ಗೌರಿಯನ್ನು ಕೊಂದ ಬುಲೆಟ್ಟು ನೀಡುತ್ತಿರುವ ಸಂದೇಶ
ಗೌರಿ ಲಂಕೇಶರ ಹತ್ಯೆ ಮಾಧ್ಯಮ ಲೋಕಕ್ಕೆ ಅತ್ಯಂತ ಅಪಾಯಕಾರಿ ಸಂದೇಶವೊಂದನ್ನು ರವಾನಿಸುತ್ತಿದೆ.

ಬೆಂಗಳೂರಿನ ಪ್ರಖ್ಯಾತ ಮತ್ತು ಜೀವನ್ಮುಖಿ ಪತ್ರಕರ್ತೆಯಾದ ಗೌರಿ ಲಂಕೇಶರು ಸೆಪ್ಟೆಂಬರ್ ೫ ರಂದು ಹಂತಕನೊಬ್ಬನ ಗುಂಡಿಗೆ ಬಲಿಯಾಗಿದ್ದಾರೆ. ಆದರೆ ಹಂತಕ ಹಾರಿಸಿದ ಗುಂಡು ಕೊಂದಿದ್ದು ಕೇವಲ ಗೌರಿ ಲಂಕೇಶರನ್ನು ಮಾತ್ರವಲ್ಲ. ಹಂತಕರು ಈ ಹತ್ಯೆಯ ಮೂಲಕ ಗೌರಿಯಷ್ಟು ಧೈರ್ಯಶಾಲಿಗಳಲ್ಲದಿದ್ದರೂ ಗೌರಿಯ ರೀತಿಯೇ ಪತ್ರಕರ್ತರಿಗೆ ಅಧಿಕಾರಸ್ಥರನ್ನು ಪ್ರಶ್ನಿಸುವ, ಯಾಜಮಾನ್ಯ ಧೋರಣೆಗಳ ಬಗ್ಗೆ ಅಭಿಪ್ರಾಯ ಬೇಧವನ್ನಿಟ್ಟುಕೊಳ್ಳುವ, ಸಾಮಾಜಿಕ ಪಿಡುಗುಗಳ ಬಗ್ಗೆ ತನಿಖೆ ಮಾಡುವ, ಮತ್ತು ಉನ್ನತ ಸ್ಥಾನಗಳಲ್ಲಿರುವವರು ಮಾಡುವ ಮಾನವ ಹಕ್ಕು ಉಲ್ಲಂಘನೆ ಮತ್ತು ಭ್ರಷ್ಟಾಚಾರಗಳನ್ನು ಬಯಲುಗೊಳಿಸುವ ಹಕ್ಕಿದೆಯೆಂದು ನಂಬುವ ಇತರ ಪತ್ರಕರ್ತರಿಗೂ ಮತ್ತು ಸರ್ಕಾರಗಳ ವಿರೋಧಿಗಳಿಗೂ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಗೌರಿ ಲಂಕೇಶರು ದಲಿತರ ಮತ್ತು ಅಲ್ಪಸಾಂಖ್ಯಾತರ ಹಕ್ಕುಗಳನ್ನು ದಮನಿಸುವ ಪ್ರತಿಗಾಮಿ ಮತ್ತು ಸಾಂಪ್ರದಾಯಿಕ ಶಕ್ತಿಗಳ ಕಟು ವಿಮರ್ಶಕಿಯಾಗಿದ್ದರು. ಅವರ ತಂದೆ ಪಿ. ಲಂಕೇಶರು ಅತ್ಯಂತ ಪ್ರಭಾವಶಾಲಿಯಾದ ಮತ್ತು ಬಲಿಷ್ಠವಾದ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯ ಮೂಲಕ ಇಡೀ ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಲೋಕವನ್ನೇ ಆಳವಾಗಿ ಪ್ರಭಾವಿಸಿದ್ದರು. ಅವರ ನಿಧನಾನಂತರ ಗೌರಿ ಲಂಕೇಶ್ ಪತ್ರಿಕೆಯನ್ನು ಪ್ರಾರಂಭಿಸಿದ ಗೌರಿ ಅಧಿಕಾರಸ್ಥರನ್ನು ಅತ್ಯಂತ ನೇರವಾಗಿ ಮತ್ತು ನಿಷ್ಠುರವಾಗಿ ಟೀಕಿಸುತ್ತಿದ್ದರು. ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮತ್ತು ಭಾರತೀಯ ಜನತಾ ಪಕ್ಷದ ಅತ್ಯಂತ ಕಠೋರ ವಿಮರ್ಶಕಿಯಾಗಿದ್ದರು. ಆದರೆ ಅದೇರೀತಿ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವನ್ನೂ ಟೀಕಿಸುತ್ತಿದ್ದರು. ಆಕೆ ಹಲವು ಸ್ಥಳೀಯ ಗುಂಪುಗಳ ಕೆಂಗಣ್ಣಿಗೂ ಗುರಿಯಾಗಿದ್ದು ಮಾತ್ರವಲ್ಲದೆ ಅಧಿಕಾರಸ್ಥರ ವಿರುದ್ಧ ಹೋರಾಡುತ್ತಿದ್ದ ವ್ಯಕ್ತಿಗಳಿಗೆ ತನ್ನೆಲ್ಲಾ ಬೆಂಬಲವನ್ನೂ ನೀಡುತ್ತಿದ್ದರು. ೨೦೧೫ರಲ್ಲಿ ಗೌರಿ ಲಂಕೇಶರನ್ನು ಕೊಂದ ರೀತಿಯಲ್ಲೇ ಹಂತಕನೊಬ್ಬ ಕನ್ನಡದ ಅತ್ಯಂತ ಪ್ರಖ್ಯಾತ ಸಂಶೊಧಕ-ಸಾಹಿತಿ ಪ್ರೊ. ಎಂ.ಎಂ ಕಲಬುರ್ಗಿಯವರ ಮನೆಗೆ ನುಗ್ಗಿ ಗುಂಡುಹಾರಿಸಿ ಕೊಂದಿದ್ದ. ಅವರಿಗೆ ೧೯೮೯ರಿಂದಲೂ ಹಿಂದೂ ಮೂಲಭೂತವಾದಿಗಳಿಂದ ಬೆದರಿಕೆ ಕರೆಗಳೂ ಬರುತ್ತಿದ್ದವು. ಆದರೆ ಈಗಿರುವ ಮಾಹಿತಿಯಂತೆ ಗೌರಿ ಲಂಕೇಶರಿಗೆ ಆ ರೀತಿ ಯಾವುದೇ ನೇರ ಬೆದರಿಕೆ ಕರೆಗಳು ಬಂದಿರಲಿಲ್ಲ.
ಗೌರಿ ಲಂಕೇಶರ ಈ ಕ್ರೂರ ಹತ್ಯೆಯು ಪತ್ರಕರ್ತರನ್ನೂ, ಸಾಮಾಜಿಕ ಕಾರ್ಯಕರ್ತರನ್ನೂ ಮತ್ತು ಅಧಿಕಾರಸ್ಥರ ಬಗ್ಗೆ ಭಿನ್ನಮತ ಇಟ್ಟುಕೊಂಡಿರುವವರನ್ನೂ ದಿಗ್ಭ್ರಾಂತಗೊಳಿಸಿದೆ ಮತ್ತು ಭಾರತಾದ್ಯಂತ ಬೀದಿಗಿಳಿದು ಪ್ರತಿಭಟಿಸುವಂತೆ ಮಾಡಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ತೊಡಗುವ ಮುನ್ನ ಗೌರಿಯವರು ಇಂಗ್ಲಿಷ್ ಮಾಧ್ಯಮದಲ್ಲಿ ಬಹುದೊಡ್ಡ ಪತ್ರಕರ್ತೆಯಾಗಿ ಹೆಸರು ಮಾಡಿದ್ದರು. ಆಕೆ ಇದ್ದದ್ದು ಮತ್ತು ವಾಸ ಮಾಡುತ್ತಿದ್ದದ್ದು ಬೆಂಗಳೂರಿನಂತ ಬೃಹತ್ ನಗರದಲ್ಲಿಯೇ ಹೊರತು ಜನವಸತಿ ವಿರಳವಾಗಿರುವ ಸಣ್ಣ ಪುಟ್ಟ ಟ್ಟಣದಲ್ಲಲ್ಲ. ಗೌರಿಯವರು ಒಂದು ಕಡೆ ತನ್ನ ಮಾಲೀಕತ್ವ ಮತ್ತು ಸಂಪಾದಕತ್ವದಲ್ಲಿ ಪ್ರತಿವಾರವೂ ಗೌರಿ ಲಂಕೇಶ್ ಪತ್ರಿಕೆಯನ್ನು ಪ್ರಕಟಿಸುತ್ತಲೇ ಮತ್ತೊಂದು ಕಡೆ ರಾಜ್ಯಾದ್ಯಂತ ಮತ್ತು ದೇಶಾದ್ಯಂತ ಪ್ರವಾಸ ಮಾಡುತ್ತಾ ಹಲವಾರು ಹೋರಾಟ, ಸಭೆ, ಸಮಾರಂಭಗಳಲ್ಲು ಭಾಗವಹಿಸುವ ಮೂಲಕ ಸಾಮಾಜಿಕ ಹೊರಾಟಗಳಲ್ಲಿ ಒಂದಾಗುತ್ತಿದ್ದರು. ಇದರ ಪರಿಣಾಮವಾಗಿ ಗೌರಿಯವರ ಮೇಲೆ ಹಲವಾರು ಮಾನನಷ್ಟ ಮೊಕದ್ದಮೆಗಳು ದಾಖಲಾಗಿದ್ದವು. ಧಾರವಾಡದ ಸಂಸತ್ ಸದಸ್ಯರಾದ ಬಿಜೆಪಿಯ ಪ್ರಹ್ಲಾದ್ ಜೋಷಿ ಹಾಗೂ ಮತ್ತೊಬ್ಬ ಬಿಜೆಪಿ ಸದಸ್ಯ ಉಮೇಶ್ ದೋಷಿಯವರು ಹೂಡಿದ್ದ ಮಾನನಷ್ಟ ಮೊಕದ್ದಮೆಯೊಂದರಲ್ಲಿ ಕೆಳಹಂತದ ನ್ಯಾಯಾಲಯವು ಇತ್ತೀಚೆಗೆ ಗೌರಿಯವರಿಗೆ ಶಿಕ್ಷೆಯನ್ನೂ ಕೂಡಾ ವಿಧಿಸಿತ್ತು. ಈ ಆದೇಶವನ್ನು ಅವರು ಸತ್ರ ನ್ಯಾಯಾಲಯದಲ್ಲಿ ಪ್ರಶ್ನಿಸಿ ಜಾಮೀನನ್ನೂ ಪಡೆದುಕೊಂಡಿದ್ದರು. ಆದರೆ ಈ ಯಾವುದೇ ಜನಪ್ರಿಯತೆ ಅಥವಾ ಖ್ಯಾತಿಗಳು ಅವರನ್ನು ಹಂತಕರಿಂದ ಬಚಾವು ಮಾಡಲಿಲ್ಲ. ಇದು ಟೀಕಾಕಾರರ ಬಾಯಿ ಮುಚ್ಚಿಸಲು ಸಾಧ್ಯವಾಗದಿದ್ದರೆ ಅವರ ಪ್ರಾಣವನ್ನೇ ತೆಗೆಯಲೂ ಸಿದ್ಧರಿರುವಂತವರಲ್ಲಿ ಮನೆಮಾಡಿರುವ ಶಿಕ್ಷಾಭೀತಿಯಿಲ್ಲದ ಅಧಿಕಾರ ಮದವನ್ನು ತೋರಿಸುತ್ತದೆ.
ಗೌರಿ ಲಂಕೇಶರನ್ನು ಕೊಲ್ಲುವ ಮೂಲಕ ಹಂತಕರು ಭಾರತದ ಮಾಧ್ಯಮಕ್ಕೆ ಒಂದು ಸಂದೇಶವನ್ನೇನಾದರೂ ನೀಡುತ್ತಿದ್ದಾರೆಯೇ? ಹಂತಕರ ಮುಖಗಳು ಸ್ಪಷ್ಟವಾಗದೆ ಈಗಲೇ ಯಾವುದೇ ಅಂತಿಮ ತೀರ್ಮಾನಗಳಿಗೆ ಬರಲಾಗುವುದಿಲ್ಲ. ಆದರೆ ವಾಸ್ತವವೆಂದರೆ ಇಂದು ಮಾಧ್ಯಮ ಲೋಕದಲ್ಲಿ ಗೌರಿ ಲಂಕೇಶರಂತೆ ನಿರ್ಭೀತಿಯಿಂದ ಯಾವುದೇ ಪರಿಣಾಮಗಳಿಗೂ ಅಂಜದೆ ಅಳುಕದೆ ಅಧಿಕಾರಸ್ಥರಿಗೆ ಮತ್ತು ಸಮಾಜದ ಯಜಮಾನ ಲೋಕಕ್ಕೆ ಅಹಿತವಾಗುವ ಪ್ರಶ್ನೆಗಳನ್ನೂ ಕೇಳುವ ಹಾಗೂ ದುರ್ಬಲ ಸಮುದಾಯಗಳ ಹಕ್ಕಿಗಾಗಿ ಧ್ವನಿ ಎತ್ತುವವರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ. ವಾಸ್ತವೆಂದರೆ, ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಬಹುಪಾಲು ಮುಖ್ಯವಾಹಿನಿ ಮಾಧ್ಯಮವು ಇಂದು ಅಧಿಕಾರಸ್ಥರ ಮುಂದೆ ಡೊಗ್ಗು ಸಲಾಮು ಹಾಕುತ್ತಿದೆ ಮತ್ತು ಪ್ರಶ್ನೆ ಕೇಳುವುದನ್ನೇ ಮರೆತಿದೆ. ಇಂದಿನ ಮಾಧ್ಯಮಗಳ ಮಾಲೀಕತ್ವದ ಮಾದರಿಯನ್ನು ಗಮನಿಸಿದಲ್ಲಿ ಮಾಲೀಕರು ಒಪ್ಪದೆ ಯಾವೊಬ್ಬ ಪತ್ರಕರ್ತರು ವ್ಯಕ್ತಿಯಾಗಿ ಪ್ರಬಲರ ಕೃತ್ಯಗಳನು ಬಯಲುಗೊಳಿಸಲು ಸಾಧ್ಯವಾಗುವುದಿಲ್ಲ. ಆದರೆ ಕಾರ್ಪೊರೇಟ್ ಶಕ್ತಿಗಳನ್ನು ಮತ್ತು ರಾಜಕೀಯ ಅಧಿಕಾರವನ್ನು ಬೇರ್ಪಡಿಸುವ ಗೆರೆಯೇ ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅಂತ ಸಾಧ್ಯತೆಗಳೂ ಕೂಡಾ ತೀರಾ ವಿರಳವಾಗುತ್ತಿವೆ. ಹೀಗಾಗಿ ಆರ್ಥಿಕತೆಯಿಂದ ಹಿಡಿದು ವಿದೇಶಾಂಗ ವ್ಯವಹಾರದವರೆಗೆ ಅಥವಾ ಅಂತರಿಕ ಸಂಘರ್ಷದವರೆಗೆ ಪ್ರಬಲ ಮತ್ತು ಅಧಿಕಾರಸ್ಥರ ಅಭಿಪ್ರಾಯ ಅಥವಾ ನಿಲುವುಗಳೇ ಎಲ್ಲೆಡೆ ಯಥಾವತ್ ಪ್ರತಿಧ್ವನಿತವಾಗುತ್ತಿದೆ. ಈ ಅಧಿಕಾರ ರಾಗಕ್ಕೆ ಭಿನ್ನವಾದ ಧ್ವನಿಯನ್ನು ಉಸುರುವ ಮಾಧ್ಯಮಗಳು ವಿರಳವಾಗುತ್ತಿವೆ. ಈ ಕಾರಣಕ್ಕಾಗಿಯೇ ಗೌರಿ ಲಂಕೇಶ್ ಪತ್ರಿಕೆ ಅತ್ಯಂತ ಮಹತ್ವವನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಅದು ಗಾತ್ರದಲ್ಲಿ ಸಣ್ಣದಾಗಿಯೂ ಸ್ವತಂತ್ರವಾಗಿದ್ದರೂ ಅತ್ಯಂತ ಮತ್ತು ಪ್ರಭಾವಶಾಲಿಯೂ ಆಗಿವೆ.
ಅಧಿಕಾರಸ್ಥರು ಮಾಧ್ಯಮಗಳ ಧ್ವನಿಯನ್ನು ಕೊಂಡುಕೊಳ್ಳಲೂ ಮತ್ತು ಪಳಗಿಸಲು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ ಇಂಥಾ ಸಣ್ಣ ಪತ್ರಿಕೆಗಳು ಸತ್ಯದ ದೊಡ್ಡ ಧ್ವನಿಗಳಾಗುತ್ತಿವೆ. ಆದರೂ ಅಂಥ ಪತ್ರಿಕೆಗಳಿಗೆ ಬೇರೆ ಯಾವುದೇ ಬೆಂಬಲವಿರುವುದಿಲ್ಲವಾದ್ದರಿಂದ ಸರ್ಕಾರದ ದಮನಕ್ಕೆ ಮಾತ್ರವಲ್ಲದೆ ಕಾನೂನು ಬಾಹಿರ ಶಕ್ತಿಗಳ ದಾಳಿಗಳಿಗೂ ಸುಲಭದ ತುತ್ತಾಗುತ್ತಿವೆ. ಗೌರಿ ಲಂಕೇಶರ ಧ್ವನಿಯನ್ನು ದಮನಿಸಲು ಗುಂಡನ್ನು ಬಳಸಲಾಗಿದೆ. ಆದರೆ ಮಾಧ್ಯಮದ ಧ್ವನಿಯನ್ನು ಅಡಗಿಸಲು ಅತ್ಯಂತ ವಿಪುಲವಾಗಿ ಬಳಸುವ ಮತ್ತೊಂದು ತಂತ್ರವೆಂದರೆ ಅವುಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸುವುದು. ಇಂತ ಕೇಸುಗಳು ಗೌರಿ ಲಂಕೇಶರ ಸ್ಥೈರ್ಯವನ್ನು ಉಡುಗಿಸಲು ಸಾಧ್ಯವಾಗಲಿಲ್ಲವೆಂಬುದು ನಿಜವಾದರೂ ಅಧಿಕಾರ ಮತ್ತು ವ್ಯವಹಾರಗಳಲ್ಲಿರುವ ಪ್ರಬಲರು ಪತ್ರಿಕೆ ಮತ್ತು ಪತ್ರಕರ್ತರ ಧ್ವನಿಯನ್ನು ಅಡಗಿಸಲು ಈ ದಾಳವನ್ನು ಪದೇಪದೇ ಬಳಸುತ್ತಲೇ ಇದ್ದಾರೆ. ಹೀಗಾಗಿ ಈ ಕಾಲಬಾಹಿರ ಮತ್ತು ಆತಂಕಕಾರಿ ಕಾನೂನಿನ ಬಗ್ಗೆ ಪುನರಾವಲೋಕನ ಮಾಡುವ ಅಗತ್ಯವಿದೆ. ಸುಬ್ರಹ್ಮಣ್ಯಸ್ವಾಮಿ ಮತ್ತು ಭಾರತದ ಪ್ರಭುತ್ವದ ನಡುವಿನ ಪ್ರಕರಣದಲ್ಲಿ ಈ ಕಾನೂನನ್ನು ಪ್ರಶ್ನಿಸಲಾಗಿತ್ತು. ಆದರೆ ದೇಶದ ವರಿಷ್ಠ ನ್ಯಾಯಾಲಯವು ೨೦೧೬ರ ಮೇ ತಿಂಗಳಲ್ಲಿ ಆ ಅಹವಾಲನ್ನು ವಜಾ ಮಾಡಿದೆ. ಸುಪ್ರೀಂ ಕೋರ್ಟಿನ ಈ ಆದೇಶವನ್ನು ವಿಮರ್ಶಿಸುತ್ತಾ ಹಿರಿಯ ವಕೀಲ ರಾಜೀವ ಧವನ್ ಅವರು ದ ವೈರ್ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ: ಜಗತ್ತು ಸಮತಟ್ಟಾಗಿಲ್ಲ. ಅದು ಅಸಮಾನತೆಯಿಂದ ಕೂಡಿದ್ದು ಪ್ರಬಲರು ಮೊಕದ್ದಮೆಗಳನ್ನು ಹೂಡುವ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಇದು ಕಾನೂನು ಹೋರಾಟಗಳ ಅಂತರ್ಯದಲ್ಲೇ ಅಡಕವಾಗಿರುವ ರೋಗವಾಗಿದ್ದು ಪ್ರಖ್ಯಾತ ನ್ಯಾಯಮೂರ್ತಿ ವಿ. ಆರ್. ಕೃಷ್ಣ ಅಯ್ಯರ್ ಅವರು ತಮ್ಮ ಹಲವಾರು ಆದೇಶಗಳಲ್ಲಿ ಇದರ ಬಗ್ಗೆ ತಳಸ್ಪರ್ಷಿಯಾಗಿ ಬರೆದಿದ್ದಾರೆ.
ಭಿನ್ನಮತಗಳನ್ನು ಹತ್ತಿಕ್ಕಲೆಂದೇ ಬಳಕೆಯಾಗುವ ಇಂಥಾ ಕಾನೂನಿಗೆ ಒಂದು ಪ್ರಜಾತಂತ್ರದಲ್ಲಿ ಯಾವುದೇ ಅವಕಾಶವಿರಬಾರದು. ಈ ಹಿಂದೆ ರಾಜೀವ್ ಗಾಂಧಿ ಸರ್ಕಾರ ಮಾನನಷ್ಟದ ಬಗ್ಗೆ ಕಾನೂನೊಂದನ್ನು ತರಲು ಪ್ರಯತ್ನಿಸಿ ಹಿಂತೆಗೆದುಕೊಂಡಿತ್ತು. ಅದು ಸಾಧ್ಯವಾಗಿದ್ದು ಆಗ ಮಾಧ್ಯಮ ಲೋಕ ಒಗ್ಗಟ್ಟಾಗಿ ಅದಕ್ಕೆ ಪ್ರತಿರೋಧ ತೋರಿದ್ದರಿಂದ. ಪ್ರಾಯಶಃ, ಮತ್ತೊಮ್ಮೆ ಇಡೀ ಮಾಧ್ಯಮ ಲೋಕ ಒಗ್ಗಟ್ಟಾಗಿ ಈ ಕ್ರಿಮಿನಲ್ ಮಾನನಷ್ಟ ಕಾನೂನನ್ನು ರದ್ದು ಮಾಡಲು ಹೋರಾಡುವುದೇ ನಾವುಗಳು ಗೌರಿಗೆ ತೋರುವ ಒಂದು ಶ್ರದ್ಧಾಂಜಲಿಯಾಗಿರುತ್ತದೆ. ಆಕೆಯ ಕ್ರೂರ ಹತ್ಯೆ ಎಲ್ಲಾ ಪತ್ರಕರ್ತರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ. ಆಪತ್ತಿನಲ್ಲಿರುವುದು ಕೇವಲ ಪತ್ರಕರ್ತರ ಜೀವಗಳಲ್ಲ. ಸ್ವತಂತ್ರ ಮತ್ತು ನಿಷ್ಠುರ ಪತ್ರಿಕೋದ್ಯಮವೇ ಇಂದು ಆಪತ್ತಿನಲ್ಲಿದೆ.

ಕೃಪೆ: Economic and Political Weekly Sep 9, 2017. Vol. 52. No. 36
ಅನು: ಶಿವಸುಂದರ್