ಸಂಪಾದಕರ ಮೇಜಿನಿಂದ
ಚುನಾವಣಾ ಪ್ರಜಾತಂತ್ರ ಮತ್ತು ಸಾಮಾಜಿಕತೆಯ ಹಿರಿಮೆ
ಗೋಪಾಲ್ ಗುರು
ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಒಂದು ಸಧೃಢವಾದ ಹಾಗೂ ಅಬಿವೃದ್ಧಿಯ ಕಾರ್ಯಸೂಚಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಲ್ಲ ಚುನಾವಣಾ ಪ್ರಜಾತಂತ್ರದ ಅಭಿವ್ಯಕ್ತಿಯೂ ಆಗಿದೆ. ಮತದಾರರ ಅಭಿವೃದ್ಧಿ ಆಶಯಗಳನ್ನು ಪಕ್ಕಕ್ಕೆ ಸರಿಸಿ ವಿಭಜಕ ಚುನಾವಣಾ ರಾಜಕೀಯದ ಮೂಲಕ ಗೆಲ್ಲಲು ಹವಣಿಸಿದ್ದ ರಾಜಕೀಯ ಶಕ್ತಿಗಳನ್ನು ದೆಹಲಿ ಚುನಾವಣೆ ಸಂಪೂರ್ಣವಾಗಿ ಬಯಲುಗೊಳಿಸಿದೆ. ಹೀಗಾಗಿ ಇದು ಚುನಾವಣಾ ರಾಜಕಾರಣವು ವಿಭಜಕ ಸಿದ್ಧಾಂತಗಳಿಂದ ಜಾತ್ಯತೀತ/ಅಭಿವೃದ್ಧಿ ಕಾರ್ಯಸೂಚಿಯ ಕಡೆಗೆ ನಿರ್ಧಾರಕವಾಗಿ ಪಲ್ಲಟಗೊಳ್ಳುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ. ಪ್ರಾಯಶಃ ಈ ಪಲ್ಲಟವೇ ಆಪ್ ಪಕ್ಷವು ದೆಹಲಿಯಲ್ಲಿ ಸಂಪೂರ್ಣ ಬಹುಮತವನ್ನು ಪಡೆಯುವ ಗೆಲುವನ್ನು ಸಾಧಿಸುವಂತೆ ಮಾಡಿದೆ.
ವಾಸ್ತವವಾಗಿ ಮಹಾರಾಷ್ಟ್ರದಲ್ಲಿ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಜಾರ್ಖಂಡಿನಲ್ಲಿ ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಗಳ ಫಲಿತಾಂಶಗಳೂ ಸಹ ಮತದಾರರನ್ನು ಕೋಮುವಾದದ ನೆಲೆಯ ಮೇಲೆ ಕ್ರೂಢೀಕgಸುವ ಬಲಪಂಥೀಯ ಪಕ್ಷಗಳ ರಣತಂತ್ರಗಳ ಮಿತಿಯನ್ನು ತೋರಿಸಿದ್ದವು. ಪ್ರಾಯಶಃ ಈ ಫಲಿತಾಂಶಗಳು ಪ್ರಗತಿಪರ ಸಾಮಾಜಿಕ ಸ್ವಭಾವಗಳಿಗೂ ಮತ್ತು ಆರೋಗ್ಯ, ಶಿಕ್ಷಣ, ನಿರುದ್ಯೋಗ ಮತ್ತು ಕುಡಿಯುವ ನೀರಿನ ಸಮಸ್ಯೆಗಳಂತಹ ಜನರ ನಿರ್ದಿಷ್ಟ ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳು ಹರಿಸಬೇಕಾದ ಗಮನಕ್ಕೂ ಇರುವ ಸಕಾರಾತ್ಮಕ ಸಂಬಂಧಗಳನ್ನು ತೋರಿಸುತ್ತವೆ. ಇದಕ್ಕಾಗಿ ಅಭಿವೃದ್ಧಿಯ ಫಲಗಳ ವಿತರಣೆಯ ಸುತ್ತಾ ಮತದಾರರ ಗಮನವನ್ನು ಕೇಂದ್ರೀಕರಿಸುವಂತೆ ರಾಜಕೀಯ ಪಕ್ಷಗಳು ತಮ್ಮ ಒತ್ತನ್ನು ಪಲ್ಲಟಗೊಳಿಸುವ ನೈತಿಕ ಜವಾಬ್ದಾರಿಯನ್ನು ತೋರಬೇಕಾಗುತ್ತದೆ. ಸರ್ಕಾರದ ಆಡಳಿತಕ್ಕೂ ಮತ್ತು ಸಾಮಾಜಿಕ ವೆಚ್ಚಕ್ಕೂ ಇರುವ ಈ ಸಕಾರಾತ್ಮಕ ಸಂಬಂಧಗಳನ್ನು ಮರುಸ್ಥಾಪಿಸಬೇಕಾದ ಗುರುತರವಾದ ಜವಾಬ್ದಾರಿ ರಾಜಕೀಯ ಪಕ್ಷಗಳ ಮೇಲಿದೆ. ಕಳೆದ ವರ್ಷ ಈ ಪತ್ರಿಕೆಯಲ್ಲಿ ಪ್ರಕಟವಾದ ಅಭಿಜಿತ್ ಬ್ಯಾನರ್ಜಿ, ಅಮೊರಿ ಗೆಥಿನ್ ಮತ್ತು ಥಾಮಸ್ ಪಿಕೆಟಿ ಅವರ ಲೇಖನದಲ್ಲಿ ಈ ಹೊಣೆಗಾರಿಕೆಯ ತತ್ವವನ್ನು ವಿಷದೀಖರಿಸಲಾಗಿದೆ. (ಗ್ರೋಯಿಂಗ್ ಕ್ಲಿವೇಜಸ್ ಇನ್ ಇಂಡಿಯಾ?: ಎವಿಡೆನ್ಸ್ ಫ಼್ರಂ z ಚೇಂಜಿಂಗ್ ಸ್ಟ್ರಕ್ಚರ್ ಆಫ್ ಎಲೆಕ್ಟೋರೇಟ್, ೧೯೬೨-೨೦೧೪ ೨೦೧೯ರ ಮಾರ್ಚ್ ೧೬ )
ಈ ಪ್ರಬಂಧದಲ್ಲಿ ಸಾಮಾಜಿಕ ಎಂಬುದರ ಅರ್ಥಗಳೇನೆಂಬುದನ್ನು ಲೇಖಕರುಗಳು ವಿವರಿಸುತ್ತಾರೆ. ಅತ್ಯಂತ ಆಳವಾದ ಅಧ್ಯಯನದ ಹಿನ್ನೆಲೆಯಲ್ಲಿ ರಚಿಸಲ್ಪಟ್ಟಿರುವ ಆ ಪ್ರಬಂಧದಲ್ಲಿ ಸಾಮಾಜಿಕ ಎಂಬುದನ್ನು ಮತದಾರರ ಸಾಮಾಜಿಕ ಹಿನ್ನೆಲೆ ಎಂಬ ಸೀಮಿತ ನೆಲೆಯಲ್ಲಿ ಅರ್ಥಮಾಡಿಕೊಂಡು ಕಳೆದ ನಾಲ್ಕು ದಶಕಗಳಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಹೇಗೆ ನಿರಂತರವಾಗಿ ಶೋಷಿಸುತ್ತಾ ಬಂದಿದ್ದಾರೆಂದು ವಿವರಿಸುತ್ತಾರೆ. ಕಳೆದ ನಾಲ್ಕು ದಶಕಗಳಲ್ಲಿ ಪ್ರಧಾನಧಾರೆ ರಾಜಕೀಯ ಪಕ್ಷಗಳು ಸಾಮಾಜಿಕ ವೆಂಬುದನ್ನು ಈ ಸೀಮಿತ ಅರ್ಥದಲ್ಲೇ ಬಳಸುತ್ತಾ ಬಂದಿದ್ದಾರೆಂದು ಲೇಖಕರು ಸಾಬೀತುಪಡಿಸುತ್ತಾರೆ. ರಾಜಕೀಯ ಪಕ್ಷಗಳನ್ನು ಸೀಮಿತ ಸಾಮಾಜಿಕ ನೆಲೆಯಿಂದ ಶಿಕ್ಷಣ, ಆದಾಯ ಮತ್ತು ಉದ್ಯೋಗಗಳಂತಹ ಅಭಿವೃದ್ಧಿ ಸಂಬಂಧೀ ರಾಜಕಾರಣದೆಡೆ ತಳ್ಳುವ ಹೊಣೆಗಾರಿಕೆಯ ತತ್ವವನ್ನು ಅನುಸರಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ. ವಾಸ್ತವವಾಗಿ ಸುಶಿಕ್ಷಿತ ಮತದಾರರ ತಿಳವಳಿಕೆಯಲ್ಲೂ ಶಿಕ್ಷಣ ಮತ್ತು ಅಭಿವೃದ್ಧಿಯ ನಡುವಿನ ಸಕಾರಾತ್ಮಕ ಸಂಬಂಧಗಳ ಗ್ರಹಿಕೆಯಿಲ್ಲ. ಅದೇನೇ ಇರಲಿ, ದೆಹಲಿ ಮತ್ತು ಜಾರ್ಖಂಡ್ ಚುನಾವಣೆಗಳು ಶಿಕ್ಷಣ ಮತ್ತು ಅಭಿವೃದ್ಧಿಯ ನಡುವೆ ಇರುವ ಸಕಾರಾತ್ಮಕ ಸಂಬಂಧಗಳನ್ನು ಸ್ಥಾಪಿಸಲು ಯತ್ನಿಸಿವೆ.
ಸಾಮಾಜಿಕದ ಮುನ್ನೋಟದ ಪರಿಕಲ್ಪನೆಗೂ ಅಥವಾ ಪರಿವರ್ತನಾಶೀಲ ಪರಿಕಲ್ಪನೆಗೂ ಚುನಾವಣಾ ಜನಕ್ರೂಢೀಕರಣಕ್ಕೂ ಇರುವ ಸಕಾರಾತ್ಮಕ ಸಂಬಂಧವನ್ನು ಆ ಪ್ರಬಂಧವು ಅಂತರ್ಗತವಾಗಿ ಪರಿಶೀಲಿಸುವುದು ಅತ್ಯಂತ ಆಸಕ್ತಿದಾಯಕವಾಗಿದೆ. ಈ ಪ್ರಬಂಧವು ಸರಿಯಾಗಿಯೇ ಗುರುತಿಸುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಬಲಪಂಥೀಯ ಪಕ್ಷಗಳೆಡೆಗೆ ಹೊರಳಿಕೊಳ್ಳದೆ ಎಡಮುಖಿ ಮಧ್ಯಮ ಪಂಥೀಯ ಅಥವಾ ಎಡಪಂಥೀಯ ಪಕ್ಷಗಳ ಕಡೆ ನಡೆದವು. ಇದು ೨೦೨೦ರ ದೆಹಲಿ ಚುನಾವಣೆಯಲ್ಲಿ ಮತ್ತೊಮ್ಮೆ ರುಜುವಾತಾಗಿದೆ.
ಪರಿಶಿಷ್ಟ ಜಾತಿ ಮತ್ತು ವರ್ಗಗಳು ಮಧ್ಯಮ ಪಂಥೀಂii ಅಥವಾ ಎಡ ಪಕ್ಷಗಳಿಗೆ ಓಟು ಹಾಕುತ್ತಿರುವಂತೆ ಸಾಮಾಜಿಕವೆಂಬುದು ಪ್ರಗತಿಪರ ತಾತ್ವಿಕತೆಯನ್ನು ಹೊಂದಿರಬೇಕೆಂಬುದು ಇಂಗಿತವಾಗುತ್ತಿದೆ. ತಮ್ಮ ಚುನಾವಣಾ ಆಯ್ಕೆಯ ತೀರ್ಮಾನಗಳನ್ನು ಮತದಾರರು ತಮ್ಮ ತಮ್ಮ ತಾತ್ವಿಕ ಗ್ರಹಿಕೆಗಳ ಹಿನ್ನೆಲೆಯಲ್ಲಿ ಮಾಡುತ್ತಿರುವುದರಿಂದ ಮತದಾರರ ಈ ಪಲ್ಲಟವು ಪ್ರಗತಿಪರ ಪಲ್ಲಟವೆಂದು ಆ ಲೇಖಕರು ಗುರುತಿಸುತ್ತಾರೆ. ಪರಿಶಿಷ್ಟ ಜಾತಿಗಳಲ್ಲಿರುವ ಈ ಪರಿವರ್ತನಾವಾದಿ ಸೈದ್ಧಾಂತಿಕ ಗ್ರಹಿಕೆಗಳು ಜ್ಯೋತಿರಾವ್ ಫುಲೆ, ಶಾಹು ಮಹಾರಾಜ್ ಮತ್ತು ಅಂಬೇಡ್ಕರ್ ಅವರುಗಳ ಆದರ್ಶವಾದಿ ತತ್ವ ಸಿದ್ಧಾಂತಗಳಿಂದ ಪ್ರಭಾವಿತವಾಗಿದೆ. ಈ ಸಿದ್ಧಾಂತವೇ ಮತದಾರರು ಮತ ಚಲಾಯಿಸುವಾಗ ಅವರ ತಲೆಯು ಗಟ್ಟಿಯಾಗಿ ಅವರ ಭುಜಗಳ ಮೇಲೆಯೇ ಇರುವಂತೆಯೂ, ಮತ್ತು ಅವರ ಕಾಲುಗಳು ಗಟ್ಟಿಯಾಗಿ ನೆಲೆದ ಮೇಲೆ ಊರಿರುವಂತೆ ಮಾಡುತ್ತಾ ಸಾಮಾಜಿಕಕ್ಕೆ ಒಂದು ಕ್ರಾಂತಿಕಾರಿ ನಿರ್ವಚನವನ್ನು ತಂದುಕೊಟ್ಟಿದೆ. ಅಂತಹ ಮತದಾರರಿಗೆ ಚುನಾವಣಾ ಪ್ರಜಾತಂತ್ರವು ಸಮಾನ ಸಾಮಾಜಿಕ ನೆಲೆಯನ್ನು ತಂದುಕೊಡುವ ತಾಣಗಳಾಗಿರುತ್ತವೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಅಂತಹ ಸಾಮಾಜಿಕವು ತಿಳವಳಿಕೆ ಮತ್ತು ಚಳವಳಿಗಳ ಸ್ವಾಯತ್ತತೆಯಿಂದ ಕೂಡಿರುತ್ತದೆ.
ಹೀಗಾಗಿ ಸಾಮಾಜಿಕದ ಬಗ್ಗೆ ಆ ಲೇಖಕರ ವಾದವನ್ನು ಈ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯಬಹುದು. ಇಂದು ಪರಿಶಿಷ್ಟ ಜಾತಿ/ವರ್ಗಗಳಲ್ಲಿ ಹಾಗೂ ಅಲ್ಪಸಂಖ್ಯಾತ ಮತದಾರರಲ್ಲಿ ಬಂzರುವ ಈ ಸಕಾರಾತ್ಮಕ ಪಲ್ಲಟವನ್ನು ಕೇವಲ ಸಾಮಾಜಿಕ ಸೌಲಭ್ಯಗಳ ಮೇಲಿನ ವೆಚ್ಚಾಧಾರಿತ ಮತವೆಂದು ಪರಿಗಣಿಸದೆ ಆತ್ಮ ಘನತೆಯ ನೈತಿಕ ಒಳಿತನ್ನು ಆಧರಿಸಿದ ಮತವೆಂದು ಗ್ರಹಿಸಬಹುದು.

ಕೃಪೆ: Economic and Political Weekly Feb 15, 2020. Vol. 55. No. 7
ಅನು: ಶಿವಸುಂದರ್
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )