ಪ್ರಧಾನಿಯಾಗಿ ದೇವೇಗೌಡರು ಕರ್ನಾಟಕಕ್ಕೆ ಏನೂ ಮಾಡಲೇ ಇಲ್ಲವಂತೆ, ನಿಜವೇ?
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗಳಿಂದ #ಹೆಂಗ್_ಪುಂಗ್_ಲೀ ಎಂಬ ಬಿರುದಾಂಕಿತರಾಗಿರುವ ಮಿಥುನ್ ಸೇಠ್ ಆಲಿಯಾಸ್ ಚಕ್ರವರ್ತಿ ಸೂಲಿಬೆಲೆಯ ಅನೇಕ ವಿಡಿಯೋಗಳು ವೈರಲ್ ಆಗಿ ಈ ಮಿಥುನ್ ಸೇಠ್ ಕನ್ನಡಿಗರ ಪಾಲಿಗೆ ತಮಾಷೆಯ ವಸ್ತುವಾಗಿ ಪರಿವರ್ತನೆಯಾಗಿದ್ದಾನೆ. ತನ್ನನ್ನು ತಾನು ಅಪ್ರತಿಮ ದೇಶಭಕ್ತ ಎಂದು ಪೋಸು ಕೊಡುತ್ತಾ ಇವನಾಡಿದ ಸುಳ್ಳುಗಳ ಕಂತೆ ಈಗ ಅವನ ಮುಖಕ್ಕೇ ರಾಚಿ ಹೊಡೆಯುತ್ತಿದೆ. ಇದೇ ರೀತಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಒಂದು ದೇಶದ ಮಾಜಿ ಪ್ರಧಾನಿ ದೇವೇಗೌಡರ ಕುರಿತು ಇವನು ಪುಂಗಿರುವ ವಿಡಿಯೋ. ಅದರಲ್ಲಿ ಮಿಥುನ್ ಸೇಠು ಹೀಗೆನ್ನುತ್ತಾನೆ, “ಏನ್ ಕೇಳಿಕೊಳ್ತಾರೆ ಗೊತ್ತಾ ಜನರತ್ರ? ಅವರು ಜನರತ್ರ ಕೇಳಿಕೊಳ್ತಾರೆ, ಪ್ರಧಾನ ಮಂತ್ರಿಯವರು ಕನ್ನಡದವರಾಗಿದ್ದರೆ ಎಷ್ಟು ಚನ್ನಾಗಿರತ್ತೆ?…. ಏನೂ ಚನ್ನಾಗಿರಲ್ಲ, ಅವರು ದೆಹಲಿಯಿಂದ ಬೆಂಗಳೂರಿಗೆ ಆವಾಗಾವಾಗ ಬರ್ತಾ ಇರ್ತಾರೆ, ಆವಾಗೆಲ್ಲಾ ಟ್ರಾಫಿಕ್ ಜಾಮ್ ಆಗತ್ತೆ ಬಿಟ್ರೆ ಮತ್ತೇನೂ ಆಗಲ್ಲ..ನಾವು ನೋಡಿದೀವಲ್ಲ ಒಂದೂವರೆ ವರ್ಷ ಏನು ಮಾಡಿದ್ರು ಅವರೂ ಅಂತ”- ಇದು ಸೂಲಿಬೆಯೆಲೆ ಪುಂಗುವ ರೀತಿ.
ಹಾಗಾದರೆ ಕರ್ನಾಟಕದವರೇ ಒಬ್ಬರು ಪ್ರಧಾನಿಯಾದ್ದರಿಂದ ನಮ್ಮ ರಾಜ್ಯಕ್ಕೆ ಏನೂ ಪ್ರಯೋಜನವೇ ಆಗಿರಲೇ ಇಲ್ಲವೇ? ತಾವು ಪ್ರಧಾನಿಯಾದಾಗ ಕರ್ನಾಟಕಕ್ಕೆ ಒಂದಷ್ಟಾದರೂ ಸೌಲಭ್ಯಗಳನ್ನು ದೇವೇಗೌಡರು ದೊರಕಿಸಿ ಕೊಡಲಿಲ್ಲವೇ? ಅಂತಹ ಒಂದು ಸುವರ್ಣ ಅವಕಾಶವನ್ನು ಸುಮ್ಮನೇ ಕೈಚೆಲ್ಲಿ ಕುಳಿತಿದ್ದರೆ? ಈ ಕುರಿತು ಒಂದು ತೀರ್ಮಾನಕ್ಕೆ ಬರುವ ಮುನ್ನ ಕೆಲವು ವಾಸ್ತವಾಂಶಗಳನ್ನು ನೋಡೋಣ.
ವಾಸ್ತವದಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದು 1995-96ನೇ ಇಸವಿಯಲ್ಲಿ ಕೇವಲ ಹತ್ತು ತಿಂಗಳ ಅವಧಿಯವರೆಗೆ ಮಾತ್ರ.
ಈ ಅವಧಿಯಲ್ಲಿ ದೇವೇಗೌಡರು ಬಹಳ ಪ್ರಮುಖವಾಗಿ ಎಐಡಿಪಿ ಯೋಜನೆಯಡಿಯಲ್ಲಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ವಿಶೇಷವಾದ ಹಣಕಾಸಿನ ನೆರವು ಸಿಗುವಂತೆ ಮಾಡಿದ್ದನ್ನು ಯಾರೂ ಮರೆಯಬಾರದು. ಮುಳವಾಡ ಏತನೀರಾವರಿಗೆ ಸಂಬಂಧಿಸಿದಂತೆ ಬಾಗಿಲುಗಳನ್ನು ಅಳವಡಿಸಲು ಅನುಮತಿ ನೀಡಿದರು. ಆಲಮಟ್ಟಿ ಅಣೆಕಟ್ಟನ್ನು 519 ರಿಂದ 524 ಮೀಟರ್ಗಳಿಗೆ ಏರಿಸುವುದು ಮತ್ತು ಸಂಗ್ರಹ ಮಾಡಿದ ನೀರನ್ನು ವಿದ್ಯುಚ್ಛಕ್ತಿ ಉತ್ಪಾದನೆಗೆ ಬಳಸಿಕೊಳ್ಳಲು ರಾಜ್ಯಕ್ಕೆ ಅನುಮತಿ ಸಿಕ್ಕಿದಾಗ ಈ ವಿಷಯ ತಿಳಿದ ಆಗಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರು ಬಹಳ ದೊಡ್ಡ ರಾದ್ಧಾಂತ ಮಾಡಿದರು. ಸಚಿವ ಸಂಪುಟದ ಅನುಮತಿ ಪಡೆದು ಮೊಟ್ಟಮೊದಲ ಬಾರಿಗೆ 1200 ಕೋಟಿ ವೆಚ್ಚದ ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಗೆ ದೇವೆಗೌಡರು ಗುದ್ದಲಿಪೂಜೆ ನೆರವೇರಿಸಿದರು. ‘ಇದು ನಿಮ್ಮ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುಕೂಲ ಮಾಡಿಕೊಡಲು ಮಾಡಿದ ಹುನ್ನಾರ’ ಎಂದು ಚಂದ್ರಬಾಬು ನಾಯ್ಡು ಅವರು ಮತ್ತೆ ಆರೋಪ ಮಾಡಿದರು. ಈ ಬಗ್ಗೆ ‘ಚಾಲನಾ ಸಮಿತಿ ಯಲ್ಲಿ ದೊಡ್ಡ ಗದ್ದಲವೇ ಆಯಿತು. ಜ್ಯೋತಿಬಸು, ಮುಲಾಯಂಸಿಂಗ್, ಲಲ್ಲೂ ಪ್ರಸಾದ್ ಯಾದವ್, ಬರ್ದನ್… ಮುಂತಾದವರೆಲ್ಲ ಉಪಸ್ಥಿತರಿದ್ದರು. ಇಲ್ಲಿ ದೊಡ್ಡ ಸಂಘರ್ಷವೇ ನಡೆಯಿತು. ‘ಕರ್ನಾಟಕದಲ್ಲಿ ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳುತ್ತೇವೆ, ಆಂಧ್ರಕ್ಕೆ ಏನು ಹೋಗಬೇಕೋ ಅದು ಹೋಗುತ್ತದೆ ಎಂದು ಹೇಳಿ ದೇವೆಗೌಡರು ಸಭೆಯಿಂದ ಹೊರ ನಡೆದರು. ನಂತರ ಜ್ಯೋತಿ ಬಸು ಮತ್ತಿತರರು ‘ಬಾಂಗ್ಲಾ ಭವನ್ ಗೆ ಎಲ್ಲರನ್ನೂ ಕರೆಸಿಕೊಂಡರು. ಬಚಾವತ್ ತೀರ್ಪಿನ ನಿರ್ಣಯವನ್ನು ಮಾರ್ಪಾಡು ಮಾಡುವಂತೆ ದೇವೇಗೌಡರು ಜ್ಯೋತಿ ಬಸು ಅವರಲ್ಲಿ ಕೇಳಿದರು. ಅಂದು ದೇವೇಗೌಡರು ಹಠ ಹಿಡಿದು ಕೆಲಸ ಮಾಡಿದ ಪರಿಣಾಮವಾಗಿ ಇವತ್ತು ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಗಳಲ್ಲಿ ಕೃಷ್ಣಾ ಕಣಿವೆಗೆ 10 ಸಾವಿರ ಕೋಟಿ ರೂಪಾಯಿ ಬಂದಿದೆ ಎಂಬುದನ್ನು ಮರೆತರೆ ಕನ್ನಡಿಗರಷ್ಟು ಕೃತಘ್ನರು ಬೇರೆ ಯಾರೂ ಆಗಲು ಸಾಧ್ಯವಿಲ್ಲ. ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್ವರೆಗೆ ಎತ್ತರಿಸುವ ತೀರ್ಮಾನ ಮಾಡುವ ಸಂದರ್ಭದಲ್ಲಿ ತೆಲುಗು ದೇಶಂ ಪಕ್ಷ ದೇವೇಗೌಡರ ಪ್ರಧಾನಿ ಸ್ಥಾನಕ್ಕೆ ಬೆಂಬಲ ನೀಡಿದ್ದರೂ ಸಹ ಆಂಧ್ರದ ಮರ್ಜಿಗಾಗಲೀ, ತೆಲಗು ದೇಶಂನ ಹಂಗಿಗಾಗಲೀ ಒಳಗಾಗದೆಯೇ ಕರ್ನಾಟಕದ ಹಿತವನ್ನು ಕಾಪಾಡುವ ಬದ್ಧತೆಯನ್ನು ದೇವೇಗೌಡರು ತೋರಿದರು.
ರಾಜ್ಯಕ್ಕಾಗಿ ಅಂದಿನ ಪ್ರಧಾನಿ ದೇವೇಗೌಡರು ಮಾಡಿದ ಮತ್ತೊಂದು ಸಾಧನೆ ಎಂದರೆ ನೈರುತ್ಯ ರೈಲ್ವೆ ವಲಯ ಸ್ಥಾಪನೆ ಮಾಡಿದ್ದು. ಪ್ರಧಾನಿಯಾದ ತಕ್ಷಣವೇ ಕರ್ನಾಟಕಕ್ಕೆ ಪ್ರತ್ಯೇಕ ರೈಲ್ವೇ ವಲಯವಾಗಿ ನೈರುತ್ಯ ರೈಲ್ವೇ ವಲಯವನ್ನು ಘೊಷಣೆ ಮಾಡಿದ್ದರು. ನವೆಂಬರ್ 1, 1996ರಂದು ನೈರುತ್ಯ ರೈಲ್ವೇ ವಲಯವನ್ನು ಅಧಿಕೃತವಾಗಿ ಘೋಷಿಸಿಸಲಾಯಿತು. ಆದರೆ ಈ ಸಂದರ್ಭದಲ್ಲಿ ನಡೆದ ಕೆಲವು ಸಂಗತಿಗಳ ಬಗ್ಗೆ ದೇವೇಗೌಡರು ಒಮ್ಮೆ ಹೀಗೆ ಹೇಳಿದ್ದರು. “ದಶಕಗಳಿಂದ ಕರ್ನಾಟಕ ಕಾಣದಿದ್ದ ಒಂದು ರೈಲ್ವೇ ವಲಯವು ಕನ್ನಡಿಗನೇ ಆದ ದೇವೇಗೌಡರು ಪ್ರಧಾನಿಯಾಗಿದ್ದಕ್ಕೆ ಸಿಕ್ಕಿತು ಎಂದು ನನ್ನನ್ನು ಹೊಗಳುವುದಕ್ಕಿಂತಲೂ ಹೆಚ್ಚು ಆ ಸಂದರ್ಭದಲ್ಲಿ ನನ್ನ ವಿರುದ್ಧ ಪ್ರತಿಭಟನೆಗಳಾಯಿತು ಎಂಬುದು ವಿಪರ್ಯಾಸ. ಇಲ್ಲಿ ಅಭಿವೃದ್ಧಿ ಮುಖ್ಯವಾಯಿತೋ ಕುತ್ಸಿತ ರಾಜಕಾರಣ ಮುಖ್ಯವಾಯಿತೋ ಎಂದು ನೀವು ಅರ್ಥ ಮಾಡಿಕೊಳ್ಳಿ. ‘ಹುಬ್ಬಳ್ಳಿಗೆ ಬರಬೇಕಾಗಿದ್ದ ಕೇಂದ್ರ ಸ್ಥಾನವನ್ನು ದೇವೇಗೌಡರು ಬೆಂಗಳೂರಿಗೆ ಕೊಟ್ಟುಕೊಂಡರು; ಇವರು ಉತ್ತರ ಕರ್ನಾಟಕದ ವಿರೋಧಿ; ಎಂದು ಹುಬ್ಬಳ್ಳಿಯಲ್ಲಿ ನನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶನ, ಚಳವಳಿ ನಡೆಸಲಾಯಿತು. 30 ವರ್ಷಗಳ ಒಂದು ಬೇಡಿಕೆಯನ್ನು ದೇವೇಗೌಡರು ಈಡೇರಿಸಿದರು ಎಂದು ಶ್ಲಾಘಿಸುವ ಬದಲಾಗಿ, ‘ದೇವೇಗೌಡರು ಉತ್ತರ ಕರ್ನಾಟಕದ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನಕ್ಕೆ ಹೆಚ್ಚು ಪ್ರಚಾರ ಸಿಕ್ಕಿತಲ್ಲ ಎಂಬುದು ನನಗೆ ತುಂಬಾ ನೋವಿನ ಮತ್ತು ಬಹಳ ದಿನಗಳ ಕಾಲ ನನ್ನನ್ನು ಕಾಡಿದ ವಿಷಾದಕರ ಸಂಗತಿ. ಆದರೆ ವಾಸ್ತವವೇನು? ಆ ಸಂದರ್ಭದಲ್ಲಿ ನಾನು ಹುಬ್ಬಳ್ಳಿಯನ್ನು ಕೂಡಾ ಅಲಕ್ಷ್ಯ ಮಾಡಿರಲಿಲ್ಲ. ಹುಬ್ಬಳ್ಳಿಯ ರೈಲ್ವೇ ವರ್ಕ್ಶಾಪ್ ಮುಚ್ಚುವ ಸ್ಥಿತಿಗೆ ಬಂದು ನಿಂತಿತ್ತು. ಅಲ್ಲಿನ ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ಎದುರಾಗಿತ್ತು. ಅದಕ್ಕೆ ಪುನಶ್ಚೇತನದ ಕಾರ್ಯಕ್ರಮವನ್ನೂ ನಾನು ಘೋಷಿಸಿದ್ದೆ. ನೈರುತ್ಯ ರೈಲ್ವೇ ವಲಯದ ಘೋಷಣೆಯ ಜೊತೆಯಲ್ಲಿಯೇ ಹುಬ್ಬಳ್ಳಿಯ ರೈಲ್ವೇ ವರ್ಕ್ಶಾಪ್ಗೆ 80 ಕೋಟಿ ರೂಪಾಯಿಯ ಹಣವನ್ನು ಕೇಂದ್ರದಿಂದ ಬಿಡುಗಡೆಗೊಳಿಸಿ ಅದನ್ನು ಪುನಶ್ಚೇತನಗೊಳಿಸುವ ಕೆಲಸವನ್ನೂ ಮಾಡಿದ್ದೆ. ಆದರೆ ಅವು ಯಾವುದೂ ಜನರ ಗಮನಕ್ಕೆ ಬಾರದ ರೀತಿಯಲ್ಲಿ ‘ಉತ್ತರ ಕರ್ನಾಟಕ ವಿರೋಧಿ’ ಎಂಬುದೇ ಹೆಚ್ಚು ಪ್ರಚಾರ ಪಡೆಯಿತು ಎಂಬುದು ಬೇಸರದ ಸಂಗತಿ”. ನಂತರ ದೇವೇಗೌಡರ ನಂತರದಲ್ಲಿ ವಾಜಪೇಯಿ ಪ್ರಧಾನಿಯಾದ ಮೇಲೆ ನೈರುತ್ಯ ರೈಲ್ವೆಯ ಕೇಂದ್ರಸ್ಥಾನ ಹುಬ್ಬಳ್ಳಿಗೆ ಬದಲಾಯಿತು. ಇದರಿಂದ ನೈರುತ್ಯ ರೈಲ್ವೆಗೆ ಸೇರಿದ್ದ ಗುಂತಕಲ್ ವಿಭಾಗ ಆಂಧ್ರದ ಸಿಕಂದರಾಬಾದ್ ವಲಯದ ಪಾಲಾಯಿತು.
ರಾಜ್ಯಕ್ಕೆ ನೈರುತ್ಯ ರೈಲ್ವೇ ವಲಯ ಕೊಡುವುದರ ಜೊತೆಗೆ ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳಿಗೆ ಸುಮಾರು 1000 ಕಿಲೋಮೀಟರ್ ಬ್ರಾಡ್ಗೇಜ್ ಪರಿವರ್ತನೆಗೆ ದೇವೇಗೌಡರು ಆದೇಶ ಮಾಡಿದರು. ಕೊಟ್ಟೂರು-ಹರಪನಹಳ್ಳಿ, ಕಡೂರು- ಚಿಕ್ಕಮಗಳೂರು, ಹಾಸನ- ಬೆಂಗಳೂರು, ಕನಕಪುರ-ಸತ್ಯಮಂಗಲ, ಮುನಿರಾಬಾದ್- ಮೆಹಬೂಬ್ನಗರ, ಹುಬ್ಬಳ್ಳಿ-ಅಂಕೋಲಾ-ಕಾರವಾರ, ಈ ಎಲ್ಲಾ ಕಡೆಗಳಲ್ಲಿ ಹೊಸ ಬ್ರಾಡ್ಗೇಜ್ ಮಾರ್ಗಗಳಿಗೆ ಆದೇಶ ನೀಡಿ ಸುಮಾರು 1220 ಕೋಟಿ ರೂಪಾಯಿಗಳ ಅನುದಾನವನ್ನೂ ನೀಡಿದರು. ಹುಬ್ಬಳ್ಳಿ-ಅಂಕೋಲ ರೈಲ್ವೇ ಮಾರ್ಗಕ್ಕೆ ಅನುಮೋದನೆ ನೀಡಿದರು, ಅದಕ್ಕಾಗಿ ಪ್ರತ್ಯೇಕ ಹಣ ಮೀಸಲಿಟ್ಟರು. ಇದಾದ ನಂತರಲ್ಲಿ ಇದರ ಕಾಮಗಾರಿಗೆ ಕೇಂದ್ರದಿಂದ ನಯಾಪೈಸೆ ಬಿಡುಗಡೆಯಾಗಲಿಲ್ಲ ಎಂಬುದು ಖೇದಕರ.
ಡಾ. ರಾಜ್ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿದ್ದು ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ 200 ಕೋಟಿ ರೂ ಕೊಟ್ಟಿದ್ದು, ಬೆಂಗಳೂರು ನಗರದ ಮೆಗಾಸಿಟಿ ಯೋಜನೆಗೆ ಅನುಮೋದನೆ ನೀಡಿದ್ದು, ಕಾವೇರಿಯ 9 ಟಿಎಂಸಿ ನೀರಿನ ಬಳಕೆಗೆ ಕ್ಲಿಯರೆನ್ಸ್ ಕೊಟ್ಟದ್ದು, ಸೀಬರ್ಡ್ ಯೋಜನೆಗೆ ಅನುಮೋದನೆ ನೀಡಿದ್ದು, ಒಪೆಕ್ ಆಸ್ಪತ್ರೆ ಮಾಡಲು, ಬೆಂಗಳೂರು ರಾಷ್ಟ್ರೀಯ ಕ್ರೀಡಾಕೂಟಕ್ಕೆ, ಕ್ರೀಡಾಂಗಣ, ವಸತಿ ಗೃಹ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು… ಇವೆಲ್ಲವನ್ನೂ ಮಾಡಿದ್ದು ಅದೇ ದೇವೇಗೌಡರು.. ಹೀಗೆ ತಾವು ಪ್ರಧಾನಿಯಾಗಿ ಕರ್ನಾಟಕದ ಪರವಾಗಿ ಒಂದಷ್ಟು ಕೆಲಸಗಳನ್ನು ಮಾಡಿದ ಕಾರಣಕ್ಕೆ ದೆಹಲಿಯಲ್ಲಿ ದೇವೇಗೌಡರನ್ನು “ಕರ್ನಾಟಕದ ಪ್ರಧಾನಿ” ಎಂದು ಹಂಗಿಸುವುದೂ ನಡೆಯಿತು. ಇದನ್ನು ಉಲ್ಲೇಖಿಸಿ ದೇವೇಗೌಡರು ಒಮ್ಮೆ ವೇದಿಕೆಯಲ್ಲಿ ಮಾತಾಡುತ್ತಾ, ನಾನು ಕರ್ನಾಟಕದಲ್ಲಿ ಹುಟ್ಟಲೇಬಾರದಿತ್ತೇನೋ ಎಂದು ನೋವಿನಿಂದ ನುಡಿದಿದ್ದರು. ನಂತರ ಇದೂ ಸಹ ದೊಡ್ಡ ಇಶ್ಯೂ ಆಗಿ ಟೀಕೆಗೆ ಒಳಗಾಗಿದ್ದರು.
ದೇವೇಗೌಡರು ದೇಶದ ಪ್ರಧಾನಿಯಾದದ್ದೇ ಒಂದು ಆಕಸ್ಮಿಕ. ಅಂದಿನ ರಾಜಕೀಯ ಸಂದರ್ಭಗಳೇ ಅವರಿಗೆ ಅಂತಹ ಅವಕಾಶ ಒದಗಿಸಿದ್ದು. ಅಂದು ರೂಪುಗೊಂಡ ಐಕ್ಯರಂಗದಲ್ಲಿ ಮುಖ್ಯವಾಗಿ ಎಡ ಪಕ್ಷಗಳ ಮುಖಂಡರು ದೇವೇಗೌಡರ ಬೆನ್ನಿಗೆ ನಿಂತಿದ್ದು ಇದಕ್ಕೆ ಕಾರಣ ಎನ್ನಬಹುದು. ಒಂದು ಅವಧಿಯನ್ನು ಪೂರೈಸಿದ್ದರೆ, ಅಥವಾ ಕನಿಷ್ಟ ಎರಡು ಮೂರು ವರ್ಷಗಳ ಕಾಲವಾದರೂ ಪ್ರಧಾನಿಯಾಗಿದ್ದರೆ ರಾಜ್ಯಕ್ಕೆ ಮತ್ತಷ್ಟು ಪ್ರಯೋಜನ ದೊರೆಯುತ್ತಿತ್ತು ಎಂಬುದು ನಿಜ. ಆದರೆ ಒಬ್ಬ ರಾಜಕಾರಣಿ ತನಗೆ ಸಿಕ್ಕ ಅಲ್ಪ ಅವಧಿಯಲ್ಲಿ ಏನು ಮಾಡಿದ್ದಾನೆ ಎಂಬುದೇ ಅವನ ಆಳ್ವಿಕೆಯ ಗುಣಮಟ್ಟಕ್ಕೆ ಅಳತೆಗೋಲಾಗುತ್ತದೆ. ಐದು ವರ್ಷದ ಅವಧಿಯನ್ನು ಮುಗಿಸಿ ಮತ್ತೊಂದು ಅವಧಿಯ ಎರಡು ವರ್ಷಗಳಾಗುತ್ತಾ ಬಂದಿದ್ದರೂ ಪುಗಸಟ್ಟೆ ಮಾತುಗಳನ್ನು ಬಿಟ್ಟರೆ ಏನನ್ನೂ ಕೊಡಲಾಗದ ಒಬ್ಬ ಪುಂಗಿದಾಸನಿಗೆ ಹೋಲಿಸಿದರೆ ನಮ್ಮ ದೇವೇಗೌಡರು ಸಾವಿರ ಪಾಲು ಉತ್ತಮವೆನ್ನಬಹುದು. ಪ್ರಧಾನಿಯಾಗಿ ದೇಶದ ಕೃಷಿಕರ ಹಿತವನ್ನು ಕಾಪಾಡಲು ಕೆಲ ಆಗ್ರೊ ಕಂಪನಿಗಳನ್ನು, ಕಾರ್ಪೊರೇಟ್ ದಣಿಗಳ ಪರವಾದ ರಾಜಕಾರಣಿಗಳನ್ನು, ಪಿ ಚಿದಂಬರಂ ತರದವನ್ನೂ ಎದುರು ಹಾಕಿಕೊಂಡದ್ದು ನೋಡಿದಾಗ “ಕನ್ನಡಿಗ ಪ್ರಧಾನಿ ದೇವೇಗೌಡರ” ಬಗ್ಗೆ ಬೇಸರ ಪಟ್ಟುಕೊಳ್ಳುವುದೇನೂ ಇಲ್ಲ.
ಪ್ರಧಾನಿ ಮೋದಿಯ ಭಟ್ಟಂಗಿತನವನ್ನೇ ಪರಮ ಧ್ಯೇಯವಾಗಿಸಿಕೊಂಡಿರುವ ಈ ಸೂಲಿಬೆಲೆ ಮಿಥುನ್ ಸೇಠ್ ಇಲ್ಲಿ ಬಹಿರಂಗಗೊಳಿಸಿರುವುದು ಪರಮ ಅಜ್ಞಾನವನ್ನಲ್ಲದೇ ಬೇರೆ ಏನನ್ನೂ ಅಲ್ಲ. ದೇಶದ ಮಹಾನ್ ಪುಂಗಿದಾಸನ ಬಗ್ಗೆ ಟನ್ ಗಟ್ಟಲೆ ಪುಂಗುವ ಸೂಲಿಬೆಲೆಯಂತ ಜೋಕರುಗಳಿಗೆ ಮೇಲಿನ ಸಂಗತಿಗಳೆಲ್ಲಾ ಅರ್ಥ ಆಗೋಕೆ ಸಾಧ್ಯವೇ ಇಲ್ಲ ಬಿಡಿ.
– ಹರ್ಷಕುಮಾರ್ ಕುಗ್ವೆ
(ಇಲ್ಲಿರುವ ಮಾಹಿತಿಗಳು ಸ್ವತಃ ದೇವೇಗೌಡರಿಂದ ಕೇಳಿ ತಿಳಿದುಕೊಂಡಂತವು)