ವಿದ್ಯಾರ್ಥಿಗಳ ಸಾವುಗಳು- ಒಂದು ರಾಷ್ಟ್ರೀಯ ವೈಫಲ್ಯ
ಅಲ್ಪಸಂಖ್ಯಾತ ಮತ್ತು ದಮನಿತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳ ಸಾವುಗಳು ಒಂದು ರಾಷ್ಟ್ರೀಯ ವೈಫಲ್ಯವೇ ಸರಿ.

ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಪಾರ ಒತ್ತಡಕ್ಕೆ ಗುರಿಯಾಗಿ ತಮ್ಮ ಪ್ರಾಣಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಪ್ರತಿ ಆತ್ಮಹತ್ಯೆ ಪ್ರಕರಣಗಳ ವಿವರಗಳು ಬೇರೆಬೇರೆ ಇದ್ದರೂ ಎರಡು ಮುಖ್ಯ ಅಂಶಗಳು ಮಾತ್ರ ಎಲ್ಲಕ್ಕೂ ಸಮಾನವಾಗಿವೆ. ಮೊದಲನೆಯದು, ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಹುಪಾಲು ವಿದ್ಯಾರ್ಥಿಗಳು ಧಾರ್ಮಿಕ ಅಲ್ಪಸಂಖ್ಯಾತ ಹಾಗೂ ಸಮಾಜದ ಅಲಕ್ಷಿತ ಸಮುದಾಯಗಳಿಗೆ ಸೇರಿದವರು. ಎರಡನೆಯದು ಅವರ ದೂರುಗಳನ್ನು ಹಾಗೂ ಹತಾಷೆಗಳನ್ನು ಆಯಾ ಸಂಸ್ಥೆಗಳ ಆಡಳಿತ ವರ್ಗಗಳ ಗಮನಕ್ಕೆ ತರಲಾಗಿದ್ದರೂ ಅದನ್ನು ತಾತ್ಸಾರ ಮಾಡಿ ನಿರ್ಲಕ್ಷಿಸಲಾಗಿತ್ತು. ಆತ್ಮಹತ್ಯೆ ಮಾಡಿಕೊಂಡ ನಂತರ ಕೆಲವು ವಿದ್ಯಾರ್ಥಿಗಳ ಹೆಸರು ಈಗ ಅತ್ಯಂತ ಪರಿಚಿತವಾಗಿಬಿಟ್ಟಿವೆ: ಅನಿಲ್ ಮೀನಾ, ರೋಹಿತ್ ವೇಮುಲಾ, ಸೆಂಥಿಲ್ ಕುಮಾರ್, ಪಾಯಲ್ ತಾದ್ವಿ, ನಜೀಬ್ ಅಹ್ಮದ್ ಮತ್ತು ನವಂಬರ್ ೯ ರ ನಂತರ ಫಾತಿಮಾ ಲತೀಫ್. ಆದರೆ ಈ ರೀತಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಅಸಲೀ ಸಂಖ್ಯೆಗಳು ಸಾವಿರದಲ್ಲಿದೆ. ಸರ್ಕಾರದ ಒಂದು ಹೇಳಿಕೆಯ ಪ್ರಕಾರ ೨೦೧೪-೨೦೧೬ರ ನಡುವೆ ಒಟ್ಟು ೨೬,೫೦೦ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು ಪ್ರಾಣಟ್ಟಿದ್ದಾರೆ. ಪ್ರತಿಯೊಂದು ಸಾವುಗಳು ಅವರ ಕುಟುಂಬದ ಸದಸ್ಯರನ್ನು ಹಾಗೂ ಅವರ ಸ್ನೇಹಿತ ವೃಂದವನ್ನು ದಿಗ್ಭ್ರಾಂತಗೊಳಿಸಿವೆ. ಅವರಲ್ಲಿ ಹಲವರು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲೇ ಬೇಕೆಂಬ ಅಮಾನವೀಯ ಸ್ಪರ್ಧಾತ್ಮಕ ಒತ್ತಡಗಳನ್ನು ನಿಭಾಯಿಸಲು ಶಕ್ತಿಮೀರಿ ಪ್ರಯತ್ನಿಸಿದ್ದರು. ಇಂಥ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಹಾತೊರೆಯುವ ದೂರುಗಳು ಆಗ್ರಹಿಸುವಂತಹ ವ್ಯವಸ್ಥೆಗಳನ್ನು ಮತ್ತು ಕ್ರಮಗಳನ್ನು ಜಾರಿಗೆ ತರುವಲ್ಲಿ ಒಂದು ರಾಷ್ಟ್ರವಾಗಿ ನಾವು ವಿಫಲವಾಗಿದ್ದೇವೆ ಎಂಬುದು ನಾಚಿಕೆಗೇಡಿನ ಸಂಗತಿ. ಈ ಅನಗತ್ಯ ಸಾವುಗಳನ್ನು ತಡೆಗಟ್ಟುವಲ್ಲಿ ತನ್ನ ಜವಾಬ್ದಾರಿಯನ್ನು ಅರ್ಥಪೂರ್ಣವಾಗಿ ನಿಭಾಯಿಸದ ಒಂದು ಸಂಸ್ಥೆಯೆಂದರೆ ಮಾಧ್ಯಮ. ಉದಾಹರಣೆಗೆ, ತಮಿಳುನಾಡಿನಲ್ಲಿ ೨೦೧೬ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂವರು ದಲಿತ ಮಹಿಳಾ ಹೋಮಿಯೋಪತಿ ವಿದ್ಯಾರ್ಥಿನಿಯರ ಪ್ರಕರಣವನ್ನೇ ನೋಡಿ. ಅಧಿಕ ಶುಲ್ಕ ಹಾಗೂ ಅಸಹನೀಯ ವಸತಿ ಹಾಗೂ ಅಧ್ಯಯನ ಪರಿಸರದಿಂದಾಗಿ ಗುರಿಯಾಗುತ್ತಿರುವ ಚಿತ್ರಹಿಂಸೆಯ ಕುರಿತು ಆ ಮೂವರು ವಿಧ್ಯಾರ್ಥಿನಿಯರು ಕೇವಲ ಆ ಕಾಲೇಜಿನ ಅಧ್ಯಕ್ಷರಿಗೆ ಮಾತ್ರವಲ್ಲದೆ ಸರ್ಕಾರಿ ಅಧಿಕಾರಿಗಳಿಗೂ ಪತ್ರಗಳನ್ನು ಬರೆದಿದ್ದರು. ಅಂತಿಮವಾಗಿ ತಮ್ಮ ಹಾಗೂ ತಮ್ಮಂತೆಯೇ ಚಿತ್ರಹಿಂಸೆಯನ್ನು ಅನುಭಸುತ್ತಿರುವ ಸಹವಿದ್ಯಾxನಿಯರ ಪಾಡನ್ನು ಕೇಳಿಸಿಕೊಳ್ಳುವಂತೆ ಮಾಡಬೇಕೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿಯೆಂಬ ತೀರ್ಮಾನಕ್ಕೆ ಬಂದರು.

ವಿಪರ್ಯಾಸವೆಂದರೆ, ಈ ಆತ್ಮಹತ್ಯಾ ಪತ್ರಗಳ ಬಗ್ಗೆ ಮಾಧ್ಯಮಗಳು ಕರುಣಾಜನಕ ವರದಿಗಳನ್ನು ಪ್ರಕಟಿಸಿದ್ದು ನಿಜವಾದರೂ, ಈ ವಿದ್ಯಾರ್ಥಿನಿಯರಿಗಾದ ವಂಚನೆಯು ಸತ್ತ ನಂತರವೂ ಮುಂದುವರೆಯುತ್ತದೆ. ಕೆಲವು ದಿನಗಳ ಕಾಲ ಅಥವಾ ಕೆಲವೊಮ್ಮೆ ವಾರಗಳವರೆಗೆ ಈ ಬಗೆಗಿನ ಆಗ್ರಹಪೂರ್ವಕ ಟಿಪ್ಪಣಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವಿನಿಮಯಗೊಳ್ಳುತ್ತವೆ. ನಂತರ ಎಲ್ಲವೂ ಯಥಾಸ್ಥಿತಿಗೆ ಮರಳುತ್ತವೆ. ಕೆಲವು ಆದರಪೂರ್ವಕ ಅಪವಾದಗಳನ್ನು ಹೊರತುಪಡಿಸಿ, ಬಹುಪಾಲು ಮಾಧ್ಯಮಗಳು ಪೊಲೀಸ್ ವಿಚಾರಣೆಯ ಹಿಂದೆಬಿದ್ದು ವರದಿ ಮಾಡುವುದಿಲ್ಲ ಅಥವಾ ತಾವೇ ಸ್ವಯಂ ಪ್ರೇರಣೆಯಿಂದ ಈ ಆತ್ಮಹತ್ಯೆಗಳ ತನಿಖೆಯನ್ನು ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಅಧಿಕಾರವರ್ಗದ ಮೇಲೆ ಒತ್ತಡವನ್ನೂ ತರುವುದಿಲ್ಲ. ಹಲವಾರು ಪ್ರಕರಣಗಳಲ್ಲಿ ಪ್ರಾರಂಭದ ರೋಚಕ ವರದಿಯ ನಂತರದಲ್ಲಿ ಆ ಪ್ರಕರಣದ ಪರಿಸ್ಥಿತಿಯ ಕುರಿತು ಯಾವ ಮಾಹಿತಿಯೂ ವರದಿಯಾಗುವುದಿಲ್ಲ.

ಮಾಧ್ಯಮಗಳಿಗಿಂತ ಹೆಚ್ಚಿನ ಹೊಣೆಗಾರಿಕೆ ಇರಬೇಕಾದದ್ದು ಆಯಾ ಉನ್ನತ ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ. ಅವುಗಳಿಗೆ ತಮ್ಮ ಸಂಸ್ಥೆಗಳು ಪಡೆದುಕೊಳ್ಳಬೇಕಾದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶ್ರೇಯಾಂಕಗಳ ಬಗ್ಗೆ ಹೆಚ್ಚಿನ ಗಮನವಿರುತ್ತದೆಯೇ ವಿನಾ ತಮ್ಮದೇ ವಿದ್ಯಾರ್ಥಿಗಳ ಸ್ಥಿತಿಗತಿಗಳ ಬಗ್ಗೆ ಮಾತ್ರ ಸಂಪೂರ್ಣ ತಾತ್ಸಾರ ಧೋರಣೆಯನ್ನೇ ಇಟ್ಟುಕೊಂಡಿರುತ್ತಾರೆ. ಇತರ ವಿದ್ಯಾರ್ಥಿಗಳಿಗಿಂತ ಅತಿ ಹೆಚ್ಚು ಸಾಮಾಜಿಕ ಮತ್ತು ಆರ್ಥಿಕ ಬೆಲೆಯನ್ನು ತೆತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸುವ ಬಹುಪಾಲು ದಲಿತ, ಆದಿವಾಸಿ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ಅಪರಿಚಿತ ಪರಿಸರಕ್ಕೆ ಹೊಂದಿಕೊಳ್ಳಲು ಹೆಣಗಾಡುತ್ತಿರುತ್ತಾರೆ. ಸಾಮಾನ್ಯವಾಗಿ ಇಂಗ್ಲಿಷೇತರ ಮಾಧ್ಯಮಗಳಲ್ಲಿ ಕಲಿತು ಉನ್ನತ ಶಿಕ್ಷಣಕ್ಕೆ ಕಾಲಿಡುವ ಈ ವಿದ್ಯಾರ್ಥಿಗಳು ಇಂಗ್ಲಿಷ ಮಾಧ್ಯಮದಲ್ಲಿ ನಡೆಯುವ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸಹಪಾಠಿಗಳೊಡನೆ ಸಂವಹನ ಮಾಡಬೇಕಾದ ಮಾದರಿಗಳನ್ನು ಕಲಿತುಕೊಳ್ಳಲು ಹರಸಾಹಸ ಪಡುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಬೇಕಾದ ಬೆಂಬಲ ರಚನೆಗಳೆಲ್ಲಿವೆ? ಇದ್ದರೂ ಎಷ್ಟು ಸಂವೇದನಾಶಿಲವಾಗಿವೆ? ಹಲವಾರು ಅತ್ಯುನ್ನತ ವೈದ್ಯಕೀಯ ಹಾಗೂ ಇನ್ನಿತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳು ಹಾಗೂ ಇನ್ನಿತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ಇತರರಿಗಿಂತ ಭಿನ್ನವಾಗಿ ನಡೆಸಿಕೊಳ್ಳುತ್ತಿರುವ ವರದಿಗಳಿವೆ. ಈ ವರದಿಗಳೇನಾದವು ಮತ್ತು ಆ ವರದಿಗಳಲ್ಲಿ ಸಲಹೆ ಮಾಡಲ್ಪಟ್ಟ ಶಿಫಾರಸ್ಸುಗಳನ್ನು ಜಾರಿಗೆ ತರಲು ತೆಗೆದುಕೊಳ್ಳಬೇಕಾದ ಕ್ರಮಗಳಿಗೇನಾದವು ಎಂಬುದೂ ಈಗಲೂ ನಿಗೂಢವೇ ಆಗಿದೆ. ಆ ವರದಿಗಳು ಅಂತರಿಕ ಹಾಗೂ ಬಾಹ್ಯ ಮೌಲ್ಯಮಾಪನಗಳನ್ನು ಅಳವಡಿಸುವ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ ಅಧ್ಯಾಪಕ ಹಾಗೂ ಇತರ ಸಿಬ್ಬಂದಿಗಳ ಧೋರಣೆಯ ಕುರಿತು, ತರಗತಿ ಪ್ರತಿನಿಧಿಗಳ ಆಯ್ಕೆಗಳಂಥ ಕ್ರಮಗಳ ಬಗ್ಗೆ ಶಿಫಾರಸ್ಸುಗಳನ್ನು ನೀಡಿದ್ದವು. ತರಗತಿಗಳಲ್ಲಿ, ಮೆಸ್ ಮತ್ತು ಕ್ಯಾಂಟೀನ್‌ಗಳಲ್ಲಿ, ಹಾಗೂ ಹಾಸ್ಟೆಲ್‌ಗಳಲ್ಲಿ ಈ ವಿದ್ಯಾರ್ಥಿಗಳು ಅನುಭವಿಸುವ ತಾರತಮ್ಯಗಳ ಹಿನ್ನೆಲೆಯಲ್ಲಿ ವಿಶೇಷ ಗಮನದ ಅಗತ್ಯವಿದೆಯೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಈ ವಿಷಯದ ಬಗ್ಗೆ ಯಾರೂ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ.

ಮದ್ರಾಸಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾನವಿಕ ವಿಭಾಗದಲ್ಲಿ ಆಧ್ಯಯನ ಮಾಡುತ್ತಿದ್ದ ಫಾತಿಮಾ ಲತೀಫರ ಪ್ರಕರಣದಲ್ಲಿ ಅಲ್ಲಿನ ಅಧ್ಯಾಪಕ ವರ್ಗದವರು ತಮ್ಮ ಮಗಳಿಗೆ ಸತತ ಕಿರುಕುಳ ನೀಡುತ್ತಿದ್ದರಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಳೆಂದು ಅವರ ತಂದೆ-ತಾಯಿ ಆರೋಪಿಸಿದ್ದಾರೆ. ಕಳೆದೊಂದು ವರ್ಷದಲ್ಲೇ ಆ ಸಂಸ್ಥೆಯಲ್ಲಿ ಐದು ಆತ್ಮಹತ್ಯಾ ಪ್ರಕರಣಗಳು ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆ ಸಂಸ್ಥೆಯ ಆಡಳಿತ ವರ್ಗದ ಪ್ರಕಾರ ಇಂತಹ ವಿದ್ಯಾರ್ಥಿಗಳಿಗೆಂದೇ ಅವರ ಸಂಸ್ಥೆಯಲ್ಲಿ ಆಪ್ತ ಸಮಾಲೋಚನೆ ಮತ್ತು ಕಲ್ಯಾಣ ಕೇಂದ್ರ, ಅಧ್ಯಾಪಕ ಮಾರ್ಗದರ್ಶನ ಹಾಗೂ ಇನ್ನಿತರ ವ್ಯವಸ್ಥೆಗಳಿವೆಯಂತೆ. ಕೇಂದ್ರ ಸರ್ಕಾರವೂ ಸಹ ಉನ್ನತ ಶಿಕ್ಷಣ ಸಂಸ್ಥೆಗಳು ಆಪ್ತ ಸಮಾಲೋಚನಾ ಮತ್ತು ಕಲ್ಯಾಣ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಸೂಚಿಸುವ ಪ್ರಸ್ತಾಪವನ್ನು ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಇಂತಹ ಎಲ್ಲಾ ರೂಢಿಗತ ವ್ಯವಸ್ಥೆಗಳನ್ನು ದಾಟಿದ ಕ್ರಮಗಳ ತುರ್ತು ಅಗತ್ಯವಿದೆ. ಮೀಸಲಾತಿ ಜಾರಿಯನ್ನು ಖಾತರಿಗೊಳಿಸುವುದು ಅಥವಾ ಅಪ್ತ ಸಮಾಲೋಚಕರ ನೇಮಕಾತಿಯಿಂದಷ್ಟರಿಂದಲೇ ಈ ಸಮಸ್ಯೆ ಬಗೆಹರಿಯುವುದಿಲ್ಲ. ವಾಸ್ತವವಾಗಿ ಉನ್ನತ ಕಲಿಕೆಯನ್ನು, ವೈಚಾರಿಕ ಮತ್ತು ವೈಜ್ನಾನಿಕ ಆಲೋಚನೆಗಳನ್ನೂ, ಮತ್ತು ವಿದ್ವತ್ತನ್ನು ಹೆಚ್ಚಿಸಬೇಕಾದ ಸಂಸ್ಥೆಗಳು ಏಕೆ ಪದೇಪದೇ ನಿರ್ದಿಷ್ಟ ಹಿನ್ನೆಲೆಯ ವಿದ್ಯಾರ್ಥಿಗಳನ್ನು ವಿಫಲಗೊಳಿಸುತ್ತಿವೆ ಎಂದು ಕೇಳಿಕೊಳ್ಳಬೇಕಾದ ಅಗತ್ಯವಿದೆ. ಬದುಕಿನಲ್ಲಿ ಎಷ್ಟೋ ಅಡೆತಡೆಗಳನ್ನು ಎದುರಿಸಿ ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಈ ಯುವ ವಿದ್ಯಾರ್ಥಿಗಳು ತಮ್ಮ ಸಮುದಾಯಗಳ ಕಿರಿಯರಿಗೆ ಆದರ್ಶವಾಗುವ ಬದಲು ಸಾಯುವುದೇ ವಾಸಿಯೆಂದು ಏಕೆ ತೀರ್ಮಾನಿಸುವಂತಾಗುತ್ತಿದೆ?

ಸಾರ್ವಜನಿಕ ಸಂವಾದಗಳಲ್ಲಿ ಇಂಥ ಸಂವೇದನಾಶಿಲ ಅಂಶಗಳು ಚರ್ಚೆಯಾಗುವ ಬದಲು ಪ್ರತಿಭೆ ಮತ್ತು ಕೋಟಾ ದಂಥಾ ವಿಷಯಗಳು ಮಾತ್ರ ಚರ್ಚೆಯಾಗುತವೆ. ಅಲಕ್ಷಿತ ಸಮುದಾಯಗಳನ್ನು ಹಾಗೂ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಪಕ್ಷಗಳ ಪ್ರತಿಕ್ರಿಯೆಗಳೂ ಸಹ ತತ್‌ಕ್ಷಣದ ಘಟನೆಗಳಿಗೆ ದಿಡೀರ್ ಪ್ರತಿಕ್ರಿಯೆಗಳನ್ನು ನೀಡುವುದಕ್ಕೆ ಸೀಮಿತವಾಗಿದೆಯೇ ವಿನಾ ದೀರ್ಘಕಾಲಿನ ಪರಿಹಾರಗಳತ್ತ ತಮ್ಮ ಚರ್ಚೆಯ ದಿಕ್ಕನ್ನು ರೂಪಿಸಿಕೊಳ್ಳುತ್ತಿಲ್ಲ.

ಈ ಯುವ ಪ್ರತಿಭಾಶಾಲಿ eವಗಳ ನಷ್ಟ ಒಂದು ರಾಷ್ಟ್ರೀಯ ನಷ್ಟವಾಗಿದೆ. ಈ ನಷ್ಟಗಳನ್ನು ನಿಲ್ಲಿಸಬೇಕಾದ ತುರ್ತನ್ನು ಎಂದು ಗಂಭೀರವಾಗಿ ಎಂದು ಪರಿಗಣಿಸಲಾಗುವುದು?

ಕೃಪೆ: Economic and Political Weekly Nov 23, 2019. Vol. 54. No. 46
ಅನು: ಶಿವಸುಂದರ್
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )