*ಸಹಜೀವನದ ಪ್ರಬಲ ಸಮರ್ಥಕ ಮೌಲಾನಾ ಮಹಮ್ಮದ್ ಸಿರಾಜುಲ್ ಹಸನ್ ನಿಧನ.*

*_ದೇಶದ ವಿವಿಧ ಸಮುದಾಯಗಳನ್ನು ಪರಸ್ಪರ ಹತ್ತಿರಕ್ಕೆ ತಂದು ಬೆಸೆಯಲು ಪ್ರಯತ್ನಿಸಿದ ಶ್ರೇಷ್ಠ ಮಾನವತಾವಾದಿ, ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ಅಧ್ಯಕ್ಷ ಮೌಲಾನಾ ಸಿರಾಜುಲ್ ಹಸನ್ ನಿಧನರಾದರು._*

ರಾಯಚೂರು, ಎ. 2- ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ಅಖಿಲಭಾರತ ಅಧ್ಯಕ್ಷರಾದ ಮೌಲಾನ ಮಹಮ್ಮದ್ ಸಿರಾಜುಲ್ ಹಸನ್ ಇಂದು (2 ಮಾರ್ಚ್ 2020 ) ಸಂಜೆಯ ವೇಳೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

1958 ರಿಂದ 1983 ರವರೆಗೆ ಜಮಾಅತೆ ಇಸ್ಲಾಮಿ ಹಿಂದ್’ನ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿದ್ದ ಅವರು 1983 ರಿಂದ 1992 ರವರೆಗೆ ಸಂಘಟನೆಯ ಅಖಿಲಭಾರತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ 1992 ರಿಂದ 2004ರವರೆಗೆ ಅವರು ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಅಖಿಲಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇದರ ಉಪಾಧ್ಯಕ್ಷರಾಗಿ ಸಮುದಾಯದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ, ವಿಚಾರಗಳ ನಡುವೆ ಸಮನ್ವಯ ಸಾಧಿಸಲು ಪ್ರಯತ್ನಿಸಿದರು. ವಿವಿಧ ಧರ್ಮಗಳ ನಡುವೆ ಸಂಬಂಧಗಳನ್ನು ಉತ್ತಮ ಪಡಿಸುವ ವೇದಿಕೆಯಾಗಿ ಇತರ ಧರ್ಮೀಯ ನಾಯಕರೊಂದಿಗೆ ಸೇರಿ ಧಾರ್ಮಿಕ್ ಮೊರ್ಚಾ ಸ್ಥಾಪಿಸುವಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದರು. ಜಸ್ಟೀಸ್ ತಾರ್ಕುಂಡೆ, ಪತ್ರಕರ್ತ ಕುಲದೀಪ್ ನಯ್ಯರ್, ಜೋನ್ ದಯಾಳ್ ಇವರುಗಳೊಂದಿಗೆ ಸೇರಿ ಮಾನವಹಕ್ಕು ಸಂಸ್ಥೆ FDCA (Forum for Democracy and Communal Amity) ಸಕ್ರಿಯ ಗೊಳಿಸಿದರು. ಅವರ ಅಧ್ಯಕ್ಷತೆಯ ಸಮಯದಲ್ಲಿ ಅವರ ಪ್ರೇರಣೆಯಿಂದ ಜಮಾಅತೆ ಇಸ್ಲಾಮಿ ಹಿಂದ್’ನ ಕಾರ್ಯಕರ್ತರು ದೇಶಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ಸಮಾಜಸೇವಾ ಸಂಸ್ಥೆಗಳನ್ನು ಸ್ಥಾಪಿಸಿದರು. ಅದರಲ್ಲಿ ಕರ್ನಾಟಕದ ಅನೇಕ ಶಿಕ್ಷಣ ಸಂಸ್ಥೆಗಳೂ ಸೇರಿವೆ.

ರಾಯಚೂರಿನ ಜವಳಗೆರೆಯ ಜಮೀನ್ದಾರರ ಮಗನಾಗಿ 1933 ಮಾರ್ಚ್ ಮೂರರಂದು ಜನಿಸಿದ ಸಿರಾಜುಲ್ ಹಸನ್ ಅವರಿಗೆ ರಾಯಚೂರಿನ ಮುಹಮ್ಮದ್ ಜಾಫರ್ ಮನಿಯಾರ್ ಅವರ ಮುಖಾಂತರ ಜಮಾಅತೆ-ಇಸ್ಲಾಮಿ ಹಿಂದ್ ನ ಪರಿಚಯವಾಗಿತ್ತು. ಅವರು ಮುಸ್ಲಿಮೇತರ ದೇಶ ಬಾಂಧವರೊಂದಿಗೆ ಒಲವಿನ ಹಾಗೂ ಸ್ನೇಹಮಯ ಸಂಬಂಧದ ಮಾದರಿಯ ಪರಂಪರೆಯನ್ನು ಹುಟ್ಟುಹಾಕಿದರು. ಹಿಂದೂ ಸ್ವಾಮೀಜಿಗಳು ಮತ್ತು ಕೈಸ್ತ ಧರ್ಮ ಗುರುಗಳೊಂದಿಗೆ ಅವರಿಗೆ ಬಹಳ ಆತ್ಮೀಯ ಸಂಪರ್ಕ ಇತ್ತು. ಮಾತ್ರವಲ್ಲ ಒಮ್ಮೆ ಯಾರನ್ನಾದರೂ ಭೇಟಿಯಾದರೆ ಮತ್ತೆ ಅವರ ಹೆಸರಿನೊಂದಿಗೆ ಗುರುತಿಸುವ ವಿಶಿಷ್ಟ ನೆನಪು ಶಕ್ತಿ ಇತ್ತು. ಅತ್ಯಂತ ಸರಳ ಜೀವನ ನಡೆಸುತ್ತಿದ್ದ ಅವರು ತಮ್ಮ ಸಂಘಟನಾ ಹೊಣೆಗಾರಿಕೆಯ ಅವಧಿಯಲ್ಲಿ ಸದಾ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.

ಸಾಮಾನ್ಯವಾಗಿ ಬೆಳಿಗ್ಗೆ ನಾಲ್ಕು ಗಂಟೆಗೆ ಅವರ ದಿನಚರಿ ಆರಂಭವಾಗುತ್ತಿತ್ತು. ತಹಜ್ಜುದ್ ನಮಾಝ್ ಮಾಡಿದ ಬಳಿಕ ಅವರು ತನ್ನ ಕಾರ್ಯಕರ್ತರಿಗೆ ಪೋಸ್ಟ್ ಕಾರ್ಡುಗಳನ್ನು ಬರೆಯುವ ರೂಢಿಯನ್ನು ಇಟ್ಟುಕೊಂಡಿದ್ದರು. ಮೂಲಕ ಮೊಬೈಲ್ ಇಲ್ಲದ ಹಿಂದಿನ ಕಾಲದಲ್ಲಿ ಇದು ಅವರ ಸಂಪರ್ಕ ಸಾಧನವಾಗಿತ್ತು. ಕಾರ್ಯಕರ್ತರೊಂದಿಗೆ ಪ್ರತ್ಯ ಪ್ರತ್ಯೇಕವಾಗಿ ಸಂಪರ್ಕವನ್ನು ಇಟ್ಟುಕೊಳ್ಳುವ ರೀತಿಯನ್ನು ಅವರು ಅನುಸರಿಸಿದ್ದರು. ಕಾರ್ಯಕರ್ತರು ನೇರವಾಗಿ ಅವರೊಂದಿಗೆ ಪೋಸ್ಟ್ ಕಾರ್ಡಿನಲ್ಲಿ ಸಂಪರ್ಕಿಸಬಹುದಿತ್ತು. ಕಾರ್ಯಕರ್ತರ ಪ್ರಶ್ನೆಗಳಿಗೆ ಅವರು ಕಾರ್ಡಿನ ಮೂಲಕ ಉತ್ತರಿಸುತ್ತಿದ್ದರು.

ಅವರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಉತ್ತಮ ಸಂಬಂಧ ಇತ್ತು. ಈ ಭಾಗದ ವಿವಿಧ ಪ್ರದೇಶಗಳಿಗೆ ಅವರು ಆಗಾಗ ಭೇಟಿ ಕೊಟ್ಟು ಜಮಾಅತೆ ಇಸ್ಲಾಮಿ ಹಿಂದ್’ನ ಬೆಳವಣಿಗೆಯಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದರು. ಅವರು ಸನ್ಮಾರ್ಗ ಪತ್ರಿಕೆ, ಅನುಪಮ ಮಾಸಿಕ ಮತ್ತು ಇಸ್ಮಿಕಗಳ ಕುರಿತಂತೆ ಬಹಳ ಅಭಿಮಾನವಿತ್ತು. ಅದರ ಅಭಿವೃದ್ಧಿಗಾಗಿ ಗಮನಹರಿಸಿದರು.

ಅವರು ಕೆಲವು ವಾರಗಳ ಹಿಂದೆ ಸ್ನಾನಗೃಹದಲ್ಲಿ ಬಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದ ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಿದ ಬಳಿಕ ಮೂರು ದಿನಗಳ ಹಿಂದೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪುನಃ ಮನೆಗೆ ಕರೆತರಲಾಗಿತ್ತು.

ಅವರು ಐವರು ಗಂಡು ಮಕ್ಕಳು ಮತ್ತು ಓರ್ವ ಮಗಳನ್ನು ಅಗಲಿದ್ದಾರೆ. ಅವರ ಪತ್ನಿ ಮತ್ತು ಓರ್ವ ಪುತ್ರ ಈ ಮೊದಲೇ ನಿಧನರಾಗಿದ್ದಾರೆ. ಅವರ ಓರ್ವ ಮಗ ವೈದ್ಯರಾಗಿದ್ದು, ಇನ್ನೋರ್ವ ಮಗ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಆಗಿ ನಿವೃತ್ತರಾಗಿದ್ದಾರೆ. ಅವರ ನಿಧನಕ್ಕೆ ದೇಶಾದ್ಯಂತ ತೀವ್ರ ಸಂತಾಪ ವ್ಯಕ್ತವಾಗಿದೆ.

(ಮಾಹಿತಿ ಕೃಪೆ : ಸನ್ಮಾರ್ಗ ಪತ್ರಿಕೆ)