#ಕೊಡವ_ಮುಸ್ಲಿಮರ_ಇತಿಹಾಸ

ಕೊಡವ ಭಾಷೆ ಮಿಶ್ರಿತ ಮಲೆಯಾಳಂ ಮಾತನಾಡುವ ಕೊಡವ ಮುಸ್ಲಿಂ ಜನಾಂಗ ಕೊಡಗಿನ ಜಮ್ಮಾ ಹಿಡುವಳಿದಾರರು. ಕೊಡಗಿನಲ್ಲಿ ಹಲವಾರು ತಲೆಮಾರುಗಳಿಂದ ಈ ಮಣ್ಣಿನ ಪಾಲುದಾರರೆಂದೇ ಕರೆಸಿಕೊಂಡಿರುವ ಕೊಡಗಿನ ಮೂಲ ನಿವಾಸಿಗರಾಗಿರುವ ಕೊಡವ ಮುಸ್ಲಿಮರು ಇಸ್ಲಾಮಿನ ಪರಿಪೂರ್ಣ ಅನುಯಾಯಿಗಳಾಗಿ ವಿಶಿಷ್ಟ ಸಂಸ್ಕøತಿ ಹೊಂದಿದವರಾಗಿದ್ದಾರೆ. ಕೊಡವ ಮುಸ್ಲಿಮರು ಕೊಡಗಿನ ಸಂಸ್ಕøತಿಯ ಭಾಗವಾಗಿದ್ದಾರೆ. ಕೊಡವ ಮುಸ್ಲಿಮರ ಆಚಾರ-ವಿಚಾರ ಪದ್ದತಿ ಪರಂಪರೆಯೆಲ್ಲವೂ ವಿಶಿಷ್ಟವಾದದ್ದು. (ಆದರೆ ಇದು ಈಗ ಆಚರಿಸಲ್ಪಡುತ್ತಿಲ್ಲ ಎಂಬುದು ಬೇರೆ ಮಾತು) ಕೊಡಗಿನ ಇತರ ಮೂಲ ನಿವಾಸಿಗಳಂತೆಯೇ ಕೊಡವ ಮುಸ್ಲಿಮರು ಈ ಹಿಂದೆ ಕೊಡಗಿನ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಕೊಡವ ಮುಸ್ಲಿಮರು ಆರ್ಥಿಕವಾಗಿಯೂ, ಶೈಕ್ಷಣಿಕವಾಗಿಯೂ ತೀರಾ ಹಿಂದುಳಿದವರಾಗಿದ್ದಾರೆ. (ಇದೀಗ ಪರಿಸ್ಥಿತಿಯ ಚೇತರಿಕೆ ಆರಂಭಗೊಂಡಿದೆ ಎಂದು ಹೇಳಬಹುದು) ಈ ಜನಾಂಗದಲ್ಲಿ ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಅನೇಕ ಹಳೆ ತಲೆಮಾರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿದ್ದರು. (ಇವರ ಬಗ್ಗೆ ಎಲ್ಲಿಯೂ ಸರಿಯಾದ ಉಲ್ಲೇಖವಿಲ್ಲದ್ದರಿಂದ ನಿಖರ ಮಾಹಿತಿ ಇದುವರೆಗೂ ದೊರೆತಿಲ್ಲ, ಇದನ್ನು ಪಡೆಯುವ ಪ್ರಯತ್ನ ಮುಂದುವರೆದಿದೆ) ಅಲ್ಲದೇ 1956 ರಲ್ಲಿ ಪ್ರತ್ಯೇಕ ‘ಸಿ’ ಪ್ರಾಂತ್ಯವಾಗಿದ್ದ ಕೊಡಗನ್ನು ಕರ್ನಾಟಕ ರಾಜ್ಯದೊಂದಿಗೆ ವಿಲೀನಗೊಳಿಸುವ ಸಂದರ್ಭದಲ್ಲಿಯೂ ಕೊಡವ ಮುಸ್ಲಿಂ ಜನಾಂಗದ ಬಹುತೇಕ ಹಿರಿಯರು ತೀವ್ರ ವಿರೋಧ ವ್ಯಕ್ತಪಡಿಸಿ ನಾಡಾಭಿಮಾನ ಮೆರೆದಿದ್ದರು ಎಂದು ಚರಿತ್ರೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಹಲವಾರು ಯೋಧರು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅದಿಕಾರಿಗಳು ಮತ್ತು ಉದ್ಯೋಗಿಗಳು ಜನಾಂಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಕೊಡಗಿನ ಮೂಲ ನಿವಾಸಿಗಳಾಗಿದ್ದರೂ ‘ಕೊಡವ ಮುಸ್ಲಿಂ’ ಎಂಬ ಜನಾಂಗಕ್ಕೆ ‘ಸಾಮಾಜಿಕ ಅಸ್ತಿತ್ವ’ ಇದುವರೆಗೂ ಸರಿಯಾಗಿ ದೊರೆತಿಲ್ಲ ಎಂಬುದು ಇಲ್ಲಿ ಗಮನಾರ್ಹವಾಗಿದೆ.

*ಮತಾಂತರ:* ಬ್ರಿಟೀಷರ ವಿರುದ್ದ ಟಿಪ್ಪು ಸುಲ್ತಾನ್ ಸಮರ ಸಾರಿದ ಸಂದರ್ಭದಲ್ಲಿ ಕೊಡಗಿನ ರಾಜನು ಬ್ರಿಟೀಷರ ಪರವಾಗಿದ್ದನು. ಈ ವೇಳೆ ನೆರೆಯ ಕೊಡಗಿನ ರಾಜ ಬ್ರಿಟೀಷರೊಂದಿಗೆ ಕೈಜೋಡಿಸಿದರೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಟಿಪ್ಪು ಸುಲ್ತಾನ್ ಅವರಿಗೆ ಕೊಡಗಿನ ರಾಜನ ವಿರುದ್ದ ಸಿಟ್ಟಿತ್ತು. ಅದಕ್ಕಾಗಿ ಕೊಡಗಿನ ರಾಜರ ಅಣತಿಯಂತೆ ಕೊಡಗಿನಲ್ಲಿ ಜನರು ನಿರಂತರವಾಗಿ ಟಿಪ್ಪುವಿನ ವಿರುದ್ದ ದಂಗೆ ಏಳುತ್ತಿದ್ದರಿಂದ ಆಕ್ರೋಶಿತನಾದ ಟಿಪ್ಪು ಸುಲ್ತಾನ್ ಅವರು ಕೊಡಗಿಗೆ ಬಂದು ಕೆಲವರನ್ನು ವಶಕ್ಕೆ ಪಡೆದು ಮೈಸೂರಿನ ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದರು. (ಮತಾಂತರಗೊಂಡವರ ಸಂಖ್ಯೆ ಬಗ್ಗೆ ಸಾಕಷ್ಟು ಅನುಮಾನಾಸ್ಪದ ಗೊಂದಲಗಳಿದ್ದು ಸೂಕ್ತವಾದ ದಾಖಲೆಗಳ ಸ್ಪಷ್ಟತೆವಿರುವುದಿಲ್ಲ)

ಹೀಗೆ ಮತಾಂತರಗೊಂಡವರು ಕೊಡಗಿನ ಅವಿಭಕ್ತ ಕೊಡವ ಮತ್ತು ಕೆಲ ಗೌಡ ಜನಾಂಗದವರಾಗಿದ್ದರು. (ಈ ಪೈಕಿ ಬಹುಪಾಲು ಕೊಡವರೇ ಆಗಿದ್ದರು) ಇವರು 3ನೇ ಮೈಸೂರು ಯುದ್ದದ ಮುನ್ನಾ ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ತಮ್ಮ ಮೂಲ ನೆಲೆಯಾದ ಕೊಡಗಿಗೆ ಮರಳಿ ಬಂದರು. ಈ ಸಂಧರ್ಭದಲ್ಲಿ ತಮ್ಮ ಮೂಲ ಕುಟುಂಬಕ್ಕೆ ಸೇರಿಸಿಕೊಳ್ಳದ ಕೊಡವರು ಮತಾಂತರಗೊಂಡು ಧರ್ಮವನ್ನೇ ತೊರೆದವರಿಗೆ ನೆಲೆಕೊಡಲು ಸಾಧ್ಯವಿಲ್ಲ ಎಂಬ ನೆಪವೊಡ್ಡಿ ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಕೊಡಗಿಗೆ ಬಂದವರನ್ನು ಮತ್ತೆ ಕೊಡವರಾಗಿ ತಮ್ಮೊಳಗೆ ಸೇರಿಸಿಕೊಳ್ಳಲು ನಿರಾಕರಿಸಿ ದೂರವಿಡಲಾಯಿತು.

ಇದರಿಂದಾಗಿ ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಬಂದವರು ಇಸ್ಲಾಂ ಧರ್ಮವನ್ನೇ ಅನುಸರಿಸುತ್ತಾ ಕೊಡವ ಮುಸ್ಲಿಮರಾಗಿಯೇ (ಕೊಡವ ಮಾಪಿಳ್ಳೆಗಳಾಗಿ) ಪ್ರತ್ಯೇಕವಾಗಿ ಉಳಿಯುವಂತಾಯಿತು. ಇವರೇ ಇಂದು ‘ಕೊಡವ ಮುಸ್ಲಿಂ’ ಎಂದು ಕರೆಯಲ್ಪಡುತ್ತಿದ್ದಾರೆ. ಅಲ್ಲದೇ ಈ ಜನಾಂಗವನ್ನು ಕೊಡಗಿನಲ್ಲಿ ‘ಜಮ್ಮಾ ಮಾಪಿಳ್ಳೆ’ ಹಾಗೂ ‘ಕೊಡವ ಮಾಪಿಳ್ಳೆ’ಗಳೆಂದೂ ಕರೆಯಲಾಗುತ್ತದೆ. ಮಲಬಾರಿ ಮುಸ್ಲಿಂರೊಂದಿಗೆ ವ್ಯಾಪಾರ ವಹಿವಾಟಿನ ಸಂಪರ್ಕ ಸಾದಿಸಿದ್ದರಿಂದ ಇವರಿಗೆ ‘ಮಾಪಿಳ್ಳೇ’ ಎಂಬ ಪದ ಬಳಕೆಯಾಯಿತು. ಮಾಪಿಳ್ಳೆ ಎಂಬುದು ಮಲಯಾಳಿ ಪದವಾಗಿರುತ್ತದೆ.

*ಜಮ್ಮಾ ಭೂಮಿ :* ಅಂದು ಕೊಡಗನ್ನು ಆಳುತ್ತಿದ್ದ ವೀರರಾಜೇಂದ್ರನು ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಬಂದ ಕೊಡಗು ವಾಸಿಗಳಿಗೆ ನೆಲೆಕಲ್ಪಿಸುವ ಹಿನ್ನೆಲೆಯಲ್ಲಿ ಭೂಮಿ ಮತ್ತು ಜಾಗ ನೀಡಿದರಲ್ಲದೇ ಇಸ್ಲಾಂ ಧರ್ಮ ಪ್ರಚಾರಕ್ಕೆ ಅವಕಾಶ ನೀಡಿ ಕೇರಳದಿಂದ ಮುಸ್ಲಿಂ ಮತ ಪಂಡಿತರನ್ನು ಕರೆಸಿ ಧರ್ಮಬೋಧನೆ ಮಾಡಿಸಿದ. ಹೀಗೆ ವೀರರಾಜೇಂದ್ರನು ಕೊಡಗಿನ ಕೆಲ ಪ್ರದೇಶಗಳಲ್ಲಿ ಕೊಡವ ಮುಸ್ಲಿಮರನ್ನು ನೆಲೆಗೊಳಿಸಿದ. ಈ ವೇಳೆ ರಾಜ ನೀಡಿದ ಜಾಗ ಇವರಿಗೆ ಜಮ್ಮಾ ಭೂಮಿಯಾಯಿತು. ಇದರಿಂದಾಗಿಯೇ ಇವರನ್ನು ಜಮ್ಮಾ ಮುಸ್ಲಿಮರು ಎಂದೂ ಕರೆಯಲಾಗುತ್ತದೆ. ಅಂದು ನೆಲೆಗೊಂಡ ಕೊಡವ ಮುಸ್ಲಿಮರೆಲ್ಲರೂ ಇಂದಿಗೂ ಕೊಡಗಿನ ಈಗಿನ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕುಗಳಲ್ಲಿ ಮಾತ್ರ ವಾಸಿಸುತ್ತಿದ್ದಾರೆ ಎಂಬುದು ವಿಶೇಷವಾಗಿದೆ.

ಆದರೆ ಈಗಿರುವ ಕೊಡವ ಮುಸ್ಲಿಮರೆಲ್ಲಾ ಹಿಂದೆ ಮತಾಂತರಗೊಂಡವರೆಂದು ಸಾರಾಸಗಟ್ಟಾಗಿ ಹೇಳಲು ಸಾಧ್ಯವಿಲ್ಲ. ಮತಾಂತರವಾಗದೆ ಮೂಲತಃ ಮುಸ್ಲಿಮರಾಗಿದ್ದವರೂ ಕೊಡಗಿನಲ್ಲಿ ಕೊಡವ ಮುಸ್ಲಿಮರಾಗಿ ನೆಲೆಗೊಂಡವರಿದ್ದಾರೆ. ಟಿಪ್ಪು ಸುಲ್ತಾನ್ ಅವರು ಕೊಡಗಿಗೆ ಬಂದು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೋಗುವ ಮೊದಲೇ ಕೊಡಗಿನಲ್ಲಿ ಮುಸ್ಲಿಮರಿದ್ದರು ಎಂದು ಚರಿತ್ರೆಯಿಂದ ದೃಡಪಡುತ್ತದೆ. ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಬಂದ ಕೊಡಗು ವಾಸಿಗಳನ್ನು ಅಂದಿನ ಕೊಡಗು ರಾಜ ಕೊಡಗಿನಲ್ಲಿ ಮುಸ್ಲಿಮರಾಗಿಯೇ ಮುಂದುವರಿಯಲು ಅವಕಾಶ ಕಲ್ಪಿಸಿ ಅವರಿಗೆ ಭೂಮಿ ನೀಡಿ ನೆಲೆಗೊಳಿಸಿದ ಸಂದರ್ಭದಲ್ಲಿ ಕೊಡಗಿನಲ್ಲಿದ್ದ ಮುಸ್ಲಿಮರಿಗೂ ರಾಜ ಭೂಮಿ ನೀಡಿ ಸಹಕರಿಸಿದ್ದ ಎಂಬುದು ಅಧ್ಯಾಯನದಿಂದ ತಿಳಿಯುತ್ತದೆ. ಮತಾಂತರಗೊಳ್ಳದ ಅಂದಿನ ಕೆಲ ಮುಸ್ಲಿಮರು ಈ ಕಾರಣದಿಂದ ಕೊಡವ ಮುಸ್ಲಿಮರಾದರು ಎಂದು ಪೂರ್ವಜರ ಮಾತನ್ನು ಉಲ್ಲೇಖಿಸಿ ಕೆಲ ಹಳೆ ತಲೆಮಾರಿನವರು ಹೇಳುತ್ತಾರೆ.

ಜನಾಂಗವನ್ನು ‘ಬಡತನ’ ಎಂಬ ಪಿಡುಗು ತೀವ್ರವಾಗಿ ಕಾಡುತ್ತಿದ್ದ ಪರಿಣಾಮ ಬಹುಪಾಲು ಜನರು ತಮ್ಮ ಭೂಮಿ ಮತ್ತು ತೋಟಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ತತ್ತರಿಸಿದ್ದ ದುಸ್ತರ ಬದುಕಿನಿಂದ ಮೇಲೆ ಬರಲು ಪ್ರಯತ್ನಿಸಿದರು. ಆದರೂ ಇತ್ತ ಬದುಕೂ ಹಸನಾಗದೆ ಅತ್ತ ಆಸ್ತಿಯನ್ನೂ ಕಳೆದುಕೊಂಡ ಉದಾಹರಣೆ ಜನಾಂಗದಲ್ಲಿ ಸಾಕಷ್ಟು ಕಂಡುಬರುತ್ತದೆ. ಅದ್ದರಿಂದ ಇಂದಿನ ಹಲವು ಕೊಡವ ಮುಸ್ಲಿಂ ಕುಟುಂಬಗಳಿಗೆ ಜಮ್ಮಾ ಆಸ್ತಿಗಳಿಲ್ಲ. ಆದರೆ ಈ ಒಂದು ಕಾರಣದಿಂದ ಅವರನ್ನು ಕೊಡವ ಮುಸ್ಲಿಮರಲ್ಲ ಎಂದು ಹೇಳಲು ಸಾಧ್ಯವಿಲ್ಲ.

*ಮಾತೃಭಾಷೆ :* ಶತಮಾನಗಳ ಹಿಂದೆ ಕೊಡವ ಮುಸ್ಲಿಮರು ಕೊಡವ ಬಾಷೆಯನ್ನೇ ಮಾತನಾಡುತ್ತಿದ್ದರು. ಇದೀಗ ಕೊಡವ ಮುಸ್ಲಿಮರು ‘ಕೊಡವ ಮಲಯಾಳಂ’ ಎಂಬ ಭಾಷೆಯನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಬಹುತೇಕ ಕೊಡವ ಭಾಷೆಯ ಪದಗಳನ್ನು ಒಳಗೊಂಡ ಕೊಡವ ಮುಸ್ಲಿಮರ ಮಾತೃ ಭಾಷೆಯನ್ನು ಇದೀಗ ಕೊಡಗಿನಲ್ಲಿ ‘ಕೊಡವ ಮಲಯಾಳಂ’ ಎಂದು ಕರೆಯಲಾಗುತ್ತದೆ. ‘ಕೊಡವ ಮಲೆಯಾಳಂ’ ಭಾಷೆಯ ಬಹುತೇಕ ಪದಗಳು ಕೊಡವ ಭಾಷೆಯಲ್ಲೂ ಒಂದೇ ಆಗಿರುವುದು ವಿಶೇಷವಾಗಿದೆ. ಕೊಡವ ಮುಸ್ಲಿಮರ ಮಾತೃಭಾಷೆ ಈಗ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ಮಲಬಾರಿ ಮುಸ್ಲಿಂ ಮಲೆಯಾಳಂ ಭಾಷೆಗೂ ಕೊಡವ ಮುಸ್ಲಿಮರ ಮಾತೃಭಾಷೆಗೂ ಸಾಕಷ್ಟು ವ್ಯತ್ಯಾಸವಿದೆ. ಉದಾಹರಣೆಗೆ ಕೊಡವ ಭಾಷೆಯಲ್ಲಿನ ‘ಚೆನ್ನಂಗ್’ ಎಂಬ ಪದವನ್ನು ಕೊಡವ ಮಳೆಯಾಳಂನಲ್ಲಿ ‘ಚೆರ್‍ಂಬ್’ ಎಂದೇಳಲಾಗುತ್ತದೆ. ಆದರೆ ಮಲಬಾರಿ ಭಾಷೆಯಲ್ಲಿ ಈ ಮೇಲಿನ ಅರ್ಥವನ್ನು ‘ಕೊರ್‍ಚಿ’ ಎಂಬ ಪದದಿಂದ ಬಳಸುತ್ತಾರೆ. ಈಗ ಮಲಬಾರಿ ಮುಸ್ಲಿಮರ ಸಂಪರ್ಕ ಹೆಚ್ಚಿದಂತೆ ಕೊಡವ ಮುಸ್ಲಿಮರ ಮಾತೃಭಾಷೆಗೆ ಮಲೆಯಾಳಂನ ಸೊಗಡು ಬಹುಮಟ್ಟಿಗೆ ಸೇರಿಕೊಂಡಿರುತ್ತದೆ. ‘ಕೊಡವ ಮಲೆಯಾಳಂ’ ಭಾಷೆ ಲಿಪಿ ರಹಿತವಾಗಿದ್ದು, ಲಿಪಿಗಾಗಿ ಕನ್ನಡ ಭಾಷೆಯನ್ನೇ ಬಳಸಲಾಗುತ್ತದೆ.

*ನೆಲೆಗೊಂಡ ಪ್ರದೇಶಗಳು :* ಕೊಡವ ಮುಸ್ಲಿಮರು ಕೊಡಗು ಜಿಲ್ಲೆಯ ಈ ಕೆಳಗಿನ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ.

1. ಗುಂಡಿಗೆರೆ – ವಿರಾಜಪೇಟೆ ತಾಲೂಕು

2. ಮಾಪಿಳ್ಳೆತೋಡು (ಬೇಗೂರು) – ವಿರಾಜಪೇಟೆ ತಾಲೂಕು

3. ಚಾಮಿಯಾಲ – ವಿರಾಜಪೇಟೆ ತಾಲೂಕು

4. ದೇವಣಗೇರಿ – ವಿರಾಜಪೇಟೆ ತಾಲೂಕು

5. ಕೊಂಡಂಗೇರಿ – ವಿರಾಜಪೇಟೆ ತಾಲೂಕು

6. ಚಿಟ್ಟಡೆ – ವಿರಾಜಪೇಟೆ ತಾಲೂಕು

7. ಕಾಟ್ರಕೊಲ್ಲಿ – ವಿರಾಜಪೇಟೆ ತಾಲೂಕು

8. ಕಂಡಂಗಾಲ – ವಿರಾಜಪೇಟೆ ತಾಲೂಕು

9. ಚಿಮ್ಮಿಚ್ಚಿಕುಂಡ್ (ಹಳ್ಳಿಗಟ್ಟು)- ವಿರಾಜಪೇಟೆ ತಾಲೂಕು

10. ನಲ್ವತೋಕ್ಲು (ಚೋಂಕಂಡಳ್ಳಿ) – ವಿರಾಜಪೇಟೆ ತಾಲೂಕು

11. ಐಮಂಗಲ (ಐಮಂಗಲ) – ವಿರಾಜಪೇಟೆ ತಾಲೂಕು

12. ಅಂಬಟ್ಟಿ- ವಿರಾಜಪೇಟೆ ತಾಲೂಕು

13. ಎಮ್ಮೆಮಾಡು – ಮಡಿಕೇರಿ ತಾಲೂಕು

14. ಪಡಿಯಾಣಿ – ಮಡಿಕೇರಿ ತಾಲೂಕು

15. ಕುಂಜಿಲ – ಮಡಿಕೇರಿ ತಾಲೂಕು

16. ಕೊಳಕೇರಿ – ಮಡಿಕೇರಿ ತಾಲೂಕು

17. ಚೆರಿಯಪರಂಬು- ಮಡಿಕೇರಿ ತಾಲೂಕು

18. ಅಯ್ಯಂಗೇರಿ- ಮಡಿಕೇರಿ ತಾಲೂಕು

19. ಎಡಪಾಲ- ಮಡಿಕೇರಿ ತಾಲೂಕು

20. ಕೋಕೇರಿ (ಕಿಕ್ಕರೆ)-ಮಡಿಕೇರಿ ತಾಲೂಕು

21. ಕೊಟ್ಟಮುಡಿ -ಮಡಿಕೇರಿ ತಾಲೂಕು

22. ಅಜಾದ್‍ನಗರ (ಮೂಲೆ ಕೊಟ್ಟಮುಡಿ) – ಮಡಿಕೇರಿ ತಾಲೂಕು.
*ಜನಸಂಖ್ಯೆ :* ಕೊಡವ ಮುಸ್ಲಿಮರು ಮೂಲತ: ಕೃಷಿಕರಾಗಿದ್ದು, ವ್ಯವಸಾಯವನ್ನೇ ಅವಲಂಬಿಸಿದವರಾಗಿದ್ದಾರೆ. ಇದೀಗ ಕೆಲವೆಡೆ ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದು, ಜನಾಂಗದ ಹಲವು ಯುವಕರು ಗಲ್ಫ್ ರಾಷ್ಟ್ರಗಳಲ್ಲಿ ಸಾಮಾನ್ಯ ಉದ್ಯೋಗದಲ್ಲಿ ತೊಡಗಿದ್ದಾರೆ. ಜನಾಂಗದ ಕೆಲವರು ದೇಶದ ಇತರ ನಗರಗಳಲ್ಲೂ ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಕೊಡಗು ಸೇರಿದಂತೆ ಇತರೆಡೆಗಳಲ್ಲಿರುವವರು ಸೇರಿದಂತೆ ಕೊಡವ ಮುಸ್ಲಿಮರ ಜನಸಂಖ್ಯೆ 18 ಸಾವಿರವಾಗಿರುತ್ತದೆ. (ಹಿಂದೆ ಕೊಡವ ಮುಸ್ಲಿಮರ ಜನಸಂಖ್ಯೆ ಇದಕ್ಕಿಂತಲೂ ಹೆಚ್ಚು ಇರಬಹುದು ಎಂದು ಅಂದಾಜಿಸಲಾಗಿತ್ತು. ಇದೀಗ ಕೆ.ಎಂ.ಎ. ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜನಸಂಖ್ಯೆಯ ನಿಖರ ಮಾಹಿತಿ ದೊರೆತಿರುತ್ತದೆ.)

*ಮನೆ ಹೆಸರು :* ಕೊಡವ ಮುಸ್ಲಿಮರಿಗೆ ಕೊಡವರಂತೆ ಮನೆ ಹೆಸರುಗಳಿವೆ (ಮನೆಪೆದ). ಬಹುತೇಕ ಕೊಡವ ಮುಸ್ಲಿಮರು ತಮ್ಮ ಮನೆ ಹೆಸರುಗಳಿಂದಲೇ ಗುರುತಿಸಿಕೊಳ್ಳುತ್ತಾರೆ. ಚೆಂಬಾರಂಡ, ಚೆಕ್ಕೇರ, ಪೊಳುಮಾಡಂಡ, ಕಾಳೇರ, ಬಲ್ಲಾಟಿಕಾರಂಡ, ಕುಂಡಂಡ, ಚೀರಂಡ, ಚೆರುಮಾನಿರ, ಕುಪ್ಪೋಡಂಡ, ಮಂಡೇಡ, ಚಿರೋಟಿರ, ಈತಲತಂಡ, ಮೀತಲತಂಡ, ಕುವೇಂಡ, ಪುಲಿಯಂಡ, ಎರಟೇಂಡ, ದುದ್ದಿಯಂಡ, ಕನ್ನಡಿಯಂಡ, ಕೂವಲೇರ, ಮಂದಮಾಡ, ಕೋಳುಮಂಡ, ಪುಡಿಯಂಡ, ಪೇರಿಯಂಡ, ಕುಪ್ಪಂದಿರ, ಮೀನಕ್ಕೆರ, ಪೊಯಕೆರ, ಆಲೀರ, ಅಮ್ಮನಾಣೇರ, ಚಿಮ್ಮಿಚೀರ, ಪುದಿಯತ್ತಂಡ, ಪುದಿಯಾಣೆರ, ಕನ್ನಪಣೆರ, ಪಾಯಡತಂಡ, ಪಾತೇರ, ಕೋಪಟ್ಟೀರ, ಕುಯ್ಯಮುಡಿರ, ಬಾರಿಕೆರ, ಪೊಟ್ಟಂಡ, ಹರಿಶ್ಚಂದ್ರಂಡ, ಪರವಂಡ ಮೊದಲಾದ ಮನೆತನಗಳಲ್ಲಿ ಕೊಡವ ಮುಸ್ಲಿಮರು ಗುರುತಿಸಿಕೊಂಡಿರುತ್ತಾರೆ. ಗಮನಾರ್ಹ ವಿಶಿಷ್ಠತೆಯೆಂದರೆ ಕೊಡವ ಮುಸ್ಲಿಮರಿಗಿರುವ ಮನೆ ಹೆಸರುಗಳಲ್ಲಿ ಕೆಲವು ಮನೆ ಹೆಸರುಗಳು ಯಥಾ ರೀತಿಯಲ್ಲಿ ಕೊಡವ ಜನಾಂಗದವರು ಹೊಂದಿದ್ದಾರೆ. ಉದಾಹರಣೆಗೆ ಚೆಕ್ಕೇರ, ಚೀರಂಡ, ಪುಲಿಯಂಡ, ಮಂದಮಾಡ, ಪುದಿಯತಂಡ, ಮಂಡೇಡ, ಚಿರೋಟಿರ, ಮೊದಲಾದವುಗಳಾಗಿದೆ. ಕೊಡವರು ಮತ್ತು ಕೊಡವ ಮುಸ್ಲಿಮರು ಒಂದೇ ಮನೆ ಹೆಸರನ್ನು ಬಳಕೆ ಮಾಡುತ್ತಿರುವ ಪದ್ದತಿ ಇಂದಿಗೂ ಕೊಡಗಿನಲ್ಲಿ ಜಾರಿಯಲ್ಲಿದೆ. ಕೆಲ ಕೊಡವ ಮುಸ್ಲಿಮರು ಈ ಹಿಂದೆ ಕೊಡವರಾಗಿದ್ದರು ಎಂಬುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿರುತ್ತದೆ.

*ಬಂದೂಕು ವಿನಾಯಿತಿ :* ಕೊಡವ ಮುಸ್ಲಿಮರಿಗೆ ವಿಶೇಷವಾಗಿ ಕೊಡಗಿನಲ್ಲಿ ಕೊಡವರಂತೆ ಬಂದೂಕು ಹೊಂದಲು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ- 1956ರ ಪ್ರಕಾರ ಬಂದೂಕು ಪರವಾನಿಗೆ ವಿನಾಯಿತಿಯಿದೆ. ಈ ಹಿನ್ನಲೆಯಲ್ಲಿ ಸಾಮಾನ್ಯವಾಗಿ ಕೊಡವ ಮುಸ್ಲಿಮರು ಬಂದೂಕುಗಳನ್ನು ತಮ್ಮ ಸಂಸ್ಕøತಿಯ ಭಾಗವಾಗಿ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ.

*ಉಲ್ಲೇಖ:* 1965 ರಲ್ಲಿ ಪ್ರಕಟಗೊಂಡ ಮೈಸೂರು ಸ್ಟೇಟ್ ಗೆಜೇಟಿಯರ್‍ನ ಪುಟ ಸಂಖ್ಯೆ-166ರಲ್ಲಿ ‘The Jamma Mapillas are the descendants of the people of Coorg who had been carried away to Srirangapattana by Tippu Sulthan and Converted to Islam ’ ಎಂದು ಉಲ್ಲೇಖಿಸಲಾಗಿದೆ.

ಇತಿಹಾಸ ತಜ್ಞರಾಗಿದ್ದ ಶ್ರೀ ಡಿ.ಎನ್ ಕೃಷ್ಣಯ್ಯ ಅವರು ಬರೆದ ‘ಕೊಡಗಿನ ಇತಿಹಾಸ’ ಎಂಬ ಪುಸ್ತಕದಲ್ಲೂ ಕೊಡವ ಮುಸ್ಲಿಮರ ಕುರಿತು ಉಲ್ಲೇಖವಿದೆ. ಈ ಪುಸ್ತಕದ 227ನೇ ಪುಟದಲ್ಲಿ ‘ಜಮ್ಮಾ ಮಾಪಿಳ್ಳೆಗಳು’ ಎಂಬ ಉಪ ಶಿರೋನಾಮೆಯಲ್ಲಿ ‘ಶ್ರೀರಂಗಪಟ್ಟಣದಿಂದ ಮೂರನೇ ಮೈಸೂರು ಯುದ್ದದ ಗೊಂದಲದಲ್ಲಿ ಕೊಡಗಿಗೆ ಓಡಿಬಂದ ಮಹಮ್ಮದೀ ಮತಾಂತರಿಸಲ್ಪಟ್ಟ ಕೊಡಗು ಜನರನ್ನು ವೀರರಾಜೇಂದ್ರ ಒಡೆಯನು ಆಗ ಯಾರೂ ಹಕ್ಕುದಾರರಿಲ್ಲದೆ ಪಾಳುಬಿದ್ದಿದ್ದ ಉಳುಮೆಯಾಗಿದ್ದ ಭೂಮಿಗಳಲ್ಲಿ ಗುಂಪು ಗುಂಪಾಗಿ ನೆಲೆಗೊಳಿಸಿದನು. ಆ ಕಾಲದಲ್ಲಿ ಮತಾಂತರಿಸಲ್ಪಟ್ಟವರನ್ನು ತಿರುಗಿ ತಮ್ಮ ಮತಕ್ಕೆ ಸೇರಿಸಿಕೊಳ್ಳುವ ಸಂಪ್ರದಾಯವು ಹಿಂದೂ ಮತಸ್ಥರಲಿಲ್ಲದಿದ್ದುದರಿಂದ ಮತಾಂತರಿಸಲ್ಪಟ್ಟ ಈ ಕೊಡಗಿನ ಜನರು ಮುಸಲ್ಮಾನರಾಗಿಯೇ ಇರಬೇಕಾಯಿತು’ ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ.

ಸಾಹಿತಿಯಾಗಿದ್ದು, ಇದೀಗ ಪೊಲೀಸ್ ಅಧಿಕಾರಿಯಾಗಿರುವ ಎಂ.ಎ ಮಹಮ್ಮದ್ (ಶಶಿಪ್ರಿಯ) ಅವರು ಬರೆದಿರುವ ‘ಕೊಡವ ಮುಸಲ್ಮಾನರು ಮತ್ತು ಟಿಪ್ಪು-ಸುಲ್ತಾನ್’ ಎಂಬ ಪುಸ್ತಕದಲ್ಲಿ ಕೊಡವ ಮುಸ್ಲಿಮರ ಇತಿಹಾಸದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಲಾಗಿದೆ. ಈ ಪುಸ್ತಕದ ಪುಟ ಸಂಖ್ಯೆ 28ರಲ್ಲಿ “ಕೊಡವ ಮುಸಲ್ಮಾನರು” ಎಂಬ ತಲೆಬರಹದಡಿ ‘ಟಿಪ್ಪು ಸುಲ್ತಾನ್‍ನಿಂದ ಮತಾಂತರಗೊಂಡು 3ನೇ ಮೈಸೂರು ಯುದ್ದದ ಮುನ್ನ ದಿನಗಳಲ್ಲಿ ಮರಳಿ ಕೊಡಗಿಗೆ ಬಂದರು. ಹೀಗೆ ಮುಸ್ಲಿಮರಾಗಿ ಮಾರ್ಪಟ್ಟು ಬಂದಿದ್ದ ಇವರನ್ನು ಸ್ಥಳೀಯ ಕೊಡವರು ಯಾವುದೇ ಶುದ್ದಿ ಕಾರ್ಯವನ್ನು ಮಾಡಿ ಮತ್ತೆ ತಮ್ಮೊಳಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಇದರಿಂದಾಗಿ ಅವರು ಇಸ್ಲಾಂ ಧರ್ಮವನ್ನೇ ಅನುಸರಿಸುತ್ತಾ ಕೊಡವ ಮುಸ್ಲಿಮರಾಗಿಯೇ ಪ್ರತ್ಯೇಕವಾಗಿ ಉಳಿದರು’ ಎಂದು ಕೊಡವ ಮುಸ್ಲಿಂ ಎಂಬ ಸಮುದಾಯ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯನ್ನು ವಿವರಿಸಲಾಗಿದೆ.