*_ಕರ್ನಾಟಕದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಇನ್ನೂ ಅನೇಕ ಅಭಿವೃದ್ಧಿ ಯೋಜನೆಗಳ ನಿರ್ಮಾತೃ… ದಲಿತ ಬಂಧು.. ದಲಿತ ರತ್ನ.. ದಲಿತ ಧ್ವನಿ.. ಶ್ರೀ ಎನ್.ರಾಚಯ್ಯ_*
▬▬▬▬▬ஜ۩۞۩ஜ▬▬▬▬▬

_ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸ ಪುಟಗಳಲ್ಲಿ ಸಿಡಿಲು ಗುಡುಗುಮಿಂಚಿನಂತೆ ಮಿಂಚಿ, ಮರೆಯಾದ ಧ್ರುವತಾರೆ, ದೇಶದ ಅತ್ಯುತ್ತಮ ಸಂಸದೀಯ ಪಟು, ಧೈರ್ಯಶಾಲಿ, ಚಿಂತನಾ ಶೀಲ, ಸಿಂಹವಾಣಿ, ಅಸ್ಪೃಶ್ಯರ ಧೀಮಂತ ನಾಯಕ, ಉತ್ತಮ ವಾಕ್ಪಟು, ದಕ್ಷ ಆಡಳಿತಗಾರ, ಸ್ವಾಭಿಮಾನಿ ರಾಜಕೀಯ ಚಕ್ರವರ್ತಿ, ರಾಜ್ಯದ ವಿಮೋಚನೆಗಾಗಿ ಹೋರಾಡಿದ ಕ್ರಾಂತಿಕಾರಿ ರಾಜಕಾರಣಿ, ಸವರ್ಣೀಯರಿಗೆ ಮತ್ತು ಸ್ಪೃಶ್ಯರಿಗೆ ಸಿಂಹ ಸ್ವಪ್ನವಾದ ಮಹಾನ್ ದಲಿತ ನಾಯಕ, ಪ್ರೀತಿ, ಸ್ನೇಹ, ವಿನಯಪೂರ್ವಕವಾಗಿಯೇ ಸರ್ವರನ್ನು ಗೌರವದಿಂದ ಕಂಡಂತಹ ದಲಿತೋದ್ದಾರ ಜನಮನದಲ್ಲಿ ಅಚ್ಚಳಿಯದೆ “ಎನ್.ಆರ್” ಎಂದೇ ನೆಲೆನಿಂತರು, ಅಂಬೇಡ್ಕರ್ ಮತ್ತು ಬಾಬೂ ಜಗಜೀವನ ರಾಮ್ ಜೊತೆ ನಿಕಟ ಸಂಪರ್ಕ ಮತ್ತು ಅವರ ತತ್ವ ಸಿದ್ದಾಂತಗಳನ್ನ ಮೈಗೂಡಿಸಿಕೊಂಡು ರಾಜಕೀಯ ನಡೆಸಿದ ಏಕೈಕ ಮಹಾ ನಾಯಕ ಹಾಗೂ ಬಾಬೂ ಜಗಜೀವನ ರಾಮ್ ರವರನ್ನು ಕರ್ನಾಟಕಕ್ಕೆ ಪರಿಚಯಿಸಿದ ಮೊದಲ ರಾಜಕೀಯ ಧುರೀಣ ಶ್ರೀ ಎನ್. ರಾಚಯ್ಯರವರು ರಾಜ್ಯದ ಸರ್ವರಿಗೂ ಚಿರಪರಿಚಿತರು._

_08-05-1920ರಲ್ಲಿ ಅಂದಿನ ಮೈಸೂರು ಭಾಗವಾಗಿದ್ದ ನಂಜನಗೂಡು ತಾಲ್ಲೂಕಿನ ತನ್ನ ತಾಯಿಯ ತವರೂರಾದ ನಗರ್ಲೆ ಗ್ರಾಮಾದಲ್ಲಿ ಜನಿಸಿದರು. ತಂದೆ ಮೈಸೂರು ಜಿಲ್ಲೆಯ ಟಿ‌. ನರಸೀಪುರ ತಾಲ್ಲೂಕಿನ ಗೋಪಾಲಪುರ ನಿವಾಸಿ ಮಾದಿಗರ ಯಜಮಾನ್ ನರಸಿಂಹಯ್ಯ ಮತ್ತು ಮಾದಮ್ಮ ಈ ದಂಪತಿಗಳಿಗೆ ಒಂಭತ್ತು ಜನ ಮಕ್ಕಳಲ್ಲಿ ಎನ್. ರಾಚಯ್ಯರವರು ಜ್ಯೇಷ್ಠಪುತ್ರರಾಗಿ ಜನಿಸಿದರು._

_ಎನ್. ರಾಚಯ್ಯರವರು ತಂದೆ ತಾಯಿಯ ಪ್ರೋತ್ಸಾಹದಿಂದ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನ ನಜರ್ ಬಾದಿನ ಡಿಪ್ರೆಸ್ಡ್ ಕ್ಲಾಸ್ ಹಾಸ್ಟೆಲ್ ಮುಗಿಸಿದರು, ನಂತರ ಮುಂದಿನ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬೆಂಗಳೂರಿನ ನರಸಿಂಹರಾಜ ಹಾಸ್ಟೆಲ್ ಹಾಗೂ ಬೆಂಗಳೂರಿನ ಮಾಗಡಿ ರಸ್ತೆಯ ಬಾಪೂಜಿ ವಿದ್ಯಾರ್ಥಿ ನಿಲಯದಲ್ಲಿ ಇದ್ದರೂ, ವಿದ್ಯಾರ್ಥಿದೆಸೆಯಿಂದಲೇ ಹೋರಾಟ ಮಾಡುತ್ತ, ಜೀವನೋಪಾಯಕ್ಕಾಗಿ ತಾವು ಶಿಕ್ಷಣ ಕಲಿತ ಶ್ರೀ. ದಿll ಚಿಕ್ಕ ಹನುಮಂತಯ್ಯ ಸ್ಥಾಪಿಸಿದ ಬಾಪೂಜಿ ಹಾಸ್ಟೆಲ್ಲಿನಲ್ಲಿ ನಿಲಯ ಪಾಲಕರಾಗಿ (ವಾರ್ಡನ್ ) ಕೆಲವು ಕಾಲ ಸೇವೆ ಸಲ್ಲಿಸಿದರು. ನಂತರ 1936ರಲ್ಲಿ ದಿll ಶ್ರೀ ಚಿಕ್ಕ ಹನುಮಂತಯ್ಯನವರೊಡನೆ ಬಹಳ ಅನ್ಯೋನ್ಯತೆಯಿಂದ ಜತೆಗೂಡಿ “ಆದಿಜಾಂಬವ ಅಭಿವೃದ್ಧಿ ಸಂಘ ಸ್ಥಾಪಿಸಿ” ಆ, ಸಂಘದ ಕಾರ್ಯದರ್ಶಿಗಳಾಗಿ ಆದಿಜಾಂಬವ ಜನಾಂಗದ ಕಷ್ಟ ಸುಖ ಆ ಸಮುದಾಯಗಳಿಗೆ ವಿಶೇಷ ಕಾರ್ಯಕ್ರಮ, ಕಾರ್ಯಗಾರಗಳ ಮೂಲಕ, ಜಾಂಬವ ಸಮುದಾಯವು ಸಂಘಟಿತವಾಗಬೇಕೆಂಬ ಅರಿವು ಮೂಡಿಸಿ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಿದರು._

_1940ರಲ್ಲಿ ಕೆ.ಇ.ಬಿ. ಇಲಾಖೆಯಲ್ಲಿ ಗುಮಾಸ್ತರಾಗಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡರು ಕಾರಣಾಂತರಗಳಿಂದ ಸರ್ಕಾರಿ ಕೆಲಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ “ಬಿ.ಎ.” ಪದವಿಯನ್ನು ಮುಗಿಸಿದರು ತದನಂತರ ಬೆಂಗಳೂರು ಸೆಂಟ್ರಲ್ ಲಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು, ನಂತರ ವಕೀಲ ವೃತ್ತಿಯನ್ನು ಆರಂಭಿಸಿದರು. ವೃತ್ತಿ ಧರ್ಮದ ಪ್ರೌಢತೆ ಯಿಂದಲೆ ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸಿ ಅಂದಿನ ರಾಜಕೀಯ ಮುತ್ಸದ್ದಿ ದಿll ಶ್ರೀ ಸಾಹುಕಾರ್ ಚೆನ್ನಯ್ಯನವರ ಸ್ನೇಹದೊಂದಿಗೆ ಜಿಲ್ಲಾ ಬೋರ್ಡ್ ಕಮಿಟಿ ಸದಸ್ಯರಾಗಿದ್ದರು. 1950ರಲ್ಲಿ ಮೈಸೂರಿನ ಪುರಸಭೆ ಚುನಾವಣೆಯಲ್ಲಿ ಜಲಪುರಿ ಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾಗಿ ಉಪಾಧ್ಯಕ್ಷರಾದ್ದರು._

_1952ರಲ್ಲಿ ಮೈಸೂರು ಜಿಲ್ಲೆಯ ಚಾಮರಾಜನಗರ ಲೋಕಸಭಾದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಜಯಗಳಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀ ಜವಾಹರಲಾಲ್ ನೆಹರೂ ರವರು, ಇಂದಿರಾಗಾಂಧಿ, ಶಂಕರ್ ದಾಯಳ್ ಶರ್ಮ, ಹಾಗೂ ಡಾ. ಬಾಬೂ ಜಗಜೀವನ ರಾಮ್ ರವರ ಜೊತೆ ಹೆಗಲು ಕೊಟ್ಟು ದುಡಿಯುವ ಸದಾವಕಾಶವನ್ನು ಪಡೆದುಕೊಂಡರು. “ಸಂಸತ್ತಿನ ನಿಯೋಗದ ಸದಸ್ಯರಾಗಿ” ಇಂಗ್ಲೆಂಡ್, ಜರ್ಮನಿ, ಸ್ವಿಟ್ಜರ್ ಲ್ಯಾಂಡ್ ಮುಂತಾದ ದೇಶಗಳ ಪ್ರವಾಸ ಮಾಡಿ ಅಲ್ಲಿನ ಜನರ ಜೀವನೋಪಾಯವನ್ನು ಮತ್ತು ಅಲ್ಲಿನ ವ್ಯವಸ್ಥೆಯನ್ನು ಸುಧೀರಮತಿಯಿಂದ ಅರಿತುಕೊಂಡು ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ “ಅಂಗನವಾಡಿ, ಪಶು ವೈದ್ಯಕೀಯ ಆಸ್ಪತ್ರೆ, ದಲಿತ ವಿದ್ಯಾರ್ಥಿ ನಿಲಯ” ಸ್ಥಾಪಿಸಿ. ಆ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾಗಿ ದಲಿತ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕೆ ನಾಂದಿಯಾಡಿದರು, ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ , ಆ ನಿಲಯವನ್ನು ಇನ್ನಷ್ಟು ಆತತಗೊಳಿಸಿ ದಲಿತ ಕುಟುಂಬಿಯಾಗಿ ಅನಂತ ಸೇವೆಯನ್ನು ಸಲ್ಲಿಸಿದರು ._

_1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀ ಎನ್. ರಾಚಯ್ಯರವರು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು ಸುಮಾರು 1959 ನೇ ಇಸವಿಯಲ್ಲಿ ಶ್ರೀ ಎನ್. ರಾಚಯ್ಯರವರು ಆಗಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ ಬಿ.ಡಿ.ಜತ್ತಿರವರ ಮಂತ್ರಿಮಂಡಲದಲ್ಲಿ ಸಮಾಜ ಕಲ್ಯಾಣ ಇಲಾಖೆ, ಅಬಕಾರಿ, ಮತ್ತು ಕೃಷಿ ಕ್ಯಾಬಿನೆಟ್ ಸಚಿವರಾಗಿಯೇ, ರಾಜ್ಯದ ದೀನದಲಿತರ ಸಿಂಹವಾಣಿಯಾಗಿ ಅಪಾರ ಸೇವೆ ಮಾಡಿ ಸವರ್ಣೀಯರು ನಾಚಿ ಹೆದರುವಂತೆ ಸುದೀರ್ಘ ನಿರ್ಣಯಗಳನ್ನು ಕೈಗೊಂಡಿದ್ದರು. ಅಸ್ಪೃಶ್ಯ ಸಮಾಜದ ಪರವಾಗಿ ಶಿಶುವಿಹಾರ, ಆಶ್ರಮ ಶಾಲೆಗಳು ವಿದ್ಯಾರ್ಥಿ ನಿಲಯಗಳು, ಹೊಲಿಗೆ ತರಬೇತಿ ಕೇಂದ್ರಗಳು ಮುಂತಾದವುಗಳನ್ನು ಸೃಷ್ಟಿಸಿ ಅದಕ್ಕಾಗಿ ಹೊಸ ಇಲಾಖೆ ಅಂದರೆ “ಸಮಾಜ ಕಲ್ಯಾಣ ಇಲಾಖೆ ” ಸೃಷ್ಟಿಕರ್ತರಾಗಿ ಅಸ್ಪೃಶ್ಯ ಸಮಾಜದ ಉತ್ತಮಜೀವನೋಪಾಯಕ್ಕಾಗಿ ಸಹಾಯಕರಾದರು._

_ಎನ್. ರಾಚಯ್ಯರವರು ಕೃಷಿಸಚಿವರಾಗಿದ್ದಾಗ ಬೆಂಗಳೂರಿನ ಹೆಬ್ಬಾಳು ಬಳಿ ಕೃಷಿ ಕಾಲೇಜು ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು. ಎನ್. ರಾಚಯ್ಯರವರು ರಷ್ಯಾ, ಜಪಾನ್, ಚೈನಾ, ಉಜ್ಬೇಕಿಸ್ತಾನ, ಕಜಾಕಿಸ್ತಾನ ಮುಂತಾದ ವಿದೇಶಗಳಿಗೆ ಪ್ರವೇಶ ಮಾಡಿ ಅಲ್ಲಿನ ಕೃಷಿ ಪದ್ದತಿಯನ್ನ ಅದೇ ರೀತಿ ಕರ್ನಾಟಕದಲ್ಲೂ ಕೃಷಿ ಪದ್ದತಿಯ ಜತೆಗೆ ಕೆಲವು ಬದಲಾವಣೆ ತಂದರು. “ಜಪಾನ್ ನಾಟಿ “, ಎಂಬ ಭತ್ತದ ಪೈರಿನ ನಾಟಿ ಪದ್ದತಿಯನ್ನ ಕರ್ನಾಟಕದಲ್ಲಿ ಪ್ರಸಿದ್ಧ ಗೊಳಿಸಿದ್ದರು. ಪಶುಸಂಗೋಪನೆ ಸಚಿವರಾಗಿದ್ದಾಗ ಹೋಬಳಿ, ತಾಲ್ಲೂಕು, ಜಿಲ್ಲಾ ಪಶುಸಂಗೋಪನೆ ಆಸ್ಪತ್ರೆ ಸ್ಥಾಪಿಸಿದರು. ಅಬಕಾರಿ ಸಚಿವರಾಗಿದ್ದಾಗ ತನ್ನ ಜನರ ಉಳಿವಿಗಾಗಿ ಶ್ರೀ ರಾಚಯ್ಯರವರು ಮಹತ್ತರ ಸಾಧನೆ ಮದ್ಯಪಾನ ವಿರೋಧ ಇವರ ಆಗ್ರಹಪೂರ್ಣ ಜತನದಿಂದ, ಕರ್ನಾಟಕದಲ್ಲಿ 1958 ರಿಂದ 1968 ರವರಿಗೆ 10 ವರ್ಷಗಳ ಕಾಲ ಮದ್ಯಪಾನ ನಿಷೇಧ ಮಾಡಿದ ಏಕೈಕ ಮಹಾ ನಾಯಕನೆಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು ._

_ಪ್ರಥಮ ವಿಧಾನಸಭೆ ಚುನಾವಣೆಯಲ್ಲಿ ರಾಚಯ್ಯರವರು ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ಬಾಬೂ ಜಗಜೀವನ ರಾಮ್ ರವರ ಆದೇಶ ಹಾಗೂ ಬೆಂಬಲದ ಮೇಲೆ ಬಂದರು. ಈ ರಾಜ್ಯದಲ್ಲಿ ದಲಿತರಲ್ಲಿ ಎಡ – ಬಲ ಎಂಬ ಭೇದ ತೊರೆದು ಸೋಸಲೆ ಎಂ. ಸಿದ್ದಯ್ಯ ರವರಿಗೆ ಲೋಕಸಭೆ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಟಿಕೆಟ್ ಕೊಡಿಸಿದರು. ನಂತರ ಮತ್ತೊಬ್ಬರಾದ ಸ್ವಜಾತಿಯವರೆ ಆದ ಎಂ.ಸಿ.ವೆಂಕಟೇಶ ರವರಿಗೆ ಟಿಕೆಟ್ ತಪ್ಪಿಸಿ ಎಂ. ಮಲ್ಲಿಕಾರ್ಜುನಸ್ವಾಮಿಗೆ ರವರಿಗೆ ಮಳವಳ್ಳಿ ಮೀಸಲು ಕ್ಷೇತ್ರದಿಂದ ಟಿಕೆಟ್ ಕೊಡಿಸಿ ದಲಿತ ಸಮನ್ವಯ ಸ್ನೇಹಿಯಾದರು. ತದನಂತರ ಆತ್ಮೀಯ ಶಿಷ್ಯ ಹಾಗೂ ಸ್ನೇಹಿತರಾದ ಬಿ. ಬಸವಲಿಂಗಪ್ಪ ರವರನ್ನು ಕರೆತಂದು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಟಿಕೆಟ್ ಕೊಡಿಸಿದರು. ನಂತರ ಭರಣಯ್ಯರವರನ್ನು ಕರ್ನಾಟಕ ಲೋಕಸೇವಾ ಆಯೋಗದ ಕಮೀಷನರನ್ನಾಗಿ ಆಯ್ಕೆ ಮಾಡಿ ಎಂದು ಅಂದಿನ ಮುಖ್ಯಮಂತ್ರಿಗಳಾದ ಬಿ.ಡಿ.ಜತ್ತಿಯವರಿಗೆ ನೇಮಿಸಿದರು ದಲಿತರಲ್ಲಿ ಭೇದಭಾವವಿಲ್ಲವೆಂದು ಜಗತ್ತಿಗೆ ತೋರಿಸಿಕೊಟ್ಟರು._

_1962ರ ಚುನಾವಣೆಯ ಕೆಲವು ಪಟ್ಟಭಧ್ರ ಹಿತ ಶಕ್ತಿಗಳ ಕುತಂತ್ರ ಮತ್ತು ಒಳಸಂಚಿನಿಂದ ಕಾಂಗ್ರೆಸ್ ಟಿಕೆಟ್ ವಂಚಿಸಿದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೋಸ ವಂಚನೆ ಅಪಪ್ರಚಾರದಿಂದ ನಂಬಿದವರ ನಂಬಿಕೆದ್ರೋಹದಿಂದ ಪರಾಜಿತಗೊಂಡರು , ತದನಂತರ 1962ರಲ್ಲಿ ಚಾಮರಾಜನಗರ ತಾಲ್ಲೂಕಿನ ಸಂತೆಮರಳ್ಳಿಯ ಮೀಸಲು ಕ್ಷೇತ್ರದಿಂದ 2ನೇ ಬಾರಿ ವಿಧಾನಸಭೆ ಪ್ರವೇಶಿಸಲು ಟಿಕೆಟ್ ಬಯಸಿದರು ಹೈಕಮಾಂಡ್ ಬಿ ಪಾರಂ ನ್ನು ಎನ್. ರಾಚಯ್ಯ ರವರಿಗೆ ನೀಡಿತ್ತು, ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪರವರ ರಾಜಕೀಯ ಕುತಂತ್ರದಿಂದ ಕೈತಪ್ಪಿಸಿದರು . ಎನ್. ರಾಚಯ್ಯರವರ ಸೇಡಿಗಾಗಿ ರಾಚಯ್ಯ ಹೆಸರುಳ್ಳವರನ್ನು ಹುಡುಕಿಸಿ “ಲಾ” ಓದುತ್ತಿದ್ದ ಬಿ.ರಾಚಯ್ಯ ರವರನ್ನು ಕರೆತಂದು ಬಿ ಪಾರಂ ನ್ನು ಬಿ. ರಾಚಯ್ಯರವರಿಗೆ ನೀಡಿದ್ದರು. ರಾಜಕೀಯದ ಏಳು -ಬೀಳುಗಳನ್ನು ಅರಿತಿದ್ದರಿಂದ, ಕಿಂಚಿತ್ತೂ ಖಿನ್ನರಾಗದೆ ಎನ್. ರಾಚಯ್ಯರವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವರು ಹಿಂದಿನ ಸಚಿವರಾಗಿದ್ದಾಗ ಮಾಡಿದ ಸಾಧನೆ ಮತ್ತು ಸೇವೆ ನೋಡಿ ಜನರನ್ನು ನಂಬಿ ನಿಂತರು ಆದರೆ ಅಂದಿನ ಮುಗ್ಧ ಜನರಿಗೆ ಅರ್ಥವಾಗದೆ ಮತ್ತು ನಿಜಲಿಂಗಪ್ಪರವರ ಕುತಂತ್ರದಿಂದ ಸೋಲಿಸಿದರು. ಬಿ.ರಾಚಯ್ಯರವರ ಆಯ್ಕೆಯಾಗಿ ನಿಜಲಿಂಗಪ್ಪರವರ ಸಂಪುಟದಲ್ಲಿ ಸೇರಿಕೊಂಡ ನಂತರ ಅಸ್ಪೃಶ್ಯರ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿತು. ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪರವರ ಬಿ.ರಾಚಯ್ಯರವರ ಮೂಲಕ ಅಸ್ಪೃಶ್ಯರಾದ ಎಡ -ಬಲ ಪ್ರಬೇಧ ಸೃಷ್ಟಿಸಲಾಯಿತು. ಈ ಎಡ – ಬಲ ನೀತಿಗೆ ಮೊದಲು ಬಲಿಯಾದವರು ಎನ್.ರಾಚಯ್ಯರವರು, ಆದರು ಎದೆಗುಂದದೆ ಮೌನವಾಗಿದ್ದರು._

_1971ರಲ್ಲಿ ಸೋಷಲಿಸ್ಟ್ ಪಾರ್ಟಿಯಿಂದ ರಾಜ್ಯದ ಪದವೀಧರ ಕ್ಷೇತ್ರದಿಂದ ಮೈಸೂರು ವಿಭಾಗ ಅಂದಿನ ಪಿ.ಎಸ್. ಪಾರ್ಟಿಯ ಅಧ್ಯಕ್ಷರಾದ ಶ್ರೀ ಶಾಂತವೇರಿ ಗೋಪಾಲಗೌಡರು ಬೆಂಬಲದಿಂದ ಫಿನೀಕ್ಸ್ ಪಕ್ಷಿಯಂತೆ ಮತ್ತೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು ಈ ಗೆಲುವು ಎನ್ ರಾಚಯ್ಯರವರಿಗೆ ರಾಜಕೀಯ ರಂಗದಲ್ಲಿ ಮತ್ತೆ ಪುನಶ್ಚೇತನವನ್ನಕೊಟ್ಟಿತು . ಗೆದ್ದ ನಂತರ ಮಳವಳ್ಳಿ ತಾಲ್ಲೂಕಿನಲ್ಲಿ ಅದ್ದೂರಿ ಸನ್ಮಾನವನ್ನು ಮಾಡಿದರು. 1971 – 72ರಲ್ಲಿ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಏರುಪೇರುಗಳಿಂದಾಗಿ ಕಾಂಗ್ರೆಸ್ ಇಬ್ಬಾಗವಾಗಿ, ಬಾಬೂ ಜಗಜೀವನ ರಾಮ್ ಜೀ ರವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು, ಪಿ.ಎಸ್.ಪಿ ಪಾರ್ಟಿ ಎಲ್ಲಾ ಸದಸ್ಯರು ಕಾಂಗ್ರೆಸ್ ಆರ್ ಪಕ್ಷಕ್ಕೆ ಸೇರಿಕೊಂಡರು ಬಳಿಕ 1973ರಲ್ಲಿ ರಾಜ್ಯದಲ್ಲಿ ದಿII ಡಿ. ದೇವರಾಜು ಅರಸುರವರು ಮುಖ್ಯಮಂತ್ರಿಗಳದ್ದರು ಅದೇ ಸಂಪುಟದಲ್ಲಿ ಎನ್. ರಾಚಯ್ಯ ರವರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸೂತ್ರ ಹಿಡಿದರು ನಾಡಿನ ಎಲ್ಲಾ ಪ್ರಗತಿಪರ ಕಾರ್ಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸಿ ಸರ್ವಜನಾಂಗದ ನಾಯಕರಾದರು._

_ಸಮಾಜ ಕಲ್ಯಾಣ ಸಚಿವರಾಗಿ ಹೊಸ ಅಧ್ಯಾಯವನ್ನು ನಿರ್ಮಿಸಿ ದಲಿತರ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಿದರು. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ನಿಗಮ ಎಂಬ ಸಂಸ್ಥೆಯನ್ನು ಸೃಷ್ಟಿಸಿ ಬಡವರಿಗೆ ರಿಯಾಯಿತಿ ಸಾಲ ಸೌಲಭ್ಯ ಮೂಲಕ ಆರ್ಥಿಕ ಉತ್ತೇಜನಕ್ಕೆ ರಹದಾರಿ ನಿರ್ಮಿಸಿದರು. ನಾಗರಿಕ ಹಕ್ಕು ಒತ್ತಾಯ ಸಮಿತಿಯನ್ನು ಸ್ಥಾಪಿಸಿ ರಾಜ್ಯದಲ್ಲಿ ಅಸ್ಪೃಶ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯ ತಡೆಯುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದರು._

_ಎನ್. ರಾಚಯ್ಯರವರು 1958 ರಿಂದ 1962 ರವರೆಗೆ 1973 ರಿಂದ 1976 ರವರೆಗೆ ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದ ಅಪಾರ ಸಾಧನೆ ಮಾಡಿರುವುದಕ್ಕೆ ಸಾಕ್ಷ್ಯಧಾರಗಳಿವೆ. ಎನ್. ರಾಚಯ್ಯರವರು ಪ್ರತಿ ಹಳ್ಳಿಗಳಿಗೂ ಅಂಗನವಾಡಿ ಸ್ಥಾಪನೆ, 290 ಶಿಶುವಿಹಾರಗಳು, 51 ಆಶ್ರಮ ಶಾಲೆಗಳು, 237 ವಿದ್ಯಾರ್ಥಿನಿಲಯಗಳು ಅದರಲ್ಲಿ 49 ವಿದ್ಯಾರ್ಥಿ ನಿಲಯ, 188 ವಿದ್ಯಾರ್ಥಿನಿಯರ ನಿಲಯ, 49 ಹೊಲಿಗೆ ತರಬೇತಿ ಕೇಂದ್ರಗಳು, 600 ಕಮ್ಮ್ಯೂನಿಟಿ ಸೆಂಟರ್ ಗಳು, 50 ಹಾಸ್ಟೆಲ್ ಕಟ್ಟಡ ಅದಲ್ಲದೇ 123 ಅಗ್ರಿಕಲ್ಚರ್ ಕಾಲೋನಿಗಳು, 200 ಕ್ರಾಫ್ ಕೋ ಆಪರೇಟಿವ್ ಸೊಸೈಟಿಗಳು ಸ್ಥಾಪಿಸಿದರು. ಇತಿಹಾಸದಲ್ಲಿ ನಾವು ಕಂಡ ನಾಯಕರಲ್ಲಿ ಅನೇಕರು ಸವರ್ಣೀರಲ್ಲಿ ತಮ್ಮ ಮನಸ್ಸನ್ನು ಒತ್ತೆಯಿಟ್ಟು ಅವರಿಗೆ ಅಪ್ರಿಯವಾದ ವಿಷಯ ಮಾಡಲಾಗಿದೆ ಜಾತಿವಾದಿಗಳ ಪಿತೂರಿಯಿಂದ ಅಧಿಕಾರದಲ್ಲಿ ಮುಂದುವರಿಯುತ್ತಾರೆ, ಮತ್ತು ಮೀಸಲಾತಿಯಿಂದ ಅಧಿಕಾರ ಪಡೆದು ಅಸ್ಪೃಶ್ಯರ ಬಗ್ಗೆ ದೃಢ ನಿಲುವು ತಾಳದೆ ಅಧಿಕಾರ ದರ್ಪದಲ್ಲಿ ಮರೆಯುತ್ತಾರೆ. ಆದರೆ ಎನ್. ರಾಚಯ್ಯರವರು ಈ ವಿಚಾರದಲ್ಲಿ ಅಪವಾದರಹಿತವಾಗಿದ್ದಾರೆ ._

_ಎನ್. ರಾಚಯ್ಯರವರು ಅಸ್ಪೃಶ್ಯರ ರಾಜಕಾರಣದಲ್ಲಿ ಅತಿ ಎತ್ತರದ ವ್ಯಕ್ತಿಯಾಗಿ ಕಾಣುತ್ತಾರೆ ಕ್ರಾಂತಿಕಾರಕ ಬದಲಾವಣೆಯನ್ನು ಸಂವಿಧಾನ ಬದ್ಧವಾಗಿ ಆಚರಣೆಗೆ ತರಲು ಯಾವುದೇ ಸಂಧಾನಗಳಿಗೆ, ಆಸೆ – ಆಮಿಷಕ್ಕೆ ಬಲಿಯಾಗದೆ ದರ್ಪ ದಬ್ಬಾಳಿಕೆಗಳಿಗೆ ಜಗ್ಗದ ನಿರ್ಭೀತಿಯಿಂದ ಬಡವರ ದೀನ ದಲಿತರ ಉತ್ತೇಜನಕ್ಕೆ ರೂಪಿಸಿದ ಹತ್ತು -ಹಲವು ಯೋಜನೆಗಳು, ಕಾರ್ಯಕ್ರಮಗಳು ಪ್ರಸ್ತುತ ಇಂದಿಗೂ ಅತ್ಯಂತ ವಾಸ್ತವರೂಪಿಯಾಗಿದೆ . 1974ರಲ್ಲಿ ದೇವರಾಜ ಅರಸು ಮಂತ್ರಿಮಂಡಲದ ಸಭೆಯಲ್ಲಿ ಇವರು ಮತ್ತೊಂದು ದಿಟ್ಟತನವು ಅವಿಸ್ಮರಣೀಯವಾದುದ್ದು ಸಂವಿಧಾನ 17ರಲ್ಲಿ ತಿದ್ದುಪಡಿ ಮಾಡಿ ಅದರಲ್ಲಿ ಸ್ಪೃಶ್ಯ ಸಮುದಾಯಗಳಾದ ಬೋವಿ, ಲಂಬಾಣಿ ಸಮುದಾಯವನ್ನ ಹಾವನೂರು ಆಯೋಗ ವರದಿಯಿಂದ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ನಿರ್ಣಯ ಕೈಗೊಂಡಿದ್ದರು ಆ ನಿರ್ಣಯವನ್ನು ಒಪ್ಪದ ಎನ್.ರಾಚಯ್ಯರವರು ಮಂತ್ರಿಮಂಡಲದಲ್ಲಿ ಜಗಳವನ್ನು ಮಾಡಿರುವ ಉದಾಹರಣೆಗಳು ವಿಧಾನಸಭೆ ಸಚಿವ ಸಂಪುಟದ ನಡವಳಿಯಲ್ಲಿ ದಾಖಲಾಗಿರುತ್ತದೆ._

_1977ರಲ್ಲಿ ಇಂದಿರಾಗಾಂಧಿ ಭಿನ್ನ ಮತದ ಕಾರಣ ಕಾಂಗ್ರೆಸ್ ತೊರೆದು ಬಾಬೂ ಜಗಜೀವನ ರಾಮ್ ಜೀ ರವರು ಸ್ಥಾಪಿಸಿದ ಕಾಂಗ್ರೆಸ್ ಪಾರ್ ಡೆಮಾಕ್ರಸಿ ಹೊಸ ಪಕ್ಷಕ್ಕೆ ಸೇರಿಕೊಂಡರು ಪಕ್ಷದ ರಾಜ್ಯಾಧಕ್ಷರಾದರು ಬಾಬೂಜಿ ಎಲ್ಲಿದ್ದಾರೋ.. ಅಲ್ಲಿ ಎನ್. ರಾಚಯ್ಯರವರು ಹಾಜರಿ ಎಂದೆನ್ನಿಸಿಕೊಂಡರು. 1977 – 78ರಲ್ಲಿ ನಡೆದ ಚುನಾವಣೆಯಲ್ಲಿ ದುರದೃಷ್ಟಕರ ರಾಜ್ಯದಲ್ಲಿ ಕಾಂಗ್ರೆಸ್ ಪಾರ್ ಡೆಮಾಕ್ರಸಿ ಪಾರ್ಟಿ ಸೋಲುಂಟಾಯಿತ್ತು. ಎನ್. ರಾಚಯ್ಯರವರು ಬಹಳ ನೊಂದರು ಕೊನೆ ದಿನಗಳಲ್ಲಿ ನನ್ನ ಜನಾಂಗದವರಿಗೆ ನ್ಯಾಯಯುತವಾದ ಸ್ಥಾನಮಾನ ದೊರೆಯಬೇಕಾದರೆ ಅವರನ್ನು ಇತರೆ ಅಸ್ಪೃಶ್ಯ ಜನಾಂಗದವರಿಂದ ಪ್ರತ್ಯೇಕಿಸಬೇಕು ನನ್ನ ಜನತೆಗೆ ಸಿಗಬೇಕಾದ ಸಾಮಾಜಿಕ ನ್ಯಾಯ ಸಿಗಬೇಕಾದ ಸಂಖ್ಯಾವಾರು ಪ್ರಾತಿನಿಧ್ಯಕ್ಕೆ ಹೋರಾಡಬೇಕು. 101 ಜಾತಿಗಳ ಪರಿಶಿಷ್ಟ ಪಟ್ಟಿಗೆ ಸೇರಿಸಿ ಮೀಸಲಾತಿಯ ಮೂಲ ಉದ್ದೇಶವೇ ನೆರವೇರದಂತೆ ನಡೆಯುತ್ತಿರುವ ವ್ಯವಸ್ಥೆಯನ್ನು ಬದಲಿಸಿ ತೀರ ಹಿಂದುಳಿದವರಿಗೆ ಮಾತ್ರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ನ್ಯಾಯ ಅವಶ್ಯವಾಗಿರುವಂತೆ ಮಾಡಬೇಕು ಅದಕ್ಕಾಗಿ ಹೋರಾಟ ಮಾಡಬೇಕು ಎಂದು ಅವಿರತವಾಗಿ ಚಿಂತಿಸಿದ್ದರು._

_11-01-1989ರಲ್ಲಿ ಎನ್. ರಾಚಯ್ಯರವರು ಸುದೀರ್ಘ 40 ಪುಟಗಳ ಒಂದು ವರದಿಯನ್ನು ತಯಾರಿಸಿ ಅಂದಿನ ರಾಷ್ಟಪತಿಗಳಾದ ದಿII ಶ್ರೀ ಜೈಪಾಲ್ ಸಿಂಗ್ ರವರಿಗೆ ರವಾನಿಸಿ ಒತ್ತಾಯ ಮಾಡಬೇಕೆಂದು, ನಮ್ಮ ಜನಾಂಗಕ್ಕೆ ಮೀಸಲಾತಿಯಿಂದ ವಂಚಿತರಾಗಿರುವುದನ್ನು ಹೇಳಿ ಅದಕ್ಕಾಗಿ ಒಳಮೀಸಲಾತಿಯನ್ನು ತರಬೇಕೆಂದು ಹೇಳಿದರು.” ಅಲ್ಲದೆ ಛಿದ್ರಗೊಂಡಿರುವ ನಮ್ಮ ಜನಾಂಗದ ಎಲ್ಲಾ ವರ್ಗಗಳ ಸಂಘಗಳನ್ನು ಸಂಘಟನೆ ಮಾಡಿ ಒಂದೇ ಬಾವುಟದಡಿಯಲ್ಲಿ ಹೋರಾಟ ಮಾಡಬೇಕೆಂದು ಹೇಳಿದರು. ಕೊನೆಯವರೆಗೂ ದಿಟ್ಟಹೋರಾಟ ನ್ಯಾಯ ಪರವಾಗಿ ಮುನ್ನುಗಿದ್ದ ಪೂಜ್ಯರು ಮೆದುಳಿನ ರಕ್ತಸ್ರಾವದ ಅನಾರೋಗ್ಯಕ್ಕೆ ತುತ್ತಾಗಿ ಏಪ್ರಿಲ್ 22 – 1989ರಲ್ಲಿ ಇಹಲೋಕಬಂಧನವನ್ನ ತೊರೆದರು. ಎನ್. ರಾಚಯ್ಯರವರು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ದಿಟ್ಟಹೆಜ್ಜೆ-ರಾಜಕೀಯ ಗುರುತು, ಕಾರ್ಯ ಸಾಧನೆ, ಕೋಟ್ಯಾಂತರ ಜನರ ಹೃದಯ ಮಂದಿರಗಳಲ್ಲಿ ಸ್ಥಿರವಾಗಿದೆ. ಇವರ ಕಾರ್ಯ ಸಾಧನೆ ಮುಂದಿನ ಪೀಳಿಗೆಗೆ ಧೀರೋದ್ದಾತ್ತ ನಾಯಕ ಗುಣದ ಹೆದ್ದಾರಿಯನ್ನ ಹಾಕಿಕೊಟ್ಟಿದ್ದಾರೆ . ಆ ಗುಣಗಳೆ ನಮ್ಮ ಸಮುದಾಯದ ಒಗ್ಗಟ್ಟಿಗೆ ಧುರ್ಯಸ್ತ್ರವಾಗಿದೆಂದು ತಿಳಿಸುತ್ತ ಅವರಿಗೆ ಕೃತಘ್ನತೆಯನ್ನು ಅರ್ಪಿಸುತ್ತೇನೆ._

*_✍ಕ್ರಿಶ್ ಮೌರ್ಯ, (ಕೃಷ್ಣಪ್ಪ)✍_*
_ಸಂಶೋಧನಾ ವಿದ್ಯಾರ್ಥಿ, ಮೈಸೂರು ._