ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್‌ ಕರ್ನಾಟಕವು ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ ಎಂಬ ಘೋಷ ವಾಕ್ಯದಡಿ ನಡೆಸಿದ ಅಭಿಯಾನದ ರಾಜ್ಯ ಸಮ್ಮೇಳನ ಹಾಗೂ ಸಮಾರೋಪ ಕಾರ್ಯಕ್ರಮವು  ರವಿವಾರದಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಐಓ ಕರ್ನಾಟಕದ ರಾಜ್ಯಾಧ್ಯಕ್ಷೆ ಉಮೈರ ಬಾನುರವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಬೆಂಗಳೂರಿನ ಜಿಐಓ ಯುವತಿಯರು ಬೀದಿ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜ ಇ ಹಿಂದ್ ನ ಉಪಾಧ್ಯಕ್ಷರಾದ ಅಮೀನುಲ್ ಹಸನ್ ರವರು ಮಾತನಾಡಿ,”ಈ ಅಭಿಯಾನದ ಶೀರ್ಷಿಕೆ “ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ” ಇಂದಿನ ಕಾಲದ ಬೇಡಿಕೆಯಾಗಿದೆ‌.  ಎಲ್ಲೆಡೆಯು ಮಾನವ ಹಕ್ಕುಗಳು ಉಲ್ಲಂಘಿಲ್ಪಡುತ್ತಿವೆ. ದೇಶದಲ್ಲಿ ಅಸಮಾನತೆಯು ಮಿತಿಮೀರುತ್ತಿದ್ದು ವಿಚಾರಗಳ ಮರುಚಿಂತನೆ ಅತೀ ಅಗತ್ಯ”, ಎಂದು ಅಭಿಪ್ರಾಯ ಪಟ್ಟರು. “ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ಲಾಂ ಧರ್ಮಕ್ಕಾಗಿ ದುಡಿಯುತ್ತಿರುವ ಜಿಐಓ ಯುವತಿಯರ ಕಾರ್ಯವು ಶ್ಲಾಘನೀಯ. ಅದೇ ರೀತಿ ಕೇಂದ್ರ ಸರಕಾರದ ಯೋಜನೆಗಳು ಕೇವಲ ಘೋಷಣೆಯಾಗಿ ಉಳಿಯದೇ  ಕಾರ್ಯರೂಪಕ್ಕೆ ಬರಬೇಕೆಂದು,” ಅವರು ಆಗ್ರಹಿಸಿದರು.
ಹತ್ತು ವರ್ಷಗಳ ಜಿಐಓ ಪಯಣದ ಕುರಿತು ನಡೆದ ಪ್ಯಾನಲ್ ಚರ್ಚೆಯಲ್ಲಿ ಜಿಐಓ ಕರ್ನಾಟಕದ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ರುಕ್ಸಾನ ಉಮರ್, ಸಬೀಹ ಸುಲ್ತಾನ, ಕಮರುನ್ನೀಸ ಹಾಗೂ ನವೀದ ಅಸದಿ ಭಾಗವಹಿಸಿದ್ದರು.  ನಬೀಲ ಅಲ್ಮಾಸ್ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು ಹಾಗೂ ಜ ಇ ಹಿಂದ್ ಕರ್ನಾಟಕ ಮಹಿಳಾ ವಿಭಾಗದ ಸಹ ಕಾರ್ಯದರ್ಶಿ ತಶ್ಕೀಲ ಖಾನಮ್ ರವರು ವಿಮರ್ಶಿಸಿದರು.
ಜ ಇ ಹಿಂದ್ ಕರ್ನಾಟಕ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಅಮತುರ್ರಝ್ಝಾಕ್, ಸಲಹಾ ಸಮಿತಿ ಸದಸ್ಯೆ ಸಾಜಿದುನ್ನೀಸ, ಜಿಐಓ ಕೇರಳ ರಾಜ್ಯ ಅಧ್ಯಕ್ಷೆ ಅಫೀದ ಅಹ್ಮದ್, ಜಿಐಓ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷೆ ಬುಶ್ರ ಈನಸ್ ಹಾಗೂ ಅನುಪಮ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹ ಫಾತಿಮರು ಅತಿಥಿ ಭಾಷಣ ಮಾಡಿದರು.
ಅಪರಾಹ್ನ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸಹ ಕಾರ್ಯದರ್ಶಿಯಾದ ರಹಮತುನ್ನೀಸರವರು ,” ಜಿಐಓ ಕರ್ನಾಟಕವು “ಅಲ್-ಇಹ್ಯಾ: ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ” ಎಂಬ ಶೀರ್ಷಿಕೆಯಡಿ ನಡೆಸಿದ ರಾಜ್ಯವ್ಯಾಪಿ ಅಭಿಯಾನವು ಇಂದು ಮುಕ್ತಾಯಗೊಳ್ಳುತ್ತಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದಕ್ಕಾಗಿ ಶ್ರಮಿಸಿದ ಎಲ್ಲಾ ಜಿಐಓ ಯುವತಿಯರು ಹಾಗೂ ಜಮಾಅತ್ ಬಂಧುಗಳಿಗೆ ನಾನು ಅಭಿನಂದಿಸುತ್ತೇನೆ.”     “ಮುಂದಿನ ಆಂದೋಲನ ಚಟುವಟಿಕೆಗಳಿಗೆ ಇದು ಪ್ರೇರಕಶಕ್ತಿಯಾಗಲಿ. ನಾವೆಲ್ಲರೂ ದೀನುಲ್ ಇಸ್ಲಾಮ್ ನ ಆಧಾರದಲ್ಲಿ ಕಾರ್ಯಾಚರಿಸುತ್ತಿದ್ದೇವೆ. ಇದು ಆದಮ್(ಅ) ರಷ್ಟೇ ಪುರಾತನ ಹಾಗೂ ಈಗಷ್ಟೇ ಹುಟ್ಟಿದ ಮಗುವಿನಂತೆ ನವೀನವಾಗಿದೆ. ಕನಸು ಕಾಣಿರಿ, ಅದನ್ನು ಸಾಧಿಸುವ ಛಲವಿರಲಿ ಹಾಗೂ ತಮ್ಮ ಸಂಪೂರ್ಣ ಜೀವನವನ್ನು ಅಲ್ಲಾಹನಿಗೆ ಸಮರ್ಪಿಸಿರಿ.” ಎಂದು ಕರೆ ನೀಡಿದರು.
ಜ ಇ ಹಿಂದ್ ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಡಾ ಮುಹಮ್ಮದ್ ಸಅದ್ ಬೆಳಗಾಮಿಯವರು ಮಾತನಾಡಿ
“ನಾವು ಇಸ್ಲಾಮಿನ ಅನುಯಾಯಿಗಳಾಗಿದ್ದೇವೆ. ಅಲ್ಲಾಹನು ತೋರಿದ ಹಾದಿಯಲ್ಲಿ ನಡೆಯಬೇಕಾಗಿದೆ.ಇಸ್ಲಾಮಿನ ಕುಟುಂಬ ವ್ಯವಸ್ಥೆಯು ಬಲಿಷ್ಟ ವ್ಯವಸ್ಥೆಯಾಗಿದೆ. ಇಸ್ಲಾಮಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಕಾಲದ ಬೇಡಿಕೆಯಾಗಿದೆ,” ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಐಓ ಕರ್ನಾಟಕದ ರಾಜ್ಯ ಅಧ್ಯಕ್ಷೆಯಾದ ಉಮೈರ ಬಾನುರವರು ಮಾತನಾಡಿ,”ಜಗತ್ತಿನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ನಾವು ಪ್ರಯತ್ನಿಸಬೇಕು. ಸಮಾಜದಲ್ಲಿ ಬದಲಾವಣೆಗಳನ್ನು ತರುವುದು, ಶಾಂತಿಪೂರ್ಣ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿಯಾಗಿದೆ,” ಎಂದರು.


ಜಿಐಓನ ಕಾರ್ಯಚಟುವಟಿಕೆಗಳ ವಿಡಿಯೋ ಪ್ರಸ್ತುತಿ ಮಾಡಲಾಯಿತು. ವೇದಿಕೆಯಲ್ಲಿ ಜಮಾಅತ್ ನ ಗಣ್ಯರು ಉಪಸ್ಥಿತರಿದ್ದರು. ಆಯಿಶಾ ಅಫ್ರೀನ್ ಕುರ್ ಆನ್ ಪಠಿಸಿದರು. ಜಿಐಓ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮುಹಿ ನಿಶಾತ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಅರ್ಶಿಯ ನೌಶಾಬ ಹಾಗೂ ಅಫ್ರ ನದಾಫ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು. ಜ ಇ ಹಿಂದ್  ದಕ್ಷಿಣ ಕನ್ನಡ ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ರ ದುಆದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.