ಪ್ರಿಯ ಸಂಗಾತಿಗಳೇ,

ಸಮತೆಯ ಕನಸು, ಅದರ ಸಾಕಾರಕ್ಕಾಗಿ ಹೋರಾಟ-ಸಭೆ-ಬರವಣಿಗೆ-ಚಟುವಟಿಕೆ ಎಲ್ಲದರಲ್ಲೂ ನಮ್ಮನಮ್ಮ ಸಮಯ-ಶಕ್ತಿ-ಮಿತಿಗೆ ಅನುಸಾರವಾಗಿ ತೊಡಗಿಕೊಂಡಿದ್ದೇವೆ. ಅಷ್ಟು ತೃಪ್ತಿ, ಅಷ್ಟು ಸಮಾಧಾನ, ಒಂದಷ್ಟು ಕಳವಳ, ಬಹಳಷ್ಟು ಕನಸು ನಮ್ಮೊಳಗೆ ಸರಿದಾಡುತ್ತಿದೆ…

ಇದೆ-ಇಲ್ಲಗಳ ನಡುವೆ ಹೇಗೋ ಬದುಕು ತೂಗಿಸುತ್ತಿದ್ದೆವು. ಅದರ ನಡುವೆ ಈಗ ಬಂದೆರಗಿರುವ ಕೋವಿಡ್-19 ವೈರಸ್ ವಿಶ್ವಪಿಡುಗಿನ ನಡೆಗಳು ಭಾರತದಲ್ಲಿ ಹೇಗಿರಲಿವೆಯೋ, ಏನಾಗಲಿದೆಯೋ ಖಚಿತವಾಗಿ ಯಾರೂ ಇನ್ನೂ ತಿಳಿದಿಲ್ಲ. ಅತಿ ಕಡಿಮೆ ಸೌಲಭ್ಯಗಳ ನಡುವೆ ಅತಿ ಹೆಚ್ಚು ಜನಸಂಖ್ಯೆಯನ್ನೂ, ಅತಿ ಹೆಚ್ಚು ರೋಗಿಗಳನ್ನೂ ನಿಭಾಯಿಸುತ್ತಿರುವ ಭಾರತದ ಆರೋಗ್ಯ ವ್ಯವಸ್ಥೆ ಬೃಹತ್ ಪ್ರಮಾಣದ ಕರೋನಾ ಪ್ರಕರಣಗಳು ಬಂದಲ್ಲಿ ನಿಭಾಯಿಸಲು ಅಸಮರ್ಪಕ ಎಂಬ ಭಯವಿದೆ. ಆದರೆ ಮುಂದೆ ಆಗಲಿರುವುದರಲ್ಲಿ, ದೊಡ್ಡ ಆಘಾತ ತಪ್ಪಿಸುವುದರಲ್ಲಿ ನಮ್ಮ ಪಾಲೂ ಇದೆ. ಅದು ರೋಗತಡೆವ ಪ್ರಯತ್ನಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ, ಆಗಿರುವುದಕ್ಕೆಲ್ಲ ವ್ಯಕ್ತಿ-ಪಕ್ಷ-ಪ್ರಭುತ್ವಗಳೇ ಕಾರಣವೆಂದು ದೂರುತ್ತ ಕೂತರೆ ಅದು ನಮ್ಮ ಹೆಗಲ ಜವಾಬ್ದಾರಿಯನ್ನು ಜಾರಿಸಿಕೊಳ್ಳುವ ಪ್ರಯತ್ನವಾಗುತ್ತದೆ.

ಹಾಗಾಗಿ ಸಂಗಾತಿಗಳೇ, ಎಲ್ಲರಲ್ಲಿ ಒಂದು ಮನವಿ:

ಮನೆಯಲ್ಲೇ ಇರೋಣ.. ಎಲ್ಲಿ ಇದ್ದೇವೋ ಅಲ್ಲಲ್ಲೇ ಇರೋಣ.. ಅತಿ ತುರ್ತು ಸಂಗತಿಯಲ್ಲದಿದ್ದರೆ ಕನಿಷ್ಟ ಎರಡು ವಾರ ಎಲ್ಲೂ ಹೋಗದೇ ಇರೋಣ.. ಎಲ್ಲರೂ ನಮ್ಮ ಚಲನೆ, ಭೇಟಿ, ಸಭೆಗಳನ್ನು ಕೆಲಕಾಲ ಮುಂದೂಡಿಕೊಳ್ಳೋಣ.
ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿ ತೊಡಗಿ ಸುಳ್ಳು ಸುದ್ದಿ ಹರಡದಂತೆ ಜಾಗೃತಿ ಮೂಡಿಸಲು ಸಹನೆಯಿಂದ ಪ್ರಯತ್ನಿಸೋಣ. .
ವೈದ್ಯಕೀಯವೂ ಸೇರಿದಂತೆ ಅಗತ್ಯ ಸೇವೆ ನೀಡುವವರು ರಜೆ ತೆಗೆದುಕೊಳ್ಳದೇ ದುಡಿಯೋಣ.
ಮನೆಯ ಹಿರಿಯರು ಮತ್ತು ಕಿರಿಯ ಸದಸ್ಯರ ಮೇಲೆ ಗಮನ ವಹಿಸೋಣ.. ನಮ್ಮ ಸುತ್ತಮುತ್ತ ಇರುವ ಅಸಹಾಯಕರ, ಸಂಪನ್ಮೂಲಗಳಿಲ್ಲದವರ ನೆನಪಿಸಿಕೊಂಡು ನೆರವಾಗೋಣ..
ಬದುಕು ಸರಳವಾಗಿಸಿಕೊಂಡರೆ ಇರುವುದು ಹೇಗೆ ಎಂದು ಲೋಕಕ್ಕೆ, ಬರುವ ತಲೆಮಾರಿಗೆ ತೋರಿಸಿಕೊಡೋಣ..
ಚಿಂತನ-ಮಂಥನ ಮಾಡೋಣ..ನಾಳೆಯ ಕನಸುಗಳ ಮೊಟ್ಟೆಗೆ ಕಾವು ಕೊಟ್ಟು ಮರಿಯಾಗಿಸಿ ಹಾರಿಸೋಣ..
ನಮ್ಮ ದೇಹವೆಂಬ ವಾದ್ಯವು ಹೊರಡಿಸುವ ಮೆಲು ದನಿ ಕೇಳಿಸಿಕೊಳ್ಳದೇ ಎಷ್ಟು ಕಾಲವಾಗಿದೆ?! ಕನಿಷ್ಟ ಈಗಲಾದರೂ ಆಹಾರ-ಆರೋಗ್ಯ-ನಿಸರ್ಗದ ಬಗೆಗೆ ಗಮನ ಹರಿಸೋಣ..
ಇಟ್ಟ ಹೆಜ್ಜೆಗಳ ತಿರುಗಿ ನೋಡಿಕೊಳ್ಳುತ್ತ ನಾಳಿನ ದಾರಿಯ ಕುರಿತು ಯೋಚಿಸೋಣ.
ಕೇಳದೇ ಉಳಿದ ಹಾಡು, ಓದದೇ ಬಿಟ್ಟ ಹೊತ್ತಗೆ, ಆಡದೇ ಉಳಿದ ಮಾತು, ಹಂಚಿಕೊಳ್ಳದೇ ಉಳಿದ ಕನಸುಗಳಿಗೆಲ್ಲ ರೆಕ್ಕೆ ಮೂಡಿವೆ, ಗಮನಿಸಿದಿರಾ? ಅವಸರದ ಬದುಕಿಗೆ ಅರ್ಧ ಮಾಡಿಬಿಟ್ಟ ಎಲ್ಲವನ್ನೂ ಪೂರ್ಣಗೊಳಿಸೋಣ.
ಉಗಾದಿಯ ಶುಭಾಶಯಗಳು..
ತುಂಬ ಪ್ರೀತಿ.
ಡಾ. ಎಚ್. ಎಸ್. ಅನುಪಮಾ