ಬಿಎಂ ಇದಿನಬ್ಬ ಈಗಷ್ಟೇ ಎದುರುಗಿದ್ದು ಮಾತನಾಡಿದಂತೆ ಅನಿಸುತ್ತಿದೆ!

*********************
ಬರಹ: ಫಾರೂಖ್ ಉಳ್ಳಾಲ

ಬಿ‌ಎಂ ಇದಿನಬ್ಬ ನಮ್ಮ ನ್ನು ಅಗಲಿ ಭರ್ತಿ ಹತ್ತು ವರ್ಷಗಳು.! (11.04.2009).ನಂಬಲೇ ಆಗುತ್ತಿಲ್ಲ. ಲೋಕಾಭಿರಾಮವಾಗಿ ಮಾತಾಡುತ್ತಲೇ ಅವರ ಜ್ಞಾನ ಭಂಡಾರದ ಆಳ ಅರಿವು ಅಂದಾಜಿಸಿಕೊಳ್ಳಲಾಗದೆ, ಅಚ್ಚರಿಗೊಳ್ಳುತ್ತಿದ್ದ ಆ ದಿನಗಳು ಯಾಕೋ ನಿನ್ನೆ, ಮೊನ್ನೆ ಎಂಬಂತೆ ಕಣ್ಣೆದುರು ನಿಲ್ಲುತ್ತಿವೆ.!

ರಾಜ್ಯ ಕ್ಕೇ ಪ್ರಸಿದ್ಧ ಕವಿ,ಸಾಹಿತಿ.ಸ್ವಾತಂತ್ರ್ಯ ಹೋರಾಟಗಾರ, ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನಿರಂತರ ಮೂವತ್ತು ವರ್ಷಗಳ ತನಕ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಆಡಳಿತ ಪಕ್ಷದ ಪ್ರಭಾವಿ ಶಾಸಕ, ಕರ್ನಾಟಕ ರಾಜ್ಯ ಖಾದಿ ಬೋರ್ಡ್ ಅಧ್ಯಕ್ಷ *ಹೀಗೆ ಹತ್ತು ಹಲವು ವಿಶೇಷಣ ಮತ್ತು ಅಧಿಕಾರ ಬಲ ಹೊಂದಿದ್ದ ಇದಿನಬ್ಬರ ವ್ಯಕ್ತಿತ್ವ ಮೊದಲ ನೋಟದಲ್ಲೇ ಸೂಜಿಗಲ್ಲಿನಂತೆ ಸೆಳೆಯುವಂತದ್ದು.!

ಕೋಟಿ ಕೊಟ್ಟು ಅಭ್ಯರ್ಥಿ ತನ ಗಿಟ್ಟಿಸಿ ಶಾಸಕನಾಗಿ ವರ್ಷದಲ್ಲೇ ಸಾವಿರಾರು ಕೋಟಿಗಳಿಗೆ ತೂಗುವ ಶಾಸಕರಿರುವ ದಿನಗಳಲ್ಲಿ ಇದಿನಬ್ಬರ ನೆನಪು ಆಗಾಗ ಆಗುತ್ತಲೇ ಇರುತ್ತದೆ!. ಸಹಕಾರಿ ಸಂಘದಲ್ಲಿ ಕನಿಷ್ಠ ಸಂಬಳಕ್ಕೆ ದುಡಿಯುತ್ತಿದ್ದ ಉಳ್ಳಾಲ ನಿವಾಸಿ ಮೂಲತಃ ಉಪ್ಪಿನಂಗಡಿ ಸಮೀಪದ ಬೊಲ್ಮುಡೆ ಮಠ ಎಂಬಲ್ಲಿನ ಬಿ.ಎಂ.ಇದಿನಬ್ಬ ಎಂಬ ಸಾಮಾನ್ಯ ವ್ಯಕ್ತಿ , ಆ ಕಾಲದ ಪ್ರಬಲ ಏಕೈಕ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಆದದ್ದು, ಕೇವಲ ಪ್ರತಿಭೆ ಮತ್ತು ಪಕ್ಷದ ಸಕ್ರಿಯ ಸೇವೆಯ ಹಿನ್ನೆಲೆಯಿಂದ!.ಎನ್ನುವುದೇ ಇದಿನಬ್ಬರ ದೈತ್ಯ ಪ್ರತಿಭೆ ಮತ್ತು ಪ್ರತಿಭಾವಂತರನ್ನು ಗುರುತಿಸುವ ಮನಸಿದ್ದ ಕಾಂಗ್ರೆಸ್ ವರಿಷ್ಠ ರನ್ನು ತಿಳಿದು ಕೊಳ್ಳಲು ಸಹಕಾರಿ ಯಾದೀತು! ಇಂದಿದೆಲ್ಲಾ ಸಾಧ್ಯವೇ?! ಹಣ ಬಲ ಇಲ್ಲದಿದ್ದರೆ ಪಕ್ಷ ಸೇವೆ ನಗಣ್ಯ ವೇ ಸರಿ !

ಅಧಿಕಾರ, ಅನುಭವ ದೂರ ದರ್ಶಿತ್ವ, ಅದಕ್ಕೆ ಕಳಶಪ್ರಾಯಃದಂತಿದ್ದ ಹುಟ್ಟು ಪ್ರತಿಭೆ ಮೈಗೂಡಿಸಿದ್ದ ಇದಿನಬ್ಬರಲ್ಲಿ ಅಹಂ, ಆಡಂಬರ ಹತ್ತಿರ ಸುಳಿಯುತ್ತಲೇ ಇರಲಿಲ್ಲ. ಸರಳತೆ ಅವರಲ್ಲಿ ರಕ್ತ ಗತವಾಗಿತ್ತು!. ತೋರಿಕೆಯಸರಳತೆಯೂ ಪ್ರಚಾರ ಸಾಮಗ್ರಿಯಾಗಿ, ದೈನಂದಿನ ಚಟುವಟಿಕೆಗಳನ್ನು ಚಾನಲ್ ಗಳ ಕೆಮರಾದಲ್ಲಿ ಹಿಡಿದಿಟ್ಟು, ವರದಿಗಾರನ ಅಕ್ಷರಗಳು ಅದನ್ನು ಅದ್ಭುತ ಎಂಬಂತೆ ನಿರೂಪಿಸಿ ಸರಳತೆ, ಸಾಮಾಜಿಕ ಕಾಳಜಿ ಇದೆ ಎಂದು ಪದೇ ಪದೇ ತಿಳಿಸಿ ಕೊಡಲು ಹೆಣಗುವ, ಹಾಸ್ಯಾಸ್ಪದ ರಾಗುವ ರಾಜಕಾರಣಿಗಳು ಅನುಭವಕ್ಕೆ ಬಂದಾಗಲೆಲ್ಲಾಜನ ಸಾಮಾನ್ಯನಂತೆ ಬದುಕು ಕಟ್ಟಿದ ಇದಿನಬ್ಬರಲ್ಲಿದ್ದ ಸಹಜ ಸರಳತೆ. ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಇದಿನಬ್ಬರು ಮಾನವೀಯತೆಗೆ ಕೊಡುತ್ತಿದ್ದ ಮೊದಲ ಪರಿಗಣನೆ ನೆನಪಾಗಿ ಇದಿನಬ್ಬರ ಮಾದರಿ ರಾಜಕಾರಣಿಗಳಿಗೆ ಬಳುವಳಿಯಾಗ ಬಾರದೇ? ಎಂದು ಆಶಿಸುತ್ತೇನೆ.

ಹೌದು , ಇದಿನಬ್ಬರ ಬದುಕು ನನ್ನಲ್ಲಿ ಸಾಕಷ್ಟು ಪ್ರಭಾವಿಸಿವೆ.!
ಅವರದಲ್ಲದ ಪಕ್ಷದಲ್ಲಿ ನಾನಿದ್ದದಿನಗಳಲ್ಲಿ, ಅವರ ಮನೆಯ ಗೇಟಿಗೆ ಜೀಪಿನ ಮುಖ ಇಟ್ಟು ಇದಿನಬ್ಬ ರ ಪ್ರೀತಿಯ ಪಕ್ಷವನ್ನು ಆಕ್ಷೇಪಿಸಿ ಭಾಷಣಿಸಿದಕ್ಕೂ ಕೋಪಿಸದೆ,’ವಿಷಯ ತಪ್ಪಾಗಿದ್ದರೂ ಬಳಸಿದ ಭಾಷೆ ಆಕರ್ಷಕ ವಾಗಿತ್ತು’ ಎಂದು ಆಮೇಲೆ ಸಿಕ್ಕಾಗ ಮುಗುಳು ನಕ್ಕ ಇದಿನಬ್ಬರ ನಗೆ ಅವರ ಪ್ರಾಜ್ಞತೆಗೆ ಸಾಕ್ಷಿ!

ನಾನು ಶಾಲೆಗೆ ಹೋಗುತ್ತಿದ್ದ ದಿನಗಳವು; ಬಿಎಂ ಇದಿನಬ್ಬರ ಭಾಷಣ ಕೇಳುತ್ತಿದ್ದಾಗಲೆಲ್ಲಾ ಅವರೊಂದಿಗೆ ಮಾತಾಡ್ಬೇಕು, ಅವರಂತೆಯೇ ಭಾಷಣ ಮಾಡಬೇಕು ಎಂಬ ಇಚ್ಛೆ ಹುಟ್ಟಿ ಕೊಳ್ಳುತ್ತಿತ್ತು!.
ಇದಿನಬ್ಬ ರ ಕಂಚಿನ ಕಂಠದಿಂದ ಹೊರ ಹೊಮ್ಮುವ ಸ್ಫುಟವಾದ ಕನ್ನಡ ಕೇಳಿ, ಅವರು ಮನೆಯಲ್ಲೂ ಕನ್ನಡದಲ್ಲೇ ಮಾತಾಡುತ್ತಾರ? ಎಂಬ ಕುತೂಹಲವೂ ನನಗಿತ್ತು.
ಕಾಂಗ್ರೆಸ್ ನ ವೇದಿಕೆಯಲ್ಲಿ ತನ್ನ ಪಕ್ಷದ ಸಾಧನೆ ಮತ್ತು ಪಕ್ಷದ ಮುಂದಿರುವ ಗುರಿಯ ಬಗ್ಗೆ ಹೇಳಿ ಕೊಳ್ಳುವಾಗ, ವಿರೋಧ ಪಕ್ಷಗಳ ವೈಫಲ್ಯ, ಜನವಿರೋಧಿ ಕೃತ್ಯಗಳ ಕುರಿತು ವಿಶ್ಲೇಷಿಸಿ ಮಾತನಾಡುವಾಗ ಗೌರವದ ಭಾಷೆಯನ್ನೇ ಬಳಸುತ್ತಿದ್ದರು, ಇದಿನಬ್ಬ.

ಸಾಹಿತ್ಯ ವೇದಿಕೆಯಲ್ಲಿ, ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಅತಿಥಿ ಸ್ಥಾನದಲ್ಲಿ ನಿಂತು ಮಾತನಾಡುತ್ತಿದ್ದ ಇದಿನಬ್ಬರ ಶುದ್ಧ ಉಚ್ಛಾರ, ಸಾಹಿತ್ಯಿಕ ನುಡಿ ಗಟ್ಟುಗಳು, ಗಾಂಭೀರ್ಯ ಎದ್ದು ಕಾಣುವ ವಿವರಣಾ ಶೈಲಿ, ಇದಿನಬ್ಬರ ಮಾತಗಳನ್ನು ಮತ್ತೆ ಮತ್ತೆ ಕೇಳ ಬೇಕೆನ್ನುವಷ್ಟು ಮಾಧುರ್ಯ ಮತು ವಿಚಾರವಂತಿಕೆಯಿಂದ ಕೂಡಿರುತ್ತಿತ್ತು !

ನನಗಿನ್ನೂ ನೆನಪಿದೆ, ಈಗಷ್ಟೇ ಮಾತು ಮುಗಿಸಿ ಬಂದಂತೆ ಅನಿಸುತ್ತಿರುವ ಇದಿನಬ್ಬರೊಂದಿಗೆ ಮೊದಲ ಬಾರಿಗೆ ಮಾತನಾಡಿದ ಆ ಸಂಭ್ರಮದ ಕ್ಷಣ !
ಕತೆ- ಕವನಗಳ ಆಂತರ್ಯ ಬಿಚ್ಚಿಟ್ಟು, ನನ್ನ ಊಹೆಗೂ ಸಿಗದ ಸಾಧ್ಯತೆ ಗಳನ್ನು ಹೇಳುತ್ತಲೇ ಆ ದಿನಗಳಲ್ಲಿ ನನಗೆ ಆತ್ಮೀಯರಾದ ಬದ್ರುದ್ದೀನ್,ಬಿ.ಎಂ ಇದಿನಬ್ಬ ಮಗನಾಗಿದ್ದರಿಂದ,ಅದೊಂದು ದಿನ ಗೆಳೆಯನನ್ನು ಕೇಳಿ ಕೊಂಡು ಇದಿನಬ್ಬರ ಮನೆಗೆ ಹೋಗಿದ್ದೆ. ಅಳುಕುತ್ತಲೇ ಕಾಲ್ ಬೆಲ್ ಒತ್ತಿದಾಗ ಬಾಗಿಲು ತೆರೆದವರು ಇದಿನಬ್ಬ!
ಬದ್ರು ಇಲ್ವಾ ? ಎಂದು ಕೇಳಿದೆ. ಇದ್ದಾನೆ, ಕುಳಿತು ಕೊಳ್ಳಿ ಎಂದು ಹೇಳಿ ಒಳ ಹೋಗುತ್ತಲೇ “ಬದ್ರು ನಿನ್ನನ್ನು ಕೇಳಿ ಕೊಂಡು ಬಂದಿದ್ದಾರೆ” ಎಂಬ ಬ್ಯಾರಿ ಭಾಷೆಯ ಇದಿನಬ್ಬರ ಮಾತೂ ಕನ್ನಡ ಮಾತಿನಂತೆಯೇ ಕೇಳಿಸಿತ್ತು.

ಇದಿನಬ್ಬ ನನ್ನನ್ನು ಬಹುವಚನದಲ್ಲಿ ಮಾತನಾಡಿಸಿದ್ದು ನನಗೆ ಪರಮಾಶ್ಚರ್ಯ ತಂದಿತ್ತು.ಊರಿಗೆ ಎಮ್ಮಲ್ಲೆ ಆಗಿದ್ದವರು, ಕವಿ, ಸಾಹಿತಿ ಎಂದು ನಾಡಿನಾದ್ಯಂತ ಪ್ರಸಿದ್ಧಿ, ಗೌರವಕ್ಕೆ ಅರ್ಹರಾದವರು ಇಷ್ಟು ಸರಳವಾಗಿ ವ್ಯಕ್ತವಾದುದರ ಬಗ್ಗೆ ಬದ್ರುದ್ದೀನ್ ರಲ್ಲಿ ಹೇಳಿ ಕೊಂಡಾಗ, “ನಮ್ಮಪ್ಪ ಏಕ ವಚನ ತೀರಾ ಆತ್ಮೀಯರಿಗಷ್ಟೇ ಬಳಸ ಬೇಕು, ಎಲ್ಲರೊಂದಿಗೂ ಸರಳವಾದ ನಡವಳಿಕೆ ಮೈಗೂಡಿಸ ಬೇಕು “ಎಂದು ದಿನಾ ತಾಕೀತು ಮಾಡುತ್ತಿರುತ್ತಾರೆ ಎಂದು ಹೇಳಿದಾಗ ಇದಿನಬ್ಬರ ಮೇಲಿನ ಗೌರವ, ಅವರನ್ನು ತಿಳಿದು ಕೊಳ್ಳುವ ಆಸಕ್ತಿ ಇಮ್ಮಡಿ ಯಾಯಿತು.

ರಾಜಕಾರಣದ ಆಳ ಅರಿವು ಅರಗಿಸಿ ಕೊಳ್ಳದ ಆ ವಯಸ್ಸಿನಲ್ಲಿ ದಿನ ಪತ್ರಿಕೆ ಓದುವ ಅಭ್ಯಾಸ ಇದ್ದುದರಿಂದ ರಾಜಕೀಯ ವರದಿಗಳ ಕಡೆಗೂ ಆಸಕ್ತಿ ಹರವಿಕೊಳ್ಳ ತೊಡಗಿದೆ ಅಲ್ಲಿ ಸುದ್ಧಿಯಾಗುತ್ತಿದ್ದ ರಾಜಕಾರಣಿಗಳು ಇದಿನಬ್ಬರಷ್ಟು ಸರಳವಾಗಿದ್ದಂತೆ ಕಾಣುತ್ತಿರಲಿಲ್ಲ.
ಪ್ರತೀ ಆದಿತ್ಯ ವಾರ ನಮ್ಮ ಮನೆ ಮುಂದಿನ ರಸ್ತೆ ಯಲ್ಲಿ ಕೊಡೆ ಹಿಡಿದು ನಡೆದು ಕೊಂಡೇ ಹಳೇಕೋಟೆ ಎಂಬಲ್ಲಿರುವ ಮಗಳ ಮನೆಗೆ ಹೋಗಿ – ಬರುತ್ತಿದ್ದ ಇದಿನಬ್ಬ,
ಕೃಷ್ಣ ಅಣ್ಣಾಚಿಯ ಸೆಲೂನುಗೆ ತಲೆಗೂದಲು ಕತ್ತರಿಸಿಕೊಳ್ಳಲು ಬರುತ್ತಿದ್ದ ಇದಿನಬ್ಬ,
ಸಿಟಿ ಬಸ್ಸಿನಲ್ಲಿ ಬಂದು ಮಾಸ್ತಿಕಟ್ಟೆಯಲ್ಲಿ ಇಳಿದು ತಮ್ಮ ಮನೆಗೆ ಹೋಗುತ್ತಿದ್ದ ಇದಿನಬ್ಬ , ಇದಿನಬ್ಬ ರ ಹಿತ್ತಿಲ ಮುಂದುಗಡೆಯ ರಸ್ತೆ ಯಲ್ಲೇ ಬರುವ ಬಸ್ಸನ್ನು ಹತ್ತಲು, ಇಳಿಯಲು ಇದಿನಬ್ಬರಿಗೆ ನಿಲ್ಲಿಸುವುದು ಅಸಾಧ್ಯ ವೇನಲ್ಲ, ಆದರೆ ಅದವರಿಗೆ ಇಷ್ಟ ವಿರಲಿಲ್ಲ, ಬಸ್ಸಿಗೆ ತಾನು ಎಲ್ಲರಂತೆಯೇ ಪ್ರಯಾಣಿಕ.ಎಂಬ ಗಟ್ಟಿ ನಿರ್ಧಾರ ಅವರದ್ದಾಗಿತ್ತು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ತನ್ನ ಕ್ಷೇತ್ರದ ಎರಡು ಪ್ರಮುಖ ಪ್ರದೇಶಗಳಲ್ಲಿ ತನ್ನದೇ ಸಮೂದಾಯದ ಜನ ಬಲತ್ಕಾರವಾಗಿ ಮೀನಿನ ತ್ಯಾಜ್ಯವನ್ನು ಇದಿನಬ್ಬ ಮೈ ಮೇಲೆ ಹಾಕಿ, ಬೈಗುಳ ಸುರಿಸಿದಕ್ಕೆ ಪೋಲಿಸ್ ದಂಡನೆ ಹೇರದೆ, ಸಂಯಮದಿಂದ ಕ್ಷಮಿಸಿದ್ದರು ಇದಿನಬ್ಬ. ಫಲಿತಾಂಶ ಬಂದಾಗ ಆ ಎರಡು ಪ್ರದೇಶಗಳ ಬಹುತೇಕ ಮತ ಇದಿನಬ್ಬ ರ ಪಾಲಿಗೆ ಬಂದಿತ್ತು.

ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಅಪಮಾನಿಸಿದವರನ್ನು ದಂಡಿಸದೆ, ತಪ್ಪೆಗಿಸಿದವರ ಪ್ರೀತಿಗೆ ಮತ್ತೆ ಪಾತ್ರ ವಾಗುವ ಗುಣ, ನಾಯಕನಾದವನ ಅರ್ಹತೆಯಾದಾಗ, ಸಂವಿಧಾನದ ಆಶಯ ಈಡೇರಿ ಸಿಗಲು ಸಾಧ್ಯ ಎಂದು ದೃಢವಾಗಿ ಹೇಳಿ ಕೊಳ್ಳುತ್ತಿದ್ದ ಇದಿನಬ್ಬರ ಮಾತು ಇತ್ತೀಚಿನ ದಿನಗಳಲ್ಲಿ ನೆನಪಿಗೆ ಬಂದಾಗ ಇದಿನಬ್ಬ ರಂತಹ ದಾರ್ಶನಿಕ ಇನ್ನು ರಾಜಕಾರಣದಲ್ಲಿ ನೆನಪು ಮಾತ್ರ ಎಂದು ನನ್ನನ್ನು ನಾನೇ ಸಮಾಧಾನಿಸಿ ಕೊಳ್ಳುತ್ತಿದ್ದೇನೆ.

ಬಹು ಮುಖ ಪ್ರತಿಭಾವಂತ, ಹಲವು ಯೋಜನೆಗಳ ಪ್ರವರ್ತಕ, ಪ್ರಾಮಾಣಿಕ, ಜಾತ್ಯಾತೀತ ನಾಯಕ ಬಿ.ಎಂ ಇದಿನಬ್ಬರ ಹೆಸರನ್ನು ಶಾಶ್ವತಗೊಳಿಸುವ ಸ್ಮಾರಕ ಇನ್ನೂ ರೂಪುಗೊಳ್ಳದೇ ಇರುವುದು ನಮ್ಮ ಕೃತಘ್ನತೆಯಾಗದೇ?

ಇದಿನಬ್ಬ ರ ಪ್ರಸ್ತುತ ತೆ ಶುದ್ಧ ರಾಜಕಾರಣಕ್ಕೆ ದಿವ್ಯ ಔಷಧಿ!
ರಾಜಕಾರಣದಲ್ಲಿ ಪ್ರತಿಭೆ ಮತ್ತು ಸನ್ನಡತೆಗೆ ಸತ್ಕಾರ ಮರಳಿ ಸಿಗುವಂತಾದರ, ಇದಿನಬ್ಬ ರಂತಹ ಗಾಂಧೀಜಿ ಪ್ರಣೀತ ರಾಜಕಾರಣಿಗಳಿಗೆ ಮತ್ತೆ ನೆಲೆ ದೊರಕ ಬಹುದು.
ಈ ಹಂಬಲಕ್ಕೆ ಕಾರಣವಾದ ಇದಿನಬ್ಬರ ಇಹದ ಬದುಕಿನಂತೆ ಅವರ ಮರಣಾ ನಂತರದ ಬದುಕೂ ದೇವರ ಸಂಪ್ರೀತಿಗೆ ಅರ್ಹವಾಗಲಿ