ಸಂಪಾದಕರ ಮೇಜಿನಿಂದ

ಉದಾರವಾದಿ ಆದರ್ಶಗಳ ಸಮಯಸಾಧಕ ಬಳಕೆ
ಗೋಪಾಲ್ ಗುರು

ಕೋಮುವಾದಿ iತ್ತು ಸಂಕುಚಿತ ಸಿದ್ಧಾಂತಗಳಿಗೂ ಹಾಗೂ ಉದಾರಾವಾದಿ ಆದರ್ಶಗಳಿಗೂ ಇರಬಹುದಾದ ಬೌದ್ಧಿಕ ಹಾಗೂ ನೈತಿಕ ಸಂಬಂಧಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೆಂಬುದು ಕುತೂಹಲದಾಯಕ ಸಂಗತಿಯಾಗಿದೆ. ಅರ್ಥವ್ಯಾಖ್ಯಾನದ ದೃಷ್ಟಿಯಿಂದಲೂ ಹಾಗೂ ನೈತಿಕ ದೃಷ್ಟಿಕೋನದಿಂದಲೂ ಅವೆರಡೂ ಪರಸ್ಪರ ವಿರುದ್ಧವೆಂದು ವಾದಿಸಬಹುದಾಗಿದೆ. ಒಂದು ಕೋಮುವಾದಿ ದೃಷ್ಟಿಕೋನವು ಸಮಾಜದ ಬಗ್ಗೆ ಸರ್ವಸಹಜ ಮತ್ತು ಸಾಮಾಜಿಕ ಗ್ರಹಿಕೆಯನ್ನು ಕೊಡಬಲ್ಲ ಬೌದ್ಧಿಕ ಸಾಮರ್ಥ್ಯವನ್ನು ಹೊಂದಿಲ್ಲವೆಂದೂ ಸಹ ಹೇಳಬಹುದು. ಬಲಪಂಥೀಯರ ಅಥವಾ ಕೋಮುವಾದಿ ದೃಷ್ಟಿಕೋನದ ಈ ಅಸಮರ್ಥತೆಯನ್ನು ಆ ದೃಷ್ಟಿಕೋನವನ್ನು ಎತ್ತಿಹಿಡಿಯುವವರು ಸಮಾಜದ ವಾಗ್ವಾದಗಳ ಬಗ್ಗೆ ಹಾಗೂ ಸಮಾಜಕ್ಕೆ ನೈತಿಕ ದೃಕ್ಪಥವನ್ನು ಒದಗಿಸುವಲ್ಲಿ ತೋರುವ ಅನಾಸಕ್ತಿಯ ಮೂಲಕವೂ ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ ಅಂತಹ ದೃಷ್ಟಿಕೋನವು ಸಾಮಾಜಿಕ ವಾಸ್ತವತೆಯ ಭಾಗವಾಗಿರುವ ಜಾತಿ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಯಾವುದೇ ಆಸಕ್ತಿ ತೋರುವುದಿಲ್ಲವಾದ್ದgಂದ ಜಾತಿ ತಾರತಮ್ಯವನ್ನು ಒಳಗೊಂಡಿರುವ ಸಾಮಾಜಿಕ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವಲ್ಲೂ ಸೋಲುತ್ತದೆ. ಈ ಬಗೆಯ ದೃಷ್ಟಿಕೋನಗಳಿಗೆ ಸಮಾಜವನ್ನು ಅದರ್ಶರೂಪದಲ್ಲಿ ಪುನರ್ ಸಂಘಟಿಸಬೇಕೆಂಬ ಉದ್ದೇಶವೇ ಇಲ್ಲದಿರುವುದರ ಪರಿಣಾಮದಿಂದಾಗಿ ಅದು ಸರ್ವಸಹಜ ಗ್ರಹಿಕೆಯನ್ನು ಪಡೆದುಕೊಳ್ಳುವಲ್ಲೂ ಅಸಮರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೋಮುವಾದಿ ದ್ರುಷ್ಟಿಕೋನಗಳಿಗೂ ಮತ್ತು ಉದಾರವಾದಿ ಆದರ್ಶಗಳಿಗೂ ಇರಬಹುದಾದ ಸಂಬಂಧವನ್ನು ಹುಡುಕುವುದು ಅತ್ಯಂತ ಆಸಕ್ತಿದಾಯಕವಾಗಿರುತ್ತದೆ.

ಕೋಮುವಾದಿ/ಸಂಕುಚಿತ ದೃಷ್ಟಿಕೋನಗಳು ಉದಾರವಾದಿ ಆದರ್ಶಗಳೊಂದಿಗೆ ಸದಾ ಸಂಘರ್ಷದಲ್ಲಿರುತ್ತದೆಯೇ ಎಂಬುದು ಈ ಸಂದರ್ಭದಲ್ಲಿ ಕೇಳಬೇಕಿರುವ ಅತ್ಯಂತ ಕೀಲಕ ಪ್ರಶ್ನೆಯಾಗಿದೆ. ಈ ಪ್ರಶ್ನೆಯನ್ನು ಸುದೀಪ್ತಾ ಕವಿರಾಜ್ ಅವರು ತಮ್ಮ ಧರ್ಮನಿರಪೇಕ್ಷಕತೆಯ ಭಾಷೆಗಳು ಎಂಬ ಒಳನೋಟಗಳಿಂದ ತುಂಬಿತುಳುಕುವ ತಮ್ಮ ಲೇಖನದಲ್ಲಿ ಉತ್ತರಿಸಿದ್ದಾರೆ. (ಎಕಾನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ೧೪ ಡಿಸೆಂಬರ್ ೨೦೧೩). ಭಾರತದ ರಾಜಕೀಯದ ಎರಡು ಉದಾರವಾದ ವಿರೋಧೀ ಧಾರೆಗಳಾದ ಎಡವಾದ ಮತ್ತು ಹಿಂದೂ ಬಲಪಂಥೀಯತೆಗಳು ಉದಾರವಾದದ ವಿರುದ್ಧ ತಮ್ಮ ವೈಷಮ್ಯವನ್ನು ಕಡಿಮೆ ಮಾಡಿಕೊಳ್ಳುತ್ತಾ ಕ್ರಮೇಣವಾಗಿ ಅದನ್ನು ತಮ್ಮ ಉದ್ದೀಶ್ಯ ಸಾಧನೆಗಾಗಿ ಸಾಧನವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದವು ಎಂದು ಕವಿರಾಜ್ ವಾದಿಸುತ್ತಾರೆ. ಈ ಪ್ರಮುಖವಾದ ತಿಳವಳಿಕೆಯ ನೆಲೆಯನ್ನು ವಿಸ್ತರಿಸಿ ಹೇಳುವುದಾದರೆ, ಈ ಬದಲಾದ ಗ್ರಹಿಕೆಯ ಪರಿಣಾಮವಾಗಿ, ಭಾರತದ ಎಡವಾದಿಗಳು ಸಂವಿಧಾನದಲ್ಲಿರುವ ಉದಾರವಾದಿ ಆದರ್ಶಗಳನ್ನು ಹೆಚ್ಚೆಚ್ಚು ಬೆಂಬಲಿಸಲು ಪ್ರಾರಂಭಿಸಿದರೆಂದು ಹೇಳಬಹುದು. ಪ್ರಾಯಶಃ ಇದು ಎಡಪಂಥೀಯರ ಕ್ರಾಂತಿಕಾರಿ ರಣತಂತ್ರವು ಹೇಳುವ ಎರಡು ಹೆಜ್ಜೆ ಹಿಂದೆ ಸರಿಯುವ ತಂತ್ರದ ಭಾಗವೆಂದು ಪರಿಗಣಿಸಲು ಸಾಧ್ಯವಿರುವುದರಿಂದ ಇದು ಬೌದ್ಧಿಕವಾಗಿ ಅಷ್ಟೊಂದು ಆಸಕ್ತಿಯನ್ನು ಹುಟ್ಟಿಸುವ ಬೆಳವಣಿಗೆಯೇನಲ್ಲ.

ಕವಿರಾಜ್ ಅವರು ತಮ್ಮ ಪ್ರಬಂಧದಲ್ಲಿ ಉಲ್ಲೇಖಿಸುವ ಮತ್ತೊಂದು ಪ್ರಮುಖ ಸಂಗತಿಯು ಅತ್ಯಂತ ಆಸಕ್ತಿದಾಯಕವಾಗಿದೆ. ಈ ಹೊಸ ಬೌದ್ಧಿಕ ಸಂಕಥನಗಳ ವಿಶ್ವದಲ್ಲಿ ಹಿಂದೂ ರಾಷ್ಟ್ರೀಯವಾದವು ತನ್ನನ್ನು ಸ್ಥಾಪಿಸಿಕೊಳ್ಳುವ ದಾರಿಯೊಂದನ್ನು ಹುಡುಕಿಕೊಂಡಿತು. ಅಂತಹ ಭಾಷೆಯು ಜಾತಿ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಕಟ್ಟುವ ಆಶಯಗೊಂದಿಗೆ ಸ್ಪರ್ಧಿಸಬೇಕಿತ್ತು ಹಾಗೂ ತಾರತಮ್ಯವನ್ನು ವಿರೋಧಿಸುವ ಭಾಷೆಯಲ್ಲಿ ತಮ್ಮ ದೃಷ್ಟಿಕೋನವನ್ನು ಪ್ರಕಟಗೊಳಿಸಿಕೊಳ್ಳುವ ಜರೂರಿತ್ತು. ಎಂದು ಕವಿರಾಜ್ ಅವರು ಹೇಳುತ್ತಾರೆ. ಹಿಂದೂ ರಾಷ್ಟ್ರೀಯವಾದಿಗಳು ತಾವು ಹೇಗೆ ತಾರತಮ್ಯಕ್ಕೊಳಗಾಗಿದ್ದೇವೆ ಎಂದು ಸಾಬೀತು ಪಡಿಸಲು ಎರಡು ಬಗೆಯ ತಂತ್ರಗಳಿಗೆ ಮೊರೆ ಹೋದರು. ಮೊದಲು ಅವರು ಅದನ್ನು ಮುಸ್ಲಿಮರಿಂದ ಎದುರಿಸಬೇಕಾದ ಆತಂಕ ಎಂಬ ರೀತಿಯಲ್ಲಿ ವಿವರಿಸಿದರು. ಆದರೆ ಬಹುಸಂಖ್ಯಾತ ಮುಸ್ಲಿಮರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವಾಸ್ತವದೆದುರು ಈ ಪ್ರತಿಪಾದನೆ ನಿಗೂಢವಾಗಿ ಕಂಡಿತು. ಎರಡನೆಯದಾಗಿ ಕೆಳಜಾತಿಗಳು ಅದರಲ್ಲೂ ದಲಿತರು ಎದುರಿಸುತ್ತಿರುವ ತಾರತಮ್ಯಗಳಿಗೆ ಸದೃಶವಾಗಿ ಈ ತಾರತಮ್ಯವನ್ನು ಸಹ ವಿವರಿಸಲು ಹಿಂದೂ ರಾಷ್ಟ್ರೀಯವಾದಿಗಳು ಪ್ರಾರಂಭಿಸಿದರು. ಒಂದು ವೇಳೆ ದಲಿತರ ಮೇಲಿನ ತಾರತಮ್ಯವನ್ನು ವಿವರಿಸುವ ವಾದಗಳು ಸಮರ್ಥನೀಯವಾದರೆ ತಮ್ಮ ವಾದಗಳೂ ಸಹ ಸಮರ್ಥನೀಯವೆಂದು ಪ್ರತಿಪಾದಿಸುವ ಹಿಂದೂ ರಾಷ್ಟ್ರೀಯವಾದಿಗಳ ಅತಿ ಸರಳೀಕೃತ ಪ್ರತಿಪಾದನೆಯನ್ನು ಕವಿರಾಜ್ ಗುರುತಿಸುತ್ತಾರೆ. ಈ ಸಮರ್ಥನಾ ವ್ಯಾಖ್ಯಾನಗಳ ಮುಂದುವರೆಕೆಯಾಗಿಯೇ ತಮ್ಮ ಉದಾರವಾದಿ ವಿರೋಧಿ ಗುರಿಗಳಿಗೆ ಉದಾರವಾದಿ ಆದರ್ಶದ ಶಕ್ತಿಯನ್ನು ಬಳಸಿಕೊಂಡರು.

ದಲಿತರು ಮತ್ತು ಹಿಂದುಳಿದ ಜಾತಿಗಳು ಹೇಳುವ ಐತಿಹಾಸಿಕ ಅನ್ಯಾಯಗಳ ದೂರುಗಳಂತೆ ಮುಸ್ಲಿಂ ದೊರೆಗಳು ತಮ್ಮ ಮೇಲೆ ಮಾಡಿದ ಐತಿಹಾಸಿಕ ಅನ್ಯಾಯಗಳ ವಿರುದ್ಧವೂ ಸಹ ಸಮರ್ಥನೀಯ ದೂರುಗಳಿವೆ ಎಂದು ಹಿಂದೂ ರಾಷ್ಟ್ರೀಯವಾದಿಗಳು ಪ್ರತಿಪಾದಿಸಲು ಪ್ರಾರಂಭಿಸಿದರು. ಅದರೆ ನಾವು ಕವಿರಾಜ್ ಅವರು ಒದಗಿಸಿರುವ ಒಳನೋಟಗಳನ್ನು ಆಧರಿಸಿ ಐತಿಹಾಸಿಕ ಅನ್ಯಾಯಗಳ ಒಗಟನ್ನು ಇನ್ನಷ್ಟು ಬಿಡಿಸಬೇಕಿದೆ. ಐತಿಹಾಸಿಕ ಅನ್ಯಾಯ ಎಂಬ ತಿಳವಳಿಕೆಯನ್ನು ಮತ್ತಷ್ಟು ಐತಿಹಾಸೀಕರಿಸಿ ಅರ್ಥಮಾಡಿಕೊಳ್ಳಬೇಕಿದೆ. ಆಗ ಅಂದಿನ ಶೂದ್ರರು (ಇಂದಿನ ಹಿಂದುಳಿದ ಜಾತಿಗಳು) ಮತ್ತು ಅತಿಶೂದ್ರರ (ಇಂದಿನ ದಲಿತರು) ಮೇಲೆ ಐತಿಹಾಸಿಕ ಅನ್ಯಾಯವನ್ನು ಮಾಡಿದವರು ಕೇವಲ ಕೆಲವು ಮುಸ್ಲಿಂ ದೊರೆಗಳಲ್ಲ, ಬದಲಿಗೆ ಮೇಲ್ಜಾತಿ ಆಳುವವರೆಂದು ಅರ್ಥವಾಗುತ್ತದೆ. ಹೀಗಾಗಿ ಐತಿಹಾಸಿಕ ಅನ್ಯಾಯವನ್ನು ನಿರ್ವಚನ ಮಾಡುವಾಗ ಐತಿಹಾಸಿಕ ಅನ್ಯಾಯಗಳ ಕುರಿತು ಒದಗಿರುವ ಎಲ್ಲಾ ಉಲ್ಲೇಖನೀಯ ಬಿಂದುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಿರುತ್ತದೆ. ಹಾಗೆಯೇ ಪೂರಕ ಓದುಗಳನ್ನು ಮಾಡಿದರೆ ಯಾವುದೇ ನೀತಿಬದ್ಧ ಮಧ್ಯಪ್ರವೇಶಗಳು ಇಂತಹ ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಬಲ್ಲವೆಂದೂ ತಿಳಿಯುತ್ತದೆ. ಆದರೆ ಭಾರತ ಪ್ರಭುತ್ವವು ಈವರೆಗೆ ಮಾಡಿರುವ ನೀತಿ-ಕಾರ್ಯಕ್ರಮಗಳ ಮಧ್ಯಪ್ರವೇಶದಿಂದ ದಲಿತರಿಗಾದ ಐತಿಹಾಸಿಕ ಅನ್ಯಾಯಗಳು ಸರಿಪಡಿಸಲ್ಪಟ್ಟಿವೆ ಎಂದು ಹೇಳಬಹುದೇ? ಅದರರ್ಥವೇನೆಂದರೆ ಐತಿಹಾಸಿಕ ಅನ್ಯಾಯದ ಅಥವಾ ತಾರತಮ್ಯದ ಬಗ್ಗೆ ಹಿಂದೂ ರಾಷ್ಟ್ರೀಯವಾದಿಗಳು ಕಲ್ಪಿಸುವ ಅರ್ಥ ಏಕಪಕ್ಷೀಯವಾಗಿದೆ. ಹಾಲಿ ಸನ್ನಿವೇಶದಲ್ಲಿ ಹಿಂದೂತ್ವ ಶಕ್ತಿಗಳಿಗೆ ಉದಾರವಾದಿ ಭಾಷೆಯ ಅಗತ್ಯವುಳಿದಿಲ್ಲವೆಂಬುದೂ ಸಹ ಆಸಕ್ತಿದಾಯಕವಾಗಿದೆ. ವಾಸ್ತವವಾಗಿ ಅವರಲ್ಲಿ ಹಲವರಿಗೆ ಉದಾರವಾದಿ ಆದರ್ಶಗಳ ಬಗ್ಗೆ ಆಳವಾದ ದ್ವೇಷವಿದೆ. ಅಂತಹ ಜನರು ಉದಾರವಾದಿ ಅದರ್ಶಗಳ ಸಾರವಾಗಿರುವ ಪ್ರಜಾತಾಂತ್ರಿಕ ಧ್ವನಿಗಳನ್ನು ಮಣಿಸುವ ಉಪಕರಣವಾಗಿ ಉದಾರವಾದಿ ಆದರ್ಶಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಹಿಂದೂತ್ವವಾದಿಗಳು ಉದಾರವಾದಿ ಆದರ್ಶUಳಿಗೆ ಉಪಕರಣ ಸಾಧನದ ಮೌಲ್ಯವನ್ನೂ ಕೂಡಾ ಕೊಡುವುದಿಲ್ಲ.

ಕೃಪೆ: Economic and Political Weekly Feb 22, 2020. Vol. 55. No. 8
ಅನು: ಶಿವಸುಂದರ್
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )