*ನಾನು ಹೇಳಿಕೆ ನೀಡಿದ್ದು ಸರಿಯಲ್ಲ ಎಂದಾಗಿದ್ದರೆ, ಸಚಿವ ಸುರೇಶ್ ಅಂಗಡಿ “ಬಂದೂಕು ಇರುವುದು ಪೂಜೆ ಮಾಡಲಿಕ್ಕಲ್ಲ ಎಂದು ಹೇಳಿದ್ದು ಉದ್ವೇಗಕಾರಿ ಅಲ್ಲವಾ ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.*

ನಾನು ಜನರ ಭಾವನೆ ಏನಿದೆ ಅಂತ ಹೇಳಿದ್ದೇನೆಯೇ ಹೊರತು ಅದರಲ್ಲಿ ಯಾರಿಗೂ ಕೇಡು ಬಯಸಿಲ್ಲ.ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಡೀ ದೇಶವೇ ಹೊತ್ತಿ ಉರಿಯುತಿದೆ,ರಾಜ್ಯದಲ್ಲಿ ಈಗಾಗವುದು ಬೇಡ,ಅದಕ್ಕಾಗಿ ಸರಕಾರ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದೆ.ಆದರೆ ಅದನ್ನೇ ಮುಂದಿಟ್ಟುಕೊಂಡು ಗಲಭೆಗೆ ನಾನೇ ಕಾರಣ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

*ಅಂಗಡಿ ರಾಜೀನಾಮೆ ನೀಡಲಿ:* ನಾನು ಮಾತನಾಡಿದ್ದು ತಪ್ಪು ಹಾಗಾದರೆ ಆದರೆ ಸುರೇಶ್ ಅಂಗಡಿ,ಸಿ.ಟಿ.ರವಿ ಮಾತನಾಡಿದ್ದು ಸರಿಯಾ ? ಗೋಲಿಬಾರ್ ನ್ನು ಸಮರ್ಥಿಸಿಕೊಂಡಿರುವ ಸುರೇಶ್ ಅಂಗಡಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಖಾದರ್,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ.ಈಗ ತನ್ನ ತಪ್ಪನ್ನು ಬೇರೆಯವರ ಮೇಲೆ ಹಾಕಿ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಜನರಲ್ಲಿರುವ ಭಯದ ವಾತಾವರಣವನ್ನು ಸರಕಾರ ತಿಳಿಗೊಳಿಸುವ ಕೆಲಸವನ್ನು ಮಾಡುವುದು ಬಿಟ್ಟು ಇಂಥಹ ವಿಚಾರಗಳನ್ನು ಮುಂದಿಟ್ಟು ಜನರ ದಿಕ್ಕು ತಪ್ಪಿಸಬೇಡಿ ಎಂದರು.

*ಸುಳ್ಳುಗಳಿಗೆ ತಲೆಕೆಡಿಸಿಕೊಳ್ಳಲ್ಲ:* ನಾನು ಇಂಥಹ ಸುಳ್ಳು ಆರೋಪಗಳಿಗೆ ತಲೆ ಕೆಡಿಸಿಕೊಳ್ಳಲ್ಲ, ನಾನು ಕಾಲೇಜು ನಾಯಕನಾಗಿದ್ದಾಗಲೇ ನನ್ನ ನಾಯಕತ್ವ ದಮನಕ್ಕೆ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ.ನಾನು ಶಾಸಕ ಆಗಿಲ್ಲದ್ದ ಸಂದರ್ಭದಲ್ಲೂ ಕೂಡಾ ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದರು.ಆದರೆ ಕ್ಷೇತ್ರದ ಸರ್ವ ಧರ್ಮದ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ,ಕ್ಯಾಬಿನೆಟ್ ನಲ್ಲೂ ಕೂರಿಸಿದ್ದಾರೆ.ಅಪ ಪ್ರಚಾರ ಮಾಡುವವರ ದುರುದ್ದೇಶ ಮುಂದೆಯೂ ಈಡೇರುವುದಿಲ್ಲ ಎಂದು ಖಾದರ್ ಹೇಳಿದರು.

ಮಂಗಳೂರಿನಲ್ಲಿ ಗಲಭೆಗೆ ಕೇರಳದಿಂದ ಜನ ಬಂದಿದ್ದಾರೆ ಎಂದು ಸರಕಾರವೇ ಹೇಳುತ್ತಿದೆ,ಹಾಗೇ ಬಂದಿದ್ದರೆ ಒಬ್ಬರನ್ನೂ ಕೂಡಾ ಯಾಕೆ ಬಂಧಿಸಿಲ್ಲ.ಇದು ಸರಕಾರದ ವೈಫಲ್ಯ ಅಲ್ಲವಾ ? ಒಂದು ವೇಳೆ ಹಿಡಿದಿದ್ದರೆ ಅದರ ಬಗ್ಗೆ ಲೆಕ್ಕ ನೀಡಲಿ ಎಂದು ಆಗ್ರಹಿಸಿದರು.

*ಪೋಲೀಸ್ ಅಧಿಕಾರಿ ವಿರುದ್ಧ ಕ್ರಮ ಯಾಕಿಲ್ಲ*
ಮಂಗಳೂರು ಗೋಲಿಬಾರ್ ಸಂದರ್ಭದಲ್ಲಿ ಒಬ್ಬ ಪೋಲೀಸ್ ಅಧಿಕಾರಿ ಇಷ್ಟು ಗುಂಡು ಹೊಡೆದರೂ ಒಬ್ಬರೂ ಸಾಯಲಿಲ್ಲಲ್ವ ಎಂದು ಹೇಳುವುದಾಗಿದ್ದರೆ ಸರಕಾರವೇ ಗೋಲಿಬಾರ್ ಗೆ ಆದೇಶ ಮಾಡಿರುವ ಸಂಶಯ ಬಲವಾಗಿದೆ.ಸರಕಾರ ಸರಿಯಾಗಿದ್ದರೆ ಹೀಗೇ ಹೇಳಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು,ಕನಿಷ್ಠ ನೋಟೀಸ್ ಕೂಡಾ ನೀಡಿಲ್ಲ.ಪರಿಸ್ಥಿತಿ ಹೀಗಿರುವಾಗ ಗಲಭೆಗೆ ಬೇರೆಯವರು ಕಾರಣ ಎನ್ನುತ್ತಾರೆ,ಕೂಡಲೇ ಈ ಕುರಿತು ತನಿಖೆ ನಡೆಸಬೇಕು ಎಂದು ಖಾದರ್ ಒತ್ತಾಯಿಸಿದರು.