#ಏಳು_ವರ್ಷ_ರೈಲು_ನಿಲ್ದಾಣದಲ್ಲಿ_ಮಲಗಿದ್ದಾತ_ಈಗ_ಜಿಲ್ಲಾಧಿಕಾರಿ!

ತನ್ನ 17ನೆಯ ವಯಸ್ಸಿಗೆ ರೈಲ್ವೆ ಇಲಾಖೆಯಲ್ಲಿ ಸಾಮಾನ್ಯ ಹುದ್ದೆಗೆ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಂಡು, ಮಲಗಲು ಕೊಠಡಿ ಇಲ್ಲದೇ, ಸ್ನಾನ ಮಾಡಲು ಸ್ನಾನಗೃಹ ಇಲ್ಲದೇ, ಪ್ಲಾಟ್‌ಫಾರಂನ ಮರದ ಬೆಂಚಿನಲ್ಲಿ ಮಲಗಿ, ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಸ್ನಾನ ಮಾಡಿ ದಿನಗಳನ್ನು ಕಳೆಯುತ್ತಿದ್ದರು. ಈಗ ಎಸಿ ಕೊಠಡಿಯಲ್ಲಿ ಇಡೀ ಜಿಲ್ಲೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮಾದರಿಯಾಗಿ ಪರಿವರ್ತಿಸಿ ಆದರ್ಶ ಅಧಿಕಾರಿ ಎನಿಸಿಕೊಂಡಿದ್ದಾರೆ. ಇರಲೊಂದು ಮನೆ, ಬೆಚ್ಚಗೆಯ ಹೊದಿಕೆ ಇಲ್ಲದೇ ಆರೇಳು ವರ್ಷಗಳನ್ನು ಕಳೆದು ಅದೊಂದು ದಿನ ಪ್ರವಾಹ ಪೀಡಿತರ ಸೇವೆಯಲ್ಲಿ ಕಂಡ ಸುಖದಿಂದ ಮಾಡಿದ ನಿರ್ಧಾರವೇ ಐಎಎಸ್!

ಹೀಗೆ ಸಾಧನೆಯ ಹಳಿಗಳ ಮೂಲಕ ಸಾಗಿ ಹೊಸ ನಿಲ್ದಾಣ ತಲುಪಿದವರೇ #ರೊನಾಲ್ಡ್_ರೋಸ್.
ಇವರು ತೆಲಂಗಾಣದ ಮೆಹಬೂಬಾ ನಗರ್ ಜಿಲ್ಲೆಯ ಜಿಲ್ಲಾಧಿಕಾರಿ. ಇವರು ಅಧಿಕಾರ ವಹಿಸಿಕೊಂಡ ಬಳಿಕ ಕ್ಷಿಪ್ರ ಪರಿವರ್ತನೆ ಎಂಬಂತೆ ಇಲ್ಲಿ ಅಭಿವೃದ್ಧಿಯಾಗಿದೆ. ಎಲ್ಲ ಮನೆಗಳಲ್ಲೂ ನೀರಿಂಗಿಸುವ ಗುಂಡಿ ತೋಡಲಾಗಿದೆ. ಇದರಿಂದಾಗಿ ಬೇಸಗೆಯ ಬರಗಾಲದಿಂದ ಕಂಗೆಡುತ್ತಿದ್ದ ಇಲ್ಲೀಗ ಕೊಳವೆ ಬಾವಿಗಳಲ್ಲಿ ಝಳಝಳಿಸುವ ನೀರಿನ ಧಾರೆಯ ಸೆಲೆಗಳು. ಹಸಿರು ಜಿಲ್ಲೆಯ ನಿರ್ಮಾಣಕ್ಕಾಗಿ ಹರಿತ ಹಾರಂ ಕಾರ್ಯಕ್ರಮದನ್ವಯ ಪ್ರತಿ ಜಿಲ್ಲೆಗೂ 40 ಸಾವಿರ ಗಿಡಗಳಂತೆ ನೀಡಿ 3.4 ಕೋಟಿ ಗಿಡಗಳನ್ನು ನೆಡಲಾಯಿತು. ಇದರ ಜವಾಬ್ದಾರಿ ಅಧಿಕಾರಿಗಳಿಗಷ್ಟೇ ಅಲ್ಲ ಗ್ರಾಮಸ್ಥರಿಗೂ ಇತ್ತು.

ತೆಲಂಗಾಣ ಕೇಡರ್‌ನ 2006ನೇ ಇಸವಿ ಬ್ಯಾಚಿನ ಐಎಎಸ್ ಅಧಿಕಾರಿಯಾದ ರೊನಾಲ್ಡ್ ರೋಸ್ ಸೇವಾರಂಭದ ವರ್ಷಗಳಲ್ಲಿ ಗುಡ್ಡಗಾಡು ಜನರ, ಬುಡಕಟ್ಟು ಜನರ ಅಭಿವೃದ್ಧಿಯಲ್ಲಿ, ಅವರ ನಿತ್ಯ ಬದುಕಿನ ಇಷ್ಟಗಳನ್ನು ಹೊಂದಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅದಾದ ಬಳಿಕ ಅವರು ಗ್ರೇಟರ್ ಹೈದರಾಬಾದ್‌ನ ಮಹನಾಗರ ಪಾಲಿಕೆಗೆ ಆಯುಕ್ತರಾಗಿ ನೇಮಕವಾದರು. ನಂತರ ನಿಜಾಮುದ್ದಿನ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನಿಯುಕ್ತರಾದರು.

ಜಿಲ್ಲಾಧಿಕಾರಿಯಾಗಿ ನೇಮಕವಾದ ಬಳಿಕ ಗ್ರಾಮೀಣ ಜನರ ಒಂದೊಂದೇ ಸಂಕಟಗಳ ಅರಿವಾಗತೊಡಗಿತು. ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಅಭಿವೃದ್ಧಿ ಕಾರ್ಯಗಳ ಕಡೆಗೆ ಒತ್ತು ನೀಡಲಾರಂಭಿಸಿದರು. ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಆಡಳಿತ ಯಂತ್ರವನ್ನು ಸಲೀಸಾಗಿ ಕೊಂಡೊಯ್ಯುವ ಕನಸಿದ್ದಿತು. ಆದರೆ ಗ್ರಾಮಸ್ಥರು ಆರಂಭದ ದಿನಗಳಲ್ಲಿ ಸ್ಪಂದಿಸಲಿಲ್ಲ. ಆಗ ಅವರಿಗೆ ಅಗತ್ಯವುಳ್ಳ ಮೂಲಭೂತ ಸೌಕರ್ಯ ನೀಡಿದರು. ಶೌಚಾಲಯ, ಸ್ವಚ್ಛತೆ, ಕುಡಿಯುವ ನೀರು, ಪೌಷ್ಠಿಕ ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ, ಕೃಷಿ ಹೀಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ ಮಹತ್ತರ ಸಾಧನೆಯ ಕಡೆಗೆ ಮುಖ ಮಾಡಿತು.

ನಾರಾಯಣಖೇಡ.
ತೆಲಂಗಾಣದಲ್ಲಿಯೇ ನೀರಿನ ಕೊರತೆ ಅತಿಹೆಚ್ಚು ಇರುವ ಪ್ರದೇಶ. ಬರಿಯ ಮೂರು ವಾರಗಳಲ್ಲಿ ಅಲ್ಲಿನ 50 ಸಾವಿರ ಜನರಿಗೆ ಕಾಲುವೆ ಮೂಲಕ ನೀರು ಹರಿಸಿದ ಕಾರಣ ಅಲ್ಲಿನ ಜನ ಈಗಲೂ ರೊನಾಲ್ಡ್ ಅವರನ್ನು ಆಧುನಿಕ ಭಗೀರಥ ಎಂದೇ ಕರೆಯುತ್ತಾರೆ.

2015ರಲ್ಲಿ ಮೇದಕ್ ಜಿಲ್ಲಾಧಿಕಾರಿಯಾಗಿ ವರ್ಗವಾದರು. ಅಲ್ಲಿ ಸಾವಯವ ಕೃಷಿಗೆ ಒತ್ತು ನೀಡಿ ಭೂಸಂಜೀವಿನಿ ಯೋಜನೆ ಜಾರಿಗೆ ತಂದರು. ಇದು ಕೇವಲ ಸಾವಯವ ಕೃಷಿಗಷ್ಟೇ ಒತ್ತಲ್ಲ, ಸ್ವ ಉದ್ಯೋಗಕ್ಕೂ ಆದ್ಯತೆಯಾಗಿತ್ತು. ಪ್ರತಿ ಗ್ರಾಮದ 50 ಜನ ಕನಿಷ್ಟ 1 ಎಕರೆ ಭೂಪ್ರದೇಶದಲ್ಲಿ ಸಾವಯವ ಬೆಳೆಯಬೇಕಿತ್ತು. ಇವರಿಗೆ ಪಂಚಗವ್ಯ, ಜೀವಾಮೃತ, ಎರೆಗೊಬ್ಬರವನ್ನು 50 ಶೇ. ಸಬ್ಸಿಡಿಯಲ್ಲಿ ನೀಡಲಾಗಿತ್ತು. ಇದರ ಫಲಿತಾಂಶ ಅದ್ಭುತವಾಗಿತ್ತು. ರೈತರ ಹೊಲಗದ್ದೆಗಳು ಹಸಿರಿನಿಂದ ನಳನಳಿಸಿದ್ದರೆ ಮುಖದಲ್ಲಿ ಮಂದಹಾಸ ಮಿನುಗಿತ್ತು. ಕಿಸೆಯಲ್ಲಿ ದುಡ್ಡು ಇಣುಕುತ್ತಿತ್ತು.

2016ರಲ್ಲಿ ಮೆಹಬೂಬ್‌ನಗರಕ್ಕೆ ಜಿಲ್ಲಾಽಕಾರಿಯಾದರು. ಹಿಂದಿನ ಅನುಭವದ ಆಧಾರದಲ್ಲಿ ಕೆಲಸ ಮುಂದುವರಿಸಿದರು. ಬಯಲುಶೌಚ ಮುಕ್ತ ಜಿಲ್ಲೆಯಾಗಿಸಿದರು. ಇದಕ್ಕಾಗಿ 16 ಮನೆಗೊಂದರಂತೆ ಪಂಚಾಯತ್ ಪಿಡಿಒಗಳು, ತಹಶೀಲ್ದಾರ್‌ರ 21 ವಿಶೇಷ ತಂಡಗಳನ್ನು ರಚಿಸಿದರು. ಶೌಚಾಲಯ ಕಟ್ಟುವವರಿಗೆ 12 ಸಾವಿರ ರೂ. ಸಹಾಯಧನ ಘೋಷಿಸಿದರು. ಪರಿಣಾಮ ಕೇವಲ 48 ಗಂಟೆಗಳಲ್ಲಿ 336 ಶೌಚಾಲಯಗಳನ್ನು ಕಟ್ಟಲಾಯಿತು. ಈ ಪ್ರಯೋಗ ನಂತರ ಜಿಲ್ಲೆಯ ವಿವಿಧೆಡೆ ಮುಂದುವರಿಸಿದರು.

ವಿಕಲಚೇತನ ಮಂದಿ ಡಿಸಿಯವರನ್ನು ಭೇಟಿಯಾಗಿ ತಮಗೂ ಸ್ವಂತ ಕಾಲಮೇಲೆ ನಿಂತು ಬದುಕುವ ಆಸರೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿದಾಗ ಸೋಲಾರ್ ಸಂಸ್ಥೆ ಜತೆ ಮಾತನಾಡಿ ಅಲ್ಲಿ ತರಬೇತಿ ಕೊಡಿಸಿದರು. ಇದರಿಂದಾಗಿ ಖಾಂಡಿ, ಇಸ್ನಾಪುರ್, ತೆಲ್ಲಾಪುರ್ ಗ್ರಾಮದ 14 ಮಂದಿ ವಿಕಲಚೇತನರು ಸೋಲಾರ್ ಉತ್ಪನ್ನಗಳನ್ನು ತಯಾರಿಸುವ ಸ್ವಂತ ಉದ್ಯಮ ಆರಂಭಿಸುವಂತಾಯಿತು. ಈ ದಿವ್ಯಾಂಗ ಸೊಸೈಟಿಯ ಸೋಲಾರ್ ಉತ್ಪನ್ನಗಳಿಗೆ ಬರುವ ಬೇಡಿಕೆಯಿಂದ ಸಂಸ್ಥೆ ಈಗ ಬಹಳ ದೊಡ್ಡದಾಗಿ ಬೆಳೆದಿದೆ. ಇನ್ನಷ್ಟು ಮಂದಿಗೆ ಉದ್ಯೋಗ, ತರಬೇತಿ ನೀಡುತ್ತಿದೆ.

ರೊನಾಲ್ಡ್ ರೋಸ್ ಅವರು ಸರಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ 5ನೇ ತರಗತಿ ವಿದ್ಯಾರ್ಥಿ ಬಳಿ ಮಗುವಿನ, ತಂದೆ-ತಾಯಿಯ ಹೆಸರು ಬರೆಯಲು ಹೇಳಿದಾಗ ಮಗುವಿಗೆ ಸಾಧ್ಯವಾಗಲಿಲ್ಲ. ಅಲ್ಲಿನ ಶಿಕ್ಷಣ ವ್ಯವಸ್ಥೆ ಅಷ್ಟು ಹದಗೆಟ್ಟಿತ್ತು. ತತ್‌ಕ್ಷಣ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಆಧುನಿಕ ಕ್ರಮಗಳನ್ನು ಕೈಗೊಂಡರು. ಕೊಲಂಬಿಯಾ ವಿವಿಯ ಪರಿಣತರು ಮುಂಬಯಿಯ ಕೊಲಂಬಿಯಾ ಗ್ಲೋಬಲ ಸೆಂಟರ್‌ನ ಡಾ| ನಿರುಪಮ್ ವಾಜಪೇಯಿ ಅವರ ನೇತೃತ್ವದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮುನ್ನುಡಿ ಬರೆದರು.

ಅಂದಹಾಗೆ ಇವರು ರೈಲು ನಿಲ್ದಾಣದಲ್ಲಿ ಮಲಗಿದ್ದು ಯಾವಾಗ ಅಂತೀರಾ?.

ದ್ವಿತೀಯ ಪಿಯುಸಿ ಮುಗಿದ ಕೂಡಲೇ 17 ವಯಸ್ಸಿನ ರೊನಾಲ್ಡ್ , ರೈಲ್ವೆ ಇಲಾಖೆಯ (ವೊಕೇಶನಲ್ ಕೋರ್ಸ್ ಫಾರ್ ರೈಲ್ವೆ ಕಮರ್ಷಿಯಲ್) ಪರೀಕ್ಷೆ ಬರೆದರು. ಅದರಲ್ಲಿ ಹುದ್ದೆಯೂ ಸಿಕ್ಕಿತು. ಹಾಗೆ ಹೊಸ ಕನಸುಗಳೊಂದಿಗೆ ಭಾರೀ ನಿರೀಕ್ಷೆಯಲ್ಲಿ ರೈಲೇರಿ ಕೆಲಸಕ್ಕೆ ಸೇರಲು ರೈಲೇರಿದರು. ರೈಲು ಹಳಿಗಳ ಮೇಲೆ ಚುಕುಬುಕು ಎಂದು ಸಾಗುತ್ತಿದ್ದಂತೆಯೇ ಹೊಸ ಹೊಸ ಬಣ್ಣ ಬಣ್ಣದ ಆಸೆಗಳು ಚಿಗುರುತ್ತಿದ್ದಾಗ ನಿದ್ದೆಗೆಲ್ಲಿದೆ ಜಾಗ. ಅಂತೂ ಇಂತೂ ಮಧ್ಯರಾತ್ರಿ ಕಳೆದ
2 ಗಂಟೆಗೆ ಕಡಲೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿನ ಸಿಬಂದಿಗೆ ಉದ್ಯೋಗ ನೇಮಕಾತಿ ಪತ್ರ ತೋರಿಸಿದಾಗ ಸರಿ ಬೆಳಗ್ಗೆ ಸ್ಟೇಶನ್ ಮಾಸ್ಟರ್ ಬಳಿ ಮಾತನಾಡಿ ಎಂದು ಹೇಳಿದರು. ಅಲ್ಲಿ ತನಕ? ಎಂದು ಕೇಳಿದಾಗ, ಪ್ಲಾಟ್‌ಫಾರಂನಲ್ಲಿ ಮರದ ಬೆಂಚಿನಲ್ಲಿ ಮಲಗಲು ಹೇಳಿದರು. ಹಾಗೆ ಆರಂಭಿಸಿದ ನನ್ನ ಔದ್ಯೋಗಿಕ ದಿನಗಳು ಕೆಲವು ವರ್ಷಗಳ ಕಾಲ ಅದೇ ರೀತಿ ಮುಂದುವರಿಯಿತು. ಸ್ಟೇಷನ್‌ನಲ್ಲೇ ನಿದ್ರೆ, ಅಲ್ಲೇ ಸ್ನಾನ, ಅಲ್ಲೇ ಊಟ ಎನ್ನುವ ರೊನಾಲ್ಡ್ 1999ನೆಯ ಇಸವಿ ನನ್ನ ಪಾಲಿಗೆ ಮಹತ್ತರವಾದುದು ಎನ್ನುತ್ತಾರೆ.

ಒಡಿಶಾದಲ್ಲಿ ಚಂಡಮಾರುತ ಊರಿಗೆ ಊರನ್ನೇ ಕೊಚ್ಚಿಕೊಂಡು ಹೋದಾಗ ಹಿರಿಯ ಅಧಿಕಾರಿಗಳು ನಾವೇಕೆ ಅಲ್ಲಿ ಸೇವೆ ಮಾಡಬಾರದು ಎಂದು ಕೇಳಿದರು. ಅದರಂತೆ ತೆರಳಿ ಅಲ್ಲಿನ ಪರಿಸ್ಥಿತಿ ನೋಡಿ ಪ್ರವಾಹಪೀಡಿತ ಕ್ಷೇತ್ರದಲ್ಲಿ ಸುತ್ತಾಡಿ ಆದ ನಾಶವನ್ನು ಕಂಡ ನಮಗೆ ಐಎಎಸ್ ಯಾಕೆ ಸೇರಬಾರದು ಎಂಬ ಯೋಚನೆ ಬಂತು. ಆದರೆ ಹೇಗೆ. ಅದಕ್ಕಾಗಿ ರೈಲ್ವೆ ಇಲಾಖೆಯಲ್ಲಿ ಇದ್ದುಕೊಂಡು ರಾತ್ರಿ 12 ಗಂಟೆಗೆ ಕೊನೆಯ ರೈಲು ಹೋದ ಬಳಿಕ ಕೌಂಟರ್ ಮುಚ್ಚಿ, ಲೆಕ್ಕಾಚಾರ ಪೂರೈಸಿ, ಬೆಳಗ್ಗೆ 4-5 ಗಂಟೆ ತನಕ ಅಭ್ಯಾಸ ಮಾಡಿ ದೂರ ಶಿಕ್ಷಣದಲ್ಲಿ ಪದವಿ ಪೂರೈಸಿದರು. ವಾರದ 2 ಕ್ಲಾಸಿಗೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. 4,500 ರೂ. ಸಂಬಳ ಪಡೆಯುತ್ತಾ, ನೇರ ಪರೀಕ್ಷೆ ಬರೆದು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ರೈಲ್ವೆ ಕೆಲಸ ಬಿಡದೇ 2006ರಲ್ಲಿ ಐಎಎಸ್ ಪರೀಕ್ಷೆ ಬರೆದರು. ದೇಶಕ್ಕೆ 104ನೇ ಸ್ಥಾನ ಪಡೆದರು.

ಸುಮ್ನೆ ಮಾಹಿತಿಗಾಗಿ ಹೇಳ್ತೇನೆ; ವರ್ಷದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸುವವರ ಸಂಖ್ಯೆ 8 ಲಕ್ಷ. ಅರ್ಹತೆ ಗಳಿಸುವವರು 12 ಸಾವಿರದಷ್ಟು. ಬೇಕಾಗುವ ಹುದ್ದೆಗಳು 800 ರಷ್ಟು ಮಾತ್ರ.

ಜಿಲ್ಲಾಧಿಕಾರಿಯಾಗಿ ಈ ಕಠಿನ ಪರಿಶ್ರಮವನ್ನು ಮುಂದುವರಿಸಿದರು. ದೇಶಕ್ಕೆ ಇನ್ನಷ್ಟು ಇಂತಹ ಅಧಿಕಾರಿ ಬೇಕೆಂಬ ಹಂಬಲ ಮೂಡುವಂತೆ ಮಾಡಿದರು.
-ಲಕ್ಷ್ಮೀ ಮಚ್ಚಿನ