*ನೆರೆ ಸಂತ್ರಸ್ತರಿಗೆ,  ಸಕಾಲದಲ್ಲಿ ನೆರವು ಮತ್ತು ಪರಿಹಾರ ಧನ ದೊರಕುವಂತಾಗಲಿ*: ಖಲೀಲ್ ಉಳ್ಳಾಲ್.
ಉಳ್ಳಾಲ : ಮಳೆ ಎಡೆ ಬಿಡದೆ ಸುರಿಯುತ್ತಿರುವುದರಿಂದ ಮತ್ತು ಮನೆಯ ಸುತ್ತ ನೆರೆ ಆವರಿಸಿ ಕೊಂಡಂತೆ ನೀರು ತುಂಬಿರುವುದರಿಂದ  ಉಳ್ಳಾಲದ ಹಲವೆಡೆ   ದೈನಂದಿನ ದುಡಿಮೆಗೆ   ಹೋಗಲಾಗದೆ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಸ್ಥಳೀಯಾಡಳಿತ ಕೂಡಲೇ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ  ತಂದು ಸಕಾಲದಲ್ಲೇ ಸೂಕ್ತ ನೆರವು-ಧನ ಸಹಾಯವನ್ನು ಒದಗಿಸಿ ಕೊಡುವಂತೆ ಜನತಾದಳ ಮುಖಂಡ ಕೌನ್ಸಿಲರ್ ಖಲೀಲ್ ಉಳ್ಳಾಲ್ ಸಂಬಂಧ ಪಟ್ಟವರನ್ನು  ಒತ್ತಾಯಿಸಿದ್ದಾರೆ.
ರಾಜ್ಯ ಮತ್ತು ಜಿಲ್ಲೆಯ ಬಹುತೇಕ ನದಿ -ತೊರೆಗಳಲ್ಲಿ ನೀರು ಅಪಾಯದ ಮಟ್ಟ ಮೀರಿರುವುದರಿಂದ ಸಹಜವಾಗಿಯೇ  ಉಳ್ಳಾಲದ ನದಿ ತಟಗಳ ಮತ್ತು ತಗ್ಗು ಪ್ರದೇಶಗಳ ಮನೆಗಳು ಜಲಾವೃತವಾಗಿವೆ. ಹಲವೆಡೆ ಮನೆಗಳು ಅಪಾಯಕ್ಕೆ ಸಿಲುಕಿರುವುದರಿಂದ ಸಂಭವನೀಯ ನಾಶ-ನಷ್ಟದಿಂದ ಜನರನ್ನು ರಕ್ಷಿಸುವ ಕೆಲಸವನ್ನು  ಜಿಲ್ಲಾಡಳಿತ ಕ್ಷಿಪ್ರಗತಿಯಲ್ಲಿ ನಡೆಸ ಬೇಕಿದೆ.
ಮೀನಾ ಮೇಷ ಎಣಿಸದೆ ಕೂಡಲೇ ತಾತ್ಕಾಲಿಕ ಪರಿಹಾರ ಧನವನ್ನು ವಿತರಿಸಿ ಜನಸಾಮಾನ್ಯರ ನೆರವಿಗೆ ಧಾವಿಸ ಬೇಕು. ಎಂದು ಆಗ್ರಹಿಸಿರುವ ಕೌನ್ಸಿಲರ್ ಖಲೀಲ್ ಉಳ್ಳಾಲ್,
ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೊಳಗಾದವರಿಗೆ ಸರ್ಕಾರ ಕೊಡ ಮಾಡಿದ ‘ಪರಿಹಾರ ಧನ’ ಗಳ ಬಹುಪಾಲು ‘ಚೆಕ್’ ಮಧ್ಯವರ್ತಿಗಳ ಕೈ ಚಳಕದಿಂದ ಸಂತ್ರಸ್ತರಲ್ಲದವರ  ಪಾಲಾದ ಆರೋಪ ಕೇಳಿ ಬಂದಿರುವುದರಿಂದ, ಈ ಬಾರಿ ಸಂಬಂಧ ಪಟ್ಟ ಅಧಿಕಾರಿಗಳು ತೋರಿಕೆಯ ಸೇವಾಸಕ್ತರನ್ನು ದೂರ ಇಟ್ಟು ಅರ್ಹ ಸಂತ್ರಸ್ತರಿಗೆ ನೆರವಿನ ಮೊತ್ತವನ್ನು ನೇರವಾಗಿ ತಲುಪಿಸಿ ಕೊಡ ಬೇಕು ಎಂದೂ ಮನವಿಯಲ್ಲಿ ವಿನಂತಿಸಿ ಕೊಂಡಿದ್ದಾರೆ.