ತಾ: 15 ಏಪ್ರಿಲ್ 2020

*ಮುಖ್ಯಮಂತ್ರಿಗಳಿಗೆ ಎಸ್ಡಿಪಿಐ ರಾಜ್ಯಾಧ್ಯಕ್ಷರ ಪತ್ರ*

(ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿಗಳ ಮೂಲಕ ಸಲ್ಲಿಸಲಾಗಿದೆ)

*ಶ್ರೀ ಬಿ. ಎಸ್. ಯಡಿಯೂರಪ್ಪನವರು, ಮಾನ್ಯ ಮುಖ್ಯಮಂತ್ರಿಗಳು,*
ಕರ್ನಾಟಕ ಸರ್ಕಾರ
ಬೆಂಗಳೂರು

ಸನ್ಮಾನ್ಯ ಮುಖ್ಯಮಂತ್ರಿಗಳೇ,

*ವಿಷಯ:*
*ಕೋವಿಡ್19 ಲಾಕ್ ಡೌನ್ ಸಂದರ್ಭ ನಮ್ಮ ಪಕ್ಷದ ವತಿಯಿಂದ ಪರಿಹಾರ ಚಟುವಟಿಕೆಯ ಬಗ್ಗೆ*

ನಮ್ಮ ಪಕ್ಷ ಎಸ್ಡಿಪಿಐ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್19 ಲಾಕ್ಡೌನ್ ಸಂದರ್ಭದಲ್ಲಿ ಬಡಜನರಿಗೆ ಮತ್ತು ನಿರ್ಗತಿಕರಿಗೆ ಆಹಾರ ಸಾಮಗ್ರಿಗಳ ವಿತರಣೆಯನ್ನು ನಾವು ಮಾಡುತ್ತಿದ್ದೇವೆ. ಲಾಕ್ಡೌನ್ ನ ಎಲ್ಲಾ ಶಿಷ್ಟಾಚಾರ ಮತ್ತು ಶಿಸ್ತುಗಳನ್ನು ಪಾಲಿಸಿಕೊಂಡು ನಾವು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಾನಿಗಳ ಸಹಕಾರದಿಂದ ಯಾವುದೇ ಭೇದಭಾವವಿಲ್ಲದೆ ನೆರವನ್ನು ಒದಗಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ.
ಅಧಿಕಾರಿಗಳ ಜೊತೆಗೆ ಉತ್ತಮ ಸಂಪರ್ಕ ಇರಿಸಿ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ.

ಆದರೂ ರಾಜ್ಯದ ಅನೇಕ ಕಡೆಗಳಲ್ಲಿ ಆಹಾರವಸ್ತುಗಳಿಗಾಗಿ, ನೆರವಿಗಾಗಿ ಮನವಿಗಳು ನಿರಂತರ ಬರುತ್ತಿವೆ. ತೀರಾ ಗ್ರಾಮೀಣ ಪರಿಸರಗಳಲ್ಲಿರುವವರು, ವಲಸೆ ಕಾರ್ಮಿಕರು ಹಾಗೂ ಊರಿಗೆ ಮರಳಲಾಗದೆ ಪರ ಊರುಗಳಲ್ಲಿ ಸಿಕ್ಕಿ ಹಾಕಿಕೊಂಡವರು ಅತ್ಯಂತ ಬವಣೆಗೀಡಾಗಿದ್ದಾರೆ. ಹಾಗಾಗಿ ಸರಕಾರ ಬಡವರಿಗೆ, ನಿರ್ಗತಿಕರಿಗೆ ಹಾಗೂ ಸಂಕಷ್ಟಗಳಲ್ಲಿರುವವರಿಗೆ ನಮ್ಮ ಪಕ್ಷದ ಕಾರ್ಯಕರ್ತರ ಮೂಲಕ ನೆರವು ನೀಡಲು ಅವಕಾಶಗಳನ್ನೊದಗಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.

ಕೋವಿಡ್ 19 ಸಾಂಕ್ರಾಮಿಕದ ಕಾರಣ ಗಲ್ಫ್ ರಾಷ್ಟ್ರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು ಉದ್ಯೋಗಕ್ಕಾಗಿ ತೆರಳಿದ ಗಲ್ಫ್ ಅನಿವಾಸಿ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಎಲ್ಲರೂ ತಮ್ಮ ರೂಮೊಳಗೆ ಸೀಮಿತವಾಗಿದ್ದಾರೆ. ಹಲವರು ಕೆಲಸವನ್ನು ಕಳೆದುಕೊಂಡಿದ್ದಾರೆ. ಇನ್ನೂ ಹಲವರು ತಮ್ಮ ಸಂಬಳದಲ್ಲಿ ಬಾರಿ ಕಡಿತವನ್ನು ಎದುರಿಸುತ್ತಿದ್ದಾರೆ. ಈವರೆಗೆ ಕೆಲಸವನ್ನು ಹುಡುಕುತ್ತಿದ್ದವರು ಹೇಳತೀರದ ಸಂಕಷ್ಟಕ್ಕೊಳಗಾಗಿದ್ದಾರೆ. ಅವರೆಲ್ಲರೂ ವಾಸದ ಕೋಣೆಗಳೊಳಗೆ ಕಿಕ್ಕಿರಿದು ತುಂಬಿರುವುದರಿಂದ ಅಲ್ಲಿನ ಅನಿವಾಸಿ ಕನ್ನಡಿಗರಿಗೆ ಮುಂಬರುವ ದಿನಗಳಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ, ಆಹಾರದ ಕೊರತೆ, ಮುಂತಾದ ಸಮಸ್ಯೆಗಳು ಎದುರಾಗಲಿವೆ. ಈಗಾಗಲೇ ಹಲವು ಮಂದಿ ಆಹಾರಕ್ಕಾಗಿ ಪರದಾಡುತ್ತಿರುವ ಸನ್ನಿವೇಶ ಎದುರಾಗಿದೆ. ಒಂದು ವೇಳೆ ಗಲ್ಫ್ ರಾಷ್ಟ್ರಗಳಲ್ಲಿ ಕೋವಿಡ್19 ಸಮಸ್ಯೆ ತೀವ್ರಗತಿ ಪಡೆದುಕೊಂಡರೆ ಅಲ್ಲಿ ಭಾರಿ ವೈದ್ಯಕೀಯ ತುರ್ತು ಸ್ಥಿತಿ ಎದುರಾಗುವ ಸಾಧ್ಯತೆಗಳಿವೆ.

ಕೆಲಸವೂ ಇಲ್ಲದೆ ಕೈಯಲ್ಲಿ ಹಣವೂ ಇಲ್ಲದೆ ಪರದಾಡುತ್ತಿರುವ ಹಲವು ಗಲ್ಫ್ ಕನ್ನಡಿಗರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ಮತ್ತು ವೀಸಾ ಮುಗಿದವರು ಊರಿಗೆ ಮರಳಲು ಕಾತರಿಸುತ್ತಿದ್ದಾರೆ. ವಿಮಾನಯಾನ ಸೌಲಭ್ಯವಿಲ್ಲದ ಕಾರಣಕ್ಕೆ ಅವರಿಗೆ ಊರಿಗೆ ಮರಳಲು ಸಾಧ್ಯವಿಲ್ಲದಂತಾಗಿದೆ. ಅತ್ತ ಅಲ್ಲೂ ಇರಲಾಗದೆ, ಇತ್ತ ಊರಿಗೂ ಬರಲಾಗದ ದೈನ್ಯ ಸ್ಥಿತಿ ನಿರ್ಮಾಣವಾಗಿದೆ.

*ತಮ್ಮಲ್ಲಿ ಆಗ್ರಹಿಸುವುದೇನೆಂದರೆ:*

1) ಅನಿವಾಸಿ ಕನ್ನಡಿಗರಲ್ಲಿ ಊರಿಗೆ ಬರಲಿಚ್ಛಿಸುವ ಮಂದಿಗೆ ರಿಯಾಯಿತಿ ದರದಲ್ಲಿ ವಿಮಾನಯಾನ ಸೌಲಭ್ಯ ಏರ್ಪಡಿಸುವ ಬಗ್ಗೆ ಕೇಂದ್ರ ಸರಕಾರವನ್ನು ರಾಜ್ಯ ಸರಕಾರ ಒತ್ತಾಯಿಸ ಬೇಕು.

2) ಕೇಂದ್ರ ಸರಕಾರವು ಗಲ್ಫ್ ರಾಷ್ಟ್ರಗಳೊಂದಿಗೆ ತತಕ್ಷಣ ಮಾತುಕತೆ ನಡೆಸಿ ಗಲ್ಫ್ ಕನ್ನಡಿಗರಿಗೆ ವಿಮಾನಯಾನ ಸೌಲಭ್ಯ, ಸೂಕ್ತ ವೈದ್ಯಕೀಯ ಸೌಲಭ್ಯ, ಕ್ವಾರಂಟೈನ್ ವ್ಯವಸ್ಥೆ ಹಾಗೂ ಆಹಾರ ಪೂರೈಕೆಯ ಖಾತರಿ ಹಾಗೂ ವ್ಯವಸ್ಥೆ ಮಾಡುವುದು.

3) ಊರಿಗೆ ಬರುವ ಗಲ್ಫ್ ಕನ್ನಡಿಗರನ್ನು ಕ್ವಾರಂಟೈನ್ ನಲ್ಲಿ ಉಳಿಸಿಕೊಳ್ಳಲು ರಾಜ್ಯದ ಹಲವು ಸಂಘಸಂಸ್ಥೆಗಳು, ಉದ್ಯಮಿಗಳು ಹಾಗೂ ದಾನಿಗಳಿಂದ ಕಟ್ಟಡಗಳನ್ನು ಉಚಿತವಾಗಿ ಪಡೆದು ವ್ಯವಸ್ಥೆ ಮಾಡುವುದು

4) ಗಲ್ಫ್ ನಿಂದ ಹಿಂದಿರುಗಿದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಸೂಕ್ತ ನೆರವನ್ನು ನೀಡುವುದು. ಈ ಬಗ್ಗೆ ಸಮಗ್ರ ಪ್ಯಾಕೇಜ್ ನ್ನು ಜಾರಿಗೆ ತರುವುದು.

5) ಗಲ್ಫ್ ಅನಿವಾಸಿ ಕನ್ನಡಿಗರ ಪರಿಸ್ಥಿತಿಯ ಸುಧಾರಣೆ, ನಿತ್ಯ ಅವಲೋಕನ ಹಾಗೂ ಸಂವಹನ – ಸ್ಪಂದನಕ್ಕಾಗಿ ರಾಜ್ಯ ಸರಕಾರದ ವತಿಯಿಂದ ಪ್ರತಿನಿಧಿಗಳನ್ನು ಎಲ್ಲಾ ಗಲ್ಫ್ ದೇಶಗಳಿಗೆ ನೇಮಿಸುವುದು

6) ರಾಜ್ಯದ ಸಚಿವರೊಬ್ಬರನ್ನು ನೇಮಿಸಿ ಈ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ವಿಶೇಷ ಜವಾಬ್ದಾರಿಯನ್ನು ನೀಡಿ ರಾಜ್ಯ ಸರಕಾರದಿಂದ ನಿಗಾ ವಹಿಸುವುದು.

ನಮ್ಮ ರಾಜ್ಯದ ಹಾಗೂ ನಮ್ಮ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಗಲ್ಫ್ ಕನ್ನಡಿಗರು ಮತ್ತು ಅನಿವಾಸಿ ಗಲ್ಫ್ ಭಾರತೀಯರ ಪ್ರಸಕ್ತ ಸಮಸ್ಯೆಗಳ ಬಗ್ಗೆ ಸರಕಾರಗಳು ಸೂಕ್ತವಾಗಿ ಸ್ಪಂದಿಸುವುದು ಮತ್ತು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ.

ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿಗಳು,

ಇಲ್ಯಾಸ್ ಮುಹಮ್ಮದ್ ತುಂಬೆ
ರಾಜ್ಯಾಧ್ಯಕ್ಷ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ,
ಕರ್ನಾಟಕ ರಾಜ್ಯ
7760 516 913