ತಾರೀಕು: 22 ಜೂನ್ 2020

ರಿಗೆ:
*ಸನ್ಮಾನ್ಯ ಮುಖ್ಯ ಮಂತ್ರಿಗಳು,*
ಕರ್ನಾಟಕ ಸರ್ಕಾರ,
ಬೆಂಗಳೂರು

ಮಾನ್ಯ ಮುಖ್ಯಮಂತ್ರಿಗಳೇ,

*ವಿಷಯ:*
*ಈ ಕೆಳಗಿನ ಜನಪರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಕೋರಿ ಸಲ್ಲಿಸಿರುವ ಮನವಿ*

ರಾಜ್ಯದ ಜನತೆಯ ಹಿತವನ್ನು ಕಾಯುವ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕೆಳಗಿನ ಮೂರು ಜ್ವಲಂತ ಸಮಸ್ಯೆಗಳನ್ನು ತಮ್ಮ ಅವಗಾಹನೆಗೆ ತರುವ ಸಲುವಾಗಿ ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಹಲವು ತಾಲೂಕು ಕೇಂದ್ರಗಳಲ್ಲಿ ಹಕ್ಕೊತ್ತಾಯ ಪ್ರದರ್ಶನಗಳನ್ನು ನಡೆಸಿ ತಮಗೆ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ.

ಒಂದು)

*ವಿದ್ಯುತ್ ಬಿಲ್ ಮನ್ನಾ ಮಾಡುವುದು:*

ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸರಕಾರ ಘೋಷಿಸಿದ ನಾಲ್ಕು ಹಂತಗಳ ಲಾಕ್ ಡೌನ್ ಗೆ ರಾಜ್ಯದ ಜನತೆ ಸರ್ವ ಸಂಪೂರ್ಣ ಸಹಕಾರ ನೀಡಿದ್ದು ಅದನ್ನು ಯಶಸ್ವಿಗೊಳಿಸಿದ್ದಾರೆ. 76 ದಿವಸಗಳ ಲಾಕ್ ಡೌನ್ ಅವಧಿಯಲ್ಲಿ ಜನತೆ ತಮ್ಮ ಮನೆಯೊಳಗೇ ಇದ್ದು ಕೋವಿಡ್-19 ಸಾಂಕ್ರಾಮಿಕ ವಿರುದ್ಧ ದೃಢ ನಿಶ್ಚಯ ದ ಹೋರಾಟ ನಡೆಸಿದ್ದಾರೆ. 76 ದಿವಸಗಳಲ್ಲಿ ಜನತೆ ದುಡಿಮೆ ವ್ಯಾಪಾರ ಇಲ್ಲದೆ ಸಂಪಾದನೆ ಶೂನ್ಯರಾಗಿದ್ದರು. ಆಹಾರಕ್ಕಾಗಿ ಪರದಾಡುವಂತಹ ಸ್ಥಿತಿ ಒದಗಿತ್ತು. ಕೈಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದರು. ಇಂತಹ ಸಂಕಷ್ಟ ಸ್ಥಿತಿಯಲ್ಲಿದ್ದ ಜನತೆಗೆ ಇದೀಗ ವಿದ್ಯುತ್ ಬಿಲ್ ಎದುರಾಗಿದ್ದು ಇನ್ನಷ್ಟು ಹೊರೆಯನ್ನು ಹೇರಿದಂತಾಗಿದೆ. ಪ್ರತೀ ತಿಂಗಳು ಸಾಮಾನ್ಯವಾಗಿ ಬರುತ್ತಿರುವ ಬಿಲ್ ಗಿಂತಲೂ ದುಪ್ಪಟ್ಟು ಅಧಿಕ ಮೊತ್ತದ ಬಿಲ್ ಬಡ ಜನತೆಯ ಆರ್ಥಿಕ ಸಂಕಷ್ಟದ ಸ್ಥಿತಿಯನ್ನು ಅಣಕಿಸುತ್ತಿದೆ.
ಇದೀಗ ಕೆಲಸ ಕಾರ್ಯಗಳು ಸಹ ಪೂರ್ಣಪ್ರಮಾಣದಲ್ಲಿ ತೊಡಗಿರುವುದಿಲ್ಲ. ಹದಗೆಟ್ಟ ಆರ್ಥಿಕತೆಯು ಪುನಹ ಹಳಿಗೆ ಬರಲು ಇನ್ನೂ ಐದಾರು ತಿಂಗಳು ತಗುಲಲಿದ್ದು ಹಿಂದಿನ ಕರೆಂಟ್ ಬಿಲ್ಲನ್ನು ಪಾವತಿಸುವುದು ಖಂಡಿತ ಅಸಾಧ್ಯವಾಗಿರುತ್ತದೆ. ಸಂಪೂರ್ಣ ಲಾಕ್ ಡೌನ್ ಅವಧಿಯಾಗಿರುವ ಏಪ್ರಿಲ್ ಮತ್ತು ಮೇ ತಿಂಗಳ ವಿದ್ಯುತ್ ಬಿಲ್ಲನ್ನು ರಾಜ್ಯ ಸರಕಾರ ಮನ್ನಾ ಮಾಡಬೇಕು. ದೆಹಲಿ ಸರಕಾರ ವಿದ್ಯುತ್ ಬಿಲ್ ಮನ್ನಾ ಮಾಡಿದ ಮಾದರಿ ಇದೆ. ಕರ್ನಾಟಕ ಸರಕಾರ ಕೂಡ ಅದೇರೀತಿಯಲ್ಲಿ ಎರಡು ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಿ ರಾಜ್ಯದ ಬಡ, ಕೆಳ ಮಧ್ಯಮ ಹಾಗೂ ಕಾರ್ಮಿಕ ವರ್ಗಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಈ ಮೂಲಕ ಆಗ್ರಹಿಸುತ್ತಿದ್ದೇವೆ.

*ಎರಡು)*

*ರೈತ ವಿರೋಧೀ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ 2020 ಯನ್ನು ಹಿಂ ಪಡೆಯಿರಿ:*

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆ 2020 ಯು ರೈತ ವಿರೋಧಿಯಾಗಿದೆ. ಯಾಕೆಂದರೆ
ಬಂಡವಾಳಶಾಹಿಗಳು ಕೃಷಿಭೂಮಿಯನ್ನು ಖರೀದಿಸುವುದರಿಂದ ಈ ಕೆಳಗಿನ ಅಪಾಯ ಎದುರಾಗುತ್ತದೆ.

*೧)*
ಫಲವತ್ತಾದ ಕೃಷಿಭೂಮಿಯನ್ನು ಬಂಡವಾಳಶಾಹಿಗಳು ಖರೀದಿಸಿ ಕೈಗಾರಿಕೆಗಳನ್ನು ಹಾಗೂ ಆಗ್ರೋ ಕಂಪನಿಗಳನ್ನು ಸ್ಥಾಪಿಸುತ್ತಾರೆ. ಇದು ಸಣ್ಣ ರೈತರನ್ನು ಗುಲಾಮಗಿರಿಗೆ ತಳ್ಳಲು ಅಥವಾ ಗೇಣಿಯಡಿಯಲ್ಲಿ ಅಡಿಯಾಳಾಗಲು ಅವಕಾಶನೀಡುತ್ತದೆ. ಇದರಿಂದ ರೈತರು ಮತ್ತಷ್ಟು ಬಡತನ, ಬವಣೆ, ಸಂಕಷ್ಟಗಳ ಕೂಪಕ್ಕೆ ತಳ್ಳಲ್ಪಡುತ್ತಾರೆ.

*೨)*
ಈ ರೀತಿಯಾಗಿ ಭೂಮಿಯ ಖರೀದಿಯಿಂದ ಅದಾಗಲೇ ಸಾಲ ಸಂಕಷ್ಟದಲ್ಲಿರುವ ರೈತರು ಹಣದ ಆಸೆಯಿಂದ ತಮ್ಮ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಮಾರುತ್ತಾರೆ. ಇದರಿಂದಾಗಿ ಕೃಷಿ ಭೂಮಿಯು ಕಡಿಮೆಯಾಗುವುದು.

*೩)*
ಭೂಮಿಯನ್ನು ಕಳಕೊಂಡ ರೈತರು ಜಮೀನು ಮಾರಿ ಸಿಕ್ಕಿದ ಹಣವು ಖರ್ಚಾದ ನಂತರ ಜೀವನೋಪಾಯಕ್ಕಾಗಿ ನಗರದೆಡೆಗೆ ವಲಸೆ ಹೋಗಲು ಪ್ರಾರಂಭಿಸುತ್ತಾರೆ. ಅವರು ವಲಸೆ ಕಾರ್ಮಿಕರಾಗಿ, ಅತಂತ್ರರಾಗಿ ಬದುಕನ್ನು ನಡೆಸುತ್ತಾರೆ. ಇದು ಮತ್ತಷ್ಟು ಸಂಪತ್ತಿನ ಅಸಮತೋಲನ, ಅಭದ್ರ ಕಾರ್ಮಿಕ ಜೀವನ ಹಾಗೂ ಗುಣಮಟ್ಟ-ಸೌಲಭ್ಯ ರಹಿತ ಜೀವನಕ್ಕೆ ದಾರಿ ಮಾಡಿಕೊಟ್ಟಂತಾಗುವುದು.

*ಹಾಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಭೂಸುಧಾರಣೆಗಳ (ತಿದ್ದುಪಡಿ) ಕಾಯಿದೆ 2020 ನನ್ನು ತಕ್ಷಣದಿಂದ ರದ್ದುಗೊಳಿಸ ಬೇಕಾಗಿ ಈ ಮೂಲಕ ಆಗ್ರಹಿಸುತ್ತಿದ್ದೇವೆ.*

*ಮೂರು)*

ಕೋವಿಡ್ 19 ಸಾಂಕ್ರಾಮಿಕ ರೋಗಿಗಳ ಶುಶ್ರೂಷೆಗೆ ಖಾಸಗಿ ಆಸ್ಪತ್ರೆಗಳ ಬಿಲ್ ಗೆ ಸಂಬಂಧಿಸಿ ಅತ್ಯಂತ ದುಬಾರಿ ಶುಲ್ಕವನ್ನು ಸರಕಾರ ನಿಗದಿಪಡಿಸಿರುವುದು ಆಘಾತಕಾರಿಯಾಗಿದೆ. ಚಿಕಿತ್ಸಾ ವೆಚ್ಚವಾಗಿ ವಾರ್ಡಿಗೆ ದಿನವೊಂದಕ್ಕೆ ರೂಪಾಯಿ.10,000, ಆಕ್ಸಿಜನ್ ಚಿಕಿತ್ಸೆಗೆ 12,000, ಐಸಿಯುಗೆ ರೂ. 15, 000 ಹಾಗೂ ವೆಂಟಿಲೇಟರ್ ಗೆ ರೂ.25, 000 ನಿಗದಿಪಡಿಸಲು ಯೋಜಿಸುತ್ತಿರುವುದು ಬಡ ಹಾಗೂ ಕೆಳಮಧ್ಯಮ ವರ್ಗದ ಜನರಿಗೆ ಕೈಗೆಟುಕದ ಗಂಟಾದಂತಾಗಿದೆ.
ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಕ್ಕೆ ಸಮರ್ಪಕ ಚಿಕಿತ್ಸೆ ಲಭ್ಯವಿಲ್ಲದಿರುವಾಗ ಜನ ತಮ್ಮ ಜೀವ ಉಳಿಸಲು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗುತ್ತದೆ. ಆದರೆ ಸರಕಾರ ಅತ್ಯಂತ ದುಬಾರಿ ದರವನ್ನು ನಿಗದಿಪಡಿಸಿದರೆ ಕೋವಿಡ್ ಸಾಂಕ್ರಾಮಿಕ ಕ್ಕಿಂತಲೂ ಹೆಚ್ಚಿನ ಅತ್ಯಂತ ಭಯಾನಕತೆಯನ್ನು ಸೃಷ್ಟಿಸಿದಂತಾಗುತ್ತದೆ. ಹಾಗಾದರೆ ಇಂತಹ ಚಿಕಿತ್ಸೆ ಕೇವಲ ಶ್ರೀಮಂತರಿಗೆ ಮಾತ್ರ ಎಂಬುದು ಸರಕಾರದ ನಿಲುವೇ?. ಸಾಂಕ್ರಾಮಿಕ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಎಲ್ಲಾ ವರ್ಗದ ಜನ ಪ್ರೇರಣಾತ್ಮಕ ತ್ಯಾಗ ಮಾಡುತ್ತಿರುವಾಗ ಖಾಸಗಿ ಆಸ್ಪತ್ರೆಗಳು ಅದೇ ರೀತಿಯ ಕೊಡುಗೆ ನೀಡಬೇಕಲ್ಲವೇ? ಸಂಕಷ್ಟ ಪರಿಸ್ಥಿತಿಯ ಪ್ರಯೋಜನವನ್ನು ಪಡೆದುಕೊಂಡು ಲಾಭಗಳಿಸುವ ಖಾಸಗಿ ಆಸ್ಪತ್ರೆಗಳ ಆಗ್ರಹಕ್ಕೆ ಸರಕಾರ ಬಲಿಯಾಗಬಾರದು. ಅತ್ಯಂತ ಕನಿಷ್ಠ ದರದಲ್ಲಿ ಜನಸೇವೆಗೆ ಆಸ್ಪತ್ರೆಗಳು ಕಡ್ಡಾಯವಾಗಿ ಸಿದ್ಧವಾಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗಳ ಲಾಭಿಗೆ ಸರಕಾರ ಮಣಿಯಬಾರದು ಎಂದು ಈ ಮೂಲಕ ಸರಕಾರವನ್ನು ಆಗ್ರಹಿಸುತ್ತಿದ್ದೇವೆ.

ರಾಜ್ಯದ ಜನತೆಯ ಈ ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ಜೀವಿಸಬೇಕೆಂದು ಮತ್ತೊಮ್ಮೆ ಆಗ್ರಹಿಸುವುದರೊಂದಿಗೆ ಅವುಗಳನ್ನು ಈಡೇರಿಸುವಿರಿ ಎಂದು ಆಶಿಸುತ್ತೇವೆ.

*ಧನ್ಯವಾದಗಳು*

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ,
ಕರ್ನಾಟಕ