ಸಂಪಾದಕರ ಮೇಜಿನಿಂದ
ರಾಜಕೀಯ ಚಿಂತನೆಯ ಸಮಸ್ಯೆಗಳು
-ಗೋಪಾಲ್ ಗುರು

ಕೇಂದ್ರದಲ್ಲಿ ಸಾಕಷ್ಟು ಆರಾಮವಾಗಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ದೇಶದ ರಾಜಕೀಯ ಮತ್ತು ಸಾರ್ವಜನಿಕ ವಲಯಕ್ಕೆ ಸೇರಿದ ಹಲವಾರು ಸೂಕ್ಷ್ಮ ವಿಷಯಗಳ ಬಗ್ಗೆ ಒಂದಾದ ಮೇಲೊಂದರಂತೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ತನ್ನ ನಿರ್ಧಾರಗಳಿಗೆ ಪ್ರತಿಯಾಗಿ ಯಾವುದೇ ಗಟ್ಟಿಯಾದ ಪ್ರತಿರೋಧ ಬರಲಾರದೆಂಬ ಅಂದಾಜಿನ ಮೇಲೆಯೇ ಕೇಂದ್ರ ಸರ್ಕಾರವು ಈ ಬಗೆಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಚುನಾವಣಾ ರಾಜಕೀಯದ ಬಗ್ಗೆ ಮಾಧ್ಯಮಗಳಲ್ಲಿ ವ್ಯಕ್ತವಾಗುವ ಟೀಕೆಗಳು ತುಂಬಾ ಸೀಮಿತವಾಗಿದ್ದು ಚುನಾವಣೆ ಮುಗಿದ ನಂತರದಲ್ಲಿ ಚುನಾವಣೋತ್ತರ ಬೆಳವಣಿಗೆಗಳ ಬಗ್ಗೆ ಅವುಗಳ ವಿಶ್ಲೇಷಣೆ ಆಯ್ದ ವಿಷಯಗಳ ಬಗ್ಗೆ ಮಾತ್ರ ಸೀಮಿತವಾಗಿರುತ್ತವೆ ಹಾಗೂ ಆಳವಾಗಿಯೂ ಇರುವುದಿಲ್ಲ. ಅಭಿಪ್ರಾಯಗಳು ಪರಿವರ್ತನಕಾರಿಯಾಗಿಲ್ಲದೆ ತತ್‌ಕ್ಷಣದ ಪ್ರೇರಣೆ ಮಾತ್ರ ಹೊಂದಿರುವುದು ಮತ್ತು ವ್ಯವಸ್ಥೆ ಕೊಟ್ಟಿರುವ ಚೌಕಟ್ಟನ್ನು ಮೀರದೆ ಆದರೊಳಗೆ ಮಾತ್ರ ಬಂಧಿತವಾಗಿರುವುದೇ ಅಂಥಾ ವಿಮರ್ಶೆಗಳು ಸೀಮಿತವಾಗಿರುವುದಕ್ಕೆ ಕಾರಣ . ಅದೇನೇ ಇರಲಿ ಸಮಕಾಲಿನ ಭಾರತದ ರಾಜಕೀಯದ ಬಗ್ಗೆ ಯೋಚಿಸುವಾಗ ಹಲವಾರು ಆಳವಾದ ಸಮಸ್ಯೆಗಳು ಯಾರಿಗಾದರೂ ಗೋಚರಿಸುತ್ತವೆ.

ಚುನಾವಣೋತ್ತರ ಸಂದರ್ಭದಲ್ಲಿ ಎದುರಾಗಿರುವ ಅತ್ಯಂತ ಕಳವಳಕಾರಿ ಬೆಳವಣಿಗೆಯೇನೆಂದರೆ ವಿಮರ್ಶಾತ್ಮಕ ಚಿಂತನೆಗಳನ್ನು ಬಿಟ್ಟು ವ್ಯಾವಹಾರಿಕ ಚಿಂತನೆಗಳ ಕಪಿಮುಷ್ಟಿಯಲ್ಲಿ ಸಿಲುಕಿರುವುದು. ಕುತೂಹಲಕಾರಿಯಾದ ಅಂಶವೇನೆಂದರೆ ಈ ವ್ಯಾವಹಾರಿಕ ಚಿಂತನೆಯು ಕೇವಲ ಆಳುವ ಪಕ್ಷಗಳಿಗೆ ಮಾತ್ರ ಸೀಮಿತವಾಗದೆ ವಿರೋಧ ಪಕ್ಷಗಳಿಗೂ ವ್ಯಾಪಿಸಿರುವುದು. ಆಳುವ ಪಕ್ಷವಂತೂ ಕಳೆದ ಹಲವಾರು ವರ್ಷಗಳಿಂದ ತನ್ನ ತೀರ್ಮಾನಗಳಲ್ಲಿ ಅತಿ ಹೆಚ್ಚು ವ್ಯಾವಹಾರಿಕವಾಗಿರುವುzರ ಬಗ್ಗೆ ಯಾರಿಗೂ ಯಾವುದೇ ಅನುಮಾನವಿಲ್ಲ. ತಮ್ಮ ಈ ವ್ಯಾವಹಾರಿಕ ಚಿಂತನೆಗಳಲ್ಲಿ ಆಳುವ ಪಕ್ಷದ ಸದಸ್ಯರು ಸಾಮಾನ್ಯ ಮನುಷ್ಯರನ್ನು ಚುನಾವಣೆಯ ಸಂದರ್ಭದಲ್ಲಿ ಕಚ್ಚಾ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಾರೆ. ಮತ್ತು ಚುನಾವಣೆಯ ನಂತರ ಅವರನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಗತ್ಯವಾದ ಭ್ರಾಂತಿಗಳಲ್ಲಿ ಮುಳುಗಿಸುತ್ತಾರೆ. ಯಾರಿಗೆ ತಮ್ಮ ಆಳ್ವಿಕೆಯನ್ನು ನಿರಂತರವಾಗಿ ಮುಂದುವರೆಸಬೇಕಾಗಿದೆಯೋ ಅವರು ರಾಜಕೀಯವಾಗಿ ವ್ಯಾವಹಾರಿಕ ಚಿಂತನೆಗಳ ಮೂಲಕ ಕಾರ್ಯ ನಿರ್ವಹಿಸುತ್ತಾರೆಯೇ ವಿನಾ ವಿಮರ್ಶಾತ್ಮಕ ಚಿಂತನೆಗಳ ಮೂಲಕವಲ್ಲ.

ಆದರೆ ವಿರೋಧಪಕ್ಷಗಳ ಚಿಂತನೆಯೂ ಸಹ ವ್ಯಾವಹಾರಿಕ ಚಿಂತನೆಗಳಿಂದ ಮುಕ್ತವಾಗಿಲ್ಲ. ಕಾಂಗ್ರೆಸ್ ಪಕ್ಷದ ಚಿಂತನೆಗಳನ್ನೂ ಸಹ ವ್ಯಾವಹಾರಿಕ ಚಿಂತನೆ ಎಂದೇ ವರ್ಗೀಕರಿಸಬಹುದು. ಇತ್ತೀಚೆಗಂತೂ ಅದು ತನ್ನೆಲ್ಲಾ ಚಿಂತನೆಗಳನ್ನು ಪಕ್ಷದ ಮುಂದಿನ ಅಧ್ಯಕ್ಷರು ಯಾರಾಗಬೇಕು ಎನ್ನುವ ಏಕೈಕ ವಿಷಯಕ್ಕೆ ಇಳಿಸಿಬಿಟ್ಟಿದೆ. ಆದರೆ ಸಾಮಾನ್ಯ ಮನುಷ್ಯನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಕ್ಷದ ಸಾರಭೂತ ನಿಲುವೇನು ಎಂಬುದರ ಬಗ್ಗೆ ಆ ಪಕ್ಷವು ಚಿಂತಿಸಬೇಕೆಂದು ಅಪೇಕ್ಷಿಸುವುದು ಸಹಜ. ಕೆಲವರಿಗೆ ಆ ಪಕ್ಷದ ವಿಳಂಬ ನೀತಿ ಯ ಬಗ್ಗೆ ಅದರಲ್ಲೂ ತನ್ನ ಪಕ್ಷದ ಅಂತರಿಕ ವಿಷಯಗಳ ಬಗ್ಗೆ ಅತಿ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಿರುವ ಬಗ್ಗೆ ಕಳವಳವಿರುತ್ತದೆ. ವಿಳಂಬ ನೀತಿಗೆ ತನ್ನದೇ ಆದ ಮಹತ್ವವಿದೆ. ಏಕೆಂದರೆ ಅದು ಕೇವಲ ಕೆಲವು ಲೌಕಿಕ ಅಗತ್ಯಗಳನ್ನಾಧರಿಸಿ ಮಾತ್ರ ನಡೆಯದೇ ಕೆಲವು ಸೈದ್ಧಾಂತಿಕ ನಡೆಗಳನ್ನು ಆಧರಿಸಿರುತ್ತದೆ. ಹೀಗಾಗಿ ಒಂದು ವಿರೋಧ ಪಕ್ಷವು ತನ್ನ ಅಂತರಿಕ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಆಳುವ ಪಕ್ಷದಂತಲ್ಲದೆ ಸಮಾಲೋಚನೆಗಾಗಿ ಸಮಯ ತೆಗೆದುಕೊಳ್ಳುವುದು ಅಪೇಕ್ಷಣೀಯವೇ. ಅದು ಪ್ರಜಾತಂತ್ರದ ದೃಷ್ಟಿಯಿಂದ ಒಳ್ಳೆಯದೇ. ಆದರೂ ತೀರಾ ವಿಳಂಬ ಮಾಡುವುದು ರಾಜಕೀಯ ಸಿನಿಕತನಗಳಿಗೆ ದಾರಿಮಾಡಿಕೊಡಬಹುದು. ಅದು ತಮ್ಮ ಪಕ್ಷದ ಅಧಿಕಾರವೇ ಶಾಶ್ವತವಾಗಿರಬೇಕೆಂಬ ಏಕೈಕ ಆಶಯ ಹೊಂದಿರುವ ರಾಜಕೀಯ ನಾಯಕರ ವಾಟ್ಸಾಪ್ ಪ್ರಚಾರಗಳಿಗೆ ರಾಜಕೀಯವಾಗಿ ಪ್ರಜಾತಂತ್ರವನ್ನು ಅಪೇಕ್ಷಿಸುವವರನ್ನು ಬಲಿಬೀಳುವಂತೆ ಮಾಡುತ್ತದೆ. ನಾವು ಕೇಳಬೇಕಿರುವ ಮೂಲಭೂತ ಪ್ರಶ್ನೆಯೇನೆಂದರೆ: ನಮಗೆ ರಾಜಕೀಯ ಪಕ್ಷಗಳು ಮತ್ತು ನಾಯಕರು ಏಕೆ ಬೇಕಾಗಿದೆ?

ಒಂದು ಪ್ರಾತಿನಿಧಿಕ ಪ್ರಜಾತಂತ್ರದಲ್ಲಿ ರಾಜಕೀಯ ಮುಂದೊಡಗುಗಳು ಅಂತಿಮವಾಗಿ ಮತ್ತು ಅಗತ್ಯವಾಗಿ ಕೆಲವರ ಬಳಿ ಇರುತ್ತದೆಯೇ ವಿನಾ ಎಲ್ಲರ ಬಳಿಯೂ ಅಲ್ಲ. ಆಡಳಿತಾತ್ಮಕವಾಗಿ ಹೇಳುವುದಾದರೆ ಪ್ರತಿಯೊಬ್ಬರು ಆಳ್ವಿಕೆ ನಡೆಸಲು ಆಗುವುದಿಲ್ಲ. ಆದರೆ ಒಂದು ಪ್ರಜಾತಂತ್ರದಲ್ಲಿ ಅಧಿಕಾರವೆಂಬುದು ನಾಯಕರ ಗುಂಪು ಅಥವಾ ಪಕ್ಷವೊಂದು ಮಾಡುವ ಜನೋಪಯೋಗಿ ಕೆಲಸಗಳಿಂದ ಪ್ರಾಪ್ತವಾಗುತ್ತದೆಯೇ ವಿನಾ ವಂಶಪಾರಂಪರ್ಯವಾಗಿ ಅಲ್ಲವೆಂಬುದನ್ನು ಆಳುವವರಿಗೆ ಹೇಳಬೇಕಾದ ಕರ್ತವ್ಯವಿದೆ. ಆದರೆ ಆಳುವವರು ಅದನ್ನು ಸಾಮಾನ್ಯ ಜನರ ಮೇಲೆ ಆಳ್ವಿಕೆ ನಡೆಸಲು ಬೇಕಾದ ಏಕಸ್ವಾಮ್ಯ ಅಧಿಕಾರವನ್ನಾಗಿ ಮಾಡಿಕೊಳ್ಳುತ್ತಾರೆ. ಸಾಮಾನ್ಯ ಜನರು ಆಳುವ ಪಕ್ಷಗಳಿಗೆ ತಮ್ಮ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ತಲುಪಿಸದೇ ಅವರು ಹೇಳಿದ್ದನ್ನೆಲ್ಲಾ ಮರುಮಾತಿಲ್ಲದೆ ಕೇಳುತ್ತಾ ಕೂರುವಾಗ ಆಳುವವರಲ್ಲಿ ರಾಜಕೀಯಾಧಿಕಾರವನ್ನು ಶಾಶ್ವತವಾಗಿ ಹಿಡಿದಿಟ್ಟುಕೊಳ್ಳುವ ಆಕಾಂಕ್ಷೆಗಳು ಮೂಡುತ್ತವೆ. ಹೀಗಾಗಿ ಪ್ರಶ್ನೆಯೇನೆಂದರೆ ಆಳುವವರಿಗೆ ತಮ್ಮ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ನೀಡಬಲ್ಲ ವಿಮರ್ಶಾತ್ಮಕ ಸಾಮರ್ಥ್ಯ ಜನರಿಗೆ ಇದೆಯೇ ಎಂಬುದಾಗಿದೆ.

ಆಳವಾಗಿ ಮತ್ತು ನಿಶಿತವಾಗಿ ಯೋಚಿಸಬಲ್ಲ ಸಾಮರ್ಥ್ಯಗಳನ್ನು ತಣ್ಣನೆಯ ಮೆದುಳಿನಿಂದ ನಿಭಾಯಿಸಬೇಕು ಎಂದು ಹೇಳಬಹುದು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ರಾಜಕೀಯದಲ್ಲಿ ವಿಮರ್ಶಾತ್ಮಕ ಚಿಂತನೆಗನ್ನು ವೇಗ (ಬ್ರೇಕಿಂಗ್ ನ್ಯೂಸ್) ಮತ್ತು ರೋಚಕತೆಗೆ ಇಳಿಸಲಾಗುತ್ತಿದೆ. ಚಿಂತನೆಗಳನ್ನು ಹೀಗೆ ಶಾರ್ಟ್ ಸರ್ಕ್ಯೂಟ್ ಮಾಡಿದಾಗ ಸಾಮಾನ್ಯ ಜನರು ಸಾವಧಾನವಾಗಿ ಚಿಂತಿಸಿ ಅಭಿಪ್ರಾಯಗಳನ್ನು ನೀಡುವ ಸಾಧ್ಯತೆ ಇರುವುದಿಲ್ಲ. ಹೀಗೆ ವಿವಿಧ ಸಾಮಾಜಿಕ ಜಾಲತಾಣಗಳ ವೇಗಕ್ಕೆ ಬಲಿಯಾಗುವ ಧೋರಣೆಗಳನ್ನು ಕಂಡುಕೊಳ್ಳುವ ನಾಯಕರು ಸಾಮಾನ್ಯ ಜನರನ್ನು ತಮ್ಮ ಮೌಲ್ಯಗಳ ನೈತಿಕ ಶಕ್ತಿಯಿಂದಲೋ ಅಥವಾ ತಮ್ಮ ಜನೋಪಯೋಗಿ ನಡೆಗಳಿಂದಲೋ ಪ್ರಭಾವಿಸುವ ಬದಲು ಪ್ರಶ್ನಿಸಲು ಸಾಧ್ಯವಾಗದ ತಮ್ಮ ಸೈದ್ಧಾಂತಿಕ ಬಲದ ಮೂಲಕ ಹಿಡಿದಿಟ್ಟುಕೊಳ್ಳಲು ಮುಂದಾಗುತ್ತಾರೆ. ವಾಟ್ಸಾಪ್‌ನಂತಹ ವಿವಿಧ ಸಾಧನಗಳು ಒಬ್ಬ ವ್ಯಕ್ತಿಗೆ ಮಾಹಿತಿಗಳ ಸಮುದ್ರವನ್ನೇ ಒದಗಿಸಬಹುದು. ಪ್ರಾಯಶಃ ಜ್ನಾನವನ್ನೂ ಕೂಡಾ ನೀಡಬಹುದು. ಆದರೆ ಆ ಸಾಧನಗಳೇ ವ್ಯಕ್ತಿಯನ್ನು ಸಮುದ್ರದ ಆಳಕ್ಕೆ ಕೊಂಡೊಯ್ಯಲಾರವು. ಇಂದು ವ್ಯಕ್ತಿಗಳನ್ನು ಆವರಿಸಿಕೊಂಡಿರುವ ಸಮಸ್ಯೆಗಳು ಎಷ್ಟು ಸಂಕೀರ್ಣವಾಗಿದೆಯೆಂದರೆ ಸಮುದ್ರದ ಆಳಕ್ಕೆ ಹೋಗಿ ಉತ್ತರ ಪಡೆದುಕೊಳ್ಳುವ ನೈತಿಕ ಅನಿವಾರ್ಯತೆಯನ್ನು ವ್ಯಕ್ತಿಗಳು ಎದುರಿಸುತ್ತಿರುತ್ತಾರೆ. ಆ ಸಂದರ್ಭಗಳಲ್ಲಿ ಇಂಥಾ ಸಾಧನಗಳು ವ್ಯಕ್ತಿಗಳನ್ನು ಸಬಲೀಕರಿಸಲೂ ಬಹುದು ಅಥವಾ ನಿರ್ಬಲಗೊಳಿಸಲೂ ಬಹುದು. ಅವೆರಡೂ ಅಲೆಗಳೋಪಾದಿಯಲ್ಲಿ ನಡೆಗಳನ್ನು ಮಿಥ್ಯೀಕರಿಸುತ್ತಾ ಅಥವಾ ಅಧಿಕೃತಗೊಳಿಸುತ್ತಾ ವಿಮರ್ಶಾತ್ಮಕ ಚಿಂತನೆಗಳ ಮೂಲಕ ಸಮಸ್ಯೆಗಳ ಆಳಕ್ಕೆ ತಲುಪಬೇಕೆಂಬ ವ್ಯಕ್ತಿಗಳ ಜ್ನಾನಾಭಿಲಾಶೆಯನ್ನೇ ನಿರ್ಬಂಧಿಸಿಬಿಡಬಹುದು. ವಿಪರ್ಯಾಸವೆಂದರೆ ತಾತ್ಕಾಲಿವಾಗಿಯೇ ಆದರೂ ವಾಟ್ಸಾಪ್ ಅಲೆಗಳೇ ರಾಜಕೀಯದ ದಿಕ್ಕನ್ನು ನಿರ್ಧರಿಸಲು ಪ್ರಾರಂಭಿಸಬಹುದು. ಆದರೆ ಎಲ್ಲಿಯತನಕ ಸ್ವತಂತ್ರವಾಗಿ ಚಿಂತಿಸಬಲ್ಲ ಜನಸಮೂಹವು ಇರುತ್ತದೋ ಅಲ್ಲಿಯವರೆಗೂ ಈ ಅಲೆಗಳು ಜ್ನಾನದ ಸಮುದ್ರದ ಮೇಲೆ ಅಧಿಪತ್ಯ ನಡೆಸಲು ಸಾಧ್ಯವಿಲ್ಲ.

          ಕೃಪೆ: Economic and Political Weekly                      Aug 17, 2019. Vol. 54. No. 33
                    ಅನು: ಶಿವಸುಂದರ್ 
      (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )