*ಸಿಎಮ್ ಯಡಿಯೂರಪ್ಪನವರ ಜೊತೆ ಎಚ್.ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನಿಯೋಗದ ಮಹತ್ವದ ಸಭೆ
ಇಂದು (11-02-2020) ಸ್ವಾತಂತ್ರ್ಯ ಸೇನಾನಿ ಎಚ್.ಎಸ್. ದೊರೆಸ್ವಾಮಿ ಅವರ ನೇತೃತ್ವದಲ್ಲಿ ಭೂಮಿ -ವಸತಿ ಹೋರಾಟ ಸಮಿತಿಯ ಉನ್ನತ ನಿಯೋಗವು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಿತು. ಅದರನ್ವಯ ಮುಖ್ಯಮಂತ್ರಿಗಳು ಈ ಕೆಳಕಂಡ ಆಶ್ವಾಸನೆಗಳನ್ನು ನೀಡಿದ್ದಾರೆ.
1. ರಾಜ್ಯದ ಯಾವುದೇ ಕಡೆ ಸರ್ಕಾರಿ ಜಾಗದಲ್ಲಿ ಮನೆ-ಜಮೀನು ಮಾಡಿಕೊಂಡಿರುವ ಬಡಜನರ ಮೇಲೆ ಸರ್ಕಾರಿ ಜಮೀನು ಸಂರಕ್ಷಣೆಯ ಹೆಸರಿನಲ್ಲಿ ಅಧಿಕಾರಿಗಳು ದಾಳಿ ನಡೆಸಿ ಒಕ್ಕಲೆಬ್ಬಿಸುತ್ತಿರುವುದನ್ನು ಕೂಡಲೇ ನಿಲ್ಲಿಸಲು ಖಡಕ್ ಆದೇಶ ಹೊರಡಿಸಲಾಗುವುದು. “ಇದನ್ನು ಮೀರಿ ಯಾವುದೇ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ, ನಾನು ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇನೆ” ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
2. ವಸತಿ ಹಾಗೂ ಉಳುಮೆ ಭೂಮಿಯನ್ನು ಮಂಜೂರು ಮಾಡಲು ಫಾರಂ ನಂ 50-53-57 ಹಾಗೂ 94 ಸಿ/ಸಿಸಿ ಮತ್ತು ಅರಣ್ಯ ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ತ್ವರಿತವಾಗಿ ಹಕ್ಕುಪತ್ರ ವಿತರಿಸವುದು ಸೇರಿದಂತೆ ಈ ನಿಟ್ಟಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಮಂತ್ರಿಗಳು, ಹಿರಿಯ ಅಧಿಕಾರಿಗಳು ಹಾಗೂ ಹೋರಾಟ ಸಮಿತಿಯ ನಿಯೋಗವನ್ನು ಒಳಗೊಂಡು ಒಂದು ಉನ್ನತ ಮಟ್ಟದ ಸಭೆಯನ್ನು ಕರೆಯಬೇಕೆಂಬ ಒತ್ತಾಯವನ್ನು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ.
3. ಸರ್ಕಾರಿ ಹಾಗೂ ಖಾಸಗೀ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕು ಕಾರ್ಪೋರೇಟ್ ಕಂಪನಿಗಳಿಗೆ ಲೀಸಿಗೆ ನೀಡಬಾರದು, ಅದಕ್ಕಾಗಿ ತರಲು ಹೊರಟಿರುವ ಕಾಯ್ದೆಯನ್ನು ಕೈಬಿಡಬೇಕು ಎನ್ನುವ ನಮ್ಮ ಹಕ್ಕೊತ್ತಾಯವನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
4. ಮೇಲ್ಕಂಡ ನಿರ್ಣಯಗಳನ್ನು ಪಾಲಿಸುವಂತೆ ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೊರಡಿಸಲಾಗುವುದಲ್ಲದೆ, ಇದಕ್ಕಾಗಿ ಜಿಲ್ಲಾಧಿಕಾರಿಗಳ ಸಭೆಯನ್ನು ನಡೆಸುವುದಾಗಿಯೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ನಿಯೋಗದಲ್ಲಿ ದೊರೆಸ್ವಾಮಿಯವರೊಂದಿಗೆ ನೂರ್ ಶ್ರೀಧರ್, ಕುಮಾರ್ ಸಮತಳ, ಡಿ.ಎಚ್. ಪೂಜಾರ್, ಮರಿಯಪ್ಪ, ಸಿರಿಮನೆ ನಾಗರಾಜ್, ಪದ್ಮಾ ಕೆ ರಾಜ್, ತಾಯಮ್ಮ, ಸುಬ್ಬಮ್ಮ, ಕಂದೇಗಾಲ ಶ್ರೀನಿವಾಸ್, ಬಸವರಾಜ್, ಮೊಣ್ಣಪ್ಪ, ಮಂಜುನಾಥ್, ಮಾರೆಪ್ಪ, ವಸಂತರಾಜ ಕಹಳೆ ಮತ್ತಿತರ ಕೇಂದ್ರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
*- ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ.* *11-2-2020.*