ಜಮಿತ್ ಉಲಾಮಾ –ಐ-ಹಿಂದ್ ಅಡಿಯಲ್ಲಿ 25 ಮುಸ್ಲಿಂ ಸಮುದಾಯದ ನಾಯಕರ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ನಿಯೋಗವನ್ನು ಸ್ವಾಗತಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ. ಅಜಿತ್ ದೋವಲ್, ಇಂದು ಇಡೀ ವಿಶ್ವವೇ ಭಾರತದತ್ತ ನೋಡುತ್ತಿದ್ದು, ದೇಶವನ್ನು ಮುನ್ನಡೆಸುವುದು ಭಾರತೀಯ ಸಮಾಜದ ಎಲ್ಲ ವರ್ಗದ ಜವಾಬ್ದಾರಿಯಾಗಿದೆ ಎಂದರು. ನಿಯೋಗದ ನಾಯಕರು ಶ್ರೀ. ದೋವಲ್ ಅವರ ನಿಲುವಿಗೆ ಒಪ್ಪಿಗೆ ಸೂಚಿಸಿದರು.ಪ್ರಧಾನಮಂತ್ರಿಯವರ ಸಬ್ ಕಿ ಸಾತ್ ಸಬ್ ಕಿ ವಿಕಾಸ್ (ಸರ್ವರೊಂದಿಗೆ ಸರ್ವರ ವಿಕಾಸ) ಕರೆಯಂತೆ ಎಲ್ಲರೂ ಒಟ್ಟಾಗಿ ದೇಶವನ್ನು ಮುಂದೆ ತೆಗೆದುಕೊಂಡು ಹೋಗುವುದೇ ಉದ್ದೇಶವಾಗಿರಬೇಕು ಎಂದೂ ಅವರು ಹೇಳಿದರು. ಪ್ರಧಾನಮಂತ್ರಿಯವರ ಮುನ್ನೋಟವನ್ನು ಪ್ರಶಂಸಿಸಿದ ನಿಯೋಗದ ಸದಸ್ಯರು, ರಾಷ್ಟ್ರಾದ್ಯಂತ ಜನರೊಳಗೆ ಇರುವ ನಂಬಿಕೆ, ಸಮಾಜದ ಎಲ್ಲ ಘಟಕಗಳ ಯೋಗಕ್ಷೇಮ ಮತ್ತು ಪ್ರಗತಿಯನ್ನು ಖಾತ್ರಿಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನವ ಭಾರತ ನಿರ್ಮಾಣದಲ್ಲಿ ಮುಸ್ಲಿಂ ಸಮುದಾಯ ಕೂಡ ಸಮಾನ ಪಾಲುದಾರನಾಗಲು ಬಯಸುತ್ತದೆ ಎಂದೂ ಹೇಳಿದರು. ಭಯೋತ್ಪಾದನೆ ಪ್ರಮುಖ ಸವಾಲಾಗಿದ್ದು, ಎಲ್ಲ ಸಾಮರ್ಥ್ಯದೊಂದಿಗೆ ಅದನ್ನು ಹತ್ತಿಕ್ಕುವ ಸಮಾನ ಸಂಕಲ್ಪವನ್ನೂ ವ್ಯಕ್ತಪಡಿಸಿದರು. ರಾಷ್ಟ್ರದ ಕ್ಷೇ ಅಥವಾ ಭದ್ರತೆಯ ವಿಚಾರದಲ್ಲಿ ಎಂಥ ಸನ್ನಿವೇಶದಲ್ಲೂ ಯಾರೊಬ್ಬರೂ ರಾಜೀ ಮಾಡಿಕೊಳ್ಳದಿರುವುದು ಮುಸ್ಲಿಂ ಸಮುದಾಯದ ಹೊಣೆಗಾರಿಕೆಯೂ ಆಗಿದೆ ಎಂದು ತಿಳಿಸಿದರು. ಭಾರತದ ವಿರುದ್ಧದ ಯಾವುದೇ ಸಂಚು ಯಶಸ್ವಿಯಾಗಲು ಮುಸ್ಲಿಂ ಸಮುದಾಯ ಎಂದಿಗೂ ಅವಕಾಶ ನೀಡುವುದಿಲ್ಲ ಎಂದೂ ಅವರು ಹೇಳಿದರು. ಕಾಶ್ಮೀರ ಕಣಿವೆಯ ಪರಿಸ್ಥಿತಿಯ ಕುರಿತಂತೆ ಕಳವಳ ವ್ಯಕ್ತಪಡಿಸಿದ ನಿಯೋಗದ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರು ಮಾತ್ರವೇ ಈ ಸಮಸ್ಯೆ ಪರಿಹರಿಸಲು ಸಾಧ್ಯ ಎಂದರು. ತ್ರಿವಳಿ ತಲಾಖ್ ಕುರಿತಂತೆ ಪ್ರಧಾನಮಂತ್ರಿಯವರ ನಿಲುವನ್ನು ಅವರು ಪ್ರಶಂಸಿಸಿದರು. ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ನಿಯೋಗದಲ್ಲಿದ್ದ ಸದಸ್ಯರು, ಸರ್ಕಾರದ ಉಪಕ್ರಮಗಳಾದ ನಗದು ರಹಿತ ವಹಿವಾಟು, ನವೋದ್ಯಮ ಮತ್ತು ನೀತಿ ಆಯೋಗ ಇತ್ತೀಚೆಗೆ ಆಯೋಜಿಸಿದ್ದ ಹ್ಯಾಕಥಾನ್ ನಲ್ಲಿ ಮಾಡಿರುವ ತಮ್ಮ ಸಂಸ್ಥೆಗಳು ಸಾಧಿಸಿರುವ ಪ್ರಗತಿಯ ಕುರಿತೂ ಪ್ರಸ್ತಾಪಿಸಿದರು. ಕೇಂದ್ರ ಸರ್ಕಾರದಡಿ ಜಾರಿಗೆ ತಂದಿರುವ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳನ್ನೂ ನಿಯೋಗ ಪ್ರಶಂಸಿಸಿತು. ನಿಯೋಗದ ಸದಸ್ಯರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಪ್ರಜಾಪ್ರಭುತ್ವದ ಅತಿದೊಡ್ಡ ಶಕ್ತಿಯೇ ಸೌಹಾರ್ದತೆ ಮತ್ತು ಅನ್ಯೋನ್ಯತೆ ಎಂದು ತಿಳಿಸಿದರು. ತನ್ನ ಪ್ರಜೆಗಳ ನಡುವೆ ತಾರತಮ್ಯ ಮಾಡುವ ಯಾವುದೇ ಹಕ್ಕು ಸರ್ಕಾರಕ್ಕೆ ಇಲ್ಲ ಎಂದು ಪ್ರತಿಪಾದಿಸಿದ ಪ್ರಧಾನಿ, ಅನೇಕತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯ ಎಂದರು. ಜಾಗತಿಕವಾಗಿ ಹೆಚ್ಚುತ್ತಿರುವ ವಿಧ್ವಂಸಕತೆಯ ಅಲೆಯಲ್ಲಿ ಭಾರತದ ನವ ಪೀಳಿಗೆ ಕೊಚ್ಚಿಹೋಗಿ ಬಲಿಪಶುಗಳಾಗಲು ಅವಕಾಶ ನೀಡಬಾರದು ಎಂದು ಪ್ರಧಾನಿ ಹೇಳಿದರು. ತ್ರಿವಳಿ ತಲಾಖ್ ಕುರಿತಂತೆ, ಪ್ರಧಾನಮಂತ್ರಿಯವರು, ಈ ವಿಷಯವನ್ನು ರಾಜಕೀಯಕರಣಗೊಳಿಸಲು ಮುಸ್ಲಿಂ ಸಮುದಾಯ ಅವಕಾಶ ನೀಡಬಾರದು, ಈ ನಿಟ್ಟಿನಲ್ಲಿ ಸುಧಾರಣೆ ತರುವ ಜವಾಬ್ದಾರಿಯನ್ನು ವಹಿಸಿಕೊಳ್ಳಿ ಎಂದು ನಿಯೋಗದಲ್ಲಿದ್ದವರಿಗೆ ಮನವಿ ಮಾಡಿದರು. ನಿಯೋಗದಲ್ಲಿದ್ದ ಸದಸ್ಯರಲ್ಲಿ ಜಮಾತ್ ಉಲಾಮಾ-ಇ-ಹಿಂದ್ ಅಧ್ಯಕ್ಷ – ಮೌಲಾನಾ ಖಾರಿ ಸೈಯದ್ ಮೊಹಮ್ಮದ್ ಉಸ್ಮಾನ್ ಮನ್ಸುರ್ಪುರಿ; ಜಮಾತ್ ಉಲಾಮಾ-ಇ-ಹಿಂದ್ ಪ್ರಧಾನ ಕಾರ್ಯದರ್ಶಿ -ಮೌಲಾನಾ ಮಹಮೂದ್ ಎ ಮದನಿ ; ಮುಂಬೈನ ಅಂಜುಮಾನ್-ಐ-ಇಸ್ಲಾಂ ಅಧ್ಯಕ್ಷ -ಡಾ. ಜಾಹಿರ್ ಐ ಕಾಜಿ; ಪ್ರೊಫೆಸರ್ ಅಖ್ತರುಲ್ ವಾಸಿ;ಮತ್ತು ಮೌಲಾನಾ ಬದರುದ್ದೀನ್ ಅಜ್ಮಲ್ ಇದ್ದರು.