✍🏼 *ನೂರ್ ಶ್ರೀಧರ್*

*ಟಿಪ್ಪು ವಿವಾದ ತೋರುವ ಸತ್ಯ: ಆತನ ಕನಸಿನ್ನು ಕೈಗೂಡಿಲ್ಲ-ಆತ ವಿರೋಧಿಸಿದ ಶಕ್ತಿಗಳಿನ್ನು ಅಳಿದಿಲ್ಲ*

ಆತ್ಮೀಯ ಒಡನಾಡಿಗಳೆ,
ಟಿಪ್ಪುವಿನ ಸುತ್ತ ಮತ್ತೊಮ್ಮೆ ವಿವಾದ ಎದ್ದುನಿಂತಿದೆ. ಸಹಜವಾಗಿಯೇ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತುತ್ವವನ್ನು ಬಯಸುವ ವ್ಯಕ್ತಿಗಳು, ಸಂಘಟನೆಗಳು ಟಿಪ್ಪುವಿನ ಕೊಡುಗೆಗಳನ್ನು ಎತ್ತಿಹಿಡಿಯುತ್ತಿದ್ದಾರೆ. ಸನಾತನತೆ, ಅಸಮಾನತೆ ಮತ್ತು ಅಸಹಿಷ್ಣುತೆಯನ್ನು ಪ್ರತಿಪಾದಿಸುವ ಶಕ್ತಿಗಳು ಕೋಮು ದ್ವೇಶವನ್ನು ಪ್ರಚೋದಿಸುತ್ತಿವೆ. ಕಾಮ್ರೇಡ್ ಸಾಕಿ ತಮ್ಮ ಪ್ರಸಿದ್ಧ “ಮೇಕಿಂಗ್ ಹಿಸ್ಟರಿ” ಕೃತಿಯಲ್ಲಿ ನಮ್ಮ ಮುಂದಿಡುವ ಟಿಪ್ಪುವಿನ ಚಾರಿತ್ರಿಕ ಪಾತ್ರದ ಕೆಲವು ಮುಖ್ಯಾಂಶಗಳನ್ನು ಈ ಸಂದರ್ಭದಲ್ಲಿ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ.
18ನೇ ಶತಮಾನದಲ್ಲಿ ಕನ್ನಡ ಮಾತನಾಡುವ ಸೀಮೆ ಹಲವು ಚಿಕ್ಕ ದೊಡ್ಡ ಪಾಳೆಗಾರರ ನಡುವೆ ಹಂಚಿಹೋಗಿತ್ತು. ಈ ಪಾಳೆಗಾರರು ಆಯಾ ಭಾಗದ ಸರ್ವಾಧಿಕಾರಿಗಳಾಗಿದ್ದರು. ನಿರಂತರವಾಗಿ ಪರಸ್ಪರ ಕಾದಾಟದಲ್ಲಿ ತೊಡಗಿದ್ದರು, ರೈತರನ್ನು ತೀವ್ರತರನಾದ ಸುಲಿಗೆಗೆ ಗುರಿಮಾಡಿದ್ದರು ಮತ್ತು ನಿರ್ಬಂಧ ಹಾಗೂ ಲೂಟಿಯಿಂದಾಗಿ ವ್ಯಾಪಾರವಹಿವಾಟಿನ ಹರವಿಗೆ ದೊಡ್ಡ ಅಡ್ಡಿಯಾಗಿ ಪರಿವರ್ತನೆಯಾಗಿದ್ದರು. ಸಮಾಜದ ಮುನ್ನಡೆಗೆ ಅಡ್ಡಿಯಾಗಿ ನಿಂತಿದ್ದ ಈ ಪಾಳೆಗಾರರನ್ನು ಬಗ್ಗುಬಡಿದು ಆಧುನಿಕ ರಾಜ್ಯವನ್ನು ಕಟ್ಟುವ ಪ್ರಯತ್ನವನ್ನು ಚಿಕ್ಕದೇವರಾಯ ಪ್ರಾರಂಭಿಸುತ್ತಾನೆ. ಪಾಳೆಗಾರಿ ಮಧ್ಯವರ್ತಿ ವರ್ಗವನ್ನು ನಿರ್ಮೂಲಿಸಿ, ಕೇಂದ್ರೀಕೃತ ಸೈನ್ಯ ಹಾಗೂ ಆಧುನಿಕ ಆಡಳಿತ ಯಂತ್ರಾಂಗವನ್ನು ಆಧರಿಸಿ ಪ್ರಭುತ್ವದ ಆದಾಯವನ್ನು ಹೆಚ್ಚಿಸುತ್ತಾನೆ, ಕೃಷಿಯನ್ನು ವಿಸ್ತರಿಸುತ್ತಾನೆ, ವ್ಯಾಪಾರಿಗಳ ಜೊತೆ ಮೈತ್ರಿಯನ್ನು ಬೆಳೆಸಿಕೊಳ್ಳುತ್ತಾನೆ. ವ್ಯಾಪಾರದ ಕೇಂದ್ರಗಳನ್ನು ಆಡಳಿತದ ಕೇಂದ್ರಗಳನ್ನಾಗಿ ಮಾಡುತ್ತಾನೆ, ಹೊಸ ವ್ಯಾಪಾರಿ ಪಟ್ಟಣಗಳನ್ನು ಬೆಳೆಸುತ್ತಾನೆ. ಅಂದರೆ ಊಳಿಗಮಾನ್ಯ ಪ್ರಭುತ್ವ, ವ್ಯಾಪಾರಿ ಪ್ರಭುತ್ವವಾಗಿ ಪರಿವರ್ತನೆಯಾಗುವ ಪ್ರಕ್ರಿಯೆಗೆ ಚಾಲನೆ ನೀಡುತ್ತಾನೆ. ಆದರೆ ಆತನ ನಂತರ ಬಂದ ರಾಜರು ವ್ಯಕ್ತಿಗತ ಸುಖಲೋಲಪದಲ್ಲಿ ಮುಳುಗಿ ರಾಜ್ಯದ ಅವನತಿ ಆರಂಭವಾಗುತ್ತದೆ. ಹೊರಗಿನಿಂದ ಆಕ್ರಮಣ ಪ್ರಾರಂಭವಾಗುತ್ತದೆ, ಒಳಗಡೆ ಆಡಳಿತ ಹಾಗೂ ವಹಿವಾಟು ಕುಸಿಯುತ್ತದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಅಧಿಕಾರಿಗಳು ಹಾಗೂ ವ್ಯಾಪಾರಿ ವರ್ಗದ ಬೆಂಬಲದೊಂದಿಗೆ ಧೀರ ದಂಡನಾಯಕನಾಗಿ ಹೆಸರುಗಳಿಸಿದ್ದ ಹೈದರ್ ಅಧಿಕಾರದ ಚುಕ್ಕಾಣಿವಹಿಸಿಕೊಳ್ಳುತ್ತಾನೆ. ಹೈದರ್ ಚಿಕ್ಕದೇವರಾಯನ ಪರಂಪರೆಯನ್ನು ಮುಂದುವರಿಸಿ ಆಧುನಿಕ, ಕೇಂದ್ರೀಕೃತ, ವ್ಯಾಪಾರಿ ರಾಜ್ಯವನ್ನು ಕಟ್ಟುವ ಕೆಲಸವನ್ನು ಇನ್ನಷ್ಟು ವಿಸ್ತರಿಸಿ ಬಲಗೊಳಿಸಿದರೆ, ಟಿಪ್ಪು ಅಲ್ಲಿಂದ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಅದನ್ನು ಜನಮುಖಿಗೊಳಿಸುವ ಪ್ರಯತ್ನ ಮಾಡುತ್ತಾನೆ.

ಚಿಕ್ಕದೇವರಾಯ ಮೈಸೂರು ಹಾಗೂ ಮಂಡ್ಯ ಭಾಗಗಳಲ್ಲಿ ಪಾಳೆಗಾರರನ್ನು ನಿರ್ಮೂಲಿಸಿದರೆ ಹೈದರ್ ಹಾಗೂ ಟಿಪ್ಪು ಇಂದಿನ ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಧಾರವಾಡ, ತುಮಕೂ ಮತ್ತು ಕೋಲಾರ ಪ್ರದೇಶಗಳಲ್ಲಿ ಇದ್ದ ಸುಮಾರು 200 ಪಾಳೆಗಾರರನ್ನು ಬಗ್ಗೆಬಡೆದರು. ಹೈದರ್-ಟಿಪ್ಪು ಕೇವಲ ಕರ್ನಾಟಕವಷ್ಟೇ ಅಲ್ಲದೆ ತಮಿಳುನಾಡು ಹಾಗೂ ಮಲಬಾರಿನ ಹಲವು ಪಾಳೆಗಾರರನ್ನು ಸಹ ನಿರ್ಮೂಲಿಸಿದರು. ಇದರಲ್ಲಿ ಹೈದರ್ ಮಲಬಾರಿನಲ್ಲಿ ಕೈಗೊಳ್ಳುವ ದಂಡಯಾತ್ರೆ ಬಹಳ ಮುಖ್ಯವಾದುದು. ತನ್ನ ಬಲಿಷ್ಠ ಸೇನೆಯೊಂದಿಗೆ ಕಾಡುಮೇಡಿನ ಹಾದಿಯಲ್ಲಿ ನುಗ್ಗುವ ಹೈದರನ ಸೇನೆ 4 ತಿಂಗಳಲ್ಲಿ 300 ಕಿ.ಮೀ. ಚಲಿಸಿ 42 ಪಾಳೆಗಾರರನ್ನು ಸೋಲಿಸಿತು. ಹೀಗೆ ಹೈದರ್ ಹಾಗೂ ಟಿಪ್ಪು ತಮ್ಮ ಆಳ್ವಿಕೆಯ ಅಲ್ಪಾವಧಿಯಲ್ಲಿ ವಿಶಾಲ ಪ್ರಾಂತ್ಯದಲ್ಲಿ ಪಾಳೆಗಾರ ವರ್ಗವನ್ನೇ ಇಲ್ಲವಾಗಿಸುತ್ತಾರೆ.

ಹೈದರ್-ಟಿಪ್ಪು ಆಳ್ವಿಕೆಯ ಮೈಸೂರು ರಾಜ್ಯವು ಬಹುಪಾಲು ಕರ್ನಾಟಕವಷ್ಟೇ ಅಲ್ಲದೆ, ಆಂಧ್ರದ ರಾಯಲಸೀಮ ಪ್ರದೇಶವನ್ನು, ತಮಿಳುನಾಡಿನ 5 ಜಿಲ್ಲೆಗಳನ್ನು, ಕೇರಳದ ಉತ್ತರ ಮಲಬಾರು ಪ್ರದೇಶವನ್ನು ಸಹ ಒಳಗೊಂಡಿತ್ತು. ಕಾರವಾರದ ಮೇಲಿರುವ ಸದಾಶಿವಘಡದಿಂದ ಹಿಡಿದು ಕೋಜಿûಕೋಡೆತನಕದ ಕಡಲು ತೀರವನ್ನು ಹಾಗೂ ಅದರ ವಾಣಿಜ್ಯ ಚಟುವಟಿಕೆಗಳನ್ನು ಈ ಆಳ್ವಿಕೆ ನಿಯಂತ್ರಿಸುತ್ತಿತ್ತು. ಒಟ್ಟು 2,00,000 ಚದುರ ಕಿಲೋಮೀಟರ್ ವಿಶಾಲ ಪ್ರಾಂತ್ಯವನ್ನು ಈ ರಾಜ್ಯ ಹೊಂದಿತ್ತು. ಆ ಕಾಲಕ್ಕೆ ಬ್ರಿಟೀಷ್ ಇಂಡಿಯಾಗಿಂತಲೂ ವಿಸ್ತೀರ್ಣದಲ್ಲಿ ದೊಡ್ಡದಾದ ಪ್ರದೇಶ ಇದಾಗಿತ್ತು. ಮರಾಠರನ್ನು ಹೊರತುಪಡಿಸಿದರೆ ಇಡೀ ಭಾರತದಲ್ಲೇ ಅತಿದೊಡ್ಡ ರಾಜಪ್ರಭುತ್ವವಾಗಿ ಬೆಳೆಯಿತು. ಹಾಗಾಗಿಯೇ ಬ್ರಿಟೀಷರಿಗೆ ಅತ್ಯಂತ ಸವಾಲಿನ ಪ್ರಭುತ್ವವಾಗಿ ಪರಿಣಮಿಸಿತು.

ಸಾಮ್ರಾಜ್ಯ ಕಟ್ಟುವುದು ದೊಡ್ಡ ವಿಚಾರವೇನಲ್ಲ. ಕಟ್ಟಿದ ನಾಡು ಜನಸಾಮಾನ್ಯರಿಗೆ ಕೊಟ್ಟಿದ್ದೇನು? ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಟಿಪ್ಪುವಿನ ಆಳ್ವಿಕೆಯನ್ನು ಮೌಲ್ಯಮಾಪನ ಮಾಡುವುದು ಅಗತ್ಯ.

*ರೈತ ಮಿತ್ರ ಟಿಪ್ಪು:*
ಸಾಮಾನ್ಯವಾಗಿ ಭೂ ಸುಧಾರಣೆ ಎಂದ ಕೂಡಲೆ ನಮಗೆ ದೇವರಾಜ ಅರಸ್ ಜ್ಞಾಪಕಕ್ಕೆ ಬರುತ್ತಾರೆ. ಆದರೆ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಭೂಸುಧಾರಣೆಯನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತಂದದ್ದು ಟಿಪ್ಪು ಸುಲ್ತಾನ್. ಟಿಪ್ಪುವಿನ ಗುರಿ ಕೇವಲ ಪಾಳೆಗಾರರನ್ನಷ್ಟೆ ಅಲ್ಲದೆ ಪ್ರಭುತ್ವ ಮತ್ತು ರೈತರ ನಡುವೆ ನಿಂತು ಬಹುಪಾಲು ಆದಾಯವನ್ನು ಹೀರುತ್ತಿದ್ದ ಜಮಿನ್ದಾರಿ ವರ್ಗವನ್ನು ನಿರ್ಮೂಲಿಸುವುದಾಗಿತ್ತು. ಅವರ ಇಡೀ ಆಳ್ವಿಕೆಯಲ್ಲಿ ಒಂದೇ ಒಂದು ಜಾಗೀರು ನೀಡಿದ ಉದಾಹರಣೆ ಸಿಕ್ಕುವುದಿಲ್ಲ. ಇಡೀ ಭಾರತದ ಇತಿಹಾಸದಲ್ಲೇ ಈ ರೀತಿ ಜಾಗೀರು ನೀಡದೇ ಪ್ರಭುತ್ವವನ್ನು ನಡೆಸಿರುವ ಏಕೈಕ ರಾಜರು ಎಂದು ಇವರನ್ನು ಕರೆಯಬಹುದು. “ಯಾರು ಯಾವುದೇ ಜಾತಿ ಅಥವ ಧರ್ಮಕ್ಕೆ ಸೇರಿದ್ದರೂ, ಯಾರು ವ್ಯವಸಾಯ ಮಾಡುತ್ತರೋ ಅಥವ ಉಳುಮೆ ಮಾಡುತ್ತಾರೋ ಭೂಮಿ ಅವರಿಗೆ ಮಾತ್ರ ಸೇರುತ್ತದೆ”ಎಂದು ಟಿಪ್ಪು ಘೋಷಿಸಿದ. ಆಗ ಅತಿಹೆಚ್ಚಿನ ಜಾಗೀರು ಪಡೆದವರೆಂದರೆ ಬ್ರಾಹ್ಮಣ ಹಾಗೂ ವೀರಶೈವ ಮಠಗಳು, ಮಂದಿರಗಳು ಹಾಗೂ ಜಮಿನ್ದಾರರು. ಟಿಪ್ಪು ಬ್ರಾಹ್ಮಣ ಹಾಗೂ ವೀರಶೈವ ಮಠಗಳ ಉಚಿತ ಭೂ ಒಡೆತನವನ್ನು ರದ್ದು ಮಾಡಿದ. ಅಲ್ಲದೆ ಹಂತಹಂತವಾಗಿ ಮಠಗಳಿಗೆ ಹಾಗೂ ಅಗ್ರಹಾರಗಳಿಗೆ ನೀಡಲಾಗಿದ್ದ ಭೂಮಿಯನ್ನು ಶೂದ್ರ ರೈತಾಪಿಗೆ ಹಂಚಿಕೆ ಮಾಡಿದ. ಉದಾಹರಣೆಗೆ ಇಂದಿನ ಮಂಡ್ಯ ವಾಸ್ತವದಲ್ಲಿ ಒಂದು ದೊಡ್ಡ ಬ್ರಾಹ್ಮಣ ಅಗ್ರಹಾರವಾಗಿತ್ತು. ಟಿಪ್ಪು ಇದರ ಇಡೀ ಭೂಮಿಯನ್ನು ಶೂದ್ರರಿಗೆ ಹಂಚಿಕೆ ಮಾಡುತ್ತಾನೆ. ಹಾಗೆಯೇ ವೈಷ್ಣವ ಬ್ರಾಹ್ಮಣರ ಕೇಂದ್ರವಾದ ಮೇಲ್ಕೋಟೆ ದೇವಸ್ಥಾನ, ಸುತ್ತಮುತ್ತಲ ನೂರಾರು ಹಳ್ಳಿಗಳ ಭೂಮಿ ಮೇಲೆ ಒಡೆತನ ಹೊಂದಿತ್ತು. ಟಿಪ್ಪು ಅದನ್ನು ಮೊದಲು ವರ್ಷಕ್ಕೆ 60 ಸಾವಿರ ಪಗೋಡ ವರಮಾನ ಬರುವ ಮಟ್ಟಕ್ಕೆ ಸೀಮಿತಗೊಳಿಸುತ್ತಾನೆ. ನಂತರ ಅದನ್ನು ಹಂತಹಂತವಾಗಿ 1000 ಪಗೋಡಾಗೆ ಇಳಿಸುತ್ತಾನೆ. ಕೊನೆಗೆ ಅದರ ಎಲ್ಲಾ ಭೂಮಿಯನ್ನು ರೈತಾಪಿಗೆ ಹಂಚುವುದಲ್ಲದೆ ದೇವಸ್ಥಾನಕ್ಕೆ 1000 ಪಗೋಡಾದ ಪೆನ್ಷನ್ ಅನ್ನು ತಾನೇ ರಾಜ್ಯ ಬೊಕ್ಕಸದಿಂದ ನೀಡುತ್ತಾನೆ. ಬ್ರಾಹ್ಮಣರಲ್ಲೂ ವೈದಿಕ ಹಾಗೂ ಲೌಕಿಕ ಬ್ರಾಹ್ಮಣರು ಎಂದು ವಿಂಗಡಿಸಿ, ವೈದಿಕ ಅಥವ ಪುರೋಹಿತ ಬ್ರಾಹ್ಮಣರ ಹೆಚ್ಚುವರಿ ಭೂಮಿಯನ್ನು ಮಾತ್ರ ಹಂಚಿಕೆಗೆ ಒಳಪಡಿಸುತ್ತಾನೆ. ಪಟೇಲರ ವಂಶಪಾರ್ಯಂಪರ್ಯ ಅಧಿಕಾರವನ್ನು ರದ್ದುಗೊಳಿಸುತ್ತಾನೆ. ಪಟೇಲ ಹಾಗೂ ಶಾನುಭೋಗರಿಗೆ ಇದ್ದ ಕಂದಾಯ ರಿಯಾಯಿತಿಯನ್ನು ರದ್ದುಗೊಳಿಸುತ್ತಾನೆ. ತನ್ನ ಸೈನ್ಯದಲ್ಲಿರುವ ಸೈನಿಕರಿಗೆಲ್ಲಾ ಜೀವನಾಧಾರಕ್ಕೆ ಭೂಮಿಯನ್ನು ನೀಡುತ್ತಾನೆ. ಬಡ ರೈತಾಪಿ ಸ್ವತಂತ್ರ ಕೃಷಿಯನ್ನು ಪ್ರಾರಂಭಿಸಲು ಪ್ರೋತ್ಸಾಹಕ ಕ್ರಮಗಳನ್ನು ಘೋಷಿಸುತ್ತಾನೆ. ಪ್ರಭುತ್ವದ ಕಡೆಯಿಂದ ಬಡ್ಡಿರಹಿತ, ಕಂತುಗಳಲ್ಲಿ ತೀರಿಸಬಹುದಾದ, ಸಾ¯ವನ್ನು ಉಳುಮೆಗೆ ಬೇಕಾದ ವಸ್ತುಗಳ ರೂಪದಲ್ಲಿ ರೈತರಿಗೆ ನೀಡಲಾಗುತ್ತದೆ. ಟಿಪ್ಪುವಿನ ರಾಜ್ಯದಲ್ಲಿ ಸುಮಾರು 39,000 ಕೆರೆಗಳಿರುತ್ತವೆ. ಎಲ್ಲಾ ಕೆರೆಗಳಿಗೂ ದಲಿತ ಜಾತಿಗೆ ಸೇರಿದ ನೀರ್ಗುಂಟಿಯನ್ನು ನೇಮಿಸುತ್ತಾನೆ. ನೀರ್ಗುಂಟಿಗೆ ಕೆರೆ ನೀರಾವರಿ ಪ್ರದೇಶದಲ್ಲಿ ಭೂಮಿ ನೀಡುವುದಲ್ಲದೆ, ನೀರು ಬಿಡುವ ಕೆಲಸಕ್ಕೆ ಪ್ರತಿಯಾಗಿ ಪ್ರತ್ಯೇಕ ಸಂಬಳವನ್ನು ನಿಗದಿ ಮಾಡುತ್ತಾನೆ. ಹೀಗೆ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಜನಪರ ಸುಧಾರಣೆಗಳನ್ನು ಟಿಪ್ಪು ಪ್ರಾರಂಭಿಸುತ್ತಾನೆ.
ಟಿಪ್ಪುವಿನ ರಾಜ್ಯದಲ್ಲಿ ನದಿಗಳಿಗೆ 24 ಕಡೆ ದೊಡ್ಡ ಒಡ್ಡುಗಳನ್ನು ಕಟ್ಟಿ ಕಾಲುವೆಗಳ ಮೂಲಕ ಕೃಷಿಗೆ ನೀರನ್ನು ಹರಿಸಲಾಗುತ್ತಿರುತ್ತದೆ.[ ಆತ ಸಾಯುವಾಗ 70 ಅಡಿ ಎತ್ತರದ ಅಣೆಕಟ್ಟು ನಿರ್ಮಾಣ ಪ್ರಾರಂಭವಾಗಿರುತ್ತದೆ]. ಇದಲ್ಲದೆ 39,000 ಕೆರೆಗಳು ಹಾಗೂ 16,000 ಬಾವಿಗಳ ಮೂಲಕ ನೀರಾವರಿಯನ್ನು ನಡೆಸಲಾಗುತ್ತಿರುತ್ತದೆ. ಬ್ರಿಟೀಷ್ ಅಧಿಕಾರಿಗಳ ಪ್ರಕಾರ ಅವರು ಮೈಸೂರನ್ನು ವಶಪಡಿಸಿಕೊಂಡಾಗ ಒಟ್ಟು ರಾಜ್ಯದ ಶೇ.35ರಷ್ಟು ಭೂಮಿ ನೀರಾವರಿಗೆ ಒಳಪಟ್ಟಿರುತ್ತದೆ. ಈ ಪ್ರಮಾಣದ ನೀರಾವರಿಯನ್ನು ಅಭಿವೃದ್ಧಿಪಡಿಸಿದ್ದರಿಂದಲೇ ತೀವ್ರಗತಿಯಲ್ಲಿ ವಾಣಿಜ್ಯ ಬೆಳೆಗಳನ್ನು ಪರಿಚಯಿಸಲು ಸಾಧ್ಯವಾಗುತ್ತದೆ. ಮಲ್ಬರಿ, ಉತ್ಕ್ರುಷ್ಟ ಕಬ್ಬು, ಭತ್ತ, ತೆಂಗು, ಹಣ್ಣಿನ ಮರಗಳನ್ನು ಖುದ್ದು ಟಿಪ್ಪು ಆಸಕ್ತಿ ತೆಗೆದುಕೊಂಡು ಪ್ರೋತ್ಸಾಹಿಸಿ ಬೆಳೆಸಲು ಗಮನ ನೀಡುತ್ತಾನೆ. ಇದರಿಂದಾಗಿ ಹಳ್ಳಿಗಳ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಹೆಚ್ಚಾಗುತ್ತದೆ.
ಟಿಪ್ಪು ಪರಿಚಯಿಸಿದ ಈ ಕೃಷಿ ಮಾದರಿಯಲ್ಲಿ ಸಾಮಾಜಿಕ ನ್ಯಾಯ ಪ್ರಜ್ಞೆ ಗಮನಿಸತಕ್ಕ ಅಂಶವಾಗಿದೆ. ವೈದಿಕ ಬ್ರಾಹ್ಮಣ, ವೀರಶೈವ ಪಟೇಲ, ಶಾನುಭೋಗ ಮುಂತಾದವರ ಹಿಡಿತದಲ್ಲಿದ್ದ ದೊಡ್ಡ ಪ್ರಮಾಣದ ಭೂಮಿಯನ್ನು ‘ಉಳುತ್ತಿರುವವರೇ ಒಡೆಯರಾಗಬೇಕು’ ಎಂಬ ಆಧಾರದ ಮೇಲೆ ಶೂದ್ರ ರೈತಾಪಿಗೆ ಹಂಚಿದ್ದು, ನೀರಾವರಿಯನ್ನು ಅಭಿವೃದ್ಧಿಪಡಿಸಿ ದಲಿತರನ್ನೇ ನೀರ್ಗುಂಟಿಯಾಗಿ ನೇಮಿಸಿದ್ದು ಅಂದಿನ ಕಾಲಕ್ಕೆ ಸಣ್ಣ ವಿಚಾರವಾಗಿರಲಿಲ್ಲ.
ಅಭಿವೃದ್ಧಿಯ ಹರಿಕಾರ ಟಿಪ್ಪು:
ಇಡೀ ಭಾರತದಲ್ಲಿ ವಾಣಿಜ್ಯ ಚಟುವಟಿಕೆಯಲ್ಲಿ ಮೈಸೂರ್ ನಂಬರ್ 1ರ ಸ್ಥಾನವನ್ನು ಪಡೆದುಕೊಳ್ಳುತ್ತದೆ. ರಾಜ್ಯದ ವ್ಯಾಪಾರವನ್ನು ಅಭಿವ್ರುದ್ಧಿಪಡಿಸಲು ಟಿಪ್ಪು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ. ನಮ್ಮ ಆಳುವವರು ಅಭಿವೃದ್ಧಿಯ ಹೆಸರಿನಲ್ಲಿ ವಿದೇಶಿ ಹಣಕ್ಕೆ ಬಾಯಿತೆರೆದು ಕುಂತಿವೆ. ಟಿಪ್ಪು ಇದಕ್ಕೆ ತದ್ವಿರುದ್ಧವಾದ ಮಾದರಿಯನ್ನು ಅಳವಡಿಸುತ್ತಾನೆ. ಸ್ಥಳಿಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಬ್ರಿಟೀಷರ ಯಾವುದೇ ಸರಕು ಮೈಸರನ್ನು ಪ್ರವೇಶಿಸದಂತೆ ಹಾಗೇ ಮೈಸೂರಿನ ಯಾವುದೇ ಸರಕು ಅವರಿಗೆ ಮಾರಾಟವಾಗದಂತೆ ನಿರ್ಬಂಧ ವಿಧಿಸುತ್ತಾನೆ. ಈ ಮೂಲಕ ರಾಜ್ಯದಲ್ಲಿ ಬ್ರಿಟೀಷ್ ಕಂಪನಿಗೆ ತಲೆಹಿಡಿಯುವ ದಲ್ಲಾಳಿ ವ್ಯಾಪಾರಿಗಳು ಬೆಳೆಯದಂತೆ ತಡೆಯುತ್ತಾನೆ. ಸ್ವಾವಲಂಬಿ ವ್ಯಾಪಾರಿಗಳಿಗೆ ಪ್ರಭುತ್ವದ ಕಡೆಯಿಂದ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಾನೆ. ರಾಜ್ಯದಲ್ಲಿ ವ್ಯಾಪಾರಕ್ಕಾಗಿ 28 ವಾಣಿಜ್ಯ ಮಳಿಗೆಗಳನ್ನು ತೆರೆಯುತ್ತಾನೆ. ಹಾಗೆಯೇ ಮಸ್ಕಟ್, ಕರಾಚಿ, ಬಲೂಚಿಸ್ತಾನ್ ಒಳಗೊಂಡಂತೆ ವಿದೇಶಗಳಲ್ಲಿ 18 ವ್ಯಾಪಾರ ಮಳಿಗೆಗಳನ್ನು ಪ್ರಾರಂಭಿಸುತ್ತಾನೆ. ಮೈಸೂರು ಸರಕುಗಳ ವಿದೇಶಿ ವ್ಯಾಪಾರವನ್ನು ಪ್ರೋತ್ಸಾಹಿಸುತ್ತಾನೆ. ಪ್ರಭುತ್ವವೇ 100 ಹಡಗುಗಳ ಮೂಲಕ ಸಮುದ್ರ ವ್ಯಾಪಾರವನ್ನು ನಡೆಸುತ್ತದೆ. ಸರಕುಗಳ ಸಾಗಾಣಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಾದ್ಯಂತ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ‘18ನೇ ಶತಮಾನದ ಅತ್ಯಂತ ದೊಡ್ಡ ರಸ್ತೆ ನಿರ್ಮಾಪಕ’ ಎಂದು ಇತಿಹಾಸಕಾರರು ಟಿಪ್ಪುವನ್ನು ಉಲ್ಲೇಖಿಸುತ್ತಾರೆ. ವ್ಯಾಪಾರದ ವೃದ್ಧಿಯಿಂದಾಗಿ ಪಟ್ಟಣಗಳು ಬೆಳೆಯುತ್ತವೆ. ಬ್ರಿಟೀಷರ ಪ್ರಕಾರ ಟಿಪ್ಪು ರಾಜ್ಯ ಒಟ್ಟು 180 ಪಟ್ಟಣಗಳನ್ನು ಹೊಂದಿರುತ್ತದೆ. ಅದರಲ್ಲಿ ಶ್ರೀರಂಗಪಟ್ಟಣ, ಬೆಂಗಳೂರು, ನಗರ, ಸಿರಾ, ಚಿತ್ರದುರ್ಗ, ಬಳ್ಳಾರಿ ಹಾಗೂ ಧಾರವಾಡ 7 ಪ್ರಮುಖ ಪಟ್ಟಣಗಳಾಗಿರುತ್ತವೆ. ಒಟ್ಟು ರಾಜ್ಯದ ಶೇಕಡಾ 21ರಷ್ಟು ಜನಸಂಖ್ಯೆ ಪಟ್ಟಣಗಳಲ್ಲಿ ವಾಸವಾಗಿರುತ್ತದೆ. ಆ ಕಾಲಕ್ಕೆ ಭಾರತದಲ್ಲಿ ಇದು ಅತ್ಯಂತ ಹೆಚ್ಚು ನಗರೀಕರಣ ಹೊಂದಿದ ರಾಜ್ಯವಾಗಿರುತ್ತದೆ. ಇದು ಮೈಸೂರು ರಾಜ್ಯ ಎಷ್ಟೊಂದು ದೊಡ್ಡ ವಾಣಿಜ್ಯವಹಿವಾಟಿನ ರಾಜ್ಯವಾಗಿ ಬೆಳೆದಿತ್ತು ಎಂಬುದನ್ನು ಸೂಚಿಸುತ್ತದೆ. ಈ ವಾಣಿಜ್ಯ ಅಭಿವೃದ್ಧಿಯ ಮಾದರಿಯಲ್ಲೂ ಸ್ವಾಭಿಮಾನದ ಹಾಗೂ ದೇಸೀಯತೆಯ ಗುಣ ಎದ್ದುಕಾಣುತ್ತದೆ. ಭಾರತವನ್ನು ಆಕ್ರಮಿಸಿಕೊಳ್ಳುತ್ತಿದ್ದ ಬ್ರಿಟೀಷರ ಜೊತೆಗಿನ ವಹಿವಾಟನ್ನು ನಿರ್ಬಂಧಿಸಿ, ದೇಸಿ ಉತ್ಪಾದನೆಯನ್ನು ಪ್ರೋತ್ಸಾಹಿಸಿ, ಅದನ್ನು ಜಗತ್ತಿನಾದ್ಯಂತ ಮಾರಾಟ ಮಾಡುವ ಜಾಲವನ್ನು ನಿರ್ಮಿಸಿದ್ದು ಮಹತ್ವದ ವಿಚಾರವಾಗಿದೆ.
ದೇಶಪ್ರೇಮಿ ಟಿಪ್ಪು:
ಯುದ್ಧಗಳ ನಂತರ ಮೈಸೂರು ಆಳ್ವಿಕೆಗೆ ಒಳಪಟ್ಟ ಪ್ರದೇಶಗಳಲ್ಲಿ ಮೇಲ್ಕಂಡ ದಿಕ್ಕಿನ ಸುಧಾರಣೆಗಳನ್ನು ಹೈದರ್ ಹಾಗೂ ಟಿಪ್ಪು ತರುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಮೇಲ್ಕಂಡ ಸುಧಾರಣೆಗಳನ್ನು ತರಲು ಯುದ್ಧಗಳಲ್ಲಿ ತೊಡಗುತ್ತಾರೆ. ತಮ್ಮ ಆಳ್ವಿಕೆಯ 38 ವರ್ಷಗಳಲ್ಲಿ ಬಹುಪಾಲು ಸಮಯವನ್ನು ಹೈದರ್ ಹಾಗೂ ಟಿಪ್ಪು ಯುದ್ಧಗಳಲ್ಲೇ ಕಳೆದಿದ್ದಾರೆ. ಪಾಳೆಗಾರರ ಜೊತೆ ಅಥವ ಮರಾಠರ ಜೊತೆ ಅಥವ ಮಲಬಾರಿನ ನಾಯರ್‍ಗಳ ಜೊತೆ ಅಥವ ಕೊಡಗಿನ ಯೋಧರ ಜೊತೆ ಅಥವ ಬ್ರಿಟೀಷರ ಜೊತೆ, ಹೀಗೆ ಸದಾ ಒಂದಲ್ಲಾ ಒಂದು ಯುದ್ಧದಲ್ಲಿ ತೊಡಗಿರುತ್ತಿದ್ದರು. ಯುದ್ಧವಿಲ್ಲದ ವರ್ಷವೇ ಇಲ್ಲ ಎಂದು ಹೇಳಬಹುದು. “ಹೈದರ್ ಸಿಂಹಾಸನದ ಮೇಲೆ ಕುಂತಿದ್ದಕ್ಕಿಂತ ಕುದುರೆ ಮೇಲೆ ಕುಂತಿದ್ದೇ ಹೆಚ್ಚು” ಎಂಬ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ.
ಇವರಿಬ್ಬರು ನಡೆಸಿದ ಯುದ್ಧಗಳಲ್ಲಿ ವಸಾಹತು ವಿರೋಧಿ ಯುದ್ಧಗಳೆ ಅತ್ಯಂತ ಮಹತ್ವ ಉಳ್ಳವು. 9 ಪೂರ್ಣ ವರ್ಷಗಳು ಇವರು ಬ್ರಿಟೀಷರೊಂದಿಗಿನ 4 ಕದನಗಳಲ್ಲೇ ಕಳೆದಿದ್ದರೆ, ಮಿಕ್ಕ ಬಹುಪಾಲು ವರ್ಷಗಳನ್ನು ಇದಕ್ಕಾಗಿನ ತಯಾರಿಗೆ ವಿನಿಯೋಗಿಸಿದ್ದಾರೆ. ಬ್ರಿಟೀಷರನ್ನು ಹೊರಗಟ್ಟಲು ಇಷ್ಟೊಂದು ಸುದೀರ್ಘ ಕಾಲ ಕಾದಾಡಿದವರು ಭಾರತದಲ್ಲಿ ಮತ್ತ್ಯಾರೂ ಇಲ್ಲವೆಂದೇ ಹೇಳಬೇಕು. ಇವರು ಬ್ರೀಟೀಷರೊಂದಿಗೆ ನಡೆಸಿದ ಕಾದಾಟ ಕೇವಲ ತಮ್ಮ ರಾಜ್ಯವನ್ನು ಉಳಿಸಿಕೊಳ್ಳಲು ಆಗಿರಲಿಲ್ಲ. ಬದಲಿಗೆ ಅವರನ್ನು ಸೋಲಿಸಿ ಈ ನೆಲದಿಂದಲೇ ಹೊರಗಟ್ಟುವುದಾಗಿತ್ತು. ಜೀವ ಇರುವವgಗೂ ರಾಜಿ ಮಾಡಿಕೊಳ್ಳದೆ ಕಾದಾಡಿದ್ದೇ ಇದಕ್ಕೆ ಜೀವಂತ ಸಾಕ್ಷಿ. ಅವರ ಬ್ರಿಟೀಷ್ ವಿರೋಧಿ ನಿಲುವನ್ನು ಅವರಿಬ್ಬರ ಹಲವು ಬರಹಗಳಲ್ಲಿ ಕಾಣಬಹುದು. ತನ್ನ ಕೊನೆಗಾಲದಲ್ಲಿ ಹೈದರ್ ಟಿಪ್ಪುಗೆ ಬರೆದ ಪತ್ರ ಇದಕ್ಕೊಂದು ಒಳ್ಳೆ ಪುರಾವೆ. 1782ರಲ್ಲಿ ಹೈದರ್ ತುಂಬಾ ಅಸ್ವಸ್ಥನಾಗಿ ಹಾಸಿಗೆ ಹಿಡಿದಿರುತ್ತಾನೆ. ಟಿಪ್ಪು ಬಹಳ ದೂರ ಯುದ್ಧದಲ್ಲಿ ತೊಡಗಿರುತ್ತಾನೆ. ಹೈದರ್ ಸಾಯುವ ಮೊದಲು ಮಗನಿಗೆಂದು ಒಂದು ಪತ್ರ ಬರೆಸುತ್ತಾನೆ. ಆದರ ಸಾರಾಂಶ ಹೀಗಿದೆ: “ನನ್ನ ಮಗನೆ, ನಾನು ನನ್ನ ಪೂರ್ವಜರಿಂದ ಪಡೆದದ್ದಲ್ಲದ ಸಾಮ್ರಾಜ್ಯವನ್ನು ನಿನಗೆ ಬಿಟ್ಟು ಹೋಗುತ್ತಿದ್ದೇನೆ…ನೀನು ಕುಟುಂಬದಲ್ಲಿ ಯಾವ ಅಡಚಣೆಯನ್ನೂ ಎದುರಿಸುವುದಿಲ್ಲ; ಸೈನ್ಯಾಧಿಕಾರಿಗಳ ನಡುವೆಯೂ ನಿನಗ್ಯಾರೂ ಶತ್ರುಗಳಿಲ್ಲ… ನಿನ್ನ ರಾಜ್ಯದ ಆಂತರಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ನೀನು ಆತಂಕಪಟ್ಟುಕೊಳ್ಳುವಂಥದ್ದೇನೂ ಇಲ್ಲ, ಆದರೆ ನಿನ್ನ ನೋಟವನ್ನು ದೂರಕ್ಕೆ ಹಾಯಿಸುವ ಅಗತ್ಯವಿದೆ. ಔರಂಗಜೇಬನ ಮರಣದ ನಂತರ ಭಾರತ ಏಷಿಯಾದ ಸಾಮ್ರಾಜ್ಯಗಳ ಶ್ರೇಣಿಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಿದೆ. ಈ ಸತ್ಯಮಯಿ ಭೂಮಿ ವಿವಿಧ ಪ್ರಾಂತ್ಯಗಳಾಗಿ ವಿಭಜಿತಗೊಂಡಿದೆ, ಒಬ್ಬರು ಮತ್ತೊಬ್ಬರ ಜೊತೆ ಕಾದಾಡುತ್ತಿದ್ದಾರೆ; ಅನೇಕ ಪಂಗಡಗಳಾಗಿ ವಿಭಜಿಸಲ್ಪಟ್ಟಿರುವ ಜನರು ತಮ್ಮ ದೇಶದ ಬಗೆಗಿನ ಪ್ರೀತಿಯನ್ನು ಕಳೆದುಕೊಂಡಿದ್ದಾರೆ. ಸ್ಪಷ್ಟ ನಿಲುವನ್ನು ಹೊಂದದೆ, ಮೆತ್ತಗಾಗಿರುವ ಹಿಂದೂಗಳು, ತಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಸಮರ್ಥರಿಲ್ಲ; ಅದು ಪರಕೀಯರ ಬೇಟೆಯಾಗಿ ಪರಿವರ್ತಿತಗೊಂಡಿದೆ… ಈ ಮಹಾನ್ ಕಾರ್ಯದಲ್ಲಿ ದೇವರು ನೆರವಾದಲ್ಲಿ, ಮಹಮ್ಮದರ ಖಡ್ಗ ನಿನ್ನನ್ನು ತುರುಮಲೇನಿನ ಸಿಂಹಾಸನದ ಮೇಲೆ ಕೂರಿಸುವ ದಿನ ಬಹಳ ದೂರವಿಲ್ಲ. ನೀನು ಎದುರಿಸಬೇಕಿರುವ ಅತ್ಯಂತ ದೊಡ್ಡ ಅಡಚಣೆಯೆಂದರೆ ಯೂರೋಪಿಯನ್ನರ ಹೊಟ್ಟೆಕಿಚ್ಚು. ಆಂಗ್ಲರು ಇಂದು ಭಾರತದಲ್ಲಿ ಅತ್ಯಂತ ಪ್ರಬಲರಾಗಿದ್ದಾರೆ. ಅವರನ್ನು ಯುದ್ಧದ ಮೂಲಕ ದುರ್ಬಲಗೊಳಿಸುವ ಅಗತ್ಯವಿದೆ. ಹಿಂದೂಸ್ತಾನದಲ್ಲಿರುವ ಸಂಪನ್ಮೂಲಗಳು ಅವರನ್ನು ಆಕ್ರಮಿತ ಭೂಮಿಯಿಂದ ಹೊರಗಟ್ಟಲು ಸಾಲುವಷ್ಟಿಲ್ಲ. ಯೂರೋಪಿಯನ್ ದೇಶಗಳನ್ನೇ ಒಂದಕ್ಕೇ ಎದುರಾಗಿ ಮತ್ತೊಂದನ್ನು ನಿಲ್ಲಿಸು. ಭಾರತೀಯ ಸೈನ್ಯಗಳಿಗಿಂತ ಉತ್ತಮ ತರಭೇತಿಯನ್ನು ಹೊಂದಿರುವ ಫ್ರೆಂಚರ ಸಹಾಯದೊಂದಿಗೆ ನೀನು ಬ್ರಿಟೀಷರನ್ನು ಸೋಲಿಸಬಹುದು. ಯೂರೋಪಿಯನ್ನರು ಉತ್ತಮ ಯುದ್ಧಕಲೆಯನ್ನು ಹೊಂದಿದ್ದಾರೆ, ಸದಾ ಅವರ ಆಯುಧವನ್ನೇ ಅವರ ವಿರುದ್ಧ ಬಳಸು… ನಾನು ನಿನ್ನ ಕೆಚ್ಚನ್ನು ಜಾಗ್ರುತಗೊಳಿಸಬೇಕಿಲ್ಲ. ನಾನು ಅನೇಕ ಸಲ ನೀನು ನನ್tನ ಜೊತೆಗೂಡಿ ಕಾದಾಡಿರುವುದನ್ನು ಕಂಡಿದ್ದೇನೆ; ಎಲ್ಲಕ್ಕಿಂತ ಒಂದನ್ನು ನೆನಪಿನಲ್ಲಿಡು, ಶೌರ್ಯ ನಮ್ಮನ್ನು ಸಿಂಹಾಸನಕ್ಕೇರಿಸಬಹುದು ಆದರೆ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಅದಷ್ಟೇ ಸಾಲುವುದಿಲ್ಲ. ಅದನ್ನು ಜನರ ಪ್ರೀತಿಗೆ ಅರ್ಪಿಸಲು ನಾವು ದೌಡಾಯಿಸಿದಿದ್ದರೆ ಅದು ನಮ್ಮ ಕೈ ಜಾರಿಯೂ ಹೋಗಬಹುದು” .
ಹೈದರ್, 1754ರಲ್ಲಿ ಮೈಸೂರಿನ ಸೈನ್ಯದ ಅಧಿಕಾರಿಯಾಗಿ ತಿರುಚನಾಪಳ್ಳಿಯಲ್ಲಿ ಯುದ್ಧದಲ್ಲಿ ತೊಡಗಿದ್ದ 10 ತಿಂಗಳಲ್ಲಿ ಬ್ರಿಟೀಷ್ ಸೈನ್ಯದ ಬಲಶಾಲಿ ಅಂಶಗಳಾದ-ಯುದ್ಧ ಕಲೆ, ತಂತ್ರಜ್ಞಾನ ಹಾಗೂ ಸಂಘಟನೆಯಿಂದ ಕಲಿಯಲು ತೀವ್ರ ಪ್ರಯತ್ನ ಪಡುತ್ತಾನೆ. ಮಾಜಿ ಫ್ರೆಂಚ್ ಸೈನಿಕರನ್ನು ಕರೆಸಿಕೊಂಡು ಯೂರೋಪಿಯನ್ ಸೈನ್ಯಗಳ ಮಾದರಿಯಲ್ಲಿ ತನ್ನ ಸೈನ್ಯಕ್ಕೆ ತರಭೇತಿ ನೀಡಿಸುತ್ತಾನೆ. ಹೈದರ್ ಹಾಗೂ ಟಿಪ್ಪು ಫ್ರೆಂಚ್ ಹಾಗೂ ಪೋರ್ಚುಗೀಸ್ ತುಕಡಿಯನ್ನು ನೇಮಿಸಿಕೊಂಡು ಯೂರೋಪಿಯನ್ ಮಾದರಿಯಲ್ಲಿ ತಮ್ಮ ಸೈನ್ಯವನ್ನು ಸುವ್ಯವಸ್ಥಿತಗೊಳಿಸುತ್ತಾರೆ. ಅದೇ ರೀತಿ ಮಾರಾಠರಿಂದ ಅಶ್ವದಳವನ್ನು ಆಧರಿಸಿ ನಡೆಸುವ ಸಂಚಾರಿ ಯುದ್ಧ ಕಲೆಯನ್ನು, ಪಾಳೆಗಾರರಿಂದ ದುರ್ಬಲಗೊಂಡಾಗ ಕಾಡೊಳಗೆ ಹೊಕ್ಕು ಪ್ರತಿರೋಧ ಮುಂದುವರೆಸುವ ಗೆರಿಲ್ಲಾ ಯುದ್ಧ ತಂತ್ರಗಳನ್ನೂ ಕಲಿಯುತ್ತಾರೆ. ಹೀಗೆ ಶತೃಗಳ ಶಕ್ತಿಶಾಲಿ ಅಂಶಗಳಿಂದ ಕಲಿಯುತ್ತಾ, ಶತ್ರುಗಳ ಶತ್ರುಗಳ ಸಹಾಯವನ್ನು ಪಡೆಯುತ್ತಾ ಬಲಶಾಲಿ ಸೈನ್ಯವನ್ನು ಕಟ್ಟಿನಿಲ್ಲಿಸುತ್ತಾರೆ.
1786ರಲ್ಲಿ ಟಿಪ್ಪುವಿನ ಸೈನ್ಯ 1,44,000 ಸೈನಿಕರನ್ನು ಹೊಂದಿದ ಬ್ರುಹದ್ ಶಕ್ತಿಯಾಗಿ ಬೆಳೆದಿರುತ್ತದೆ. ಅದರಲ್ಲಿ
ಅಶ್ವದಳ 19,000.
ಫಿರಂಗಿದಳ 10,000.
ಕೋವಿದಳ 70,000.
ರಾಕೆಟ್‍ದಳ 5,000.
ಅನಿಯತ ಕೋವಿದಳ 40,000 ಸೇರಿವೆ.
ಹೈದರ್ ಹಾಗೂ ಟಿಪ್ಪುರವರ ಯುದ್ಧ ನೈಪುಣ್ಯತೆಗೆ ಅತ್ಯಂತ ಉಕೃಷ್ಟ ಉದಾಹರಣೆಯೆಂದರೆ ಅವರ ರಾಕೆಟ್ ತಯಾರಿಕೆಯಾಗಿದೆ. 1.4 ಕಿಮೋ ನವರೆಗೂ ಹಾರಿ ನಂತರ ಸಿಡಿಯಬಲ್ಲ ರಾಕೆಟ್‍ಗಳನ್ನು ಇವರು ತಯಾರಿಸುತ್ತಾರೆ. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಿದ ರಾಕೆಟ್ ತಯಾರಿಕೆಯ ರಹಸ್ಯವನ್ನು ಬ್ರಿಟೀಷರಿಂದ ಬೇಧಿಸಲು ಸಾಧ್ಯವಾಗಲಿಲ್ಲ. 1799ರಲ್ಲಿ ಶ್ರೀರಂಗಪಟ್ಟಣದ ಪತನವಾದ ನಂತರವಷ್ಟೇ ಕಾರ್ಖಾನೆಯಲ್ಲಿ ದೊರೆತ ಮಾದರಿಗಳನ್ನು, ಯಂತ್ರಗಳನ್ನು, ಬಿಡಿಭಾಗಗಳನ್ನು ಆಧರಿಸಿ ವಿಲಿಯಂ ಕಾಂಗ್ರೇವ್ ಎಂಬ ಬ್ರಿಟೀಷ್ ಅಧಿಕಾರಿ ಅವುಗಳ ನಕಲನ್ನು ತಯಾರಿಸುತ್ತಾನೆ.
1805ರಲ್ಲಿ ಬ್ರಿಟೀಷರು ಇವನ್ನು ಬಳಸತೊಡಗುತ್ತಾರೆ. ಪ್ರಪಂಚದಲ್ಲಿ ಬೆಳೆದ ರಾಕೆಟ್ ಹಾಗೂ ಮಿಸೈಲ್ ತಂತ್ರಜ್ಞಾನಕ್ಕೆ ಮೂಲ ಟಿಪ್ಪು ತಯಾರಿಸಿದ ರಾಕೆಟ್‍ಗಳೆ ಎಂದು ಹೇಳಲಾಗುತ್ತದೆ.
ಬ್ರಿಟೀಷರಿಗೂ ಹಾಗೂ ಹೈದರ್-ಟಿಪ್ಪು ನೇತ್ರುತ್ವದ ಮೈಸೂರು ಸೈನ್ಯಕ್ಕೂ ನಡುವೆ ನಾಲ್ಕು ಬ್ರುಹತ್ ಯುದ್ಧಗಳು ನಡಿಯುತ್ತವೆ.
1767-1769ರ ನಡುವೆ ನಡೆದ ಪ್ರಥವ ಯುದ್ಧದಲ್ಲಿ ಹೈದರಾಲಿಯ ಪಡೆಗಳು ಬ್ರಿಟೀಷರಿಗೆ ಹಲವು ಬಾರಿ ಚಳ್ಳೆಹಣ್ಣು ತಿನ್ನಿಸಿ ಭಾರೀ ನಷ್ಟವನ್ನುಂಟು ಮಾಡುತ್ತವೆ. ಅಂತಿಮವಾಗಿ ಮೈಸೂರಿಗೆ ಜಯವಾಗುತ್Àದೆ, ಬ್ರಿಟೀಷರಿಗೆ ಸೋಲು. ಇದು ಭಾರತೀಯ ಪಡೆಗಳ ಕೈಯಲ್ಲಿ ಬ್ರಿಟೀಷರು ಅನುಭವಿ¸ದ ಮೊದಲ ಸೋಲಾಗಿರುತ್ತದೆ.
1780-84ರ ನಡುವೆ ಎರಡನೇ ಯುದ್ಧ ನಡಿಯುತ್ತದೆ. ಈ ಯುದ್ಧಕ್ಕೆ 90,000 ಜನರನ್ನು ಅಣಿನೆರೆಸಲಾಗುತ್ತದೆ. ಈ ಯುದ್ಧದಲ್ಲೂ ಬ್ರಿಟೀಷರಿಗೆ ಸೋಲಾಗುತ್ತದೆ. ಬ್ರಿಟೀಷರ 4,000 ಸೈನಿಕರನ್ನು ವಶಪಡಿಸಿಕೊಂಡು ಒಪ್ಪಂದದ ನಂತರ ಬಿಡುಗಡೆ ಮಾಡಲಾಗುತ್ತದೆ. ಭಾರತದ ಇತಿಹಾಸದಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯ ಬ್ರಿಟೀಷ್ ಸೈನಿಕರನ್ನು ವಶಪಡಿಸಿಕೊಂಡ ಉದಾಹರಣೆ ಇದೇ ಆಗಿದೆ.
ಮೂರನೇ ಬಾರಿ ಆಕ್ರಮಣ ಮಾಡುವ ಮೊದಲು ಬ್ರಿಟೀಷರು ಟಿಪ್ಪು ಜೊತೆ ವೈಷಮ್ಯ ಹೊಂದಿದ್ದ ರಾಜರ ಮೈತ್ರಿಯನ್ನು ಮಾಡಿಕೊಳ್ಳುತ್ತಾರೆ. ಮಾರಾಠರು, ಹೈದರಾಬಾದ್ ನಿeóÁಮ, ಟ್ರ್ಯಾವನ್‍ಕೋರ್ ಹಾಗೂ ಕೊಚಿನ್‍ಗಳ ರಾಜರು ಹಾಗೂ ಹಲವಾರು ಪಾಳೆಗಾರರು ಬ್ರಿಟೀಷರ ಜೊತೆ ಕೈಗೂಡಿಸುತ್ತಾರೆ. ಒಟ್ಟು 10 ಲಕ್ಷ ಶತ್ರು ಸೈನ್ಯ ಶ್ರೀರಂಗಪಟ್ಟಣವನ್ನು ಸುತ್ತುವರೆದರೂ, 2 ವರ್ಷಗಳ ಕಾಲ ಯುದ್ಧ ನಡೆದರೂ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಶತ್ರು ಸೈನ್ಯಕ್ಕೆ ಆಹಾರದ ಅಭಾವವೂ ಸೃಷ್ಟಿಯಾಗಿ ಅನಿವಾರ್ಯವಾಗಿ ಒಪ್ಪಂದಕ್ಕೆ ಮುಂದಾಗುತ್ತಾರೆ. ಈ ಯುದ್ಧದಲ್ಲಿ ಮೈಸೂರು ಅರ್ಧದಷ್ಟು ಪ್ರಾಂತ್ಯವನ್ನು, 70 ಕೋಟೆಗಳನ್ನು, 800 ಫಿûರಂಗಿಗಳನ್ನು, 3,00,000 ರೂಪಾಯಿ ಯುದ್ಧ ಪರಿಹಾರವನ್ನು, 50,000 ಸೈನಿಕರನ್ನು ಕಳೆದುಕೊಳ್ಳುತ್ತದೆ.
ಈ ಪ್ರಮಾಣದ ನಷ್ಟಕ್ಕೆ ಗುರಿಯಾಗಿದ್ದರೂ ಬಹುಬೇಗನೇ ಟಿಪ್ಪು ಮತ್ತೆ ಸೈನ್ಯವನ್ನು ಕಟ್ಟಿನಿಲ್ಲಿಸುತ್ತಾನೆ. ಆದರೆ ಬ್ರಿಟೀಷರು ಟಿಪ್ಪುವಿನ ಮುಖ್ಯಮಂತ್ರಿ ಪೂರ್ಣಯ್ಯನನ್ನು ಹಾಗೂ ಸೇನಾ ದಂಡನಾಯಕ ಮೀರ್ ಸಾಧಿಕ್‍ನನ್ನು ಖರೀದಿಸಿ ಆಂತರಿಕ ವಿದ್ರೋಹವನ್ನು ಖಾತ್ರಿ ಪಡಿಸಿಕೊಂಡು ಆಕ್ರಮಣ ಮಾಡುತ್ತಾರೆ. ಪ್ರಮುಖ ವ್ಯಕ್ತಿಗಳ ದ್ರೋಹದ ಹೊರತಾಗಿಯೂ ಟಿಪ್ಪು ಹಾಗೂ ಆತನ ಸೈನ್ಯ ವೀರೋಚಿತವಾಗಿ ಹೋರಾಡುತ್ತದೆ. ಬ್ರಿಟೀಷರು ಕಳಿಸುವ ಶರಣಾಗತಿಯ ಹಾಗೂ ವ್ಯಕ್ತಿಗತ ಆಮಿಷದ ಸಂದೇಶಗಳನ್ನು ತಿರಸ್ಕರಿಸುತ್ತಾನೆ. “ನಾನು 200 ವರ್ಷ ಕುರಿಯಾಗಿ ಬದುಕುವುದಕ್ಕಿಂತ 2 ದಿನ ಹುಲಿಯಾಗಿ ಬದುಕಲು ಬಯಸುತ್ತೇನೆ” ಎಂದು ತನ್ನ ಆತ್ಮೀಯರ ಬಳಿ ಹೇಳಿಕೊಳ್ಳುತ್ತಾನೆ. ಕೊನೆ ಉಸಿರಿನ ತನಕ ರಣರಂಗದಲ್ಲಿ ಕಾದಾಡುತ್ತಲೇ ಮಡಿಯುತ್ತಾನೆ.
ಮೇ 4, 1999 ರಲ್ಲಿ ಸಂಭವಿಸುವ ಟಿಪ್ಪುವಿನ ಸಾವು ಹಾಗೂ ಮೈಸೂರಿನ ಪತನ, ಭಾರತದ ಇತಿಹಾಸದಲ್ಲಿ ಒಂದು ದೊಡ್ಡ ನಷ್ಟವಾಗಿದೆ. ಬ್ರಿಟೀಷರನ್ನು ತಡೆಯಬಹುದಾಗಿದ್ದ ಏಕೈಕ ಶಕ್ತಿ ನಾಶವಾಗುತ್ತದೆ. ಬ್ರಿಟೀಷರ ಈ ವಿಜಯವನ್ನು ಬ್ರಿಟೀಷ್ ಅಧಿಕಾರಿ ಥಾಮಸ್ ಮುನ್ರೊ ಈ ರೀತಿ ಸಾರಾಂಶೀಕರಿಸುತ್ತಾನೆ: “ಬೆಂಗಳೂರನ್ನು ನಾವು ತೆಗೆದುಕೊಂಡಾಗ ಕ್ರಮೇಣ ಭಾರತವನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಖಚಿತವಾಯಿತು. ಮೈಸೂರನ್ನು ಮುರಿದ ನಂತರ ನಮ್ಮನ್ನು ತಡೆಯುವವರು ಯಾರೂ ಇಲ್ಲವಾದರು”.
ಟಿಪ್ಪು ನಂತರದ ಕರ್ನಾಟಕ:
ಟಿಪ್ಪು ಮರಣದ ನಂತರ ಕರ್ನಾಟಕ ಯಾವ ದಿಕ್ಕನ್ನು ಹಿಡಿಯಿತು ಎಂಬುದನ್ನು ಸಂಕ್ಷಿಪ್ತವಾಗಾದರೂ ನೋಡಿದರೆ ನಾವು ಕಳೆದುಕೊಂಡಿದ್ದೆಷ್ಟು ಎಂಬುದು ಅರ್ಥವಾಗುತ್ತದೆ. ಕರ್ನಾಟಕÀವನ್ನು ವಶಪಡಿಸಿಕೊಂಡ ನಂತರ ಬ್ರಿಟೀಷರು ಅದನ್ನು 50 ಭಾಗಗಳಾಗಿ ತುಂಡುತುಂಡಾಗಿಸುತ್ತಾರೆ. 1956ರ ಹೊತ್ತಿಗೂ ಕರ್ನಾಟಕ 20 ತುಂಡುಗಳಾಗಿ ವಿಭಜಿತಗೊಂಡಿತ್ತು. ಮೈಸೂರು ರಾಜ್ಯ, ಮಡ್ರಾಸ್ ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ, ಹೈದರಬಾದ್ ರಾಜ್ಯ, ಕೊಡಗು, ಕೊಲ್ಹಾಪುರ್ ರಾಜ್ಯ, ಸಾಂಗ್ಲಿ ರಾಜ್ಯ, ಮೀರಾಜ್ ರಾಜ್ಯ, ಜೂನಿಯರ್ ಮೀರಜ್, ಕುರುಂದ್ವಾಡ್ ಸೀನಿಯರ್, ಕುರುಂದ್ವಾಡ್ ಜೂನಿಯರ್, ಜಮಖಂಡಿ ರಾಜ್ಯ, ಮುಧೋಳ್ ರಾಜ್ಯ, ಜಟ್ ರಾಜ್ಯ, ಅಕ್ಕಲಕೋಟೆ, ಗುಂದಾಳ್, ರಾಮದುರ್ಗ, ಸುಂಡೂರು, ಸವಣೂರು ರಾಜ್ಯಗಳು ಹಾಗೂ ಬೆಳಗಾಂ, ಬೆಂಗಳೂರು ಮತ್ತು ಬಳ್ಳಾರಿ ದಂಡು ಪ್ರದೇಶಗಳು. ಈ ರೀತಿಯ ವಿಭಜನೆಯ ರಾಜಕೀಯ ಉದ್ದೇಶ ಕನ್ನಡ ನಾಡಿನ ಐಕ್ಯತೆಯನ್ನು ಮುರಿದು ದುರ್ಬಲಗೊಳಿಸುವುದೇ ಆಗಿತ್ತು. ಹೀಗೆ ಕರ್ನಾಟಕದ ವಸಾಹತು ದಾಸ್ಯ ಪ್ರಾರಂಭವಾಯಿತು.

ಬ್ರಿಟೀಷರೊಂದಿಗೆ ಟಿಪ್ಪು ಕಾದಾಡುತ್ತಿದ್ದಾಗ ಕ್ರಿಷ್ಣರಾಜ ಒಡೆಯರ್ II ನ ಹೆಂಡತಿ ಲಕ್ಷ್ಮಿ ಅಮ್ಮಾಣಿ ಮೊಮ್ಮಗ ಕಿಷ್ಣರಾಜ ಒಡೆಯರ್ III ಅನ್ನು ದತ್ತು ತೆಗೆದುಕೊಂಡು ಅರಮನೆಯ ವಹಿವಾಟನ್ನು ನೋಡಿಕೊಳ್ಳುತ್ತಿರುತ್ತಾಳೆ. ಬ್ರಿಟೀಷರು ಮೈಸೂರನ್ನು ದಾಳಿ ಮಾಡಿದಾಗಿನಿಂದಲೂ ಈಕೆ ಬ್ರಿಟೀಷರನ್ನು ಸಂಪರ್ಕಿ¸ ಅವರು ಹೈದರ್ ಅಲಿಯನ್ನು ಸೋಲಿಸಿ ತಮ್ಮ ರಾಜ್ಯವನ್ನು ತಮಗೆ ಹಿಂತಿರುಗಿಸಿಕೊಟ್ಟಲ್ಲಿ ಯುದ್ಧದ ವೆಚ್ಚಗಳನ್ನು ಹಾಗೂ ಅಪಾರ ಜಾಗೀರನ್ನು ಬ್ರಿಟೀಷರಿಗೆ ನೀಡುವುದಾಗಿ ಸಂದೇಶ ಕಳುಹಿಸುತ್ತಿರುತ್ತಾಳೆ. ¥sóÉಬ್ರವರಿ 1799ರಲ್ಲಿ [ಶ್ರೀರಂಗಪಟ್ಟಣದ ಪತನದ ಮೂರು ತಿಂಗಳ ಮೊದಲು] ಬ್ರಿಟೀಷರಿಗೆ ಆಕೆ ಬರೆಯುವ ಪತ್ರದಲ್ಲಿ “ನಮ್ಮನ್ನು ನಮ್ಮ ಕಷ್ಟಗಳಿಂದ ಮುಕ್ತಿಗೊಳಿಸಲು, ದೇವರೇ ನಿಮಗೆ ಉನ್ನತ ಸ್ಥಾನ ನೀಡಿ ನಮ್ಮ ದೇಶಕ್ಕೆ ಕಳುಹಿಸಿಕೊಟ್ಟಿರುವುದಾಗಿ ಇತ್ತೀಚಿಗೆ ನಮಗೆ ತಿಳಿಯಿತು. ನೀವು ಉದಾರರೂ, ಉತ್ತಮ ಉದ್ದೇಶ ಹೊಂದಿದವರೂ ಹಾಗೂ ಧರ್ಮ ನಿಷ್ಠರೂ ಎಂದೂ ಸಹ ಕೇಳಲ್ಪಟ್ಟೆವು. ಆದ್ದರಿಂದ ನಾವು ನಿಮ್ಮ ರಕ್ಷಣೆಯನ್ನು ಬಯಸುತ್ತೇವೆ”. ಅಂತೆಯೇ ಯುದ್ಧದ ನಂತರ ಬ್ರಿಟೀಷರು ರಾಣಾ ಒಪ್ಪಂದ ಮಾಡಿಕೊಂಡು ಗದ್ದುಗೆಯಲ್ಲಿ ಬಾಲರಾಜನನ್ನು ಕೂರಿಸುತ್ತಾರೆ. ಬಾಲರಾಜ ಬೆಳೆದ ನಂತರವೂ ಬ್ರಿಟೀಷರ ಕೊಡುಗೆಯನ್ನು ಮರೆಯಲಿಲ್ಲ. ಮೈಸೂರು ಸಂಸ್ಥಾನ ತೀವ್ರ ಆರ್ಥಿಕ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದ್ದಗಲೂ ಆತ ಹೀಗೆ ಬರೆಯುತ್ತಾನೆ “ನಿಮ್ಮಿಂದ ಬೆಳೆಸಲ್ಪಟ್ಟ, ನಿಮ್ಮ ಉದಾರಿ ಸರ್ಕಾರದ ರಕ್ಷಣೆಯಲ್ಲಿ ತೆಗೆದುಕೊಳ್ಳಲ್ಪಟ್ಟ ನಾನು ನನ್ನ ಎಲ್ಲಾ ಬಯಕೆಗಳ ಪೂರೈಕೆಗೆ ನಿಮ್ಮ ದಯೆಗೆ ಎದುರು ನೋಡುತ್ತೇನೆ..ತನ್ನ ಪೋಷಣೆ ಹಾಗೂ ರಕ್ಷಣೆಯಡಿ ತೆಗೆದುಕೊಂಡ ಸರ್ಕಾರಕ್ಕೆ ನನ್ನ ಜೀವವನ್ನೇ ಮುಡಿಪಿಡುತ್ತೇನೆ”. ಬ್ರಿಟೀಷರ ಯಶಸ್ಸಿನಲ್ಲಿ ತನ್ನ ಸಂತೋಷವನ್ನು ಕಾಣುವುದನ್ನು ಈತ ಮೈಗೂಡಿಸಿಕೊಂಡುಬಿಟ್ಟಿದ್ದ.

ಇದಲ್ಲದೆ ಹೈದರ್ ಹಾಗೂ ಟಿಪ್ಪು ತಂದ ಭೂ ಸುಧಾರಣೆಗಳನ್ನು ಮತ್ತೆ ತಿರುಗುಮುರುಗುಗೊಳಿಸುವ ಕೆಲಸವನ್ನು ಬ್ರಿಟೀಷರು ಪ್ರಾರಂಭಿಸುತ್ತಾರೆ. ಮೈಸೂರು ರಾಜ್ಯದಲ್ಲಿ ಪಾಳೆಗಾರ ವ್ಯವಸ್ಥೆ ಸಂಪೂರ್ಣ ನಾಶವಾಗಿರುವ ಕಡೆ ಹಳೆ ಭೂಮಾಲೀಕರನ್ನು ಪೆನ್ಷನ್ ನೀಡಿ ಹಳ್ಳಿಗಳ ಪಟೇಲರನ್ನಾಗಿ ನೇಮಿಸುತ್ತಾರೆ. ಪಾಳೆಗಾರರು ಇನ್ನು ಬಲವಾಗಿರುವ ಕಡೆ ಅವರನ್ನು ಕಂದಾಯ ಸಲ್ಲಿಸುವ ಹಾಗೂ ಕಂದಾಯ ಸಂಗ್ರಹಿಸುವ ಜûಮಿನ್ದಾರರನ್ನಾಗಿ ನೇಮಿಸುತ್ತಾರೆ. ಕರಾವಳಿಯಲ್ಲಿ ಮಾಡಿದ ಲ್ಯಾಂಡ್ ಸೆಟಲ್‍ಮೆಂಟ್ ಕುರಿತು ಮುನ್ರೋ ಈ ರೀತಿ ಬರೆಯುತ್ತಾನೆ “ಎಲ್ಲಾ ಲ್ಯಾಂಡ್ ಸೆಟಲ್‍ಮೆಂಟ್ ಅನ್ನು ಭೂಮಾಲೀಕರೊಂದಿಗೆ[ವರ್ಗದಾರಾಸ್] ಮಾಡಿಕೊಂಡಿದ್ದೇನೆ ಅಥವ ಭೂಮಾಲೀಕರು ಇಲ್ಲದ ಕಡೆ ತಕ್ಷಣದ ಹಿಡುವಳಿದಾರರ ಜೊತೆ [ಮುಲ್‍ಗೇಣಿದಾರ] ಮಾಡಿಕೊಂಡಿದ್ದೇನೆ”. [ವರ್ಗದಾರಾಸ್ ಎಂಬುವರು ಹಳೆ ಭೂಮಾಲೀಕರಾದರೆ ಮುಲ್‍ಗೇಣಿದಾರರು ಹೊಸದಾಗಿ ಪ್ರವರ್ಧಮಾನಕ್ಕೆ ಬಂದ ಆದರೆ ತಾವೂ ಸಹ ಉಳುಮೆ ಮಾಡದ ಎರಡನೇ ಸ್ತರದ ಭೂಮಾಲೀಕರೇ ಆಗಿದ್ದಾರೆ]. ಉತ್ತರ ಕರ್ನಾಟಕದಲ್ಲಿ ಭೂಮಾಲೀಕರಿಗೆ ಇನಾಂ ಭೂಮಿಗಳನ್ನು ವಿಸ್ತ್ರುತವಾಗಿ ನೀಡುತ್ತಾರೆ. “ಧಾರವಾಡ ಜಿಲ್ಲೆಯ ಶೇ. 13 ಭಾಗ ಹಳ್ಳಿಗಳು ಇನಾಂ ಹಳ್ಳಿಗಳಾಗಿದ್ದವು”. ಬೆಳಗಾಂ ಜಿಲ್ಲೆಯಲ್ಲಿ 122 ದೇಸಾಯಿ ಮನೆತನಗಳು ಇನಾಂ ಭೂಮಿಗಳನ್ನು ಹೊಂದಿದರು. ಬ್ರಾಹ್ಮಣ ಪಟವರ್ಧನ್ ಮನೆತನಗಳಿಗೆ ಪುಟ್ಟ ಪುಟ್ಟ ರಾಜ್ಯಗಳನ್ನು ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರು. ಹೈದರಾಬಾದ್ ಕರ್ನಾಟಕದಲ್ಲಿ ನಿಜಾಮನಡಿ ಇದ್ದ ಇನಾಂದಾರರು ಹಾಗೂ ಜಾಗೀರ್‍ದಾರರು ಸಂಪೂರ್ಣ ಭೂ ಹಿಡಿತವನ್ನು ಹೊಂದಿದ್ದರು. ಇವರನ್ನು ಬ್ರಿಟೀಷರು ಪೋಷಿಸಿ ಉಳಿಸಿಕೊಂಡರು. ಕೊಡಗಿನಲ್ಲಿ ಮಾಜಿ ಭೂಮಾಲೀಕ ಮನೆತನಗಳಾದ ಅಪ್ಪರಂದ್ರ, ಚೆಪ್ಪುದಿರ ಮತ್ತು ಬಿದ್ಧಂದ್ರ ಕುಟುಂಬಗಳ ಜೊತೆ ಹಾಗೂ ಹೊಸ ಸೇವಕರಾದ ಬಿಟ್ಟಿಯಂದ್ರ, ಮಾದಂದ್ರ, ಕೊಲೊವಂದ್ರ, ಕುಟ್ಟೆತಿರ ಮತ್ತು ಮಾನಬಂದ ಕುಟುಂಬಗಳ ಜೊತೆ ಮೈತ್ರಿ ಸಾಧಿಸಿ ಬೆಳೆಸಿದರು. [ಈ ಮನೆತನಗಳೆ ಮುಂದಿನ ದಿನಗಳಲ್ಲೂ ನೂರಾರು ಎಕರೆ ಕಾಫಿû ತೋಟಗಳನ್ನು ಇಟ್ಟುಕೊಂಡು ಕೊಡಗಿನ ರಾಜಕೀಯ-ಸಾಮಾಜಿಕ ಬದುಕನ್ನು ನಿಯಂತ್ರಿಸುತ್ತ್ ಬಂದಿವೆ]. ಹೀಗೆ ಬ್ರಿಟೀಷರು ರಾಜ್ಯದಾದ್ಯಂತ ಪತನದ ಹಾದಿಯಲ್ಲಿದ್ದ ಭೂಮಾಲೀಕರನ್ನು ಉಳಿಸಿ, ಬೆಳೆಸಿ, ಬಳಸಿಕೊಂಡರು. ಬ್ರಿಟೀಷರು ಬಂದು ಜಮಿನ್ದಾರಿಕೆಯನ್ನು ದುರ್ಬಲಗೊಳಿಸಿದರು ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ ವಾಸ್ತವದಲ್ಲಿ ಅವರು ಊಳಿಗಮಾನ್ಯತೆಯನ್ನು ದುರ್ಬಲಗೊಳಿಸಿದ್ದಲ್ಲ ಬದಲಿಗೆ ಬಲಗೊಳಿಸಿದ್ದು ಎಂಬುದು ನಿಚ್ಚಳ ವಾಸ್ತವವಾಗಿದೆ.

ಭೂಮಾಲೀಕ ವರ್ಗವನ್ನು ಪುನರುತ್ಥಾನಗೊಳಿಸಿದ್ದಲ್ಲದೆ, ಈ ಭೂಮಾಲೀಕ ವರ್ಗಗಳ ಮೂಲಕ ಊಳಿಗಮಾನ್ಯ ಧಾರ್ಮಿಕ ಸಂಸ್ಥೆಗಳನ್ನು ಸಹ ಮತ್ತೆ ಜೀರ್ಣೋದ್ಧಾರ ಮಾಡುವ ಕೆಲಸ ಪ್ರಾರಂಭವಾಯಿತು. ಟಿಪ್ಪುವಿನ ಪತನದ ಕೆಲವೇ ವರ್ಷಗಳಲ್ಲಿ ಧಾರ್ಮಿಕ ಸಂಸ್ಥೆಗಳು ಹೇಗೆ ಹಣಬೆಗಳಂತೆ ಎದ್ದು ಕೂತವು ಎಂಬುದಕ್ಕೆ ಮೈಸೂರು ರಾಜ್ಯದ ಕೆಳಗಿನ ಅಂಕಿಸಂಖ್ಯೆಗಳೆ ಸಾಕ್ಷಿ.

ಧಾರ್ಮಿಕ ಸಂಸ್ಥೆಗಳು
1801ರಲ್ಲಿ ಸಂಖ್ಯೆ
1804ರಲ್ಲಿ ಸಂಖ್ಯೆ

ಮುಸಾಫಿರ್ ಖಾನಾಗಳು
8
173

ಮಂಟಪಗಳು
19
5,549

ಛತ್ರಗಳು
45
4,479

ದೇವಸ್ಥಾನಗಳು
1065
26,947

ಜಂಗಮರ ಮಠಗಳು
72
1,402

ಜೈನ ಪಗೋಡಾಗಳು
4
153

ಟೆಕ್ಕಿಯಾಗಳು[¥sóÀಕೀರರ ವಿಶ್ರಾಂತಿ ಸ್ಥಳ]
237
319

ಮಸೀದಿಗಳು
13
517

ಒಟ್ಟು
1,470
39,539

ಧಾರ್ಮಿಕ ಸಂಸ್ಥೆಗಳ ಹೆಚ್ಚಳದ ಜೊತೆಜೊತೆಗೆ ಇವುಗಳಿಗೆ ಸರ್ಕಾರದ ಕೊಡುಗೆಯೂ ಹೆಚ್ಚಾಗತೊಡಗಿತು.

ವರ್ಷ
ವೆಚ್ಚ

1799-1800
37,192

1800-01
50,443

1810-1811
84,314

ಇನ್ನೊಂದೆಡೆ ಪೀಡಕ ಪ್ರಭುತ್ವ ರೈತರಿಂದ ಕಂದಾಯದ ಹೆಸರಿನಲ್ಲಿ ದೋಚಿದ್ದನ್ನೆಲ್ಲಾ ಮನಬಂದಂತೆ ದುಂದುವೆಚ್ಚ ಮಾಡತೊಡಗಿತು. ಸುಮಾರು ಅರ್ಧದಷ್ಟು ಕಂದಾಯ ನೇರವಾಗಿ ಬ್ರಿಟೀಷರಿಗೆ ಹೋಗುತ್ತಿತ್ತು. [ಅದರಲ್ಲಿ ಅವರು ನಯಾಪೈಸೆಯನ್ನೂ ರಾಜ್ಯಕ್ಕೆ ಖರ್ಚು ಮಾಡುತ್ತಿರಲಿಲ್ಲ]. ಕಂದಾಯದ 5% ರಾಜನಿಗೆ, 1% ದಿವಾನನಿಗೆ. ಕಂದಾಯ ವಸೂಲಿ ಮಾಡಲು ದೊಡ್ಡ ಪ್ರಮಾಣದ ಪೋಲೀಸ್ ಬಲ. ಅದಕ್ಕೆ ಸುಮಾರು 20%. ರಾಜನ ಅನಗತ್ಯ ಖರೀದಿಗಳು, ಅರಮನೆಯ ವೈಭವವನ್ನು, ಕಾಲಿಗೆ ನೂರು ಆಳುಗಳನ್ನು ಸಾಕಲು ವ್ಯರ್ಥ ಖರ್ಚುಗಳು, ದರ್ಬಾರಿನಲ್ಲಿ ತನ್ನ ದೌಲತ್ತು ತೋರಿಸಲು ಅತಿಥಿ ಅಧಿಕಾರಿಗಳಿಗೆ-ವ್ಯಾಪಾರಿಗಳಿಗೆ-ರಾಜರಿಗೆ-ಸಂಗೀತಗಾರರಿಗೆ ದುಬಾರಿ ಕೊಡುಗೆಗಳು, ಹಾಡು-ಕುಡಿತ-ಕುಣಿತ, ಲೆಕ್ಕವಿಲ್ಲದಷ್ಟು ಪೂಜೆ-ಹವನಗಳು, ಅಲ್ಲದೆ ಬೊಕ್ಕಸಕ್ಕೆ ಕುಂದು ತರುವ ಬೇಕಾಬಿಟ್ಟಿ ಇನಾಂಗಳು. ಬೇಜವಬ್ದಾರಿ ಐಷಾರಾಮಿ ಪ್ರಭುತ್ವ ಉತ್ಪಾದನೆಯನ್ನು ಹೆಚ್ಚಿಸಲು ಏನೂ ಮಾಡದೆ ಸಾಲ ಮಾಡಿಯಾದರೂ ದೌಲತ್ತನ್ನು ಪ್ರದರ್ಶಿಸುವ ಕೆಲಸವನ್ನು ಮಾಡಿತು. ಇದು ಅಂತಿಮವಾಗಿ ಮೈಸೂರು ರಾಜ್ಯವನ್ನು ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಗುರಿಮಾಡಿತು.

*ಮುಂದುವರಿದ ದಾಸ್ಯ, ಮುಂದುವರಿದ ಸಂಘರ್ಷ:*

ಅಂದಿನಿಂದ ಇಂದಿನತನಕ ಈ ದಾಸ್ಯ ಅಂತ್ಯಗೊಳ್ಳುತ್ತಿಲ್ಲ. ಕಾಲಕಾಲಕ್ಕೆ ಪಾತ್ರಗಳು ಬದಲಾಗುತ್ತಿದ್ದರೂ ಸಂಘರ್ಷದ ಮೂಲಕಥೆ ಹಾಗೇ ಇದೆ. ನಮ್ಮ ನಾಡು ಇಂದಿಗೂ ವಿದೇಶಿ ಹಾಗೂ ದೇಶಿ ಕಂಪನಿಗಳ ಕೈಯಲ್ಲಿದೆ. ಆಳುವವರು ಅವರ ಕೃಪಾಕಟಾಕ್ಷದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಜಾತಿವಾದಿ ಶಕ್ತಿಗಳು ಹಾಗೂ ಕೋಮುವಾದಿ ಶಕ್ತಿಗಳು ನಾಡನ್ನು ಒಡೆದು, ಜನರನ್ನು ದಿಕ್ಕುತಪ್ಪಿಸಿ, ತಮ್ಮ ಈ ಸೇವೆಗಾಗಿ ದೇಶದ ಲೂಟಿ ಮತ್ತು ಅಧಿಕಾರದಲ್ಲಿ ತಮ್ಮ ಪಾಲನ್ನು ಪಡೆಯುತ್ತಿದ್ದಾರೆ. ಇಂದಿನ ಶೋಷಕರ ಮಾಜಿ ವಂಶಸ್ಥರನ್ನು ಮಣಿಸುವ ಕೆಲಸವನ್ನೇ ಟಿಪ್ಪು ಮಾಡಿದ್ದಾನೆ. ಜನಪರ ಸಂಘಟನೆಗಳು ಇಂದಿಗೂ ಟಿಪ್ಪುವನ್ನು ಎತ್ತಿಹಿಡಿಯುತ್ತಿರುವುದು, ಜನವಿರೋಧಿ ಶಕ್ತಿಗಳು ಇಂದಿಗೂ ಟಿಪ್ಪುವನ್ನು ದ್ವೇಶಿಸುತ್ತಿರುವುದು ಸಹಜವೇ ಆಗಿದೆ.

ಈ ಮಧ್ಯೆ ಸರ್ಕಾರ ಟಿಪ್ಪು ದಿನಾಚರಣೆಗೆ ಮುಂದಾಗಿದ್ದು ಸ್ವಾಗತಾರ್ಹ ವಿಚಾರವೆ ಆಗಿದೆ. ಆದರೆ ಅದನ್ನು ಆಚರಿಸುವ ಜವಬ್ದಾರಿಯನ್ನು ಅಲ್ಪಸಂಖ್ಯಾತ ಇಲಾಖೆಗೆ ನೀಡುವ ಮೂಲಕ ನಾಡಿನ ಸ್ವಾಭಿಮಾನಿ ಹಾಗೂ ಜನಪರ ಪರಂಪರೆಯ ಪ್ರತೀಕವಾದ ಟಿಪ್ಪುವನ್ನು ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ಮಾಡಿ ಆತನ ವ್ಯಕ್ತಿತ್ವವನ್ನು ಕುಬ್ಜಗೊಳಿಸಿದೆ ಹಾಗೂ ಪರೋಕ್ಷ ರೀತಿಯಲ್ಲಿ ಟಿಪ್ಪು ಮುಸ್ಲಿಂ ರಾಜನೆಂಬ ಕೋಮುವಾದಿಗಳ ಪ್ರಚಾರಕ್ಕೆ ಪುಷ್ಠಿ ನೀಡಿದೆ. ಟಿಪ್ಪು ಮುಸ್ಲಿಮನಾಗಿದ್ದದ್ದು ಹೌದು, ಆದರೆ ಮುಸ್ಲಿಂ ರಾಜನಾಗಿರಲಿಲ್ಲ. ಎಲ್ಲಾ ಧರ್ಮೀಯರನ್ನು ಆಡಳಿತಾಂಗದಲ್ಲಿ ಹೊಂದಿದ್ದ, ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದ, ಆದರೆ ಧರ್ಮದ ಹೆಸರಿನಲ್ಲಿ ನಡಿಯುತ್ತಿದ್ದ ಶೋಷಣೆಯನ್ನು ನಿಯಂತ್ರಿಸುತ್ತಿದ್ದ ರಾಜನಾಗಿದ್ದ. ಅದಕ್ಕಿಂತ ಹೆಚ್ಚಾಗಿ ಧಾರ್ಮಿಕ ವಿಚಾರ ಟಿಪ್ಪು ಆಡಳಿತದ ಮುಖ್ಯ ಪ್ರಶ್ನೆ ಎಂದೂ ಆಗಿರಲಿಲ್ಲ. ಬಲಿಷ್ಟ ರಾಜ್ಯ, ಆಧುನಿಕ ಕೃಷಿ, ವಾಣಿಜ್ಯ ಅಭಿವೃದ್ಧಿ, ಜಮಿನ್ದಾರಿ ಶಕ್ತಿಗಳ ನಿಯಂತ್ರಣ, ವಸಾಹತು ಶಕ್ತಿಗಳ ವಿರೋಧ – ಇವು ಟಿಪ್ಪು ಆಳ್ವಿಕೆಯ ಕೇಂದ್ರ ಪ್ರಶ್ನೆಗಳಾಗಿದ್ದವು.

ಸಾರಾಂಶದಲ್ಲಿ ಟಿಪ್ಪು ಊಳಿಗಮಾನ್ಯ ಹಾಗೂ ವಸಾಹತು ಶಕ್ತಿಗಳ ವಿರೋಧಿಯಾಗಿದ್ದ. ಹಾಗಾಗಿಯೇ ಅದರ ಮುಂದುವರಿಕೆಯಾಗಿರುವ ಸನಾತನ ಹಾಗೂ ಸಾಮ್ರಾಜ್ಯಶಾಹಿ ಶಕ್ತಿಗಳ ಪ್ರತಿನಿಧಿಗಳಾಗಿರುವ ಸಂಘ ಪರಿವಾರ ಆತನನ್ನು ವಿರೋಧಿಸುತ್ತಿದೆ. ಇದೇ ಕಾರಣಕ್ಕೆ ನಾವು ಟಿಪ್ಪುವನ್ನು ಎತ್ತಿಹಿಡಿಯಬೇಕಿದೆ.

✍🏼 *ನೂರ್ ಶ್ರೀಧರ್*
[ಆಧಾರ: ‘ಸಾಕಿ’ಯವರ “ಮೇಕಿಂಗ್ ಹಿಸ್ಟರಿ”]