ಎರಡನೇ ಸ್ವಾತಂತ್ರ್ಯ ಹೋರಾಟದ ಸವಾಲುಗಳು
ಎರಡನೇ ಸ್ವಾತಂತ್ರ್ಯ ಹೋರಾಟದ ಕರೆಯನ್ನು ಅನುಷ್ಠಾನಕ್ಕೆ ತರುವವರು ಯಾರು?

ಎರಡನೇ ಸ್ವಾತಂತ್ರ್ಯ ಹೋರಾಟದ ಕರೆಯು ಭಾರತೀಯ ಸಮಾಜದ ಹಲವಾರು ಹೋರಾಟ ನಿರತ ವರ್ಗ ಮತ್ತು ಸಮುದಾಯಗಳ ನಿರಂತರವಾದ ಕಾಳಜಿಯಾಗಿದೆ. ಅಂಥಾ ಕರೆಗಳ ಪ್ರತಿಧ್ವನಿಗಳನ್ನು ಮೊದಲು ವಿವಿಧ ಯೋಜನೆಗಳಿಗಾಗಿ ಎತ್ತಂಗಡಿಯಾಗಲ್ಪಟ್ಟ ಜನರ ಹೋರಾಟಗಳಲ್ಲೂ, ನಂತರ ಜೆಪಿ ಚಳವಳಿಯಲ್ಲೂ ಮತ್ತು ಇತ್ತೀಚೆಗೆ ಅಣ್ಣಾ ಹಜಾರೆಯವರ ಪ್ರಭಾವಳಿಯಲ್ಲಿ ನಿರ್ಮಿತಗೊಂಡ ಹೋರಾಟದಲ್ಲೂ ಕೇಳಿಬಂದಿದೆ. ಕುತೂಹಲಕಾರಿ ಸಂಗತಿಯೆಂದರೆ ಇತ್ತೀಚೆಗೆ ವಾರ್ಧಾದಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಕಾಂಗ್ರೆಸ್ ವರ್ಕಿಂಗ್ ಕಮಿಟಿ-ಸಿಡಬ್ಲ್ಯೂಸಿ)ಯೂ ಹಾಲೀ ಕೇಂದ್ರ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಲು ಕರೆ ನೀಡಿದೆ. ಆದರೆ ಇಂಥಾ ಕರೆಗಳೆಲ್ಲಾ ಅಲಂಕಾರಿಕ ಘೋಷಣೆಗಳಾಗಿಯೇ ಉಳಿದುಬಿಟ್ಟಿವೆ. ಇದು ಎರಡನೆ ಸ್ವಾತಂತ್ರ್ಯ ಹೋರಾಟದ ಬಗೆಗಿನ ತಮ್ಮ ಕರೆಗಳು ಕೇವಲ ಅಲಂಕಾರಿಕ ಘೋಷಣೆಯಾಗದಂತೆ ನೋಡಿಕೊಳ್ಳುವ ನೈತಿಕ ಸಮಸ್ಯೆಯನ್ನು ಕಾಂಗ್ರೆಸ್ ಎದಿರು ತಂದಿಟ್ಟಿದೆ. ಕಾಂಗ್ರೆಸ್ಸಿನ ಈ ಕರೆಯ ಬಗ್ಗೆ ಪ್ರಾರಂಭದಲ್ಲಿ ಯಾರಿಗೇ ಆದರೂ ಸಾಕಷ್ಟು ಸಂದೇಹಗಳೂ ಹುಟ್ಟುತ್ತವೆ. ಏಕೆಂದರೆ ಈ ಕರೆಯಲ್ಲಿ ಅದಕ್ಕೆ ಬೇಕಾದ ಕಾರ್ಯಕ್ರಗಳ ಸಾರವೂ ಇಲ್ಲ ಅಥವಾ ಸಂಘಟನಾತ್ಮಕ ದಿಕ್ಕೂ ಸ್ಪಷ್ಟಗೊಂಡಿಲ್ಲ. ಎರಡನೇ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಿಡಬ್ಲ್ಯೂಸಿಯ ಇಂಥಾ ದಿಕ್ಕುದೆಸೆಯಿಲ್ಲದ ಘೋಷಣೆಗಳ ಸಂದರ್ಭದಲ್ಲಿ ಪ್ರತಿರೋಧ ರಾಜಕಾರಣದ ಬಗ್ಗೆ ಚಿಂತಿಸಲು ಬೇಕಾದ ಬೌದ್ಧಿಕ ಸಂಪನ್ಮೂಲಗಳು ನಮ್ಮ ಬಳಿ ಹೇರಳವಾಗಿವೆ. ಕೆಲವು ಉದಾರವಾದಿ ಬುದ್ಧಿಜೀವಿಗಳು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಂಸ್ಥಿಕ ಯೋಗಕ್ಷೇಮವನ್ನು ಖಾತರಿಗೊಳಿಸುವ ಸುತ್ತ ಹೊಸ ಸ್ವಾತಂತ್ರ್ಯದ ಸನ್ನದು ರಚನೆಯಾಗಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಇದರ ಜೊತೆಗೆ ಮಾರ್ಕ್ಸ್‌ವಾದಿ ಬುದ್ಧಿಜೀವಿಗಳು ಮೂಲಭೂತ ಆರ್ಥಿಕ ಹಕ್ಕುಗಳ ಸುತ್ತಾ ಸಮಾನ ನಾಗರಿಕತ್ವದ ಯೋಜನೆಯಿರಬೇಕೆಂದು ಕರೆ ನೀಡಿದ್ದಾರೆ. ಈ ಪ್ರಸ್ತಾಪಗಳು ಹಾಲೀ ಪ್ರಭುತ್ವದ ವಿರುದ್ಧ ಮಡುಗಟ್ಟುತ್ತಿರುವ ಆಕ್ರೋಶಗಳ ಎರಡು ಮೂಲಗಳನ್ನು ಸೂಚಿಸುತ್ತವೆ. ಮೊದಲನೆಯದು ಸರ್ವಾಧಿಕಾರ, ಎರಡನೆಯದು ದಿನೇದಿನೇ ಹದಗೆಡುತ್ತಿರುವ ಜೀವನದ ಸ್ಥಿತಿಗತಿಗಳು.

ಪ್ರತಿರೋಧ ರಾಜಕಾರಣವು ಅಂಥಾ ಪ್ರಸ್ತಾಪಗಳನ್ನು ಒಂದು ಜನಪ್ರಿಯ ಕಾರ್ಯಕ್ರಮವನ್ನಾಗಿ ಪರಿವರ್ತಿಸಬೇಕು. ಮತ್ತದು ಗುಣಾತ್ಮಕ ಜೀವನಮಟ್ಟಕ್ಕಾಗಿ ಹಂಬಲಿಸುವ ಸಾಮಾನ್ಯ ಜನರ ಅನುದಿನದ ಕಷ್ಟಕಾರ್ಪಣ್ಯಗಳ ಜೊತೆಗೆ ಸ್ಪಂದಿಸುವಂತಿರಬೇಕು. ಇಂಥಾ ಅನುದಿನದ ಅಸ್ಥಿತ್ವದ ಪ್ರಶ್ನೆಗಳಲ್ಲಿ ಮುಳುಗಿಹೋಗಿರುವ ಸಾಮಾನ್ಯ ಜನರು ಪ್ರಮುಖ ರಾಜಕೀಯ ಪಕ್ಷಗಳ ವ್ಯಾವಹಾರಿಕ ರಾಜಕಾರಣದಿಂದ ಮತ್ತು ಹಾಲೀ ಸರ್ಕಾರದ ಮೋಸಪೂರಿತ ಭರವಸೆಗಳೆರಡರಿಂದಲೂ ಬೇಸತ್ತು ಹೋಗಿದ್ದಾರೆ. ಹಾಲೀ ಸರ್ಕಾರದ ಭರವಸೆಗಳು ಮೋಸಪೂರಿತವಾದದ್ದೇಕೆಂದರೆ ಈ ಸರ್ಕಾರದ ನೀತಿಗಳು ಕೃಷಿ ಬಿಕ್ಕಟ್ಟನ್ನು ಪರಿಹರಿಸಿಲ್ಲ್ಲ, ನಿರುದ್ಯೋಗ, ನಿರ್ವಸತೀಕರಣ, ಮತ್ತು ಹೆಚ್ಚುತ್ತಲೇ ಇರುವ ಸಾಮಾಜಿಕ ಅಭದ್ರತಾ ಭಾವನೆಗಳನ್ನು ಸಹ ತಡೆಗಟ್ಟಲಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹಾಲೀ ಸರ್ಕಾರವು ಒಂದೆಡೆ ದಲಿತರು ಹಾಗೂ ಮುಸ್ಲಿಮರಂಥ ಸಮಾಜದ ಅತಂತ್ರ ಸಮುದಾಯಗಳ ಮೇಲೆ ಮತ್ತೊಂದೆಡೆ ಭಿನ್ನಮತೀಯ ಬುದ್ಧಿಜೀವಿಗಳ ಮೇಲೆ ಪೈಶಾಚಿಕ ದಾಳಿ ನಡೆಸುವ ಸರ್ಕಾರವೆಂಬ ಹೆಸರನ್ನು ಗಳಿಸಿಕೊಂಡಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಸಾಮನ್ಯ ಜನರ ಬದುಕನ್ನು ದುರ್ಭರಗೊಳಿಸುತ್ತಿರುವ ಏರುತ್ತಿರುವ ಬೆಲೆಗಳು ಕೇಂದ್ರದ ಎನ್‌ಡಿಎ ಸರ್ಕಾರದ ಅಸಮರ್ಥ ಆರ್ಥಿಕ ನಿರ್ವಹಣೆಯ ಪರಿಣಾಮವೇ ಆಗಿದೆ.

ಆದರೆ ಜನರಲ್ಲಿರುವ ಈ ಅಸಮಾಧಾನಗಳು ಚುನಾವಣೆಯಲ್ಲಿ ತಮ್ಮ ಕಷ್ಟಗಳಿಗೆ ನೈಜ ಪರಿಹಾರವನ್ನು ನೀಡಬಲ್ಲ ಸರ್ಕಾರದ ರಚನೆಯಾಗುವಂಥಾ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ಒಂದು ಸಾರ್ವತ್ರಿಕವಾದ ಸಂದೇಹವೇ ಮನೆಮಾಡಿದೆ. ಈ ವಿಷಯಗಳ ಸುತ್ತಾ ಜನರಿಗಿರುವ ಅಸಮಾಧಾನಗಳು ಪ್ರತಿಭಟನೆಯಾಗಿ ಹೊರಹೊಮ್ಮುತ್ತಿದ್ದರೂ ಅದು ಸ್ಥಳೀಯವಾಗಿದೆ ಮತ್ತು ಅಲ್ಲಲ್ಲಿ ಹರಡಿಕೊಂಡಿದೆ. ಈ ಅಸಮಾಧಾನಗಳು ಎರಡನೇ ಸ್ವಾತಂತ್ರ್ಯ ಹೋರಾಟದ ಆಗ್ರಹಗಳು ಕೇಳುವಂತೆ ಒಂದು ಚಳವಳಿಯಾಗಬೇಕೆಂದರೆ ಅವು ಸಕ್ರಿಯವಾಗಬೇಕು ಮತ್ತು ನಿರಂತರವಾಗಿರಬೇಕು. ಹೀಗಾಗಿ ಸಾಮಾನ್ಯ ಮತದಾರರ ಅಸಮಧಾನಗಳು ಒಂದು ಭಿನ್ನಮತವಾಗಿ ಬೆಳೆಯುತ್ತಾ ಸಧೃಡಗೊಳ್ಳುತ್ತಾ ಸಾಗಬೇಕು. ಆಯಾ ಸಂದರ್ಭಕ್ಕೆ ಮಾತ್ರಾ ಸೀಮಿತವಾಗುವ ಮಿತಿಯನ್ನು ಮೀರಬೇಕು. ಒಂದು ರಾಜಕೀಯವಾಗಿ ಸಕ್ರಿಯವಾಗಿರುವ ಅಸಮಾಧಾನಕ್ಕೆ ಪೂರ್ವಶರತ್ತೆಂದರೆ ಜನಸಮುದಾಯವೇ ಸಕ್ರಿಯವಾಗುತ್ತಾ ಒಂದು ಸಮಾನ ಮತ್ತು ಪರ್ಯಾಯ ರಾಜಕೀಯ ಕಾರ್ಯಕ್ರಮವನ್ನು ರೂಪಿಸಿಕೊಳ್ಳುವಂತೆ ವಿರೋಧ ಪಕ್ಷಗಳ ಮೇಲೆ ಪ್ರಜಾತಾಂತ್ರಿಕ ಒತ್ತಡವನ್ನು ನಿರ್ಮಿಸುವುದು. ವಿರೋಧ ಪಕ್ಷಗಳು ಜನರೊಡನೆ ಸಾವಯವ ಸಂಬಂಧಗಳನ್ನು ಬೆಳೆಸಿಕೊಂಡು ಜನರನ್ನು ಮತ್ತೆ ರಾಜಕಾರಣದ ಕೇಂದ್ರಸ್ಥಾನಕ್ಕೆ ತರಬೇಕು. ಇದು ಹಾಲೀ ಸರ್ಕಾರಕ್ಕಿಂತ ಭಿನ್ನವಾಗಿ ಜನರಿಗೆ ನೆಮ್ಮದಿ ಮತ್ತು ಪರಿಹಾರವನ್ನು ಕೊಡಬಲ್ಲ ಕಾರ್ಯಸಾಧು ಯೋಜನೆಗಳನ್ನು ಮುಂದಿಡಬಲ್ಲ ಅವುಗಳ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ವಿರೋಧಪಕ್ಷಗಳು ಒಂದು ಅನಿವಾರ್ಯವಾದ ಆಯ್ಕೆಯಾಗಲ್ಲದೆ ಒಂದು ಸಕಾರಾತ್ಮಕ ಪರ್ಯಾಯಾವಾಗಿ ಕಾಣಬೇಕು. ಹಾಗಿಲ್ಲದೆ ಹೋದಲ್ಲಿ ಸಮಾಜ, ರಾಜಕೀಯ ಮತ್ತು ಆರ್ಥಿಕತೆಗಳ ಬಗೆಗಿನ ಮೂಲಭೂತ ವಿಷಯಗಳ ಬಗ್ಗೆ ಯಾವುದೇ ಸಾರರೂಪಿ ವಾಗ್ವಾದಗಳೇ ಸಾಧ್ಯವಾಗುವುದಿಲ್ಲ. ಇದು ಸಾರಾಂಶದಲ್ಲಿ ರಾಜಕೀಯ ವಿಮುಖತೆಗೆ ದಾರಿ ಮಾಡಿಕೊಡುತ್ತದೆ. ಆ ಮೂಲಕ ಚುನಾವಣೆಗಳು ಮತ್ತು ರಾಜಕೀಯ ಸ್ಪರ್ಧೆಗಳಲ್ಲಿ ಯಾವುದೇ ಸೈದ್ಧಾಂತಿಕ ಸಾರವಿಲ್ಲದೆ ಅವು ಕೇವಲ ಒಂದು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವಾಗಿಯೂ, ಒಂದು ಜಾಹಿರಾತು ಕಾರ್ಯಕ್ರವಾಗಿ ಮಾತ್ರ ಉಳಿದುಬಿಡುತ್ತದೆ.

ಅಂಥಾ ಪ್ರಕ್ರಿಯೆ ಹುಟ್ಟುಹಾಕುವ ರಾಜಕೀಯ ವಿಮುಖತೆಯು ಜನರನ್ನು ರಾಜಕೀಯವಾಗಿ ನಿಷ್ಕ್ರಿಯರನ್ನಾಗಿ (ಪ್ರೇಕ್ಷಕರಾಗಿ ಅಥವಾ ಗ್ರಾಹಕರಾಗಿ) ಮಾಡುತ್ತದೆ. ಇದು ಪ್ರಜಾತಂತ್ರಕ್ಕೆ ಅಪಾಯವನ್ನುಂಟು ಮಾಡುತ್ತದೆ. ಜನರಲ್ಲಿ ಏರ್ಪಡುವ ಇಂಥಾ ರಾಜಕೀಯ ನಿಷ್ಕ್ರಿಯತೆಯು ನಿಸ್ಸಂದೇಹವಾಗಿ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್‌ಡಿಎ ಬಣಕ್ಕೆ ರಾಜಕೀಯ ಲಾಭವನ್ನು ತಂದುಕೊಡುತ್ತದೆ. ಜನರಲ್ಲಿ ಉಂಟಾಗುವ ಇಂಥಾ ರಾಜಕೀಯ ನಿಷ್ಕ್ರಿಯತೆ, ತಾತ್ಕಾಲಿಕತೆ, ಮತ್ತು ಗೊಂದಲಗಳೇ ಬಿಜೆಪಿಗೆ ತಮ್ಮನ್ನು ಬಿಟ್ಟರೆ ಬೇರೆ ಪರ್ಯಾಯವಿಲ್ಲವೆಂಬ ಅಹಂಕಾರದ ಘೋಷಣೆಯನ್ನು ಮಾಡುವಷ್ಟು ಶಕ್ತರನ್ನಾಗಿಸುತ್ತದೆ ಎಂಬುದನ್ನು ನಾವು ಅರಿತಿರಬೇಕು.

ಒಂದು ರಚನಾತ್ಮಕ ಕಾರ್ಯಕ್ರಮದ ಸುತ್ತಾ ಜನರ ಅಸಮಾಧಾನವನ್ನು ಅಣಿನೆರೆಸಲು ಸಾಮಾನ್ಯ ಜನರನ್ನು ಹಾಗೂ ವಿರೋಧ ಪಕ್ಷಗಳನ್ನೂ ಮತ್ತದರ ನಾಯಕರನ್ನೂ ಒಳಗೊಳ್ಳಬೇಕಾಗುತ್ತದೆ. ವಾಸ್ತವವಾಗಿ ಜನರು ತಮ್ಮಂತೆ ತಾವೇ ಯಾವುದೇ ಕಾರ್ಯಕ್ರಮದ ಸುತ್ತಾ ಸಂಘಟಿತವಾಗುವುದಿಲ್ಲ. ಅದಕ್ಕಾಗಿ ನಿರಂತರವಾಗಿ ಮತ್ತು ಪ್ರಾಮಾಣಿಕವಾಗಿ ಜನರ ಜೊತೆಗಿರುತ್ತಾ ಪ್ರಜಾತಂತ್ರವು ಅವರ ಪರವಾಗಿರುವಂತೆ ನೋಡಿಕೊಳ್ಳುವುದು ವಿರೋಧಪಕ್ಷಗಳ ರಾಜಕೀಯ ಕರ್ತವ್ಯವೂ ಹೌದು ಮತ್ತು ನೈತಿಕ ಜವಾಬ್ದಾರಿಯೂ ಹೌದು. ಸಾಮಾನ್ಯವಾಗಿ ರಾಜಕೀಯ ನಾಯಕರ ಘೋಷಣೆಗಳಲ್ಲಿ ವಿಶ್ವಾಸಾರ್ಹತೆ ಮತ್ತು ಅಧಿಕೃತತೆಗಳು ಕಾಣುವುದಿಲ್ಲವಾದ್ದರಿಂದ ಜನಸಾಮಾನ್ಯರಿಂದ ಅಗತ್ಯವಿರುವ ಪ್ರತಿಸ್ಪಂದನೆ ಸಿಗಲಾರದು. ಹೀಗಾಗಿಯೇ ಎರಡನೇ ಸ್ವಾತಂತ್ರ್ಯ ಹೋರಾಟದ ಕರೆಗಳು ಅದಕ್ಕೆ ಬೇಕಿರುವಷ್ಟು ಜನ ಸಂಘಟನೆ ಮಾಡಲು ವಿಫವಾಗುವ ಸಂಭವವಿರುವುದರಿಂದ ಆ ಕರೆಯನ್ನೂ ಹಾಗೆ ಭಾವಿಸಿಬಿಡುವ ಅಪಾಯವಿದೆ. ವಿರೋಧಪಕ್ಷಗಳ ಕರೆಯು ಜನಪ್ರಿಯವಾಗಬೇಕೆಂದರೆ ಜನರು ಅದು ತಮ್ಮದೆಂದೇ ಭಾವಿಸಬೇಕು. ಅಂಥಾ ಕರೆಗಳು ಅಧಿಕೃತವೆಂದು ಜನರು ಭಾವಿಸುವಂತಾಗಬೇಕು. ತಮ್ಮ ಕರೆಗಳಿಗೆ ಅಧಿಕೃತತೆ ಸಿಗಬೇಕೆಂದರೆ ಜನರೊಂದಿಗೇ ಇದ್ದು ಅವರ ಅನುದಿನದ ಕಷ್ತಸುಖಗಳಿಗೆ ಸ್ಪಂದಿಸುತ್ತಾ ಘೋಷಣೆಗಳನ್ನು ಗ್ರಹಿಸಬಲ್ಲ ಮತ್ತು ನಂಬಬಲ್ಲ ಭರವಸೆಗಳನ್ನಾಗಿಸಬೇಕು. ಇದಾಗಬೇಕೆಂದರೆ ವಿರೋಧ ಪಕ್ಷಗಳ ಕಾರ್ಯಕ್ರಮಗಳು ನಿಲುವುಗಳನ್ನು ಪ್ರಕಟಿಸುವ, ಸಮ್ಮೇಳನಗಳನ್ನು ನಡೆಸುವ ಮತ್ತು ಭಾಷಣಗಳನ್ನು ಮಾಡುವುದಕ್ಕೇ ಮಾತ್ರ ಸೀಮಿತವಾಗದೆ ಜನರ ಜೀವನ ಮತ್ತು ಜೀವನೋಪಾಯಗಳಿಗೆ ಸಬಂಧಪಟ್ಟಂತೆ ಸಂಘಟಿತ ಚಳವಳಿಗಳನ್ನು ಕಟ್ಟುವತ್ತ ತೊಡಗಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದ ಪರಂಪರೆಯುಳ್ಳ ಕಾಂಗ್ರೆಸ್ ಪಕ್ಷ ಅಂಥಾ ಒಂದು ಚಳವಳಿಯನ್ನು ಕಟ್ಟುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

ಕೃಪೆ: Economic and Political Weekly Oct 13, 2018. Vol. 53. No.41
ಅನು: ಶಿವಸುಂದರ್
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )