ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯಿಂದ ಎಷ್ಟು ಅಪಾಯವಿದೆ ಎಂದು ಮನೆ ಮನೆಗೆ ತೆರಳಿ ನಾವು ಕರಪತ್ರ ಹಂಚ್ತೀವಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಎ,ಎನ್​ಆರ್​ಸಿ ಹಾಗೂ ಎನ್​ಪಿಆರ್ ಬಗ್ಗೆ ಕೇಂದ್ರ ಸರ್ಕಾರ ಸರಿಯಾದ ಮಾಹಿತಿ ಕೊಡುತ್ತಿಲ್ಲ ಮತ್ತು ಇದರ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಹರಿಹಾಯ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಅವರು, ಆದಿವಾಸಿ, ಬಡವರು, ಪ್ರವಾಹದಿಂದ ತತ್ತರಿಸಿರುವ ಜನರು ಹೇಗೆ ದಾಖಲಾತಿ ಒದಗಿಸುತ್ತಾರೆ. ಅಸ್ಸೋಂನಲ್ಲಿ ಎನ್​ಆರ್​ಸಿಯಿಂದ 19 ಲಕ್ಷ ಜನರನ್ನ ಹೊರ ಹಾಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಅನ್ವಯವಾಗಲಿದೆ ಎಂದರು.

ಸೋಮಶೇಖರ್ ರೆಡ್ಡಿ ಪ್ರಚೋದಾನಾತ್ಮಕ ಭಾಷಣದ ಮೂಲಕ ಅಲ್ಪ ಸಂಖ್ಯಾತರನ್ನು ಕಡೆಗಣಿಸಿದ್ದಾರೆ. ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಎನ್ಆರ್​ಸಿ ಹಾಗೂ ಸಿಎಎ ಬಗ್ಗೆ ಬಿಜೆಪಿಯವರು ಕರಪತ್ರ ಹಂಚುತ್ತಿದ್ದಾರೆ. ಅದರಲ್ಲಿ ಎಷ್ಟು ಸುಳ್ಳುಗಳಿವೆ ಎನ್ನುವುದರ ಬಗ್ಗೆ ನಾವು ಕರಪತ್ರ ಹಂಚ್ತೀವಿ, ಇದರ ಬಗ್ಗೆ ಬಿಜೆಪಿ ಮುಖಂಡರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು