ಬಹರೇನ್ ನಿಂದ ಮಂಗಳೂರಿಗೆ ತೆರಳಿದ ಮೊದಲ ವಿಮಾನ:

ವಿಶ್ವದಾದ್ಯಂತ ಕೊರೋನಾ ವೈರಸ್ ನಿಂದಾಗಿ ಅಂತರರಾಷ್ಟ್ರೀಯ ಪ್ರಯಾಣ ಸುಮಾರು ನಾಲ್ಕು ತಿಂಗಳಿಂದ ನಿಂತು ಹೋಗಿದ್ದು, ಕೊಲ್ಲಿಯ ಭಾರತೀಯರನೇಕರು ತಾಯ್ನಾಡಿಗೆ ತೆರಳುವ ಇಚ್ಛೆಯನ್ನು ಹೊಂದಿದ್ದರು.  ದುಬಾಯ್ ಮತ್ತಿತರ ಕೊಲ್ಲಿ ದೇಶಗಳಿಂದ ಮಂಗಳೂರಿಗೆ ಹಲವು ವಿಮಾನಗಳು ಪ್ರಯಾಣಿಕರನ್ನು ಹೊತ್ತು ತಂದಿದ್ದರೂ ಬಹರೈನ್ ನಿಂದ ಮಂಗಳೂರಿಗೆ ಇಂದಿನ ತನಕ ಸಾಕಷ್ಟು ಪ್ರಯಾಣಿಕರು ಸಿಗಲಾರರು ಎಂಬ ಭಾವನೆಯಿಂದಾಗಿ ಭಾರತ ಸರಕಾರವು ವಿಮಾನಗಳನ್ನು ನಿಯೋಜಿಸಿರಲಿಲ್ಲ. ಇದರಿಂದಾಗಿ ಬಹಳಷ್ಟು ಹಿರಿಯ ನಾಗರಿಕರು, ಮಹಿಳೆಯರು, ಅಸೌಖ್ಯದ ನಿಮಿತ್ತ ತಮ್ಮ ತಾಯ್ನಾಡು ಮಂಗಳೂರಿಗೆ  ತೆರಳಬೇಕಿದ್ದವರು ತಿಂಗಳು ಗಟ್ಟಲೆ ಬಹರೈನ್ ನಲ್ಲೆ ಕಾಯಬೇಕಾದ ಪರಿಸ್ಥಿತಿ  ಒದಗಿ ಬಂದಿತ್ತು.

ಇದನ್ನು ಮನಗಂಡ ಸ್ಥಳೀಯ ಉದ್ಯಮಿ ಹಾಗೂ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐ. ಓ. ಸಿ.) ನ ಬಹರೈನ್ ಘಟಕದ ಅಧ್ಯಕ್ಷರೂ ಆಗಿರುವ ಶ್ರೀ ಮಹಮ್ಮದ್ ಮನ್ಸೂರ್ ರವರು ಭಾರತೀಯ ದೂತಾವಾಸದೊಡನೆ ಮಾತುಕತೆ ನಡೆಸಿ, ಅವರ ಸಹಕಾರದೊಂದಿಗೆ ಮಂಗಳೂರಿಗೆ ತೆರಳಬಯಸುವ ಪ್ರಯಾಣಿಕರಿಗಾಗಿ ವಂದೇ ಭಾರತ್ ಮಿಷನ್ ನ ಮೂಲಕ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ವಿಶೇಷ ವಿಮಾನವನ್ನು ಮಂಗಳೂರಿಗೆ ನಿಯೋಜಿಸುವಲ್ಲಿ ಯಶಸ್ವಿಯಾದರು. ಸುಮಾರು ನೂರಾ ಎಪ್ಪತ್ತು ಪ್ರಯಾಣಿಕರನ್ನೊಳಗೊಂಡ ವಿಮಾನವು ಇಂದು (12 ಜೂಲೈ 2020) ಮುಂಜಾನೆ 10 ಗಂಟೆಗೆ ಬಹರೈನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರತು ಸಾಯಂಕಾಲ 4.45 ಕ್ಕೆ ಮಂಗಳೂರು ತಲುಪಿತು.

ಸಾಗರೋತ್ತರ ಕಾಂಗ್ರೆಸ್ ನ ಬಹರೈನ್ ಸಮಿತಿ ಸ್ಥಳೀಯ ರಾಜಮನೆತನದ “ಕೆ. ಎಚ್.ಕೆ. ಹೀರೋಸ್ ” ಸಂಸ್ಥೆಯ ಸಹಯೋಗದೊಂದಿಗೆ ಪ್ರಯಾಣದ ಸಂಧರ್ಭಕ್ಕಾಗಿ ಲಘುಪಹಾರದ ಕಿಟ್ ಗಳನ್ನೂ ಒದಗಿಸಿಕೊಟ್ಟಿತ್ತು. ಮಂಗಳೂರಿಗೆ ಪ್ರಯಾಣ ಬಯಸುವ ಸರ್ವರನ್ನೂ ಸಂಪರ್ಕಿಸಿ  ಭಾರತೀಯ ದೂತಾವಾಸದ ಸಿಬಂದಿಗಳ ಸಹಕಾರದೊಂದಿಗೆ ಪ್ರಯಾಣಿಕರ ಪಟ್ಟಿ ತಯಾರಿಸಿ, ಸರಕಾರದ ಹಾಗೂ ವಿಮಾನ ನಿಲ್ದಾಣದ ಸೂಚನೆಗಳನ್ನು ವಿವರಿಸಿ ಯಾವುದೇ ಅಹಿತಕರ ಘಟನೆಗಳು ಜರಗದಂತೆ ಮುತುವರ್ಜಿ ವಹಿಸಿತ್ತು.  ಮಂಗಳೂರು ಹಾಗೂ ಉಡುಪಿಯ ಕ್ವಾರಂಟೈನ್ ಹೋಟೆಲುಗಳ ವಿವರ, ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಡನೆ ಮಾತುಕತೆ, ತುರ್ತು ಪರಿಸ್ಥಿತಿಗಳಲ್ಲಿ ಮಂಗಳೂರು ಹಾಗೂ ಉಡುಪಿಯಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಇವೆಲ್ಲವನ್ನೂ ಒದಗಿಸಿ ಕೊಟ್ಟಿತ್ತು.  ಮುಂಜಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐ. ಓ. ಸಿ.) ನ ಪದಾಧಿಕಾರಿಗಳು ಪ್ರಯಾಣಿಕರನ್ನು ಅಕ್ಕರೆಯಿಂದ ಬೀಳ್ಕೊಟ್ಟರು.

ಮಂಗಳೂರಿಗೆ ವಿಮಾನವನ್ನು ಏರ್ಪಡಿಸುವಲ್ಲಿ ಶ್ರೀ ಮಹಮ್ಮದ್ ಮನ್ಸೂರ್ ರವರು ವಹಿಸಿದ ಮುತುವರ್ಜಿ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಪ್ರಯಾಣಿಸಿದ ಎಲ್ಲಾ ಪ್ರಯಾಣಿಕರೂ ಈ ಕಾರ್ಯಕ್ಕಾಗಿ  ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐ. ಓ. ಸಿ.) ಹಾಗೂ ಅದರ ಪದಾಧಿಕಾರಿಗಳನ್ನು ಅಭಿನಂದಿಸಿದ್ದಾರೆ.