯ ಮತ್ತು ಅಸ್ತಮಾ ರೋಗಿಗಳೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಪುರುಷರು, ‘ಕತ್ನಾ’ ಮಾಡಿಸಿಕೊಂಡಿರುವುದರಿಂದ ಲೈಂಗಿಕ ರೋಗಿಗಳ ಸಂಖ್ಯೆ ತುಂಬ ಕಡಿಮೆ.

ಮುಸ್ಲಿಂ ಕಾಲನಿಯಲ್ಲಿ ಹೆಜ್ಜೆ ಹೆಜ್ಜೆಗೂ ಗಾಂಜಾ, ಅಫೀಮು ಮಾರುವ ಪುಟ್ಟ ಹುಡುಗರು ಕಾಣ ಸಿಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಗಾಂಜಾ, ಅಫೀಮಿನ ಬೆಲೆ ಆಕಾಶಕ್ಕೇರಿರುವುದರಿಂದ ಮೆಡಿಕಲ್‌ ಶಾಪ್‌ಗಳ ಎದುರು ಡ್ರಗ್‌ ಅಡಿಕ್ಟ್‌ ಆದ ಯುವಕರು ಕಾಣಸಿಗುತ್ತಾರೆ. ಬೇರೆ ಬೇರೆ ರಾಸಾಯನಿಕ ಸಮ್ಮಿಶ್ರಗಳಿರುವ ಎರಡು ಕಡಿಮೆ ಬೆಲೆಯ ಔಷಧಿ ಬಾಟಲಿಗಳನ್ನು ಪಡೆದು ಎರಡನ್ನು ಮಿಶ್ರಣ ಮಾಡಿ ಡ್ರಗ್ ತಯಾರಿಸಿ ಕುಡಿಯುವ ಕಲೆಯನ್ನು ಈ ಯುವಕರು ಕರಗತ ಮಾಡಿಕೊಂಡಿದ್ದಾರೆ.

ಕೆ ಜಿ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮುಸ್ಲಿಂ ಕಾಲನಿ ಒಂದು ರೀತಿಯಲ್ಲಿ ಭೂಗತ ರಾಜಧಾನಿ ! ಇಲ್ಲಿ ವೇಶ್ಯಾವಾಟಿಕೆ ಇದೆ, ಕಳ್ಳಭಟ್ಟಿ ಇದೆ, ಪೋಲಿ ನೃತ್ಯಗಳಿವೆ, ಗಾಂಜಾ ಇದೆ, ರೌಡಿಗಳಿದ್ದಾರೆ. ಇನ್ನೇನು ತಾನೇ ಬೇಕು?

ಕೊಳಕು ಚಟುವಟಿಕೆಗಳು ಬಿಟ್ಟರೆ ಇಲ್ಲಿನ ಬಹುತೇಕ ಬದುಕು ರಿಕ್ಷಾ ಚಾಲನೆಯಿಂದಲೇ. 500ಕ್ಕೂ ಹೆಚ್ಚು ರಿಕ್ಷಾಗಳು ಇಲ್ಲಿವೆ. ಮುಸ್ಲಿಂ ಕಾಲನಿಯಿಂದ ಶಿವಾಜಿನಗರಕ್ಕೆ ಕೆಲಸಕ್ಕೆ ಹೋಗುವವರ ಸಂಖ್ಯೆಯೂ ಸಾಕಷ್ಟಿದೆ.ಆದರೆ ಬಿ ಟಿ ಎಸ್‌ ವ್ಯವಸ್ಥೆ ಈ ಏರಿಯಾದಲ್ಲಿ ಸಾಕಷ್ಟು ಇಲ್ಲ.

ಒಂದೊಂದು ಬಸ್‌ನಲ್ಲೂ ಮೂರು ಬಸ್‌ಗಳಷ್ಟು ಜನರನ್ನು ತುಂಬಲಾಗುತ್ತದೆ. ಹೀಗಾಗಿ ಬಹುತೇಕ ಮಂದಿ ಆಟೋವನ್ನೇ ನೆಚ್ಚಿಕೊಳ್ಳುತ್ತಾರೆ. ಜನರನ್ನು ತುಂಬಲಾಗುತ್ತದೆ. ಹೀಗಾಗಿ ಬಹುತೇಕ ಮಂದಿ ಆಟೋವನ್ನೇ ನೆಚ್ಚಿಕೊಳ್ಳುತ್ತಾರೆ. ಆಟೋದವರು ಕೇಳಿದಷ್ಟು ಹಣ ಕೊಡುವ ಸಾಮರ್ಥ್ಯ ಇಲ್ಲದ ಪ್ರಯಾಣಿಕರೇ ಹೆಚ್ಚಿರುವುದರಿಂದ ಆಟೋ ಚಾಲಕರು ಪೆಟ್ರೋಲ್‌ಗೆ ಸೀಮೆಎಣ್ಣೆ ಬೆರೆಸಿ ಓಡಿಸುತ್ತಾರೆ.

ಹೀಗಾಗಿ ಇಲ್ಲಿ ಪರಿಸರ ಮಾಲಿನ್ಯ. ಮುಸ್ಲಿಂ ಕಾಲನಿಯಿಂದ ಶಿವಾಜಿ ನಗರಕ್ಕೆ ಹೋಗುವುದನ್ನು ಇಲ್ಲಿನವರು ಬಾಂಬೆ ಟು ಗೋವಾ ಎನ್ನುತ್ತಾರೆ. ಏಕೆಂದರೆ ಈ ಮಂದಿ ಮುಂಬೈ ಅಥವಾ ಗೋವಾ ನೋಡುವುದು ಸದ್ಯಕ್ಕಂತೂ ಸಾಧ್ಯವಿಲ್ಲ. ಅಷ್ಟೇ ಏಕೆ? ಇಲ್ಲಿನ ಎಷ್ಟೋ ಜನ ಬೆಂಗಳೂರಿನಲ್ಲಿದ್ದೂ ಕಬ್ಬನ್‌ ಪಾರ್ಕ್ ನೋಡಿಲ್ಲ. ಈ ಆಟೋ ಚಾಲಕರಿಗೆ ಅಷ್ಟಕ್ಕೂ ನೆಮ್ಮದಿಯಿಲ್ಲ. ಪ್ರತಿನಿತ್ಯ ಕಿಸೆಗೆ ಕತ್ತರಿ ಹಾಕುವ ಪೊಲೀಸರ ಕಾಟ.

ಇಲ್ಲಿಂದ ಮುಂದೆ ಬನ್ನಿ, ಕಾಡುಗೊಂಡನಹಳ್ಳಿ ಸಿಗುತ್ತದೆ. ಹದಿನೈದು ವರ್ಷಗಳ ಹಿಂದೆ ಇಲ್ಲಿನ 30/40 ವಿಸ್ತೀರ್ಣದ ನಿವೇಶನದ ಬೆಲೆ 500 ರು.ನಿಂದ 5,000 ರು. ಇತ್ತಂತೆ. ಈಗ ಕಡಿಮೆ ಎಂದರೂ 2 ಲಕ್ಷ ರೂ. ಸೈಟಿನ ಬೆಲೆ ಕಡಿಮೆ ಇದ್ದ ದಿನಗಳಲ್ಲಿ ಇಲ್ಲಿಗೆ ಶಿವಾಜಿ ನಗರ ಮೊದಲಾದ ಕಡೆ ಜನ ಬಂದು ನೆಲೆಸಿದರು. ಇಲ್ಲಿ ಶೇ.100ರಷ್ಟು ಬಡವರು, ಶೇ.90ರಷ್ಟು ಅನಕ್ಷರಸ್ಥರು, ಶೇ.75ರಷ್ಟು ನಿರುದ್ಯೋಗಿಗಳು. ಉಳಿದ ಶೇ.25ರಷ್ಟು ಮಂದಿ ಕಮರ್ಷಿಯಲ್‌ ಸ್ಟ್ರೀಟ್‌, ಶಿವಾಜಿನಗರದ ಬಟ್ಟೆ ಅಂಗಡಿ, ಸ್ಟೀಲ್‌ ಪಾತ್ರೆಗಳ ಅಂಗಡಿಯಲ್ಲಿ ಕೆಲಸ ಮಾಡುವವರು. ಇಲ್ಲಿರುವ ವ್ಯಾಪಾರಿಗಳೆಲ್ಲ ಬಹುತೇಕ ಬೇರೆ ಏರಿಯಾಗಳಲ್ಲಿ ಮನೆ ಇರುವವರು ಮತ್ತು ಸ್ಥಿತಿವಂತರು.

ಕಳೆದ 25 ವರ್ಷಗಳಿಂದ ಇಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯ್ಲಿ ಒಂದಿಷ್ಟೂ ಸುಧಾರಣೆಯಾಗಿಲ್ಲ. ಟ್ಯಾನರಿ ರಸ್ತೆಯಿಂದ ಸೈಕಲ್‌ಗಳಲ್ಲಿ ನೀರಿನ ಬಿಂದಿಗೆಗಳಲ್ಲಿನ್ನು ತಂದು ಒಂದು ಬಿಂದಿಗೆ ನೀರಿಗೆ ಎರಡು ರೂ. ನಂತೆ ಮಾರಲಾಗುತ್ತದೆ. ಎಲ್ಲ ಋತುಗಳಲ್ಲೂ ಈ ದೃಶ್ಯ ಸರ್ವೇ ಸಾಮಾನ್ಯ.

ಇಲ್ಲಿನ ಪೊಲಿಸ್‌ ಠಾಣೆಗೆ ಹೋಗಿ ನೋಡಿ. ಮಾದಕ ವಸ್ತು ಸಾಗಾಣಿಕೆಯಲ್ಲಿ ಡಜನ್‌ಗಟ್ಟಲೇ ಮೊಕದ್ದಮೆಗಳನ್ನು ಎದುರಿಸುತ್ತಿರುವ ಯುವಕರು ಯಾರು ಗೊತ್ತೇ? ಖಾಲಿದ್‌, ಸಜ್ಜಾದ್, ಅಜೀಂ, ಶಕೀಲ್‌,ವಸೀಂ, ಸುಭಾನ್‌….ಇಂಥದ್ದೇ ಹೆಸರುಗಳು.

ಇದೇ ರೀತಿ ಬಾಡಿಗೆ ಮನೆ, ಬಾಡಿಗೆ ಅಂಗಡಿಗಳನ್ನು ಖಾಲಿ ಮಾಡಿಸುವ ಮಾಲೀಕರು ಪುಂಡರ ಗುಂಪನ್ನೇ ಇಟ್ಟುಕೊಂಡಿದ್ದಾರೆ. ಇವರೆಲ್ಲ ನಿರುದ್ಯೋಗಿಗಳು ಅಬ್ಬಾಸದ್‌, ಆಲಿ, ರಫೀಕ್‌….ಇಂಥವರೇ. ಕೆ ಜಿ ಹಳ್ಳಿಯಲ್ಲಿ ತರಬೇತಿಯಾಗುತ್ತಿದ್ದಂತೆ ಇವರೆಲ್ಲ ಮುಂಬೈಗೆ ಹೋಗಿ ಬಿಡುತ್ತಾರೆ !

ಇವರಾರು ಇಷ್ಟಪಟ್ಟು ಪ್ರೀತಿಯಿಂದ ಇಂಥ ಕಾನೂನು ಬಾಹಿರ ಚಟುವಟಿಕೆಗಳಿಗೆ ಇಳಿದಿಲ್ಲ. ಬಡತನ, ಅನಕ್ಷರತೆ, ಸರ್ಕಾರದ ಭಂಡ ನಿರ್ಲಕ್ಷ್ಯ ಇಂಥವರನ್ನೇ ಸದಾ ಸೃಷ್ಟಿಸುವ ಕಾರ್ಯಕ್ಕೆ ಪೂರಕವಾಗಿದೆ.
ಈಗ ಇಲ್ಲಿ ಯಾವುದೂ ಸರಿ ಇಲ್ಲ. ನಿಷ್ಕ್ರೀಯಗೊಂಡ ಹಗಲು ಹೊತ್ತಿನ ಪ್ರಾಥಮಿಕ ಅರೋಗ್ಯ ಕೇಂದ್ರ ಬಿಟ್ಟರೆ ಸುಸಜ್ಜಿತ ಆಸ್ಪತ್ರೆಯೂ ಇಲ್ಲಿಲ್ಲ. 100 ಹಾಸಿಗೆಗಳ ಆಸ್ಪತ್ರೆಯಲ್ಲದಿದ್ದರೂ 50 ಹಾಸಿಗೆಗಳ ಆಸ್ಪತ್ರೆಯನ್ನಾದರೂ ಒದಗಿಸುವ ಭರವಸೆ ನೀಡಿದ್ದ ಆರೋಗ್ಯ ಸಚಿವರು ನಾಪತ್ತೆಯಾಗಿದ್ದಾರೆ. ಮುಸ್ಲಿಂ ಮಹಿಳೆಯರು ಹೆರಿಗೆಗಾಗಿ ಶಿವಾಜಿನಗರಕ್ಕೆ ಹೋಗಬೇಕು. ರಸ್ತೆ ಸರಿ ಇಲ್ಲ, ಚರಂಡಿ ಇಲ್ಲ, ನೀರಿಲ್ಲ, ಬಸ್‌ ವ್ಯವಸ್ಥೆ ಸಮರ್ಪಕವಾಗಿಲ್ಲ, ಸರ್ಕಾರಿ ಶಾಲೆ, ಮೈದಾನ ಯಾವುದೂ ಇಲ್ಲ.

ಬೆಂಗಳೂರಿನ ವಿವಿಧೆಡೆಗಳಲ್ಲಿರುವ ಫುಟ್‌ಪಾತ್‌ ವ್ಯಾಪಾರಿಗಳು, ಗಾಡಿಗಳಲ್ಲಿ ತರಕಾರಿ ಮಾರುವವರು, ಹೋಟೆಲ್‌ ಕ್ಲೀನರ್‌ಗಳಾಗಿರುವವರು,…ಇಂಥ ಒಂದು ಲಕ್ಷ ಜನ ಟ್ಯಾನರಿ ರಸ್ತೆಯ ಸೇತುವೆಯನ್ನು ಪ್ರತಿನಿತ್ಯ ದಾಟಿ ಹೋಗುತ್ತಾರೆ.

ಇಲ್ಲಿನ ಹತ್ತಕ್ಕೆ ಎಂಟು ಮನೆಗಳಲ್ಲಿ ವರದಕ್ಷಿಣೆ ಮೊಕದ್ದಮೆಗಳಿವೆ. ಮಹಿಳಾ ಸಮಾನತೆ ಬೋಧಿಸಿದ ಪೈಗಂಬರನ ಅನುಯಾಯಿಗಳು ಈ ಹಾದಿ ಹಿಡಿದಿರುವ ಬಗ್ಗೆ ನೋವಾಗುತ್ತದೆ. ಇಲ್ಲಿ ಸಾರಾಯಿ ಅಂಗಡಿಗಳು ಕಾಣಿಸಿಗುತ್ತವೆಯೇ ಹೊರತು ಬ್ಯಾಂಕ್‌ ಶಾಖೆಗಳು ತುಂಬ ಕಡಿಮೆ. ಸಿರಿವಂತರಿರುವ ಕಡೆ ಠೇವಣಿ ಸಂಗ್ರಹಕ್ಕಾಗಿ ಶಾಖೆ ತೆರೆಯುವ ಬ್ಯಾಂಕ್‌ಗಳಿಗೆ ದುರ್ಬಲರಿರುವ ಇಂಥ ಏರಿಯಾದಲ್ಲಿ ಏನು ತಾನೆ ಕೆಲಸವಿದೆ? ಏಕೆಂದರೆ ಇಲ್ಲಿನವರಿಗೆ ಸಾಲ ಬೇಕು. ಬಡವರಿಗೆ ಸಾಲ ಕೊಡುವುದಕ್ಕೆ ಯಾವ ಬ್ಯಾಂಕ್‌ ತಾನೇ ಮುಂದೆ ಬಂದೀತು. ? ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಈ ಬಡ ಮುಸ್ಲಿಂರಿಗೆ ಯಾವ ರೀತಿಯಲ್ಲಿ ನೆರವಾಗಿದೆ?

ಕ್ರಿಮಿನಲ್‌ಗಳನ್ನು ಪ್ರೋತ್ಸಾಹಿಸುತ್ತಿರುವ ಪೊಲೀಸರು ಇಡೀ ಏರಿಯಾವನ್ನು ನಿರ್ಲಕ್ಷ್ಯಿಸಿರುವ ರಾಜಕಾರಣಿಗಳು, ಮುಸ್ಲಿಂ ಸಮಾಜವನ್ನು ಅಂಧಕಾರದಲ್ಲಿಟ್ಟಿರುವ ಮೌಲ್ವಿಗಳನ್ನು ಕಂಡು ಬೇಸತ್ತಿರುವ ನಿರುದ್ಯೋಗಿ ಯುವ ಸಮುದಾಯ, ಬಡತನವೇ ಬದುಕಾದ ದುರ್ಬಲರು, ವರದಕ್ಷಿಣೆ ಕೇಸಿನ ನೆಪದಲ್ಲಿ ಪೊಲೀಸರಿಂದಲೂ ದೈಹಿಕ ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರು ಯಾವುದೇ ಕ್ಷಣದಲ್ಲಿ ಸ್ಫೋಟವಾದಾರು.

ಕಾಡುಗೊಂಡನಹಳ್ಳಿ ಕಾಶ್ಮೀರವಾಗುವ ಮೊದಲು ಸಂಬಂಧಪಟ್ಟ ಎಲ್ಲರೂ ಎಚ್ಚರ ವಹಿಸುವುದು ಒಳಿತು

(ಆಗಸ್ಟ್‌ 19,1998 ಲಂಕೇಶ್ ಪತ್ರಿಕೆ)

ಕೃಪೆ; ಆಪರೇಷನ್‌ ಸ್ಯಾಂಡಲ್‌ ಫಾಕ್ಸ್