✍🏻ಇಸ್ಮತ್ ಪಜೀರ್

ನಮ್ಮ ಮಂಗಳೂರಿನ ಅತ್ಯಂತ ಪುರಾತನ ಮಸೀದಿಯಾದ ಮಸ್ಜಿದ್ ಝೀನತ್ ಬಕ್ಷ್. ಇದನ್ನು ಮಂಗಳೂರು, ಕಾಸರಗೋಡು ಮತ್ತು ಉಡುಪಿಯ ಹೆಚ್ಚಿನ ಮುಸ್ಲಿಮರು ನೋಡಿರಬಹುದು. ನೋಡದವರು ಒಮ್ಮೆ ನೋಡಲೇಬೇಕಾದಂತಹ ಚಿತ್ತಾಕರ್ಷಕವಾದ ಸುಂದರ ಮಸೀದಿಯದು. ಅದರ ಇತಿಹಾಸದ ಮೇಲೆ ಕ್ಷ-ಕಿರಣ ಬೀರುವ ಪ್ರಯತ್ನವಿದು.
ನಾನು (ಇಸ್ಮತ್ ಪಜೀರ್) ಹಿರಿಯ ವಿದ್ವಾಂಸ ಬಿ.ಎ.ವಿವೇಕ್ ರೈಯವರ ಸಂಪಾದಕತ್ವದಲ್ಲಿ ೨೦೧೬ ರಲ್ಲಿ ಹೊರತರಲಾದ ಮಂಗಳೂರು ದರ್ಶನ ಎಂಬ ಬೃಹತ್ ಗ್ರಂಥಕ್ಕೆ ಬರೆದ ಅಧ್ಯಯನಾತ್ಮಕ ಲೇಖನದಲ್ಲಿನ ಝೀನತ್ ಬಕ್ಷ್ ಮಸೀದಿ ಕುರಿತ ಆಯ್ದ ಭಾಗವನ್ನು ಇಲ್ಲಿ ನೀಡುತ್ತೇನೆ. ಆಸಕ್ತರು‌ ಓದಿ.

ಝೀನತ್ ಬಕ್ಷ ಮಸೀದಿ ::

ಭಾರತದ ಐದನೇ ಮಸೀದಿ ಮಂಜರೂರು (ಈಗಿನ ಮಂಗಳೂರು) ನಲ್ಲಿರುವ ಬೆಲಿಯೆ ಪಳ್ಳಿ (ಬ್ಯಾರಿ ಭಾಷಿಕ ನಾಮ). ಪ್ರವಾದಿ (ಸ) ರ ಶಿಷ್ಯ ಮಾಲಿಕ್ ಬಿನ್ ದೀನಾರ್ (ರ) ರವರು ತನ್ನ ಧರ್ಮಪ್ರಚಾರಕರ ತಂಡದೊಂದಿಗೆ ಭಾರತಕ್ಕೆ ಬಂದು ಭಾರತದಲ್ಲಿ ಹತ್ತು ಮಸೀದಿಗಳನ್ನು ನಿರ್ಮಿಸಿದರು. ಹಾಗೆ ನಿರ್ಮಿಸಿದ ಮೊದಲ ಮಸೀದಿ ಕೇರಳದ ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರು ಸಮುದ್ರ ತೀರದಲ್ಲಿರುವ ಚೆಯರುಮ್ಮಾನ್ ಮಸೀದಿ,
೨.ಕೊಯಿಲಾಂಡಿ ಕೊಲ್ಲಂ
೩.ಮಾಡಾಯಿ
೪.ಫಾಕನ್ನೂರು (ಉಡುಪಿಯ ಬಾರ್ಕೂರು)
೫. ಮಂಜರೂರು (ಮಂಗಳೂರು)
೬.ಕಾಂಜರಕೂತ್ (ಕಾಸರಗೋಡು)
೭.ಜಫತಿನ
೮.ಧರ್ಮಡಂ (ಧರ್ಮಪಟ್ಟಣಂ)
೯.ಫೌದಿನ್
೧೦.ಶಾಲಿಯಾತ್ (ಚಾಲಿಯ)

ಝೀನತ್ ಬಕ್ಷ್ ಅಥವಾ ಬೆಲಿಯೆ ಪಳ್ಳಿ ಎಂದು ಕರೆಯಲ್ಪಡುವ ಮಂಗಳೂರಿನ ಮಸೀದಿ ಭಾರತದ ಐದನೇ ಮಸೀದಿ. ಟಿಪ್ಪು ಸುಲ್ತಾನರು ತನ್ನ ಆಡಳಿತಾವಧಿಯಲ್ಲಿ ಈ ಮಸೀದಿಯನ್ನು ನವೀಕರಿಸಿದರು. ಇದರ ಸೌಂದರ್ಯಕ್ಕೆ ಮಾರು ಹೋದ ಟಿಪ್ಪು ಇದಕ್ಕೆ “ಮಸ್ಜಿದೆ ಝೀನತ್ ಬಕ್ಷ್” ಎಂದು ಮರುನಾಮಕರಣ ಮಾಡಿದರು.ಇದನ್ನು ಬ್ಯಾರಿ ಮುಸ್ಲಿಮರು ಸುಲ್ತಾನ್ ಪಳ್ಳಿ ಎಂದೂ ಕರೆಯುತ್ತಿದ್ದರು. ಬಾರ್ಕೂರು ಮತ್ತು ಮಂಗಳೂರಿನ ಮಸೀದಿಗಳೆರಡೂ ಕ್ರಿ.ಶ.645 ರಲ್ಲಿ ಅಥವಾ ಹಿಜಿರಾ 22 ರಲ್ಲಿ ನಿರ್ಮಾಣಗೊಂಡಿತ್ತು.

ಝೀನತ್ ಬಕ್ಷ್ ಅಥವಾ ಬೆಲಿಯೆ ಪಳ್ಳಿ ಭಾರತದ ಅತ್ಯಂತ ಸುಂದರ ಮಸೀದಿಗಳಲ್ಲೊಂದು ಎಂದು ಕಲಾ ವಿಮರ್ಶಕರು ಕೊಂಡಾಡುತ್ತಾರೆ. ಈ ಮಸೀದಿಗೆ ಇಂತಹ ಸುಂದರ ಮತ್ತು ಆಕರ್ಷಕ ಸ್ವರೂಪ ಕೊಡಿಸಿದವರು ಟಿಪ್ಪು ಸುಲ್ತಾನ್. ಅತ್ಯಂತ ಬೆಲೆಬಾಳುವ ಮರಗಳ ಅಪೂರ್ವ ಕೆತ್ತನೆಗಳಿಂದ ಕೂಡಿದ ಈ ಪುನರ್ನಿರ್ಮಿತ ಮಸೀದಿಯ ಜೀರ್ಣೋದ್ಧಾರದ ಉಸ್ತುವಾರಿ ವಹಿಸಿದವರು ಆಗಿನ ಮಂಗಳೂರಿನ ಅಮಲ್ದಾರರೂ ,ಮಸೀದಿಯ ಮೊಕ್ತೇಸರರೂ ಆಗಿದ್ದ ಸಾಯಿರಿ ಬ್ಯಾರಿಯವರು. ಝೀನತ್ ಬಕ್ಷ್ ಮಸೀದಿಯ ವಿಶೇಷತೆಗೆ ಇರುವ ಎರಡು ಮುಖ್ಯ ಕಾರಣಗಳು ಅದರ ಪ್ರಾಚೀನತೆ ಮತ್ತು ಅದ್ಭುತ ರಚನೆ.ವಿಶಾಲವಾದ ಮಸೀದಿಯ ತುಂಬಾ ಮರದ ಕೆತ್ತನೆಗಳು, ಭಾರೀ ಗಾತ್ರದ ಮರದ ಕಂಬಗಳು, ಪುರಾತನ ಮಾದರಿಯ ಬಾಗಿಲುಗಳು ಮತ್ತು ಮೇಲ್ಚಾವಣಿ ಇವೆಲ್ಲದರಲ್ಲೂ ಅತ್ಯಾಕರ್ಷಕ ವಿನ್ಯಾಸದ ಕೆತ್ತನೆಗಳಿವೆ.
ಕರಾವಳಿ ಕರ್ನಾಟಕದ ಪ್ರಸಿದ್ಧ ಇತಿಹಾಸಕಾರರಲ್ಲೊಬ್ಬರಾದ ಗಣಪತಿ ರಾವ್ ಐಗಳ್ ರವರು ತನ್ನ “ದಕ್ಷಿಣ ಕನ್ನಡದ ಪ್ರಾಚೀನ ಇತಿಹಾಸ” ಎಂಬ ಗ್ರಂಥದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ” ಮುಸಲ್ಮಾನರ ಮಸೀದಿಗಳು ಈ ಜಿಲ್ಲೆಯಲ್ಲಿ ಸಾವಿರಾರು ಇವೆ. ಆದರೆ ಅವುಗಳ ಕಟ್ಟಡದ ಚಂದವನ್ನು ನೀಡಬೇಕೆಂದು ಆಸೆ ಇರುವವರು ಮಂಗಳೂರು ಸುಲ್ತಾನ್ ಪಳ್ಳಿಯನ್ನು ನೋಡಬೇಕಾಗಿದೆ. ಈ ಮಸೀದಿಯ ಕಂಬಗಳಲ್ಲಿಯೂ ಬೋದಿಗೆಗಳಲ್ಲಿಯೂ ಮತ್ತು ಇತರ ಭಾಗಗಳಲ್ಲಿಯೂ ಮರದಿಂದ ಕೆತ್ತಿದ ಸೂಕ್ಷ್ಮ ಕೆತ್ತನೆಯ ಕೆಲಸವು ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಮಸೀದಿ, ಬಸದಿ, ದೇವಸ್ಥಾನಗಳಲ್ಲಿ ಇರುವುದಿಲ್ಲ” ಈ ಮಸೀದಿಯ ಅದ್ಭುತ ವಾಸ್ತುಶಿಲ್ಪ , ವಿನ್ಯಾಸವನ್ನು ಕಂಡು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಬಕ್ಷಿ ಗುಲಾಂ ಮುಹಮ್ಮದ್ ರವರು “ದೇಶದ ಒಳಗೂ ಹೊರಗೂ ಸಾವಿರಾರು ಮಸೀದಿಗಳನ್ನು ಸಂದರ್ಶಿಸುವ ಭಾಗ್ಯ ನನಗೊದಗಿದೆ.ಆದರೆ ಈ ಮಸೀದಿಯಲ್ಲಿರುವಂತಹ ಮರದ ಕೆತ್ತನೆಯ ಕಲಾ ಸೌಂದರ್ಯವನ್ನು ನಾನು ಎಲ್ಲಿಯೂ ನೋಡಿಲ್ಲ” ಎಂದು ಉದ್ಗರಿಸಿದ್ದರು.
ಕ್ರಿ.ಶ. 1342ರಲ್ಲಿ ವಿಶ್ವಸಂಚಾರಿ ವಿದ್ವಾಂಸ ಇಬ್ನು ಬತೂತ ಮಂಗಳೂರಿಗೆ ಭೇಟಿ ನೀಡಿದ್ದು ಆಗ ಮಂಗಳೂರಿನಲ್ಲಿ ನಾಲ್ಕು ಸಾವಿರ ಮುಸ್ಲಿಮರಿದ್ದರೆಂದೂ , ಶಾಫೀ ಮದ್ಸ್ ಹಬ್ ನವರಾದ ಶ್ರೇಷ್ಠ ವಿದ್ವಾಂಸ ಬದ್ರುದ್ದಿನುಲ್ ಮಅಬರೀ ಎಂಬವರು ಮಂಗಳೂರು ಖಾಝಿಯಾಗಿದ್ದರೆಂದೂ ತನ್ನ “ರಿಹಲತ್ ಇಬ್ನು ಬತೂತ” ದಲ್ಲಿ ದಾಖಲಿಸಿದ್ದಾರೆ. ಮಂಗಳೂರನ್ನು ಮಂಜರೂರು ಎಂದು ದಾಖಲಿಸಿರುವ ಇಬ್ನು ಬತೂತ ಇಲ್ಲಿ ದರ್ಸ್ (ಮೌಲವಿಗಳು ಕಲಿಯುವ ಶಾಲೆ) ಇದ್ದುದರ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಮಲಬಾರ್ ಪ್ರದೇಶದ ಧಾರ್ಮಿಕ ವಿದ್ವಾಂಸರ ಪಾತ್ರ ದಕ್ಷಿಣ ಕನ್ನಡದಲ್ಲಿ ಅಂದೇ ಇತ್ತು . ಇಬ್ನು ಬತೂತ ಉಲ್ಲೇಖಿಸಿದ ಖಾಝಿ ಬದ್ರುದ್ದೀನುಲ್ ಮಅಬರೀ ಪ್ರಕಾಂಡ ಇಸ್ಲಾಮೀ ವಿದ್ವಾಂಸರಾದ ಪೊಣ್ಣಾನಿಯ ಝೈನುದ್ದೀನ್ ಮಕ್ದೂಮಿಯವರ ಪಂಡಿತ ಪರಂಪರೆಯವರು. ಥರ್ಸ್ಟನ್ ಎಂಬ ಇತಿಹಾಸಕಾರ “Castes and tribes of Southern India” ಎಂಬ ಗ್ರಂಥದಲ್ಲಿ ತಿರುವಾಂಕೂರಿನಿಂದ ಮಂಗಳೂರಿನ ತನಕದ ಮುಸ್ಲಿಮರಿಗೆ ಧಾರ್ಮಿಕ ನೇತ್ರತ್ವ ನೀಡುತ್ತಿದ್ದವರು ಪೊಣ್ಣಾನಿಯ ಮಕ್ದೂಮಿ ಪರಂಪರೆಯ ವಿದ್ವಾಂಸರು ಎಂದು ದಾಖಲಿಸಿದ್ದಾನೆ.

ಕ್ರಿ.ಶ. ೧೩ನೇ ಶತಮಾನದಲ್ಲಿ ವಲಿಯುಲ್ಲಾಹಿ ಶೇಖ್ ಫರೀದ್ ಮಸ್ಊದ್ (ರ) ಮಂಗಳೂರಿಗೆ ಧರ್ಮ ಪ್ರಚಾರಕ್ಕೆ ಬಂದಿದ್ದರು‌. ಕ್ರಿ.ಶ.1514ರಲ್ಲಿ ಮಂಗಳೂರಿಗೆ ಬಂದಿದ್ದ ಪೋರ್ಚುಗೀಸ್ ಯಾತ್ರಿಕ ಡ್ವಾರ್ಟೆ ಬಾರ್ಬೋಸ್ ಮಂಗಳೂರಿನಲ್ಲಿ ಬಹಳಷ್ಟು ಮುಸ್ಲಿಮರಿದ್ದುದಾಗಿಯೂ, ಅವರು ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿದ್ದಾಗಿ ಹಾಗೂ ಇಲ್ಲಿ ಅನೇಕ ಮಸೀದಿಗಳಿದ್ದುದಾಗಿ ದಾಖಲಿಸಿದ್ದಾನೆ.