ಜೀವನ ಎಂದರೆ ದುಡ್ಡು ಮಾತ್ರವಲ್ಲ! ಆರೋಗ್ಯವಿಲ್ಲದ ದುಡ್ಡು ರದ್ದಿ ಪೇಪರಿಗೆ ಸಮ!
ಡಾ.ಖಾದರ್ ನಿಜಕ್ಕೂ ಆರೋಗ್ಯ ವಿಜ್ಞಾನದ ಓರ್ವ ಶ್ರೇಷ್ಠ ಸಂತ.
ನೀವು ಕಕ್ಕಸಕ್ಕೆ ಹೋದಾಗ ನೀರು ಹಾಕಿದ ಕೂಡಲೆ ಕಕ್ಕಸು ಸ್ವಚ್ಛವಾದರೆ ನೀವು ಆರೋಗ್ಯವಂತರು, ಅದು ಅಲ್ಲೆ ಹಿಡಿದುಕೊಂಡರೆ ನಿಮಗೆ ಏನೋ ತೊಂದರೆ ಇದೆ ಎಂದೆ ಅರ್ಥ!
• ನಿಮ್ಮ ಮಕ್ಕಳಿಗೆ ೧೫-೨೦ ವರ್ಷಕ್ಕೆ ಶುಗರ್ ಗೆ ಬಲಿಯಾಗಿಸಬೇಕೆಂದಿದ್ದರೆ ನೂಡಲ್ಸ್ ತಿನ್ನಿಸಿ!
• ನಿಮ್ಮ ಮುಂದಿನ ಪೀಳಿಗೆ ಬೊಕ್ಕತಲೆಯವರಾಗಬೇಕಾದರೆ ನೀವು ಪ್ಲಾಸ್ಟಿಕ್ ಬಾಟಲ್ ನೀರನ್ನೇ ಕುಡಿಯಿರಿ!
• ನೂರು ಗ್ರಾಂ. ಚಾಕಲೇಟ್ ನಲ್ಲಿ ೪% ಜಿರಲೆ ಹಾಗೂ ೬% ಇಲಿ ಪಿಚ್ಚಿಕೆ ಇದ್ದೇ ಇರುತ್ತವೆ. ಹಾಗಾಗಿ ಆರಾಮಾಗಿ ನಿಮ್ಮ ಮಕ್ಕಳಿಗೆ ಚಾಕಲೇಟ್ ತಿನ್ನಿಸಿ!
• ಕೂದಲು ಉದುರುತ್ತಿದೆ ಎಂದರೆ ಆರೋಗ್ಯ ಸರಿಯಾಗಿಲ್ಲ ಎಂದೇ ಅರ್ಥ!
ಇವು ಡಾ.ಖಾದರರವರು ಹೇಳುವ ಕೆಲ ಮಾತುಗಳ ಝಲಕ್.
ಸಮಾಜದ ಬಗ್ಗೆ, ಮಕ್ಕಳ ಬಗ್ಗೆ ಅಪಾರ ಕಳಕಳಿಯುಳ್ಳ ಡಾ.ಖಾದರ್ ನಿಜಕ್ಕೂ ಆರೋಗ್ಯ ವಿಜ್ಞಾನದ ಸಂತ. ಒಬ್ಬ ಅತ್ಯುತ್ತಮ ವಿಜ್ಞಾನ ಪ್ರಾಧ್ಯಾಪಕರಿಗಿಂತ ಹತ್ತು ಪಟ್ಟು, ಸಾಮಾನ್ಯ ಜನರಿಗೆ, ಅರ್ಥವಾಗುವ ರೀತಿಯಲ್ಲಿ ಸಂವಹನ ಕೌಶಲ ಹೊಂದಿರುವ ಡಾ.ಖಾದರರವರದು ಸ್ವಸ್ಥ ಭಾರತ ನಿರ್ಮಿಸಬೇಕೆನ್ನುವ ಕನಸು. ಪ್ರೀತಿಯಿಂದ ಕರೆದಲ್ಲೆಲ್ಲ ಹೋಗಿ ಬದಲಾದ ಜೀವನ ಶೈಲಿಯಿಂದಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಿಕೊಡುವುದಲ್ಲದೆ ತೃಣ ಧಾನ್ಯಗಳೆಂದೆ ಪರಿಗಣಿಸಲ್ಪಟ್ಟಿದ್ದ ಹೆಚ್ಚು ನಾರಿನಂಶ ಹೊಂದಿರುವ ದೇಶೀಯ ಧಾನ್ಯಗಳಾದ ನವಣೆ, ಸಾಮೆ, ಆರ್ಕ, ಕೊರಲು, ಬರಗು, ಊದಲು, ರಾಗಿ ಇವುಗಳಿಗೆ ಸಿರಿಧಾನ್ಯಗಳೆಂದು ಹೆಸರಿಸಿ ಇವುಗಳ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳುವ ವಿಧಾನಗಳ ಬಗ್ಗೆ ಮನೋಜ್ಞವಾಗಿ ತಿಳಿಸಿಕೊಡುತ್ತಾರೆ. ಅಲ್ಲದೇ, ಗ್ಯಾಂಗರಿನ್ ಆಗಿ ಕಾಲು ಕಡಿಯಲೇಬೇಕಾದ ಪರಿಸ್ಥಿತಿ ಇದ್ದ ಜನರಿಗೆ ಈ ಧಾನ್ಯಗಳನ್ನು ತಿನ್ನಿಸುವುದರ ಮೂಲಕವೇ ಗುಣಮುಖರಾಗಿಸಿ ಅನೇಕರ ಬದುಕಿಗೆ ಜೀವ ನೀಡಿದ್ದಾರೆ.
ಇಂತಹ ಡಾ.ಖಾದರ ಅವರ ಬದುಕೇ ರೋಚಕ! ಮಾತೃಭಾಷೆ ತೆಲುಗು. ಹುಟ್ಟಿದ್ದು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ. ಕಾಲೇಜು ಹಂತದ ಶಿಕ್ಷಣ ಆಂಧ್ರದಲ್ಲೇ. ಆದರೆ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ಪೂರೈಸಿದ್ದು ಕರ್ನಾಟಕದಲ್ಲಿ. ಜೀವ ರಾಸಾಯನಿಕ ವಿಜ್ಞಾನದಲ್ಲಿ ಸ್ಟಿರಾಯಿಡಗಳ ಅಧ್ಯಯನವನ್ನು ಮಾಡಿ ಡಾಕ್ಟರೇಟ್ ಪಡೆದ ಮೇಲೆ ನಂತರ ಎರಡು ವರ್ಷ ಮೈಸೂರಿನಲ್ಲಿ ಸಿರಿಧಾನ್ಯಗಳ ಮೇಲೆ ಸಂಶೋಧನೆ ನಡೆಸಿದರು. ತದನಂತರದಲ್ಲಿ ಐದು ವರ್ಷಗಳ ಕಾಲ ಅಮೇರಿಕಾದ ‘ಡುಪಾಂಟ್’ ಎನ್ನುವ ಬಹುರಾಷ್ಟ್ರೀಯ ಕಂಪನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಕ ರಾಸಾಯನಿಕಗಳ, ಸೂಕ್ಷ್ಮಾಣು ಜೀವಿಗಳ ಸಂಶೋಧನೆ ನಡೆಸಿದರು. ನಂತರದ ಐದುವರ್ಷ ಪೋರ್ಟ ಲ್ಯಾಂಡ ನಲ್ಲಿ ಪರ್ಯಾವರಣ ಶಾಸ್ತ್ರದಲ್ಲಿ ಸೂಕ್ಷ್ಮಾಣು ಜೀವಿಗಳು, ಮರಗಟ್ಟು ವಿಧಾನಗಳು, ಸೂಕ್ಷ್ಮಜೀವಿಗಳ ನಿರ್ವಹಣೆ, ಪರ್ಯಾವರಣ ವಿಷರಾಸಾಯನಿಕ ಪದಾರ್ಥಗಳ ನಿಷ್ಕ್ರಿಯಗೊಳಿಸುವಿಕೆಯ ಅಧ್ಯಯನದಲ್ಲಿ, ಸಂಶೋಧನೆಯಲ್ಲಿ ತೊಡಗಿದರು. ಪಡೆದ ಜ್ಞಾನ ತಿಳುವಳಿಕೆಯನ್ನು ಮಾನವಕಲ್ಯಾಣಕ್ಕಾಗಿ ಹಂಚಬೇಕೆನ್ನುವ ಆಸೆ ಅವರಿಗೆ. ಆದರೆ ಕಂಡುಕೊಂಡ ತಂತ್ರಜ್ಞಾನವನ್ನ ಲಾಭಕ್ಕಾಗಿ ಯೋಚಿಸುವ ಕಂಪನಿಗಳ ವ್ಯಾಪಾರೀಕರಣ ಗುಣ ಖಾದರವರಿಗೆ ಸರಿಬರಲಿಲ್ಲ. ಅಮೇರಿಕಾದ ಅಪಾರ ಸಂಪತ್ತು, ಅಂತಸ್ತು, ಇರುವ ವೃತ್ತಿ, ತೃಪ್ತಿ ಸಿಗದೆ ಒದ್ದಾಡಿಸಿತು. ಜೀವಮಾರಕ ರಾಸಾಯನಿಕ ಸಂಶೋಧನೆಗಳಿಂದ ಮನದಾಳದಲ್ಲಿನ ಮಾನವೀಯ ಮೌಲ್ಯ ಅವರ ಮನಸ್ಸನ್ನು ಕದಡಿತು. ಅಮೇರಿಕಾದ ವೈಭವಯುತ ಜೀವನವನ್ನು, ಕೋಟಿಗಟ್ಟಲೆ ಆದಾಯ ತರುವ ಕೆಲಸಕ್ಕೆ ತಿಲಾಂಜಲಿ ನೀಡಿ ಮರಳಿ ದೇಶಕ್ಕೆ ಬಂದು ಮೈಸೂರಿನ ತೊಣಚಿಕೊಪ್ಪಲಿನಲ್ಲಿ ನೆಲೆಸಿದರು. ಅಲ್ಲಿ ಸಂಶೋಧಕರಾಗಿ ‘ಕಾಡುಕೃಷಿ ವಿಧಾನದ’ ಬಗ್ಗೆ ಸಂಪೂರ್ಣ ಅಧ್ಯಯನವನ್ನು ಕೈಗೊಂಡು ಅದರಲ್ಲಿ ಯಶಸ್ವಿಯಾಗಿ ತಮ್ಮದೇ ಕನಸಿನಲ್ಲಿ ಸಾವಿರಾರು ರೈತರಿಗೆ ಮಹತ್ವ ತಿಳಿಸಿಕೊಟ್ಟು ಜಾಗೃತಿ ಮೂಡಿಸಿದರು. ಇವರ ಕನಸಿಗೆ ಸ್ಪಂದಿಸಿದ ಅನೇಕ ರೈತರು ಅವರ ಸಲಹೆಗಳನ್ನು ಸ್ವೀಕರಿಸಿ ಅದರಂತೆ ಉಳಿಮೆ ಮಾಡಿದರು. ನೆಮ್ಮದಿಯ ಬದುಕನ್ನು ಕಂಡುಕೊಂಡರು. ತಮ್ಮ ಅನುಭವಗಳನ್ನು ಕನಸನ್ನು ಸಾಕಾರಗೊಳಿಸಲು ಕಬಿನಿ ಜಲಾಶಯದ ಬಲಪಕ್ಕದ ದಿಬ್ಬದ ಮೇಲೆ ೮ ಎಕರೆ ಬಂಜರು ಭೂಮಿಯನ್ನು ಖರೀದಿಸಿಕೊಂಡು ಕಾಡು ಕೃಷಿಯಲ್ಲಿ ನಿರತರಾಗಿದ್ದಾರೆ. ೧೯೯೫ರ ವರೆಗೆ ಭೂಮಿ, ಕೃಷಿ ಎಂಬುದೇ ಗೊತ್ತಿರದ ಅವರು ಪರಿಣಿತ ಕೃಷಿಕರಾಗಿ ಆ ಹೊಲದಲ್ಲಿ ಧಾನ್ಯ, ಕಾಳು, ತರಕಾರಿ, ಸೊಪ್ಪು ಸೇರಿದಂತೆ ೩೮ ವಿಧದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಅವರ ಜ್ಞಾನ, ಸಂಶೋಧನೆ ಮತ್ತು ಅನುಭವಗಳು ೮ ಎಕರೆ ಜಮೀನಿನಲ್ಲಿ ಸುಸ್ಥಿರ ಕೃಷಿಯ ರೂಪದಲ್ಲಿ ನಳನಳಿಸುತ್ತಿವೆ.
‘ಹೋಮಿಯೋಪತಿ ವೈದ್ಯ’ ವಿಜ್ಞಾನವನ್ನು ಸ್ವಯಂ ಅಧ್ಯಯನ ಮಾಡಿ ಪಾಂಡಿತ್ಯ ಪಡೆದಿರುವ ಖಾದರರವರು ಕಡಿಮೆ ವೆಚ್ಚದಲ್ಲಿ ಬಹುತೇಕ ಕಾಯಿಲೆಗಳನ್ನು ಗುಣಪಡಿಸುವ ಹೋಮಿಯೋಪತಿ ವೈದ್ಯರಾಗಿ ಜನಪ್ರಿಯರಾಗಿದ್ದಾರೆ. ತಮ್ಮ ಬಳಿ ಬರುವ ರೋಗಿಗಳಿಗೆ ಔಷಧಿಗಳ ಬದಲಾಗಿ ಸಿರಿಧಾನ್ಯಗಳನ್ನು ತಿನ್ನಿಸಿ ಅವಗಳಿಂದಲೇ ವಾಸಿಮಾಡಿಸುವ ಪರಿಣಿತಿಯುಳ್ಳವರು. ಜಗತ್ತಿನ ಆರೋಗ್ಯದ ಸಮಸ್ಯೆಗಳಿಗೆ ಸಿರಿಧಾನ್ಯಗಳೇ ಮದ್ದು ಎಂದು ನಂಬಿರುವ ಖಾದರವರು ಆ ಧಾನ್ಯಗಳನ್ನು ಮಾರುವ ವ್ಯಾಪಾರಿಗಳಲ್ಲ. ಆದರೆ ಆ ಬೆಳೆಯನ್ನು ಎಲ್ಲಾ ಕಡೆ ಬೆಳಸಿ ಬಳಕೆ ಹೆಚ್ಚು ಮಾಡಿ ಆರೋಗ್ಯ ಪಸರಿಸುವ ಕನಸು ಹೊತ್ತವರು. ಬಿಳಿ ಅನ್ನ, ಬಿಳಿ ಸಕ್ಕರೆ, ಬಿಳಿ ಮೈದಾ, ಬಿಳಿ ಗೋದಿ ಹಿಟ್ಟನ್ನು ಸಂಪೂರ್ಣ ತ್ಯೆಜಿಸಿ ಎನ್ನುವ ಅವರು ಅದರಿಂದಾಗುವ ಪರಿಣಾಮಗಳನ್ನು ಅವರಿಂದಲೇ ಕೇಳಬೇಕು. ಖಾದರವರ ಸ್ವದೇಶಿ ಆಂದೋಲನದ, ಯಾವುದೇ ಉದ್ಯಮದ ಹಿಂದಿನ ಪ್ರಚಾರಕರಲ್ಲ. ಅವರ ಮಾತಿನಲ್ಲಿ ಕಳಕಳಿ ಇದೆ. ಭೋಗಕ್ಕೆ ಬಿದ್ದು ಆರೋಗ್ಯ ಕೆಡಿಸಿಕೊಳ್ಳುತ್ತಿರುವ ಜನರ ಬಗ್ಗೆ, ಮಕ್ಕಳಿಗೆ ಏನೆಲ್ಲಾ ತಿನ್ನಿಸಿ ಅವರ ಬದುಕನ್ನು ನರಕ ಮಾಡುತ್ತಿರುವವರ ಬಗ್ಗೆ ಕನಿಕರ ಇದೆ. ಮಾಂಸವನ್ನು ಕುಚ್ಚುವ ಮೂಲಕ ತಯಾರಿಸುವ ಡಾಲ್ಡಾ ಬಗ್ಗೆ, ಚಾಕಲೇಟ ಹಿಂದಿನ ಸತ್ಯದ ಬಗ್ಗೆ, ಜಂಕ್ ಫುಡ್ ನಲ್ಲಿರುವ ವಿಷದ ಬಗ್ಗೆ, ಮೈದಾದ ಹಿಂದಿನ ಕುತಂತ್ರತೆಯ ಬಗ್ಗೆ ಅವರ ಮಾತಿನಲ್ಲೇ ಕೇಳಬೇಕು! ಮೈದಾದಲ್ಲಿ ಬೆರೆಸುವ ‘ಅಲೋಕ್ಸಾನ್’ ಎನ್ನುವ ರಾಸಾಯನಿಕ ಪಾಂಕ್ರಿಯಾಸ್ ಅಂದರೆ ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳನ್ನು ನಾಶಪಡಿಸಿ ಇನಸುಲಿನ್ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆಗೊಳಿಸಿ, ಮಧುಮೇಹವನ್ನು ತಂದೊಡ್ಡುವ ಅಪಾಯದ ಬಗ್ಗೆ ನೀಡುವ ವಿವರಣೆ ಎಂತಹ ನಿರಕ್ಷಕುಕ್ಷಿಗೂ ತಿಳಿಯದೇ ಇರದು! ಬೇಕರಿಗಳಲ್ಲಿ ಎಣ್ಣೆಯ ಬದಲು ಬಳಸುವ ‘ಲಿಕ್ವೀಡ್ ಫಾರಾಫೀನ್’ ಎನ್ನುವುದು ಪೆಟ್ರೋಲಿನಿಂದ ಡೀಸೆಲ್, ಪೆಟ್ರೋಲ್, ಸೀಮೆ ಎಣ್ಣೆ ತೆಗೆದ ನಂತರದ ಉಳಿಕೆಯಿಂದ ಉತ್ಪಾದಿಸಲಾಗುವ ವಾಸನೆ ಇಲ್ಲದ ಸೀಮೆಎಣ್ಣೆ ಎಂದು ಕರೆಯಲ್ಪಡುವ ಈ ಎಣ್ಣೆಯಿಂದಲೇ ಪದಾರ್ಥಗಳನ್ನು ಹುರಿಯಲಾಗುತ್ತದೆ! ಇದರಲ್ಲಿ ಹುರಿದ ಪದಾರ್ಥಗಳು ಬೇಗ ಹಾಳಾಗುವುದಿಲ್ಲ! ಇದು ದೇಹದ ತೂಕ ಹೆಚ್ಚಿಸಿ ಕೋಶಗಳ ನಾಶಕ್ಕೆ ದಾರಿ ಮಾಡುತ್ತವೆ ಎನ್ನುವ ಅವರು ಇಂತಹ ಬೇಕರಿ ತಿಂಡಿಗಳು ನಮಗೆ ಬೇಕಾ? ಎಂದು ಪ್ರಶ್ನೆ ಹಾಕುತ್ತಾರೆ. ವಿದೇಶದಲ್ಲಿ ಆರೇಳು ವರ್ಷಕ್ಕೇ ಋತುಮತಿ ಆಗುತ್ತಾ ಇದ್ದಾರೆ. ನಮ್ಮಲ್ಲೂ ಎಂಟು ಹತ್ತು ವರ್ಷಕ್ಕೇ ಆಗುವ ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಅದಕ್ಕೆ ಕಾರಣ ನಾವು ಬಳಸುವ ಪಾಕೇಟು ಹಾಲಿನ ಪ್ರಭಾವ ಎನ್ನುವ ಅವರು ಫಾರ್ಮ್ ಹಸುವಿಗೆ ಹೆಚ್ಚಿನ ಹಾಲಿನ ಉತ್ಪಾದಿಸಲು ನೀಡುವ ಚೋದಕ ರಾಸಾಯನಿಕಗಳೇ ಮಕ್ಕಳಿಗೆ ಅಪತ್ತು ತಂದಿಡುತ್ತಿವೆ ಎಂದು ವಿಶ್ಲೇಷಿಸುತ್ತಾರೆ. ಅದರ ಬದಲು ಊರಲ್ಲಿ ಸಿಗುವ ಹಾಲನ್ನೇ ಬಳಸಿ, ಎನ್ನುತ್ತಾರೆ. ಈಗ ಅನ್ನ ಎಷ್ಟು ವಿಷಯಮಯವಾಗಿದೆ ಎಂದು ಗೊತ್ತೇ ಇದೆ. ಆದರೂ ಬಿಡಲೊಲ್ಲೆವು.
ಸಕ್ಕರೆ ನಮಗೆ ಅವಶ್ಯಕತೆಯೇ ಅಲ್ಲ. ನಿಸರ್ಗದ ಹಣ್ಣುಗಳೇ ಸಾಕು ಕೊರತೆ ನೀಗಿಸಲು! ಆದರೂ ನಾವು ಹಿಡಿ ಹಿಡಿ ಸಕ್ಕರೆಯನ್ನು ತಿನ್ನುತ್ತೇವೆ. ಚಾಕಲೇಟು ತಯಾರಿಕೆಯಲ್ಲಿ ಬಂದು ಬೀಳುವ ಜಿರಲೆಗಳ ಬಗ್ಗೆ ತಯಾರಿಕಾ ಕಂಪನಿಗಳೇ ಒಪ್ಪಿಕೊಂಡಿವೆ. ಆದರೂ ತಿನ್ನುತ್ತೇವೆ. ತಿನ್ನುವುದು ಸಮಸ್ಯೆಯಲ್ಲ ಯಾರ ಮನೆಗಳಲ್ಲಿ ಜಿರಲೆಗಳು ಇರುತ್ತವೆಯೋ ಆ ಮನೆಯವರು ಅಸ್ತಮಾ, ನೆಗಡಿ, ಕೆಮ್ಮು ಮೊದಲಾದ ಪೀಡೆಗಳಿಂದ ಬಳಲುತ್ತಿರುತ್ತಾರೆ. ಅಂತಹ ವೈರಾಣುಗಳನ್ನು ಆ ಜಿರಲೆಗಳು ಹೊರಹಾಕುತ್ತವೆ. ಅಂತಹ ಜಿರಲೆಗಳು, ಇಲಿ ಹಿಕ್ಕೆ ಇರುವ ಚಾಕಲೇಟು ನಮ್ಮ ದೇಹದ ಮೇಲೆ ಪ್ರಭಾವ ಬೀರದೆ ಇದ್ದೀತೆ? ಇವುಗಳ ಬದಲು ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕರಿಎಳ್ಳಿನ ಉಂಡೆ ಮಾಡಿ ಮಕ್ಕಳಿಗೆ ತಿನ್ನಿಸಿ. ರಕ್ತ ಹೀನತೆಯನ್ನು ನಿವಾರಿಸಲು ಕಪ್ಪು ಬೆಲ್ಲ ಸೇವಿಸಿ. ಹಲ್ಲಿನ ಸ್ವಚ್ಛತೆ ಹಾಗೂ ಗಟ್ಟಿತನಕ್ಕೆ ಪೇಸ್ಟುಗಳನ್ನು ದೂರೀಕರಿಸಿ ಇದ್ದಿಲು ಹಾಗೂ ವಾರಕ್ಕೊಮ್ಮೆ ಬೇವಿನಕಡ್ಡಿ ಬಳಸಿ, ಬ್ಯಾಕ್ಟೀರಿಯಾ ವಿರುದ್ಧ ಹೋರಾಡಬಲ್ಲ ಅಂಟಿ-ಆಕ್ಸಿಡೆಂಟ್, ಆಂಟಿ-ಇನ್ಫ್ಲೇಮೇಟರಿ, ಹಾಗೂ ಆಂಟಿ-ಏಜಿಂಗ್ ಗುಣ ಶೇಂಗಾಬೀಜದ ಮೇಲಿನ ಗುಲಾಬಿ ಬಣ್ಣದ ಪದರಿನಲ್ಲಿದೆ. ಶೇಂಗಾ ಕಾಳನ್ನು ಹುರಿದ ನಂತರ ತಿಕ್ಕಿ ಉಫ್ ಅಂತ ಊದದೇ ಹಾಗೇನೇ ಮಕ್ಕಳಿಗೆ ತಿನ್ನಿಸಿ. ಹಣ್ಣು ತರಕಾರಿ ಸೊಪ್ಪುಗಳನ್ನು ಸೇವಿಸಿ ಸಾಧ್ಯವಾದರೆ ನಿಮ್ಮ ಮನೆಯಂಗಳದಲ್ಲೇ ಬೆಳೆದು ಸೇವಿಸಿ ಎಂದು ಹೇಳುತ್ತಾರೆ. ಹೆಚ್ಚು ನಾರಿನಾಂಶವಿರುವ ಸಿರಿಧಾನ್ಯಗಳ ಸೇವೆನೆಯಿಂದ ಮಲಬದ್ಧತೆ ಸಮಸ್ಯೆ ತಪ್ಪಿಸಬಹುದು, ಮಧುಮೇಹ, ಬೊಜ್ಜು, ಕ್ಯಾನ್ಸರ್ ಮೊದಲಾದ ರೋಗಗಳಿಂದ ದೂರವಿರಬಹುದು ಎನ್ನುವ ಖಾದರವರು ಬೇಗನೇ ರಕ್ತಗತವಾಗುವ ಆಹಾರಕ್ಕಿಂತ ತಡವಾಗಿ ರಕ್ತತವಾಗುವ ಆಹಾರವೇ ಮೇಲು. ರಾಗಿ ತಿಂದರೆ ರಕ್ತಕ್ಕೆ ಸೇರಲು ನಾಲ್ಕುವರೆ ಗಂಟೆ ಬೇಕು, ಸಿರಿಧಾನ್ಯ ತಿಂದರೆ ಆರು ಗಂಟೆ ಬೇಕು, ಸಜ್ಜಿ, ಜೋಳ ತಿಂದರೆ ಮೂರು ಗಂಟೆ ಬೇಕು ಅದೇ ಅಕ್ಕಿ ತಿಂದರೆ ನಲವತೈದು ನಿಮಿಷ ಸಾಕು ಹಾಗೆ ಸಿಹಿಯಾದ ಯಾವುದೆ ಪದಾರ್ಥ ತಿಂದರೆ ಕೆಲವೇ ಕ್ಷಣ ಸಾಕು, ಎನ್ನುವ ಅವರು ಮಧುಮೇಹ ಆಹ್ವಾನಕ್ಕೆ ಯಾವ ಆಹಾರ ಉತ್ತಮ ನೀವೇ ಗ್ರಹಿಸಿ ಎಂದು ಚಿಂತನೆಗೆ ಹಚ್ಚುತ್ತಾರೆ. ಇಂದು ದೇಶದಲ್ಲಿ ಆಹಾರ ಪದ್ದತಿ ಬಗ್ಗೆ ದೊಡ್ಡದಾಗಿ ಪರ-ವಿರೋಧ ಚರ್ಚೆಗಳೇ ನಡಿದಿವೆ. ಜವಾರಿ ಅನ್ನುವುದೇ ವಿರಳವಾಗಿವೆ. ಹೆಚ್ಚಿನ ಮಾಂಸಕ್ಕಾಗಿ ಸ್ಟಿರಾಯಿಡಗಳನ್ನು ನೀಡಿ ಫಾರ್ಮಗಳಲ್ಲಿ ಕೋಳಿ, ದನ, ಹಂದಿಗಳನ್ನು ಬೆಳಸಲಾಗುತ್ತದೆ. ಫಾರ್ಮಗಳಲ್ಲಿನ ಆ ಪ್ರಾಣಿಗಳ ದೇಹ ಕೊಬ್ಬಿರುತ್ತದೆ ಹೊರತು ಅವುಗಳ ಸದೃಢ ಮೂಳೆಗಳಲ್ಲ. ಅವು ಒಂದೊಂದು ಹೆಜ್ಜೆಯಿಡಲು ಹೆಣಗಾಡುತ್ತಿರುತ್ತವೆ. ಅಂತಹ ಸ್ಟಿರಾಯಿಡ್ ತುಂಬಿದ ಮಾಂಸ ನಮ್ಮ ದೇಹಕ್ಕೆ ಯೋಗ್ಯವೇ? ಎನ್ನುವ ಪ್ರಶ್ನೆ ಅವರದು.
ಹೀಗೆ ಹತ್ತು ಹಲವು ಸ್ವಾರಸ್ಯಕರ ವಿಷಯಗಳನ್ನು ಬಿತ್ತುವ ಡಾ.ಖಾದರವರ ಮಾತುಗಳ ಹಿಂದೆ ತುಡಿತ ಇದೆ. ಜನರನ್ನು ಆರೋಗ್ಯದ ಮುಖ್ಯವಾಹಿನಿಯಲ್ಲಿ ತರಬೇಕೆನ್ನುವ ಬಲವಾದ ಹಂಬಲವಿದೆ. ಇತ್ತೀಚಿಗೆ ನಮ್ಮೂರು ಮಸ್ಕಿಯಲ್ಲಿ ಏರ್ಪಡಿಸಿದ್ದ ಅವರ ಕಾರ್ಯಕ್ರಮಕ್ಕೆ ಬಂದಿದ್ದ ಚಿದಾನಂದಪ್ಪ ಹೊಸಹಳ್ಳಿ ಎನ್ನುವ ಕೃಷಿಕರು ಖಾದರರವರ ಬಗ್ಗೆ ಪತ್ರಿಕೆಯಲ್ಲಿ ಓದಿ ಪ್ರಭಾವಿತರಾಗಿ ಸಿರಿಧಾನ್ಯಗಳನ್ನು ಬೆಳದವರು. ಅವರನ್ನು ಕಾಣಲೆಂದೇ ಕಾರ್ಯಕ್ರಮಕ್ಕೆ ಬಂದವರು. ಖಾದರವರು ‘ನೀವು ಈ ಧಾನ್ಯಗಳನ್ನು ನೋಡಿದವರು, ಬೆಳೆದವರು, ತಿಂದವರಿದ್ದಿರಾ?’ ಎಂದು ಕಾರ್ಯಕ್ರಮದ ಒಂದು ಹಂತದಲ್ಲಿ ಕೇಳಿದಾಗ ‘ನಾನು ಬೆಳದೀನಿ’ ಎಂದಾಗ, ಏನನ್ನು ವಿಚಾರಿಸದೆ ಆ ಬೆಳೆ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಎಂದಾಗ ಆ ಕೃಷಿಕ ಹೇಳಿದ ಮಾತಿದು. ‘ನವಣೆ ನಮ್ಮ ಭಾಗದ ಒಂದು ಕಾಲದ ಪ್ರಮುಖ ಬೆಳೆ. ಅದರ ರುಚಿಯೇ ಬೇರೆ. ಆದರೆ ಈ ಐದು ಧಾನ್ಯಗಳನ್ನು ಬಿತ್ತಿದ ಮೇಲೆ ನಾನು ಬದುಕಿನಲ್ಲೆ ಕಾಣದ ಬಗೆಬಗೆಯ ಪಕ್ಷಿಗಳು ಹೊಲದಲ್ಲಿ ಬಂದು ಗೂಡುಕಟ್ಟಿ ಇಲ್ಲಿಯ ಧಾನ್ಯಗಳನ್ನು ತಿಂದು ಸಂತಾನ ಬೆಳಸಿಕೊಂಡು ಹೋದವು, ಧಾನ್ಯ ಕಟಾವು ಮಾಡಿದಾಗ ಮಣ್ಣು ಸುಹಾಸನ ಭರಿತವಾಗಿತ್ತು, ರಾಶಿ ಮಾಡಿದ ಮೇಲೆ ಬಿದ್ದ ಕಾಳುಗಳನ್ನು ಇರುವೆ ಇನ್ನಿತರ ಕ್ರಿಮಿಗಳು ಹೊತ್ತುಕೊಂಡು ಹೋಗುತಿದ್ವು. ನಾನು ಭತ್ತ ಬೆಳೆಯುತ್ತೇನೆ. ಅಲ್ಲಿ ಒಂದು ಪಕ್ಷಿಗಳು ಬಂದು ಕೂಡುವುದಿಲ್ಲ. ತಿನ್ನುವುದು ದೂರ ಉಳಿತು. ಅದಕ್ಕೆ ಹಾಕುವ ವಿಷ ಗೊತ್ತಿದ್ದೇ ಇದೆ. ಅಂತಹ ಆಹಾರ ನಾವು ತಿನ್ನುತ್ತೇವೆ, ಬುದ್ಧಿ ಇರದ ಪ್ರಾಣಿಗಳಿಗೆ ಯಾವುದನ್ನು ತಿನ್ನಬೇಕು, ಬಿಡಬೇಕು ಎಂಬ ಅರಿವಿದೆ.’ ಎಂದು. ಅವರ ಮಾತಿನ ಗ್ರಹಿಕೆಗೆ ಖಾದರವರೇ ತಲೆದೂಗಿ ‘ನಾನು ಎರಡು ತಾಸು ಮಾಡಿದ ಭಾಷಣದ ಸಾರವನ್ನು ಎರಡು ನಿಮಿಷದಲ್ಲೇ ಹೇಳಿ ಬೆರಗು ಮೂಡಿಸಿದಿರಿ’ ಎಂದು ಅಭಿಮಾನದಿಂದ ಸನ್ಮಾನಿಸಿದರು.
ಹೀಗೆ ವಿಜ್ಞಾನಿ ವೈದ್ಯ, ಕೃಷಿಕರಾಗಿರುವ ಡಾ.ಖಾದರರವರು ಸ್ನೇಹಜೀವಿಗಳು, ಎಲ್ಲರನ್ನೂ ಗೌರವಿಸುವ ಸಹೃದಯರು. ಅಷ್ಟೇ ಅಲ್ಲ! ಕನ್ನಡಿಗರಲ್ಲದಿದ್ದರೂ ಕನ್ನಡದಲ್ಲಿಯೇ, ಕನ್ನಡಿಗರಿಗಿಂತಲೂ ವಿಷಯವನ್ನು ಅರ್ಥವತ್ತಾಗಿ ಮನಮುಟ್ಟುವಂತೆ ತಿಳಿಸಬಲ್ಲ ವಾಗ್ಮಿಗಳು. ಜೊತೆಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದ ಮಹನೀಯರು. ವಾರದಲ್ಲಿ ಐದು ದಿನಗಳ ಕಾಲ ಹೋಮಿಯೋಪತಿ ವೈದ್ಯರಾಗಿ ಮೈಸೂರಿನ ತಮ್ಮ ‘ಸುಖಸದನ’ ಎಂಬ ಹೆಸರಿನ ಮನೆಯಲ್ಲಿ ಮೊದಲೇ ಅಪಾಯಿಂಟ್‍ಮೆಂಟ್ ಪಡೆದು ಬಂದವರಿಗೆ ಚಿಕಿತ್ಸೆ ನೀಡುವ ಇವರ ಸಂದರ್ಶನಕ್ಕೆ ಮೂರು ತಿಂಗಳು ಕಾಯಬೇಕು. ಉಳಿದ ಎರಡು ದಿನಗಳ ಕಾಲ ಹೆಚ್.ಡಿ. ಕೋಟೆ ತಾಲೂಕಿನ ಬಿದರಹಳ್ಳಿ ಬಳಿಯ ತಮ್ಮ ಜಮೀನಿನ ಪುಟ್ಟ ಮನೆಯಲ್ಲಿ ಅಲ್ಲಿನ ನೂರಾರು ಬುಡಕಟ್ಟು ಮತ್ತು ಕುಗ್ರಾಮಗಳ ಜನರ ಕಾಯಿಲೆಗೆ ಉಚಿತ ಪರೀಕ್ಷೆ ಮಾಡಿ ಔಷಧಿಗಳನ್ನು ಉಚಿತವಾಗಿ ನೀಡುವ ಮಹಾನ್ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷಯಿಲ್ಲದೆ ಅವರಿವರೆನ್ನದೆ ಎಲ್ಲರಿಗೂ ಆರೋಗ್ಯದ ಬಗ್ಗೆ ‘ನಾವೇನು ತಿನ್ನುತ್ತಿದ್ದೇವೆ – ಆರೋಗ್ಯವಂತ ಜೀವನಕ್ಕೆ ನಾವೇನು ತಿನ್ನಬೇಕು’ ಎನ್ನುವ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಆರೋಗ್ಯ ವಿಜ್ಞಾನ ಸಂತ ಆಪೇಕ್ಷಿಸುವುದು ಸಿರಿಧಾನ್ಯಗಳನ್ನು ಬೆಳೆಸಿ, ಬಳಸಿ- ಆಸ್ಪತ್ರಯಿಂದ ದೂರವಿರಿ, ನೀವು ತಿಳಿದುಕೊಂಡದನ್ನು ನಾಲ್ಕು ಜನಕ್ಕೆ ತಿಳಿಸಿ, ಮಕ್ಕಳಿಗೆ ಹಂಚಿ ಎನ್ನುವ ಸ್ವಾರ್ಥ ಅಷ್ಟೆ! ಯಾರಾರಿಗೂ ಎಂತೆಂತಹೋ ಪ್ರಶಸ್ತಿ ನೀಡಿ ಗೌರವಿಸುವ ಸರಕಾರ ಇಂತಹ ಮಹನೀಯರನ್ನು ಗುರುತಿಸಲು, ಇವರ ವಿಚಾರಗಳನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡಿದೆ. ಅದು ನಾಡಿಗೆ, ನಮಗೆ ನಷ್ಟ. ಇನ್ನಾದರೂ ಅವರನ್ನು ಗುರುತಿಸುವಂತಾಗಲಿ ಎನ್ನುವ ಆಶಯ ನಮ್ಮದು.
ಡಾ:ಖಾದರ ಮೈಸೂರು
ಮೊ.ಸಂ. ೯೪೪೮೫೬೧೪೭೨.